ಇಂದಿನ ಸ್ತ್ರೀವಾದೀ ಚಳವಳಿಯು, ಮಹಿಳೆಯರ ಮೇಲೆ ಪುರುಷರು ನಡೆಸುತ್ತಿರುವ ದೌರ್ಜನ್ಯಗಳು ನಿಲ್ಲಬೇಕು ಎಂಬುದರತ್ತ ಗಮನವನ್ನು ಸೆಳೆಯುವಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದೆ ಎಂದೇ ಹೇಳಬಹುದು. ದೌರ್ಜನ್ಯಗಳಿಗೆ ನೊಂದು ಹೈರಾಣಾದ ಹೆಂಗಸರಿಗೆ ಸ್ತ್ರೀವಾದಿಗಳು ಅಮೆರಿಕದ ಉದ್ದಗಲಕ್ಕೂ ಆಶ್ರಯ ತಾಣಗಳನ್ನು ಸ್ಥಾಪಿಸಿದ್ದಾರೆ. ಇಲ್ಲಿ ಮಹಿಳಾ ಹೋರಾಟಗಾರರು ತೀವ್ರ ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಆ ಹೆಂಗಸರಿಗೆ ತಮ್ಮ ಮೇಲೆ ನಡೆದ ಆಕ್ರಮಣಗಳಿಂದ ಸುಧಾರಿಸಿಕೊಳ್ಳಲು ಮತ್ತು ಹೊಸ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತಾರೆ. ಹಲವಾರು ವರ್ಷಗಳಿಂದಲೂ ಸ್ತ್ರೀವಾದಿಗಳು ಇದಕ್ಕಾಗಿ ಶ್ರಮಿಸುತ್ತಲೇ ಬಂದಿದ್ದಾರೆ. ಆದರೆ ಇಷ್ಟೆಲ್ಲಾ ಶ್ರಮ ವಹಿಸುತ್ತಿದ್ದರೂ ಪುರುಷರು ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯಗಳ ಪ್ರಮಾಣವು ಒಂದಿಷ್ಟೂ ತಗ್ಗಿಲ್ಲ; ಬದಲಿಗೆ ಅದು ಇನ್ನಷ್ಟು ಮತ್ತಷ್ಟು ಎಂದು ಕ್ರಮೇಣವಾಗಿ ಏರುಗತಿಯಲ್ಲಿಯೇ ಸಾಗುತ್ತಿದೆ. ಇದರ ಕೊನೆ ಹೇಗೆ ಎಂಬ ಚಿಂತೆಯಲ್ಲಿಯೇ ಸ್ತ್ರೀವಾದೀ ಹೋರಾಟಗಾರರು ದಣಿಯುತ್ತಿದ್ದಾರೆ.
ಸಮಾಜದಲ್ಲಿ ಹಲವು ಬಗೆಯ ದೌರ್ಜನ್ಯಗಳು ನಡೆಯುತ್ತಲೇ ಇವೆ ಎಂಬುದು ಕಾಣುತ್ತದೆ. ಆದರೆ ಪುರುಷರು ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಾರೆ ಎಂಬುದು ಇತರ ದೌರ್ಜನ್ಯಗಳಿಗಿಂತ ಭಿನ್ನ ಬಗೆಯದೇನೋ ಎಂದು ಹೋರಾಟಗಾರರು ಅಂದುಕೊಳ್ಳುತ್ತಾರೆ. ಲೈಂಗಿಕತಾವಾದೀ ಮತ್ತು ಪುರುಷ ಪಾರಮ್ಯಗಳ ರಾಜಕಾರಣಗಳಿಗೂ, ಪುರುಷರು ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ನಡೆಸುವುದಕ್ಕೂ ನೇರ ಸಂಬಂಧವಿದೆ ಎಂದು ವಿಶ್ಲೇಷಿಸುತ್ತಾರೆ. ಈ ರಾಜಕಾರಣದಿಂದಾಗಿ ಮಹಿಳೆಯರ ಮೇಲೆ ತಮ್ಮ ಪ್ರಾಬಲ್ಯವನ್ನು ಮೆರೆಯುವ ಹಕ್ಕು ಪುರುಷರಿಗೆ ದತ್ತವಾಗಿರುತ್ತದೆ. ಹೈರಾಣಾದ ಹೆಂಗಸರ ನೆರವಿಗಾಗಿ ನಡೆಯುತ್ತಿರುವ ಮಹಿಳಾ ಹೋರಾಟಗಳನ್ನು ಬಹಳ ಸೂಕ್ಷ್ಮಗಳಲ್ಲಿ ಅಧ್ಯಯನ ಮಾಡಿರುವ ಸೂಸನ್ ಶೆಚ್ಟರ್ ’ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತವೆ ಎಂಬುದರ ಮೂಲಕಾರಣ ಪುರುಷ ಪ್ರಾಬಲ್ಯವೇ’ ಎಂದು ಖಡಾಖಂಡಿತವಾಗಿ ಹೇಳುತ್ತಾಳೆ. Women and Male Violence ಎಂಬ ತನ್ನ ಬರಹದಲ್ಲಿ ಆಕೆ ಇದನ್ನು ಅತ್ಯಂತ ವಿಸ್ತಾರವಾಗಿ ಚರ್ಚಿಸಿದ್ದಾಳೆ. ’ಕುಟುಂಬದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿಶ್ಲೇಷಣೆ’ ಎಂಬ ಅಧ್ಯಾಯದಲ್ಲಿ ಪುರುಷಪಾರಮ್ಯ ಎಂಬ ಸ್ಥಾಪಿತ ಕಲ್ಪನೆಯು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯಲು ಪ್ರೇರಣೆಯನ್ನೂ, ಸಮರ್ಥನೆಯನ್ನೂ ಒದಗಿಸುತ್ತದೆ ಎಂಬ ಸಂಗತಿಯನ್ನು ವಿವರಗಳಲ್ಲಿ ವಿಶ್ಲೇಷಿಸುತ್ತಾಳೆ:
“ಲೈಂಗಿಕ ಶೋಷಣೆಗಳ ವೈವಿಧ್ಯಮಯ ಹೊಡೆತಗಳನ್ನು ವಿವರಿಸುವ ಹಲವಾರು ಸೈದ್ಧಾಂತಿಕ ಚಿಂತನೆಗಳನ್ನು ಕಟ್ಟಲಾಗಿದೆ. ಈ ಚಿಂತನೆಗಳು ಮಹಿಳೆಯರ ವಿರುಧ್ದ ನಡೆಯುವ ದೌರ್ಜನ್ಯಗಳಿಗೆ ಕಾರಣಗಳಾಗುವ ಭಿನ್ನ ಪರಿಸ್ಥಿತಿಗಳನ್ನು ಸೂಕ್ಷ್ಮಗಳಲ್ಲಿ ಗಮನಿಸುತ್ತವೆ ಎಂಬುದು ನಿಜವೇ. ಈ ಕೆಲಸ ಅಗತ್ಯವೂ ಹೌದು. ಆದರೆ ಚಿಂತನೆಗಳ ಉದ್ದೇಶ ಬೌದ್ಧಿಕ ಕಸರತ್ತುಗಳೆನಿಸಿ ಉಳಿಯುವುದಲ್ಲ. ಅವುಗಳಲ್ಲಿ ಇರುವ ಸೂಚನೆಗಳನ್ನು ಚಳವಳಿಗಳು ಸರಿಯಾಗಿ ಗ್ರಹಿಸುವುದು ಮುಖ್ಯ. ದೌರ್ಜನ್ಯಗಳನ್ನು ಕೊನೆಗಾಣಿಸಲೆಂದೇ ಚಳವಳಿಗಳು ಕ್ರಿಯಾಶೀಲವಾಗುತ್ತವೆ. ಈ ಕ್ರಿಯಾಶೀಲತೆಯು ಮುಂದುವರೆಯಲು ಸೂಕ್ತವಾದ ದಿಕ್ಕುದೆಸೆಗಳನ್ನು ನಿರ್ಧರಿಸಿಕೊಳ್ಳುವಲ್ಲಿ ಚಿಂತನೆಗಳಿಂದ ದೊರೆಯುವ ಸೂಚನೆಗಳು ನೆರವಾಗಬಲ್ಲವು. ಮಹಿಳಾ ಶೋಷಣೆಯನ್ನು ಗುರುತಿಸಬೇಕು ಎಂದಾಗ ನಾವು ಪುರುಷ ಪ್ರಾಬಲ್ಯವು ಕುಟುಂಬಗಳಲ್ಲಿ ಮೊದಲುಗೊಂಡದ್ದು ಹೇಗೆ ಎಂಬ ಚಾರಿತ್ರಿಕ ಸಂದರ್ಭದಲ್ಲಿಟ್ಟು ಅದನ್ನು ವಿವರಿಸಿಕೊಳ್ಳುತ್ತೇವೆ. ಮುಂದುವರೆದು ಇದೇ ಪ್ರಾಬಲ್ಯವು ವಿಭಿನ್ನ ಸಾಂಸ್ಥಿಕ ರಚನೆಗಳಲ್ಲಿ, ಆರ್ಥಿಕ ವ್ಯವಸ್ಥೆಗಳಲ್ಲಿ, ಮತ್ತು ಬಂಡವಾಳಶಾಹೀ ಸಮಾಜದಲ್ಲಿ ವ್ಯವಸ್ಥಿತವಾಗಿ ಜಾರಿಗೊಂಡ ಲೈಂಗಿಕತಾವಾದೀ ಶ್ರಮವಿಭಜನೆಯ ತಂತ್ರಗಳಲ್ಲಿ ಹೇಗೆಲ್ಲ ಅವತರಿಸಿತು ಎಂಬುದನ್ನು ಕೂಡಾ ವಿವರಿಸಿಕೊಳ್ಳುತ್ತೇವೆ. ಈ ಎಲ್ಲ ಸಂದರ್ಭಗಳನ್ನೂ ಒಟ್ಟಿಗೆ ಇರಿಸಿಕೊಂಡು ವಿಶ್ಲೇಷಣೆಗಳನ್ನು ನಡೆಸಿದರೆ ಮಾತ್ರವೇ ಲೈಂಗಿಕ ದೌರ್ಜನ್ಯಗಳನ್ನು ನಿರ್ಮೂಲನ ಮಾಡಬೇಕಿದೆ ಎಂಬ ಹೋರಾಟದಲ್ಲಿ ಮಹಿಳೆಯರೂ, ಪುರುಷರೂ ಒಟ್ಟುಗೂಡಬೇಕು ಎಂಬುದು ಹೊಳೆಯುತ್ತದೆ. ಇದರಿಂದ ಮಾತ್ರವೇ ಹೋರಾಟಗಳಿಗೆ ಸೂಕ್ತವಾಗುವ ಹೊಸ ದಾರಿಗಳನ್ನು ಶೋಧಿಸಲು ಸಾಧ್ಯವಾಗುತ್ತದೆ.”
