ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಿ ಭಯ ಹುಟ್ಟಿಸುವ ಮೂಲಕ ರಾಜ್ಯದಲ್ಲಿ ಪರೋಕ್ಷವಾಗಿ ತುರ್ತು ಪರಿಸ್ಥಿತಿ ಹೇರಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯತ್ನಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆರೋಪಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ದಾಳಿಯಾದಗಿನಿಂದ ಈ ಆರೋಪ-ಪ್ರತ್ಯಾರೋಗಳು ಆರಂಭವಾಗಿವೆ.
ಇದರ ಭಾಗವಾಗಿ, “ರಾಜಕೀಯ ಉದ್ದೇಶದಿಂದ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರನ್ನು ದೆಹಲಿ ಆಗಮಿಸುವಂತೆ ಸಮನ್ಸ್ ನೀಡಲಾಗಿದೆ” ಎಂದು ಲೋಕಸಭೆಯಲ್ಲಿನ ತೃಣಮೂಲ ಕಾಂಗ್ರೆಸ್‌ನ ಮುಖಂಡ ಕಲ್ಯಾಣ್ ಬ್ಯಾನರ್ಜಿ ದೂರಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ
ಈ ವಿಷಯದ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರಿಗೆ ಬರೆದಿರುವ ಪತ್ರದಲ್ಲಿ, “ರಾಜ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಚರ್ಚೆಗೆ ಕರೆದಿರುವುದು ಏಕೆ” ಎಂದು ಪ್ರಶ್ನಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಕೇಂದ್ರ ಗೃಹ ಸಚಿವರ ನಿರ್ದೇಶನದ ಮೇರೆಗೆ ಹಿರಿಯ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕುವ ತಂತ್ರವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ರೈತರ ಹೋರಾಟಕ್ಕೆ ಬೆಂಬಲ ನೀಡಿದ ಎನ್‌ಡಿಎ ಮಿತ್ರಪಕ್ಷ RLP
ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸಿ ಕೇಂದ್ರ ಸರ್ಕಾರವು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಧಾನಸಭೆಗೆ ನಿಷ್ಠೆಯಿಂದ ಇರಬೇಕೇ ಹೊರತು ನಿಮಗೆ ಅಥವಾ ನಿಮ್ಮ ಗೃಹ ಸಚಿವರಿಗೆ ಅಲ್ಲ ಎಂದು ದೂರಿದ್ದಾರೆ.
ಪ್ರಕರಣವೊಂದರಲ್ಲಿ ಅಪರಾಧಿಯಾಗಿದ್ದ ಮತ್ತು 59 ಇತರ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಯೊಬ್ಬ ನಡ್ಡಾ ಅವರ ಬೆಂಗಾವಲು ವಾಹನದಲ್ಲಿದ್ದ. ಈತ ರಸ್ತೆ ಬದಿಯಲ್ಲಿದ್ದ ಟಿಎಂಸಿ ಬೆಂಬಲಿಗರಿಗೆ ಪ್ರಚೋದನಾಕಾರಿ ಸನ್ನೆ ಮಾಡುತ್ತಿದ್ದ ಎಂದೂ ಆರೋಪಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ಸರ್ಕಾರಿ ಉದ್ಯೋಗಿಗಳು ಟೀ ಶರ್ಟ್, ಜೀನ್ಸ್ ಧರಿಸುವಂತಿಲ್ಲ!
ಕೋಲ್ಕತ್ತದಿಂದ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ಪ್ರದೇಶಕ್ಕೆ ತೆರಳುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಬೆಂಗಾವಲು ಪಡೆಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿದೆ.
ಮುಖ್ಯಮಂತ್ರಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಸಂಸದೀಯ ಕ್ಷೇತ್ರವಾದ ಡೈಮಂಡ್ ಹಾರ್ಬರ್‌ನಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕರ್ನಾಟಕ ಸರಕಾರ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ನಾಶ ಮಾಡಲು ಹೊರಟಂತಿದೆ!


