Homeಮುಖಪುಟಆಕಾಶ ವೀಕ್ಷಣೆ ಮಾರ್ಗದರ್ಶಿ: ಅನಂತದಿಂ.. ದಿಗಂತದಿಂ.. ನೋಡೆ ನೋಡೆ ಮೂಡಿತೊಂದು..

ಆಕಾಶ ವೀಕ್ಷಣೆ ಮಾರ್ಗದರ್ಶಿ: ಅನಂತದಿಂ.. ದಿಗಂತದಿಂ.. ನೋಡೆ ನೋಡೆ ಮೂಡಿತೊಂದು..

ಮುಂಜಾನೆ ಅಂದರೆ, ಸೂರ್ಯ ಹುಟ್ಟುವ 30 ನಿಮಿಷ ಮೊದಲು, ಪೂರ್ವಕ್ಕೆ ಮುಖ ಮಾಡಿ ನಿಂತರೆ, ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ಚುಕ್ಕಿಯೊಂದು ಕಾಣುತ್ತದೆ. ಅದು ಶುಕ್ರ ಗ್ರಹ.

- Advertisement -
- Advertisement -

ಆಕಾಶ ವೀಕ್ಷಣೆಯು ಅನಾದಿ ಕಾಲದ ನಾಗರಿಕತೆಗಳಲ್ಲಿನ ಜನರ ಬದುಕಿನ ಒಂದು ಅವಿಭಾಜ್ಯ ಅಂಗವಾಗಿತ್ತು. ಅಂದಿನ ಮಾನವರ ಅಗತ್ಯ ಮತ್ತು ಅವರ ಕೆಲಸ-ಕಾರ್ಯಗಳಿಗೆ ತಕ್ಕಂತೆ ಕಾಲಗಳನ್ನು ಗುರುತಿಸಲು, ವಿವಿಧ ಆಚರಣೆಗಳನ್ನು ನಡೆಸಲು, ಕೃಷಿ ಚಟುವಟಿಕೆ ಮಾಡಲು ಮತ್ತು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸಲು ಆಗಸದಲ್ಲಿ ಕಾಣುವ ಸೂರ್ಯ, ಚಂದ್ರ, ಗ್ರಹ ಮತ್ತು ನಕ್ಷತ್ರಗಳ ವೀಕ್ಷಣೆ ಹಾಗೂ ಅವುಗಳ ನಿಖರವಾದ ಸ್ಥಾನಗಳನ್ನು ಗುರುತಿಸುವುದು ಅತ್ಯಗತ್ಯವಾಗಿತ್ತು. ಜಗತ್ತಿನ ವಿವಿಧ ನಾಗರಿಕತೆಗಳು, ಈಗ ಗುರುತಿಸಿದ ಆಕಾಶ ಕಾಯಗಳಿಗೆಲ್ಲವಕ್ಕೂ ಅದನ್ನು ನೆನಪಿಟ್ಟುಕೊಳ್ಳುವುದಕ್ಕೆ ಸೃಜನಾತ್ಮಕವಾಗಿ ಮತ್ತು ಕಲ್ಪನಾತೀತವಾದ ಹಲವು ಕಥೆಗಳನ್ನು ಹೆಣೆದಿರುವುದನ್ನು ನಾವು ದಾಖಲಿಸಿದ್ದೇವೆ. ಭಾರತದಲ್ಲೂ ಇಂತಹ ಹಲವಾರು ಕಥೆಗಳಿರುವುದನ್ನು ನಾವು ಕಾಣಬಹುದು. ಈ ಕಥೆಗಳಲ್ಲಿ ವೈಜ್ಞಾನಿಕವಾದ ವಿವರಣೆಯ ತಳಹದಿ ಇಲ್ಲದಿದ್ದರೂ, ಅಂದಿನ ಕಾಲದ ಜನರ ಬದುಕು-ಬವಣೆ, ದೈವ-ದೆವ್ವದ ಆಚರಣೆಗಳು, ಸಂಸ್ಕೃತಿ ಮತ್ತು ವಿಧಾನಗಳು ಇರುವುದನ್ನು ನಾವು ಕಾಣಬಹುದು.