ಕುಟುಂಬದಲ್ಲಿ ಪುರುಷರು ಮಹಿಳೆಯರ ಮೇಲೆ ತೋರುವ ದೌರ್ಜನ್ಯಗಳನ್ನು ’ಪುರುಷಪ್ರಾಬಲ್ಯವು ಅಭಿವ್ಯಕ್ತಗೊಳ್ಳುವ ಪರಿ’ ಎಂದು ಶೆಚ್ಟರ್ ಅಭಿಪ್ರಾಯಪಡುತ್ತಾಳೆ. ಒಂದು ಹಂತಕ್ಕೆ ಇದನ್ನು ಒಪ್ಪಬಹುದು. ಆದರೆ ಸಮಾಜದಲ್ಲಿ ಕಾಣಬರುವ ಹಲವು ಬಗೆಯ ದೌರ್ಜನ್ಯಗಳನ್ನು ವಿವರಿಸಿಕೊಳ್ಳಲು ’ಪುರುಷ ಪ್ರಾಬಲ್ಯದ ಅಭಿವ್ಯಕ್ತಿ’ ಎಂಬ ಮಾತು ಸಾಕಾಗುವುದಿಲ್ಲ. ಎಲ್ಲ ಬಗೆಯ ದೌರ್ಜನ್ಯಗಳೂ ಅಧಿಕಾರಸ್ಥರು ಮತ್ತು ಅಧಿಕಾರಹೀನರ ನಡುವೆ, ಯಜಮಾನಿಕೆ ಮತ್ತು ಅಧೀನತೆಗಳ ನಡುವೆಯೇ ನಡೆಯುತ್ತವೆ. ಇವೆರಡರ ಸಂಬಂಧಗಳನ್ನು ಗ್ರಹಿಸದೆ ಹೋದರೆ ಸ್ತ್ರೀಪುರುಷರ ನಡುವೆಯದಲ್ಲದ ಇತರ ಬಗೆಯ ಹಲವಾರು ದೌರ್ಜನ್ಯಗಳನ್ನು ವಿವರಿಸಿಕೊಳ್ಳಲು ಆಗುವುದಿಲ್ಲ. ಪುರುಷ ಪ್ರಾಬಲ್ಯ ಎಂಬುದು ಗಂಡಸರು ಹೆಂಗಸರನ್ನು ಅಧೀನದಲ್ಲಿ ಉಳಿಸಿಕೊಳ್ಳಲು ಪ್ರೇರೇಪಿಸುವ ಅಂಶವಾಗುತ್ತದೆ ನಿಜ. ಆದರೆ ಪಾಶ್ಚಾತ್ಯ ತಾತ್ವಿಕತೆಯನ್ನು ಆಧರಿಸಿ ಸಮಾಜವು ನೆಲೆಗೊಳಿಸಿರುವ ಅಭಿಪ್ರಾಯಗಳು ಶ್ರೇಣೀಕರಣದ ಆಳ್ವಿಕೆ ಮತ್ತು ದಬ್ಬಾಳಿಕೆಯ ಅಧಿಕಾರ ಸ್ಥಾಪನೆ ಎಂಬ ಚೌಕಟ್ಟನ್ನು ಹೊಂದಿವೆ. ಪಾಶ್ಚಾತ್ಯ ಮಾತ್ರವಲ್ಲ, ಎಲ್ಲೆಡೆಯ ಪಿತೃಪ್ರಧಾನ ಸಮಾಜಗಳೂ ಈ ಗುಣದ ಚೌಕಟ್ಟನ್ನೇ ಬಳಸುತ್ತವೆ.
