ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಸೋಮವಾರ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪಕ್ಷದ ಮುಖಂಡರಾದ ಕೈಲಾಶ್ ವಿಜಯವರ್ಗಿಯಾ, ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್, ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ಇತರ ಬಿಜೆಪಿ ನಾಯಕರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಡಿಯಲ್ಲಿ, ಸಾರ್ವಜನಿಕ ಸೇವಕರ ಮೇಲೆ ಹಲ್ಲೆ ಸೇರಿದಂತೆ ಜಾಮೀನು ರಹಿತ ಪ್ರಕರಣಗಳ ವಿಭಾಗಗಳ ಅಡಿಯಲ್ಲಿ ಬಿಜೆಪಿ ನಾಯಕರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಪ.ಬಂಗಾಳ: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ- ಪ್ರಜಾಪ್ರಭುತ್ವ ಕಗ್ಗೊಲೆ ಎಂದ ತೇಜಸ್ವಿ ಸೂರ್ಯ
“ಪ್ರತಿಭಟನೆಯ ವೇಳೆ ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳನ್ನು ಬಿಜೆಪಿ ಕಾರ್ಯಕರ್ತರು ಕಿತ್ತುಹಾಕಿ, ಬೆಂಕಿ ಹಚ್ಚಿ ಕಲ್ಲು ತೂರಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲ ಫಿರಂಗಿಗಳನ್ನು ಮತ್ತು ಟಿಯರ್ ಗ್ಯಾಸ್ ಅನ್ನು ಬಳಸಿದರು” ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪ್ರತಿಭಟನೆಯ ಸಮಯದಲ್ಲಿ ಬಿಜೆಪಿ ಬೆಂಬಲಿಗ ಉಲೆನ್ ರಾಯ್ ಗಾಯಗೊಂಡಿದ್ದರು. ಪೊಲೀಸ್ ಗುಂಡಿನ ದಾಳಿಯಲ್ಲಿ ರಾಯ್ ಕೊಲ್ಲಲ್ಪಟ್ಟರು ಎಂದು ಬಿಜೆಪಿ ಆರೋಪಿಸಿದ್ದರು. ಉಲೆನ್ ರಾಯ್ ಸಾವಿಗೆ ಶಾಟ್‌ಗನ್ ದಾಳಿಯೇ ಕಾರಣ ಎಂದು ವೈದ್ಯಕೀಯ ವರದಿ ಹೇಳಿತ್ತು. ಆದರೆ ಪೊಲೀಸರು ಶಾಟ್‌ಗನ್ ಬಳಸಿಯೇ ಇಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಹೈದರಾಬಾದ್: ಅತಿಕ್ರಮಣ ಪ್ರವೇಶ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ!
ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಬಿಜೆಪಿಯು ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು. ಇದರಲ್ಲಿ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇತರ ನಾಯಕರು ಭಾಗವಹಿಸಿದ್ದರು. ಇಲ್ಲಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು.
ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ ಬಳಿಕ ಪಶ್ಚಿಮ ಬಂಗಾಳದತ್ತ ಬಿಜೆಪಿ ಚಿತ್ತ!
“ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗಿದೆ” ಎಂದು ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ.
“ಬಿಜೆಪಿ ಅನಗತ್ಯವಾಗಿ ಹಿಂಸೆಯನ್ನು ಪ್ರಚೋದಿಸುತ್ತದೆ. ಅವರು ಶಾಂತಿಯುತ ಪ್ರತಿಭಟನೆ ನಡೆಸಬಹುದಿತ್ತು” ಎಂದು ಟಿಎಂಸಿ ಸಂಸದ ಪ್ರೊಫೆಸರ್ ಸೌಗತಾ ರಾಯ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇನ್ನೇನು ಚುನಾವಣೆ ಬರುತ್ತಿದ್ದು, ಇದರ ಭಾಗವಾಗಿಯೇ ಬಿಜೆಪಿ ಇಂತಹ ತಂತ್ರಗಳನ್ನು ಆಶ್ರಯಿಸುತ್ತಿದೆ ಎಂದು ಹಲವರು ಟೀಕಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಸ್ಥಿತಿ ಕಾಶ್ಮೀರಕ್ಕಿಂತ ಕೆಟ್ಟಿದೆ; ಭಯೋತ್ಪಾದಕರ ಕೇಂದ್ರವಾಗಿದೆ: ಬಿಜೆಪಿ ರಾಜ್ಯಾಧ್ಯಕ್ಷ
“ಜೊತೆಗೆ ಕಳೆದ ಎರಡು ವಾರಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಅಮಾನವೀಯ ಮತ್ತು ಅಸಂವಿಧಾನಿಕ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ ಈ ಬಿಜೆಪಿ ನಾಯಕರು ಯಾರೂ ತುಟಿಬಿಚ್ಚಲಿಲ್ಲ. ಆದರೆ ಈಗ ತಮ್ಮ ಪಕ್ಷದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಬಳಸಿದ್ದಕ್ಕೆ ಪ್ರಜಾಪ್ರಭುತ್ವ ಸತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ” ಎಂದು ಹಲವರು ಬಿಜೆಪಿಯ ವರ್ತನೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಪೊಲೀಸರಿಂದ ಬೂಟು ನೆಕ್ಕಿಸುತ್ತೇವೆ ಎಂದ ಬಿಜೆಪಿ ಮುಖಂಡ ರಾಜು ಬ್ಯಾನರ್ಜಿ!