ಶತಮಾನಗಳು ಕಳೆದಂತೆ, ಮಾನವನು ಪ್ರಶ್ನಿಸುವ, ವಿಚಾರಿಸುವ, ಸೂಕ್ಷ್ಮವಾಗಿ ವೀಕ್ಷಿಸುವ ಮತ್ತು ತರ್ಕಿಸುವ ಮನೋಭಾವದಿಂದ ನಿಸರ್ಗದ ಆಗುಹೋಗುಗಳ ವಿದ್ಯಮಾನಗಳನ್ನು ವೈಜ್ಞಾನಿಕವಾಗಿ ವಿವರಿಸುವ ದಾರಿಯನ್ನು ತುಳಿದನು. ಇದು ಕಾಲಕಾಲಕ್ಕೆ ಹಲವು ತಂತ್ರಜ್ಞಾನದ ಅಭಿವೃದ್ಧಿಗೂ ದಾರಿಯಾಯಿತು. ಈಗ ಅಂದಿನ ನಾಗರಿಕತೆಗಳು, ಅವರ ಅಗತ್ಯಕ್ಕೆ ಆಕಾಶ ವೀಕ್ಷಣೆಯಿಂದ ಪಡೆಯುತ್ತಿದ್ದ ಮಾಹಿತಿಗಳನ್ನು ಇಂದು, ನಾವು ತಂತ್ರಜ್ಞಾನ ಆಧಾರಿತ ಆಕಾಶ ವೀಕ್ಷಣೆ ಮೂಲಕ ಅದೇ ಮಾಹಿತಿಗಳನ್ನು ಅತ್ಯಂತ ವೇಗವಾಗಿ ಮತ್ತು ಹೆಚ್ಚು ನಿಖರತೆಯೊಂದಿಗೆ ಪಡೆಯುತ್ತಿದ್ದೇವೆ. ಹಾಗಾಗಿ, ಎಲ್ಲ ಕಾಲಕ್ಕೂ ಆಕಾಶದ ಆಗುಹೋಗುಗಳ ನಿಖರವಾದ ಮಾಹಿತಿಯು ಮನುಷ್ಯನಿಗೆ ಅಗತ್ಯವಿದ್ದರೂ, ಪ್ರತಿಯೊಬ್ಬರು ಆಕಾಶ ವೀಕ್ಷಣೆ ಮಾಡಿ ಮಾಹಿತಿಗಳನ್ನು ಕ್ರೋಢೀಕರಿಸುವ ಅಗತ್ಯವಿರುವುದಿಲ್ಲ. ಆದರೂ, ಆಕಾಶ ವೀಕ್ಷಣೆಯಿಂದ ಬರುವ ಮಾಹಿತಿಯು, ಬೇರೊಂದು ರೂಪದಲ್ಲಿ ಕ್ಷಣಕ್ಷಣಕ್ಕೆ ನಮ್ಮ ಅಂಗೈಯಲ್ಲೇ ಲಭ್ಯವಿರುವ ಕಾಲ ಈಗಿನದಾಗಿದೆ.