ಇದರಿಂದಾಗಿಯೇ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಪ್ರಾಬಲ್ಯಕ್ಕೆ ಅವಕಾಶಗಳಿರುವ ಯಾವುದೇ ಸಂದರ್ಭವಾದರೂ ಅಲ್ಲೆಲ್ಲಾ ದೌರ್ಜನ್ಯಗಳು ಕಾಣಿಸಿಕೊಳ್ಳುತ್ತವೆ. ಯಾವುದೇ ಪುರುಷರು ಯಾವುದೇ ಮಹಿಳೆಯ/ರ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ನಡೆಸಬಹುದು; ಹಾಗೆಯೇ ವಯಸ್ಕರು ಮಕ್ಕಳ ಮೇಲೆ ಇತರ ಬಗೆಯ ದೌರ್ಜನ್ಯಗಳನ್ನು ಮಾಡಿ ಹಿಂಸಿಸಬಹುದು. ದಬ್ಬಾಳಿಕೆ ಮಾಡುವವರು ಮತ್ತು ಆ ದಬ್ಬಾಳಿಕೆಗಳಿಗೆ ಒಳಗಾಗುವವರು ಎಂಬ ಮಾದರಿಯು ಸಮಾಜದಲ್ಲಿ ಒಂದು ನಂಬಿಕೆ ಎನಿಸಿ ಈ ವ್ಯವಸ್ಥೆಯಲ್ಲಿ ನೆಲೆಸಿರುತ್ತದೆ. ಇಂಥಾ ನಂಬಿಕೆಯನ್ನು ಸ್ತ್ರೀ ಪುರುಷರ ನಡುವೆ ನೆಲೆಗೊಳಿಸಲು ವ್ಯವಸ್ಥೆಯು ಲೈಂಗಿಕತಾವಾದೀ ಆದರ್ಶಗಳನ್ನು ಆಧರಿಸುತ್ತದೆ; ಇಂಥದೇ ಇನ್ನೊಂದು ಆದರ್ಶವನ್ನು ಇನ್ನಿತರ ಬಗೆಯ ಗುಂಪು ದಮನಗಳಿಗಾಗಿ ಬಳಸುತ್ತದೆ ಎಂಬುದಷ್ಟೇ ವ್ಯತ್ಯಾಸ. ವ್ಯವಸ್ಥೆಯು ಬಳಸುವ ಈ ತಳಹದಿಯನ್ನು ಒಡೆಯದೆಯೇ ಮುಂದುವರೆದರೆ ದಮನಗಳನ್ನು ಕೊನೆಗಾಣಿಸುವ ಹೋರಾಟಗಳು ಯಶಸ್ವಿಯಾಗಲಾರವು.

ಅಮೆರಿಕಾದ ಬರಹಗಾರ್ತಿ, ಸ್ತ್ರೀವಾದಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಜನಾಂಗ, ವರ್ಗ ಮತ್ತು ಲಿಂಗಗಳ ನಡುವಿನ ಸಂಬಂಧಗಳನ್ನು ಅನ್ವೇಷಿಸಲು ಪ್ರಯತ್ನ ಪಟ್ಟಿರುವುದಲ್ಲದೆ ಕಪ್ಪು ಜನಾಂಗದ ಮಹಿಳೆಯರ ದೃಷ್ಟಿಕೋನದಿಂದ ಸ್ತ್ರೀವಾದವನ್ನು ಕಟ್ಟಿಕೊಟ್ಟಿರುವುದು ಅವರ ಹೆಗ್ಗಳಿಕೆ. ’ಟಾಕಿಂಗ್ ಬ್ಯಾಕ್: ಥಿಂಕಿಂಗ್ ಫೆಮಿನಿಸ್ಟ್, ಥಿಂಕಿಂಗ್ ಬ್ಲಾಕ್’, ’ಬಿಯಾಂಡ್ ರೇಸ್: ಲಿವಿಂಗ್ ಥಿಯರಿ ಅಂಡ್ ಪ್ರಾಕ್ಟಿಸ್’, ’ಫೆಮಿಸಿಸಂ ಇಸ್ ಫಾರ್ ಎವೆರಿಬಡಿ: ಪ್ಯಾಶನೇಟ್ ಪಾಲಿಟಿಕ್ಸ್’ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕೊನೆಗಾಣಿಸಬೇಕು ಎಂದು ಸ್ತ್ರೀವಾದೀ ಹೋರಾಟಗಳು ಶ್ರಮಿಸುತ್ತಿವೆ. ಆದರೆ ಈ ಸಮಸ್ಯೆಯನ್ನು ಸಮಾಜ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಇತರ ಬಗೆಯ ದೌರ್ಜನ್ಯಗಳಿಂದ ಪ್ರತ್ಯೇಕಗೊಳಿಸಿ ನೋಡುವುದು