ದೆಹಲಿಯ ಬಿಜೆಪಿ ಸಂಸದ ಮತ್ತು ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮನೋಜ್ ತಿವಾರಿ, “ರಾಷ್ಟ್ರ ರಾಜಧಾನಿಯ ಗಡಿಯಲ್ಲಿನ ರೈತರ ಪ್ರತಿಭಟನೆಯನ್ನು ’ತುಕ್ಡೆ-ತುಕ್ಡೆ ಗ್ಯಾಂಗ್’ ’ಶಾಹೀನ್ ಬಾಗ್’ ಆಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ಹರಡುವುದಕ್ಕಿಂತ ಮೊದಲು ದಕ್ಷಿಣ ದೆಹಲಿಯ ಶಾಹೀನ್ ಬಾಗ್ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಆಂದೋಲನದ ಕೇಂದ್ರವಾಗಿತ್ತು. “ಖಾಲಿಸ್ತಾನ್ ಪರವಾಗಿರುವ ಘೋಷಣೆ ಸೇರಿದಂತೆ, ಕೆಲವು ಪ್ರತಿಭಟನಾಕಾರರು ಪ್ರಧಾನ ಮಂತ್ರಿಗೆ ಬೆದರಿಕೆ ಹಾಕಿದ್ದು, ಇದು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮಾಡಿರುವ ಯೋಜಿತ ಪಿತೂರಿ ಎಂದು ತೋರಿಸುತ್ತಿದೆ” ಎಂದು ಮನೋಜ್ ತಿವಾರಿ ಹೇಳಿದ್ದಾರೆ.
ಇದನ್ನೂ ಓದಿ: ಕಡುಖೋಟಾ ಅನ್ನೋ ಡೀಫ್ ಫೇಕು : ದೆಹಲಿಯಲ್ಲಿ ಬಿಜೆಪಿಯ ಮನೋಜ್ ತಿವಾರಿ ಮಾಡಿದ ಮೋಡಿ ಗೊತ್ತೆ?
“ಶಾಹೀನ್ ಬಾಗ್‌ನಲ್ಲಿ ಎನ್‌ಆರ್‌ಸಿ ಮತ್ತು ಸಿಎಎಯನ್ನು ವಿರೋಧಿಸಿದ ವ್ಯಕ್ತಿಗಳ ಮತ್ತು ಗುಂಪುಗಳ ತುಕ್ಡೆ-ತುಕ್ಡೆ ಗ್ಯಾಂಗ್, ರೈತರ ಪ್ರತಿಭಟನೆಯನ್ನು ’ಶಾಹೀನ್ ಬಾಗ್ 2.0’ ಆಗಿ ಮಾಡಲು ಮತ್ತು ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವ ನಿಜವಾದ ರೈತರು ವಾಸ್ತವವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ತುಕ್ಡೆ-ತುಕ್ಡೆ ಗ್ಯಾಂಗ್‌ನ ಉದ್ದೇಶಗಳನ್ನು ತಡೆಯುತ್ತಾರೆ ಎಂದು ತಾನು ಭಾವಿಸಿದ್ದೇನೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ.ಮನೋಜ್ ತಿವಾರಿ ಪ್ರತಿನಿಧಿಸುವ ಈಶಾನ್ಯ ದೆಹಲಿ ಸಂಸದೀಯ ಕ್ಷೇತ್ರದಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದು 50 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದ್ದವು.
ಹೊಸ ಕೃಷಿ ಕಾನೂನುಗಳನ್ನು ಕೇಂದ್ರ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ದೇಶದಾದ್ಯಂತ ರೈತರು ದೆಹಲಿಯ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆದರೂ ವಿಫಲವಾಗಿದೆ. ಇಂದು ಮತ್ತೇ ಸರ್ಕಾರದೊಂದಿಗೆ ರೈತರ ಸಭೆ ನಡೆಯಲಿದೆ. ರೈತರು ಹೊಸ ಕಾಯ್ದೆಗಳನ್ನು ವಾಪಾಸು ಪಡೆಯದೆ ತಾವು ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಕೇಜ್ರಿವಾಲರನ್ನು “ಭಯೋತ್ಪಾದಕ” ಎಂದು ಯಾರೂ ಕರೆಯುತ್ತಿಲ್ಲ : ಉಲ್ಟಾ ಹೊಡೆದ ಬಿಜೆಪಿ ನಾಯಕ