ಇರಲಿ, ಈ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಏಕೆ ನಾವು ಆಕಾಶ ವೀಕ್ಷಣೆ ಮಾಡಬೇಕು? ಇಂದು ಈ ಅಕಾಶ ವೀಕ್ಷಣೆ ಮನುಷ್ಯನ ಬದುಕಿನ ಒಂದು ಅವಿಭಾಜ್ಯ ಅಂಗವಾಗಿಲ್ಲ. ಬದಲಾಗಿ, ಮಾನವನು ವಿಶ್ವದ ಉಗಮ, ಪ್ರಸ್ತುತ ಇರುವಿಕೆಯ ಸ್ಥಿತಿ ಮತ್ತು ವಿನಾಶದ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ವಿಶ್ವದಲ್ಲಿ ಭೂಮಿಯೇ ಏಕೆ? ಭೂಮಿಯಲ್ಲಿ ಮಾನವರು ಏಕೆ? ಏಕೆ ಈ ರೀತಿಯೇ ವಿಶ್ವ ಇದೆ ಎಂಬ ವಿಶಾಲ ಅಂಶಗಳನ್ನು ಒಳಗೊಂಡ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ/ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವ, ಅಧ್ಯಯನ ಮಾಡುವ ಒಂದು Discipline ಆಗಿದೆ. ಈ ಅಧ್ಯಯನಗಳ ಮೂಲಕವಾಗಿ ಹೊರಹೊಮ್ಮುವ ಅನೇಕ ತಂತ್ರಜ್ಞಾನಗಳು, ವಿಜ್ಞಾನದ ವಿಷಯಗಳು, ಮನುಷ್ಯನ ಜೀವನವನ್ನು ಮತ್ತು ಜನಸಮೂಹದ ಸಾಮಾಜಿಕ ಬದುಕನ್ನು ಉತ್ತಮಗೊಳಿಸುವುದಕ್ಕೆ ಬಳಸಿಕೊಳ್ಳುವುದೂ ಆಗಿರುತ್ತದೆ. ಹೀಗಿದ್ದಾಗ, ಈ Disciplineನಲ್ಲಿ ಅಧ್ಯಯನ ಮಾಡುವವರು ಆಕಾಶ ವೀಕ್ಷಣೆಯನ್ನು ಸಂಶೋಧನಾ ದೃಷ್ಠಿಕೋನದಿಂದ ಮಾಡಿದರೆ, ಜನಸಾಮಾನ್ಯರಾದ ನಾವು ನಮ್ಮ ಸುತ್ತಮುತ್ತಲಿನ ನಿಸರ್ಗದೊಂದಿಗಿನ ಸಂಬಂಧವನ್ನು ಹೇಗೆ ಬೆಳೆಸಿಕೊಳ್ಳುತ್ತೇವೆಯೋ, ಹಾಗೆಯೇ ಆಗಸವೂ ನಿಸರ್ಗದ ಭಾಗವಾಗಿ ಅದರ ಆಗುಹೋಗುಗಳನ್ನು, ಕುತೂಹಲದ ವಿಚಾರಗಳನ್ನು ಅರಿತು, ನಾವೂ ನಿರಂಕುಶಮತಿಗಳಾಗಬಹುದು. ಇನ್ನೂ ಕೆಲವರು ಆಕಾಶ ವೀಕ್ಷಣೆಯನ್ನು ಹವ್ಯಾಸವಾಗಿಯೂ ರೂಢಿಸಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ, ಈ ಸಂಚಿಕೆಯಿಂದ, ಪ್ರತಿ ವಾರದ ಆಗಸದ ಆಗುಹೋಗುಗಳು, ನಮಗೆ ಕಾಣುವ ಆಕಾಶ ಕಾಯಗಳು, ಅದರ ಚುಟುಕಾದ ವಿವರಗಳು ಮತ್ತು ಹೇಗೆ ನೋಡಬೇಕು ಎನ್ನುವ ಮಾರ್ಗದರ್ಶನಗಳನ್ನೊಳಗೊಂಡ ಚುಟುಕು ಬರಹವು ಇಲ್ಲಿ ಬಿತ್ತರವಾಗಲಿದೆ.