ಸರಿಯಾಗದು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಎಲ್ಲ ಬಗೆಯ ದೌರ್ಜನ್ಯಗಳ ಒಂದು ರೂಪ ಮಾತ್ರವೇ ಎಂಬುದನ್ನು ಗ್ರಹಿಸಬೇಕು. ಆಗ ನಮ್ಮ ಆತ್ಯಂತಿಕ ಗುರಿಯನ್ನು ಸ್ಪಷ್ಟವಾಗಿ ನೋಡಬಹುದು. ಒಟ್ಟಾರೆಯಾಗಿ ಎಲ್ಲ ಬಗೆಯ ದೌರ್ಜನ್ಯಗಳೂ ಕೊನೆಗಾಣಬೇಕು ಎಂಬ ರಾಜಕಾರಣದ ಅರ್ಥವು ನಮಗೆ ಸ್ಪಷ್ಟವಾಗುತ್ತದೆ. ಆದರೆ ಈವರೆಗೂ ಸ್ತ್ರೀವಾದೀ ಚಳವಳಿಗಳು ಪುರುಷ ದೌರ್ಜನ್ಯಗಳ ಮೇಲಷ್ಟೇ ತಮ್ಮ ಗಮನವನ್ನೆಲ್ಲಾ ಕೇಂದ್ರೀಕರಿಸಿಕೊಂಡು ಕೆಲಸಗಳನ್ನು ಮಾಡುತ್ತಿವೆ. ಲೈಂಗಿಕತಾವಾದೀ ಸ್ಥಿರಮಾದರೀ ಪಾತ್ರಗಳು ಮೂಲತಃ ಪುರುಷ ದೌರ್ಜನ್ಯಗಳ ಪರಿಣಾಮಗಳು ಎಂದು ಅರ್ಥೈಸುತ್ತವೆ. ಈ ತಪ್ಪು ಗ್ರಹಿಕೆಯಿಂದಾಗಿ ಪುರುಷರು ದೌರ್ಜನ್ಯಗಳನ್ನು ನಡೆಸುತ್ತಾರೆಯೇ ಹೊರತು ಮಹಿಳೆಯರು ಎಂದಿಗೂ ಹಾಗೆಲ್ಲಾ ಮಾಡುವುದಿಲ್ಲ ಎಂಬ ಇನ್ನೊಂದು ತಪ್ಪು ತೀರ್ಮಾನಕ್ಕೂ ಬಂದುಬಿಡುತ್ತವೆ. ಪುರುಷರು ಹಿಂಸಕರು ಮತ್ತು ಮಹಿಳೆಯರು ದಮನಿತರು ಎಂಬ ಸ್ಥಿರ ಮಾದರಿಯನ್ನು ಆಧರಿಸುತ್ತವೆ. ಇಂಥಾ ಆಲೋಚನೆಗಳಿಂದಾಗಿ ಹಲವು ವಾಸ್ತವ ಸಂಗತಿಗಳು ನಮ್ಮಿಂದ ಮರೆಯಾಗಿ ಉಳಿದುಬಿಡುತ್ತವೆ.
ಸಮಾಜದಲ್ಲಿ ನೆಲೆಸಿರುವ ಪುರುಷ ಪ್ರಾಬಲ್ಯದ ವ್ಯವಸ್ಥೆಯನ್ನು ಮಹಿಳೆಯರು ಏಕೆ ಮತ್ತು ಹೇಗೆ ಒಪ್ಪಿಕೊಂಡುಬಿಡುತ್ತಾರೆ; ಮತ್ತು ಅದನ್ನು ತಾವೇ ಬೆಂಬಲಿಸಿ ಸಮರ್ಥಿಸುತ್ತಾರೆ, ಅದನ್ನು ದಾಟಿಸುವ ಮಧ್ಯವರ್ತಿಗಳೂ ಆಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆಹೋಗುತ್ತದೆ. ಕಣ್ಣಿಗೆ ಅಂಥಾ ಪ್ರಕರಣಗಳು ಕಾಣುತ್ತಿದ್ದರೂ ಅವನ್ನು ನಿರ್ಲಕ್ಷಿಸುವಂತೆ ಆಗುತ್ತದೆ. ಪ್ರಬಲ ಗುಂಪಿನವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಬೇಕು ಎಂದರೆ ಇತರರ ಮೇಲೆ ಬಲಪ್ರಯೋಗ ಮಾಡಿ ದಬ್ಬಾಳಿಕೆ ನಡೆಸುವುದು ಅನಿವಾರ್ಯ ಎಂಬುದು ಒಪ್ಪಿತವೇ ಆದ ಮೌಲ್ಯ ಎನಿಸುತ್ತದೆ. ಹಾಗಾಗಿ ಮಹಿಳೆಯರು ಬೇರೊಬ್ಬರ ಮೇಲೆ ಅಧಿಕಾರವನ್ನು ಚಲಾಯಿಸುತ್ತಾರೆ ಎಂಬ ಸಂಗತಿಯನ್ನು, ಅದಕ್ಕಾಗಿ ಅವರು ಎಂಥಾ ದೌರ್ಜನ್ಯಗಳನ್ನು ಮಾಡುತ್ತಾರೆ ಎಂಬುದನ್ನು ಗಮನಿಸಲಾರದೆ ಹೋಗುತ್ತೇವೆ.
