ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು, ಇಂದು ಭಾರತ್ ಬಂದ್‌ಗೆ ಕರೆ ನೀಡಿದ್ದರು. ಈ ನಡುವೆ ಇಂದು ಸಂಜೆ ಮಾತುಕತೆಗೆ ಬರುವಂತೆ ಪ್ರತಿಭಟನಾ ನಿರತ ರೈತರಿಗೆ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಕೊನೆಗೊಳಿಸಲು ನಾಳೆ ಆರನೇ ಸುತ್ತಿನ ಮಾತುಕತೆಗೆ ಬರುವಂತೆ ಕೇಂದ್ರ ಸರ್ಕಾರ ಕರೆ ನೀಡಿತ್ತು. ಇದಕ್ಕೆ ಒಂದು ದಿನದ ಮೊದಲೇ ಅಮಿತ್ ಶಾ ಅವರ ಈ ನಡೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಇನ್ನು ಮುಂದೆ ಜೈಲಿನ ಅಂಕಿಅಂಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವರ್ಗ
ದೇಶದಾದ್ಯಂತ ರೈತರು ರಸ್ತೆ ತಡೆದು, ರೈಲು ಸಂಚಾರವನ್ನು ಸ್ಥಗಿತಗೊಳಿಸಿ, ಹೆದ್ದಾರಿಗಳನ್ನು ನಿರ್ಬಂಧಿಸಿ, ಮಾರುಕಟ್ಟೆಗಳನ್ನು ಮುಚ್ಚಿ ಬಂದ್ ಮಾಡುತ್ತಿದ್ದಾರೆ. ಹಲವಾರು ರಾಜ್ಯಗಳಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದೆ.
“ನನಗೆ ಫೋನ್ ಕರೆ ಬಂತು. ಅಮಿತ್ ಶಾ ಅವರು ಸಭೆ ಕರೆದಿದ್ದಾರೆ. ನಮ್ಮನ್ನು 7 ಗಂಟೆಗೆ ಬರಲು ಹೇಳಿದ್ದಾರೆ. ದೆಹಲಿ ಬಳಿಯ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ” ಎಂದು ರೈತ ಮುಖಂಡ ರಾಕೇಶ್ ಟಿಕೈಟ್ ಹೇಳಿದ್ದಾರೆ.
ಇದನ್ನೂ ಓದಿ: ಈ ಬಂದ್‌ಗೆ ಯಾರೂ ಸಹಕಾರ ಕೊಡುವುದಿಲ್ಲ, ತಲೆಕೆಡಿಸಿಕೊಳ್ಳಬೇಡಿ: ಯಡಿಯೂರಪ್ಪ
ಇಂದಿನ ಪ್ರತಿಭಟನೆಗೆ ಕಾಂಗ್ರೆಸ್, ಎಎಪಿ, ಡಿಎಂಕೆ, ಟಿಆರ್‌ಎಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಬೆಂಬಲ ನೀಡಿವೆ.
ಈ ವಿವಾದಾತ್ಮಕ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಇದುವರೆಗೂ ನಡೆದಿರುವ ಸುಮಾರು 5 ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಕಳೆದ ಶುಕ್ರವಾರ ಸತತ ಏಳು ಗಂಟೆಗಳ ಕಾಲ ನಡೆದ ಮಾತುಕತೆಯೂ ಕೂಡ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ವಿಫಲವಾಗಿತ್ತು.
ಇದನ್ನೂ ಓದಿ: ರೈತರನ್ನು ಬೆಂಬಲಿಸಿದ್ದಕ್ಕೆ ದೆಹಲಿ ಸಿಎಂ ಕೇಜ್ರಿವಾಲ್‌ರನ್ನೆ ಗೃಹ ಬಂಧನದಲ್ಲಿಟ್ಟ ಪೊಲೀಸರು: ಆಪ್ ಆರೋಪ
ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಮೂರು ಹೊಸ ಕಾನೂನುಗಳನ್ನು ಹಿಂಪಡೆಯದ ಹೊರತು ಬೇರೇನೂ ಬೇಕಾಗಿಲ್ಲ ಎಂದು ರೈತ ಸಂಘಟನೆಗಳು ಪಟ್ಟುಹಿಡಿದಿವೆ.
ಮಾತುಕತೆಗಳ ನೇತೃತ್ವ ವಹಿಸಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್, “ಸರ್ಕಾರಕ್ಕೆ ಯಾವುದೇ ಅಹಂ ಇಲ್ಲ. ಆದರೆ ಸರ್ಕಾರ ಈ ಕಾನೂನುಗಳನ್ನು ರದ್ದು ಮಾಡುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತರ ಹೋರಾಟ ಬೆಂಬಲಿಸಿದ ಭೀಮ್ ಆರ್ಮಿ ಮುಖ್ಯಸ್ಥ ಆಜಾದ್‌ಗೆ ಗೃಹ ಬಂಧನ!