ನವೆಂಬರ್ 23 ರಿಂದ 30ರ ವರೆಗಿನ ಆಗಸದ ವೀಕ್ಷಣೆ

1. ಗುರು ಮತ್ತು ಶನಿ ಗ್ರಹ

ನವೆಂಬರ್ 23 ರಂದು, ಸೂರ್ಯ ದಿಗಂತದಲ್ಲಿ ಮುಳುಗಿದ ನಂತರ, ನೈಋತ್ಯಕ್ಕೆ ಮುಖ ಮಾಡಿ ನಿಂತರೆ, ಶುಭ್ರ ಆಕಾಶದಲ್ಲಿ ಎರಡು ಚುಕ್ಕಿಗಳು ತುಂಬ ಹತ್ತಿರದಲ್ಲಿ ಹೊಳೆಯುತ್ತಿರುತ್ತವೆ. ಇವು ಚುಕ್ಕಿಗಳಲ್ಲ, ಬದಲಾಗಿ ಇವು ಗ್ರಹಗಳು. ಎರಡು ಚುಕ್ಕಿಗಳಲ್ಲಿ, ತುಂಬ ಹೊಳಪಾಗಿ ಕಾಣುವ ಕೆಳಗಿನ ಚುಕ್ಕಿ (ಚಿತ್ರದಲ್ಲಿ ನೋಡಿ), ಗುರು ಗ್ರಹ. ಇದರ ಮೇಲೆ ಕಾಣುವ ಚುಕ್ಕಿ, ಶನಿ ಗ್ರಹ. ಇವೆರಡೂ ಗ್ರಹಗಳನ್ನು, ಮೋಡಗಳಿಲ್ಲದ ದಿಗಂತದ ಆಗಸದಲ್ಲಿ ಬರಿಗಣ್ಣಿನಲ್ಲಿ ನೋಡಬಹದು. ಈ ಗ್ರಹಗಳ ಮೇಲ್ಮೈನ ಸೂಕ್ಷ್ಮ ವಿವರಗಳನ್ನು ನೋಡಬೇಕಾದರೆ, ಸಣ್ಣಗಾತ್ರದ (5 ರಿಂದ 6 ಇಂಚಿನ ದೂರದರ್ಶಕ) ದೂರದರ್ಶಕದ ಸಹಾಯ ಬೇಕಾಗುತ್ತದೆ. ಈ ಗ್ರಹಗಳನ್ನು ದೂರದರ್ಶಕದಿಂದ ನೋಡಿದಾಗ, ಶನಿ ಗ್ರಹದ ಉಂಗುರಗಳು ಮತ್ತು ಗುರು ಗ್ರಹದ ಪ್ರಮುಖವಾದ ನಾಲ್ಕು ಗೆಲಿಲಿಯನ್ ಉಪಗ್ರಹಗಳನ್ನೂ (ಈಯೋ, ಗ್ಯಾನಿಮಿಡ, ಕ್ಯಾಲಿಸ್ಟೋ ಮತ್ತು ಯುರೋಪ) ಕಾಣಬಹುದಾಗಿದೆ. ಈ ಜೋಡಿ ಗ್ರಹಗಳು ಜನವರಿ ಮಾಹೆಯ ಮಧ್ಯದವರೆಗೂ ನೋಡಬಹುದಾಗಿದೆ. ಈ ವಾರದಲ್ಲಿ, ಪ್ರತಿ ದಿನವು ಈ ಎರಡೂ ಗ್ರಹಗಳು, ರಾತ್ರಿ 9.30 ರಿಂದ 10 ಗಂಟೆಯ ಅವಧಿಯಲ್ಲಿ ಮುಳುಗಲಿದ್ದು, ಅಲ್ಲಿಯವರೆಗೂ ನೋಡಬಹುದು. ಈ ಎರಡೂ ಜೋಡಿ ಗ್ರಹಗಳು ವಾರ ಕಳೆದಂತೆ, ಆಗಸದಲ್ಲಿ ಇನ್ನೂ ಹತ್ತಿರವಾಗಿ ಜೋಡಿ ನಕ್ಷತ್ರಗಳಂತೆ ಹೊಳೆಯುತ್ತವೆ. ಹಿಂದಿನ ಬಾರಿ ಈ ರೀತಿ ಆಗಸದಲ್ಲಿ ಈ ಎರಡೂ ಗ್ರಹಗಳು ಕನಿಷ್ಠ ಅಂತರದಲ್ಲಿ ಜೋಡಿ ಗ್ರಹಗಳಾಗಿ ಕಾಣಿಸಿದ್ದಾಗ, ಈ ಜಗತ್ತು ಕಂಡ ಖ್ಯಾತ ವಿಜ್ಞಾನಿ ಗೆಲಿಲಿಯೋ ಗೆಲಿಲಿ ಬದುಕಿದ್ದ!!