ಪುರುಷರು ನಡೆಸುವ ದೌರ್ಜನ್ಯಗಳ ಪ್ರಮಾಣಕ್ಕಿಂತಲೂ ಮಹಿಳೆಯರು ನಡೆಸುವ ದೌರ್ಜನ್ಯಗಳು ಕಡಿಮೆಯವು ಎಂಬುದನ್ನೇ ಹಿಡಿದು ಮಹಿಳೆಯರು ದೌರ್ಜನ್ಯಗಳನ್ನು ನಡೆಸುತ್ತಾರೆ ಎಂಬ ವಾಸ್ತವವನ್ನೇ ಕಾಣದೆ ಹೋಗುವುದು ತಪ್ಪಾಗುತ್ತದೆ. ಎಲ್ಲ ಬಗೆಯ ದೌರ್ಜನ್ಯಗಳೂ ಕೊನೆಗಾಣಬೇಕು ಎಂದರೆ ಯಾವುದೇ ಮಹಿಳೆ ಅಥವಾ ಪುರುಷರನ್ನು ವ್ಯಕ್ತಿಕೇಂದ್ರಿತವಾಗಿ ಗುರುತಿಸಿದರೆ ಸಾಲುವುದಿಲ್ಲ ಅವರನ್ನು ಸಮಾಜದಲ್ಲಿ ನೆಲೆಗೊಂಡಿರುವ ದೌರ್ಜನ್ಯಗಳನ್ನು ನಡೆಸುವ, ಮತ್ತು ಅದನ್ನು ಸಮರ್ಥಿಸುವ ಎರಡು ಬಗೆಯ ಗುಂಪುಗಳು ಎಂದೇ ನೋಡಬೇಕು.
ಉದಾಹರಣೆಗೆ, ಬಿಳಿಯ ಶ್ರೇಷ್ಠತೆ, ಸಾಮಾಜಿಕ ಶ್ರೇಣೀಕರಣ, ಬಂಡವಾಳಶಾಹೀ ಪಿತೃಪ್ರಧಾನತೆಗಳು ಸ್ಥಾಪಿತವಾಗಿರುವ ವ್ಯವಸ್ಥೆಯಲ್ಲಿ ಪುರುಷರು ಅಧಿಕಾರವಂತರಾಗಿ ಮತ್ತು ಮಹಿಳೆಯರು ಅಧಿಕಾರಹೀನರಾಗಿ ಕಾಣುತ್ತಾರೆ; ಹಾಗೆಯೇ ವಯಸ್ಕರು ಅಧಿಕಾರವಂತರಾಗಿ ಮತ್ತು ಮಕ್ಕಳು ಅಧಿಕಾರಹೀನರಾಗಿ ಕಾಣುತ್ತಾರೆ; ಬಿಳಿಯರು ಅಧಿಕಾರವಂತರಾಗಿ ಮತ್ತು ಕಪ್ಪು ಹಾಗೂ ಇತರ ವರ್ಣೀಯ ಜನರು ಅಧಿಕಾರಹೀನರಾಗಿ ಕಾಣುತ್ತಾರೆ. ಮೇಲುನೋಟಕ್ಕೆ ಈ ಚಿಂತನೆಯು ಸರಿಯಾಗಿಯೇ ತೋರುತ್ತದೆ. ಆದರೆ ಸಂದರ್ಭ ಯಾವುದೇ ಇರಲಿ, ಅಧಿಕಾರದಲ್ಲಿ ಯಾರು ಇರುತ್ತಾರೋ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಂಡು ಹೋಗಲು ದಬ್ಬಾಳಿಕೆಯ ಅಸ್ತ್ರವನ್ನು ಬಳಸುವುದು ಸಹಜ ಸಾಮಾನ್ಯ ವಿಷಯ; ಅಕಸ್ಮಾತ್ತಾಗಿ ಇದಕ್ಕೆ ಸವಾಲೆಸೆದು ನಿಲ್ಲುವ ಸಂಗತಿಗಳು ಎದುರಾದರೆ, ಅಧಿಕಾರ ಸ್ಥಾನಕ್ಕೆ ಸಂಚಕಾರವಾದೀತು ಎಂಬ ಭಯ ಹುಟ್ಟಿದರಂತೂ ಈ ದಬ್ಬಾಳಿಕೆಯು ಇನ್ನಷ್ಟು ಉಗ್ರ ರೂಪವನ್ನು ತಾಳುತ್ತದೆ. ಅಕಸ್ಮಾತ್ತಾಗಿ ಮಹಿಳೆಯರ ಕೈಗೆ ಅಧಿಕಾರವು ದೊರೆತರೆ, ಅವರು ಗಂಡಸರಷ್ಟು ಒರಟಾಗಿ ಬೈಯ್ಯುವುದು, ಹೊಡೆಯುವುದು ಮಾಡುವುದಿಲ್ಲ ಎನ್ನುವುದೇನೋ ಸ್ಪಷ್ಟವಾಗಿ ಕಾಣುತ್ತದೆ. ಎಲ್ಲೋ ಅಪರೂಪಕ್ಕೆ ಕೆಲವು ಹೆಂಗಸರು ತಮ್ಮ ಅಧೀನಕ್ಕೆ ಬಂದ ಗಂಡಸರನ್ನು ಬೈದು, ಹೊಡೆದು ಮಾಡುವುದೂ ಕಾಣಬಹುದು ಅಷ್ಟೆ.
ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ
ಮೂಲ: ಬೆಲ್ ಹುಕ್ಸ್
ಕನ್ನಡಕ್ಕೆ: ಎಚ್ ಎಸ್ ಶ್ರೀಮತಿ
ಮುದ್ರಣ: 2020
ಪ್ರಕಾಶಕ: ಸಂಗಾತ ಪುಸ್ತಕ
ಬೆಲೆ: 290/-
ಆದರೆ ಈ ಅಧಿಕಾರಸ್ಥ ಮಹಿಳೆಯರು ತಮ್ಮ ಅಧಿಕಾರವನ್ನು ಚಲಾಯಿಸಲು ಇತರ ಹಿಂಸಾತ್ಮಕ ಬಗೆಗಳನ್ನು ಖಂಡಿತವಾಗಿಯೂ ಬಳಸುತ್ತಾರೆ. ಯಾವ ಗುಂಪಿನ ಜನರ ಮೇಲೆ ಅವರಿಗೆ ಹಿಡಿತವು ಸಾಧ್ಯವಾಗುತ್ತದೆಯೋ ಆ ಗುಂಪಿನ ಮೇಲೆ ಈ ಬಗೆಗಳನ್ನು ಪ್ರಯೋಗಿಸುತ್ತಾರೆ. ನಾವು ಮಹಿಳೆಯರು ಕೂಡಾ ಇದೇ ಪಿತೃಪ್ರಧಾನ ಕುಟುಂಬಗಳಲ್ಲಿಯೇ ಹುಟ್ಟಿ ಬೆಳೆದು ಬಂದಿದ್ದೇವೆ. ನಮ್ಮ ಮನೆಗಳಲ್ಲಿ ಗಂಡಸರು ಮನೆಯ ಹೆಂಗಸರು ಮತ್ತು ಮಕ್ಕಳ ಮೇಲೆ ದಬ್ಬಾಳಿಕೆಯನ್ನು ನಡೆಸಿಯೇ ಕುಟುಂಬದ ಮೇಲೆ ಹಿಡಿತವನ್ನು ಸಾಧಿಸುತ್ತಾರೆ ಎಂಬುದನ್ನು ನೋಡಿದ್ದೇವೆ. ಇದನ್ನು ಅನುಭವಿಸುವ ಹೆಂಗಸರು ಮತ್ತು ಮಕ್ಕಳು ಅಧಿಕಾರದಲ್ಲಿ ಇರುವವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಬೇಕು ಎಂದರೆ ದಬ್ಬಾಳಿಕೆಯನ್ನು ನಡೆಸಲೇಬೇಕಾಗುತ್ತದೆ ಎಂದು ಗಟ್ಟಿಯಾಗಿ ನಂಬುತ್ತಾರೆ. ಈ ನಂಬಿಕೆಗೆ ಅಂಟಿಕೊಳ್ಳುವ ಹೆಂಗಸರು ತಮ್ಮ ಮಕ್ಕಳ ಮೇಲೆ ದಬ್ಬಾಳಿಕೆಯನ್ನು ನಡೆಸುವುದೂ ಇದೆ. ಎಷ್ಟೋ ವೇಳೆ ಕುಟುಂಬಗಳಲ್ಲಿ ಮಕ್ಕಳ ಮೇಲೆ ಗಂಡಸರಿಗಿಂತ ಹೆಂಗಸರೇ ಹೆಚ್ಚಾಗಿ ದಬ್ಬಾಳಿಕೆಗಳನ್ನು ನಡೆಸುತ್ತಾರೆ ಎಂಬಂತೆ ಕೂಡಾ ಕಾಣಬಹುದು.
ಕೆಲವೊಂದು ಸಲ ಸ್ಪಷ್ಟವಾದ ಯಾವುದೇ ಕಾರಣವಿಲ್ಲದೆಯೇ ಮಕ್ಕಳನ್ನು ಬೈಯಲು, ದಂಡಿಸಲು ತೊಡಗುವುದನ್ನೂ ನೋಡಬಹುದು. ಮಹಿಳೆಯರು ಮಕ್ಕಳ ಮೇಲೆ ನಡೆಸುವ ಈ ಬಗೆಯ ದೌರ್ಜನ್ಯಗಳು ಹೆಂಗಸರು ಮತ್ತು ಮಕ್ಕಳ ಮೇಲೆ ಪುರುಷರು ನಡೆಸುವ ದೌರ್ಜನ್ಯಗಳಿಗಿಂತ ಯಾವ ರೀತಿಯಲ್ಲಿಯೂ ಕಡಿಮೆಯದಲ್ಲ. ಆದರೂ ಹೆಚ್ಚಿನ ಹೆಂಗಸರು ಮಕ್ಕಳನ್ನು ಹೀಗೆ ಹಿಂಸಿಸಲು ಹೋಗುವುದಿಲ್ಲ ಎಂಬುದೂ ನಿಜವೇ. ಇಷ್ಟಾದರೂ ಶೇಕಡಾ ತೊಂಬತ್ತು ಭಾಗದಷ್ಟು ತಂದೆ ತಾಯಂದಿರು ತಮ್ಮ ಮಕ್ಕಳ ಮೇಲೆ ಒಂದಲ್ಲ ಒಂದು ಬಗೆಯ ದಬ್ಬಾಳಿಕೆಯನ್ನು ನಡೆಸುತ್ತಾರೆ ಎಂಬುದನ್ನು ನಿರಾಕರಿಸುವುದು ಕಷ್ಟ. ಹಾಗೆಂದು ಮಹಿಳೆಯರೂ ದೌರ್ಜನ್ಯಗಳನ್ನು ನಡೆಸುತ್ತಾರೆ ಎಂಬ ಸಂಗತಿಯು, ಪುರುಷರು ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಾರೆ ಎಂಬ ಸಮಸ್ಯೆಯ ಸಂಕೀರ್ಣತೆಯನ್ನು ಕಡಿಮೆ ಮಾಡುವುದಿಲ್ಲ.