2. ಮಂಗಳ ಗ್ರಹ

ದಿಗಂತದಲ್ಲಿ ಸೂರ್ಯ ಮುಳುಗಿದ ನಂತರ ಶನಿ ಮತ್ತು ಗುರು ಗ್ರಹವನ್ನು ನೋಡಿದ ಮೇಲೆ, ನೆತ್ತಿಯ ಮೇಲೆ ಆಚೀಚೆ ಕಣ್ಣು ಹಾಯಿಸಿದರೆ, ಕೆಂಪು ಬಣ್ಣದಲ್ಲಿ ಹೊಳೆಯುವ ಮತ್ತೊಂದು ಚುಕ್ಕಿ ಕಾಣುವುದು. ಸ್ಪಷ್ಟವಾಗಿ ವೀಕ್ಷಿಸಿದರೆ, ಈ ಕೆಂಪು ಚುಕ್ಕಿ ನಕ್ಷತ್ರಗಳಂತೆ ಮಿನುಗುವುದಿಲ್ಲ. ಇದು ಮಂಗಳ ಗ್ರಹ. ಮಂಗಳ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯುತ್ತೇವೆ. ಏಕೆಂದರೆ, ಮಂಗಳನ ಅಂಗಳದಲ್ಲಿ ಅಂದರೆ, ಮಣ್ಣಿನಲ್ಲಿ ಕಬ್ಬಿಣಾಂಶದ ಖನಿಜಗಳು ಹೆಚ್ಚಿರುವುದರಿಂದ, ತುಕ್ಕು ಹೆಚ್ಚಾಗಿ, ಮಂಗಳನ ನೆಲ ಮತ್ತು ಅದರ ವಾತಾವರಣ ಕೆಂಪಾಗಿ ಕಾಣುತ್ತದೆ. ಮಂಗಳ ಸರಿ ಸುಮಾರು ಮುಂಜಾನೆ ಎರಡು ಗಂಟೆಗೆ ಮುಳುಗುವುದರಿಂದ, ಅಲ್ಲಿಯವರೆಗೂ ರಾತ್ರಿ ಆಕಾಶದಲ್ಲಿ ಮಂಗಳ ಗ್ರಹವನ್ನು ವೀಕ್ಷಿಸಬಹುದು.

3. ಶುಕ್ರ ಮತ್ತು ಬುಧ ಗ್ರಹ

ಈ ವಾರದುದ್ದಕ್ಕೂ, ಮುಂಜಾನೆ ಅಂದರೆ, ಸೂರ್ಯ ಹುಟ್ಟುವ 30 ನಿಮಿಷ ಮೊದಲು, ಪೂರ್ವಕ್ಕೆ ಮುಖ ಮಾಡಿ ನಿಂತರೆ, ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ಚುಕ್ಕಿಯೊಂದು ಕಾಣುತ್ತದೆ. ಇದು, ಶುಕ್ರ ಗ್ರಹ. ಶುಕ್ರ ಗ್ರಹ ಯಾವಾಗಲು, ಪೂರ್ವದಲ್ಲಿ ಸೂರ್ಯ ಹುಟ್ಟುವುದಕ್ಕಿಂತ ಸರಿಸುಮಾರು ಒಂದು ಗಂಟೆಯ ಅವಧಿಯಲ್ಲಿ ಅಥವಾ ಸೂರ್ಯ ಪಶ್ಚಿಮದಲ್ಲಿ ಮುಳುಗಿದ ನಂತರದ ಒಂದು ಗಂಟೆಯ ಅವಧಿಯಲ್ಲಿ ಮಾತ್ರ ಕಾಣಸಿಗುವ ಗ್ರಹ. ಎಂದಿಗೂ ಶುಕ್ರ ಗ್ರಹ ರಾತ್ರಿ ಆಕಾಶದಲ್ಲಿ ನೆತ್ತಿಯ ಮೇಲೆ ಕಾಣಸಿಗುವುದಿಲ್ಲ! ಹಾಗಾಗಿ, ಶುಕ್ರ ಗ್ರಹವನ್ನು ಕಾಲಗಳನ್ನು ಗುರುತಿಸುವುದಕ್ಕೆ ಜಗತ್ತಿನ ಎಲ್ಲಾ ನಾಗರಿಕತೆಗಳು ಬಳಸಿಕೊಂಡಿವೆ. ನಮ್ಮಲ್ಲೂ ಇದನ್ನ ಬೆಳ್ಳಿ ಚುಕ್ಕಿ ಅಂತ ಕರೆಯುತ್ತಾರೆ. ಈ ಬೆಳ್ಳಿ ಚುಕ್ಕೆಯ ಬಗ್ಗೆ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆಗಸದ ದಿಗಂತದಲ್ಲಿ ಮೋಡಗಳು ಇಲ್ಲದಿದ್ದರೆ, ಶುಕ್ರ ಗ್ರಹದ ಕೆಳಗೆ ಕಡಿಮೆ ಪ್ರಕಾಶಮಾನವಾಗಿ ಹೊಳೆಯುವ ಮತ್ತೊಂದು ಚುಕ್ಕಿ ಕಾಣುತ್ತದೆ (ಚಿತ್ರ ನೋಡಿ). ಇದು. ಬುಧ ಗ್ರಹ. ಆದರೆ, ಸೂರ್ಯ ಹುಟ್ಟುವ ಮೊದಲು ಬರುವ twilight ಬೆಳಕು ಮೂಡುವುದರಿಂದ, ಬುಧ ಗ್ರಹ ನೋಡುವುದು ಕಷ್ಟಸಾಧ್ಯವಾಗಿರುತ್ತದೆ. ಆದರೂ, ಬುಧ ಗ್ರಹ ನೋಡಲು ಪ್ರಯತ್ನಿಸಬಹುದು.