ಆದರೂ ಮಹಿಳೆಯರು ಅಧಿಕಾರಗಳನ್ನು ಪಡೆದುಕೊಂಡಾಗ ದಬ್ಬಾಳಿಕೆಯನ್ನು ನಡೆಸುತ್ತಾರೆ ಎಂಬುದನ್ನು ಗುರುತಿಸಿಕೊಳ್ಳುವುದು ಮುಖ್ಯವಾಗುತ್ತದೆ. ಆಗ ಮಾತ್ರವೇ ಪುರುಷರು ಮಾತ್ರವೇ ಅಲ್ಲದೆ ಮಹಿಳೆಯರು ಕೂಡಾ ವ್ಯವಸ್ಥೆಯು ಹೇರುವ ಲೈಂಗಿಕತಾವಾದೀ ಸಾಮಾಜೀಕರಣ ತರಬೇತಿಯ ಪಾಠಗಳಿಂದ ಹೊರಬರಬೇಕಾದ ಅಗತ್ಯವಿದೆ ಎಂಬುದು ತಿಳಿಯುತ್ತದೆ. ಅಧಿಕಾರವನ್ನು ಉಳಿಸಿಕೊಳ್ಳಲು ದಬ್ಬಾಳಿಕೆಯನ್ನು ನಡೆಸಬೇಕಾದ್ದು ಅನಿವಾರ್ಯ ಎಂಬ ನಮ್ಮ ಮನಸ್ಥಿತಿಯನ್ನು ಪರಿವರ್ತಿಸಲು ಸಾಧ್ಯವಾಗುತ್ತದೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತವೆ ಎಂಬ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪುರುಷರ ನಡವಳಿಕೆಗಳನ್ನಷ್ಟೇ ಕೇಂದ್ರವಾಗಿಸಿಕೊಂಡರೆ, ಸಮಸ್ಯೆಯ ಗಂಭೀರತೆಯನ್ನು ಗ್ರಹಿಸಲು ಸಾಧ್ಯವಾಗಿಲ್ಲ ಎಂದೇ ಅರ್ಥವಾಗುತ್ತದೆ. ಸ್ತ್ರೀವಾದೀ ಚಳವಳಿಗಳು ಪುರುಷರು ನಡೆಸುವ ದೌರ್ಜನ್ಯಗಳನ್ನು ಎದುರಿಸುವುದು ಹೇಗೆ ಎಂಬುದನ್ನು ಕಲಿಯಲು ಮಹಿಳೆಯರಿಗೆ ಉತ್ತೇಜನಗಳನ್ನು ಕೊಡಬಹುದು. ಆದರೆ ಮಹಿಳೆಯರು ಎಲ್ಲ ಬಗೆಯ ದಬ್ಬಾಳಿಕೆಗಳನ್ನೂ ವಿರೋಧಿಸಿ ನಿಲ್ಲುವುದನ್ನು ಕಲಿಯದ ಹೊರತು, ಅವರ ಮೇಲೆ ನಡೆಯುವ ದೌರ್ಜನ್ಯಗಳು ಕೂಡಾ ಕೊನೆಗಾಣಲಾರವು ಎಂಬುದು ಖಚಿತ. ಸ್ತ್ರೀವಾದೀ ಚಿಂತನೆ ಮತ್ತು ಚಳವಳಿಗಳು ಇದನ್ನು ಮನಗಾಣಬೇಕು.

ಕನ್ನಡದ ಸ್ತ್ರೀವಾದಿ ಚಿಂತಕಿ ಮತ್ತು ಲೇಖಕಿ. ಮಹಾಶ್ವೇತಾ ದೇವಿಯವರ ’ರುಡಾಲಿ’, ’ಹಜಾರ್ ಚೌರಾಶೀರ್ ಮಾ’, ಸಿಮೋನ್ ದ ಬೋವ ಅವರ ‘ದ ಸೆಕೆಂಡ್ ಸೆಕ್ಸ್’, ಬೆಟ್ಟಿ ಫ್ರೀಡನ್ ಅವರ ’ದ ಫೆಮಿನಿಸ್ಟ್ ಮಿಸ್ಟಿಕ್’ ಸೇರಿದಂತೆ ಹಲವು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ’ಸ್ತ್ರೀವಾದ’, ’ಸ್ತ್ರೀವಾದ : ಪಾರಿಭಾಷಿಕ ಪದಕೋಶ’, ’ಗೌರಿ ದುಃಖ’, ’ಸ್ತ್ರೀವಾದಿ ಚಿಂತನೆ : ಕೆಲವು ಪ್ರಶ್ನೆಗಳು ಸಂದೇಹಗಳು’ ಸೇರಿದಂತೆ ಇನ್ನು ಹಲವಾರು ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ.