4.ಚಂದ್ರ

ಚಂದ್ರ ಭೂಮಿಯ ಉಪಗ್ರಹ. ಚಂದ್ರ ಸರಿಸುಮಾರು 30 ದಿನಗಳಲ್ಲಿ ಭೂಮಿಯ ಸುತ್ತ ಒಂದು ಸುತ್ತು ತಿರುಗುತ್ತದೆ. ಈ ಮೂವತ್ತು ದಿನಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಹುಣ್ಣಿಮೆಯಿಂದ ಅಮಾವಾಸ್ಯೆಯ 15 ದಿನಗಳು ಒಂದು ಭಾಗ, ಈ ಭಾಗವನ್ನು ಕ್ಷೀಣಿಸುತ್ತಿರುವ ಚಂದ್ರ ಅಂತ ಕರೆಯುತ್ತೇವೆ ಹಾಗೂ ಅಮಾವಾಸ್ಯೆಯಿಂದ ಹುಣ್ಣಿಮೆಯ 15 ದಿನಗಳ ಎರಡನೇ ಭಾಗವನ್ನು ವೃದ್ಧಿಸುತ್ತಿರುವ ಚಂದ್ರ ಅಂತ ಕರೆಯುತ್ತೇವೆ. ಅಂದರೆ, ಹುಣ್ಣಿಮೆ ದಿನದಿಂದ, ಪ್ರತಿ ದಿನ ನಮಗೆ ಕಾಣುವ, ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶ ಕ್ಷೀಣಿಸುತ್ತಾ ಹೋಗುತ್ತದೆ. ಇದನ್ನು ಕೃಷ್ಣ ಪಕ್ಷ ಎಂದೂ ಕರೆಯುತ್ತಾರೆ. ಹಾಗೆಯೇ, ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ, ನಮಗೆ ಕಾಣುವ, ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶ ವೃದ್ಧಿಸುತ್ತಾ ಹೋಗುತ್ತದೆ. ಇದನ್ನು ಶುಕ್ಲ ಪಕ್ಷ ಎಂದೂ ಕರೆಯುತ್ತಾರೆ. ಈ ತಿಂಗಳ 15 ರಂದು ಅಮಾವಾಸ್ಯೆ ಇದ್ದುದ್ದರಿಂದ, ಅಲ್ಲಿಂದ ನಂತರದ 15 ದಿನಗಳವರೆಗೂ ಆಗಸದಲ್ಲಿ ಚಂದ್ರನ ಬಿಂಬವು ದಿನೇದಿನೇ ವೃದ್ಧಿಸುತ್ತಿರುತ್ತದೆ. 22ರ ರಾತ್ರಿ ಆಕಾಶದಲ್ಲಿ ಚಂದ್ರನು ಅರ್ಧ ಚಂದ್ರಾಕೃತಿ ಬಿಂಬಾವಸ್ಥೆಯಲ್ಲಿದ್ದು, ಅಲ್ಲಿಂದ ನವೆಂಬರ್ 30ರವರೆಗೂ, ಪ್ರತಿ ದಿನ ಚಂದ್ರನ ಬಿಂಬಾವಸ್ಥೆಯು ವೃದ್ಧಿಸುತ್ತದೆ.

ಈ ತಿಂಗಳ ಕೊನೆ ದಿನ ನಾವು ಹುಣ್ಣಿಮೆ ಚಂದ್ರನನ್ನು ನೋಡಬಹುದಾಗಿದೆ. ಒಂದು ವಾರದ ಆಕಾಶ ವೀಕ್ಷಣೆಯಲ್ಲಿ ಚಂದ್ರನ ವಿವಿಧವಾದ ವೃದ್ಧಿಸುವ ಬಿಂಬಾವಸ್ಥೆಗಳನ್ನು, ಆಗಸದಲ್ಲಿ ಎಲ್ಲರೂ ಗಮನಿಸಬಹುದು. ಇದರ ಜೊತೆಗೆ, ನವೆಂಬರ್ 30 ರಂದು ಭಾಗಶಃ ಚಂದ್ರ ಗ್ರಹಣವಿದ್ದು, ಭಾರತದ ಈಶಾನ್ಯ ರಾಜ್ಯಗಳಿಗೆ ಮಾತ್ರ ಕಾಣಿಸಿದರೂ, ಚಂದ್ರನಿಗೆ ಭಾಗಶಃ ಗ್ರಹಣವಾಗಿರುವುದನ್ನು ಬರಿಗಣ್ಣಿನಲ್ಲಿ ಗುರುತಿಸಲು ಸಾಧ್ಯವಿರುವುದಿಲ್ಲ. ಆದರೂ, ಚಂದ್ರನನ್ನು ಗ್ರಹಣವಿದ್ದರೂ, ಗ್ರಹಣವಿಲ್ಲದಿದ್ದರೂ ಬರಿಗಣ್ಣಿನಲ್ಲಿಯೇ ನೋಡಿ ಆನಂದಿಸಬಹುದು.

  • ವಿಶ್ವ ಕೀರ್ತಿ ಎಸ್

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: 2020ರ ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿ | ಕಪ್ಪು ರಂಧ್ರ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...