ಕರ್ನಾಟಕ ಸರಕಾರ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ನಾಶ ಮಾಡಲು ಹೊರಟಂತಿದೆ!

ಕರ್ನಾಟಕ ಸರಕಾರ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ನಾಶ ಮಾಡಲು ಹೊರಟಂತಿದೆ. ಒಂದು ಕಡೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ ಮತ್ತೊಂದು ಕಡೆ ಅದರ ಅಭಿವೃದ್ದಿಗೆ ಬೇಕಾಗುವ ಪೂರಕ ವಾತಾವರಣ ನಿರ್ಮಿಸದೇ ಇರುವದು ಸರಕಾರದ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿಯ ಹಿನ್ನಡೆಯನ್ನು ರಾಜ್ಯದ ಸರಾಸರಿ ಅಭಿವೃದ್ದಿಯ ಹಂತಕ್ಕೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಹಂತ ಹಂತವಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ನೀಡಲಾಗುತ್ತಿರುವ ಅನುದಾನವನ್ನು 4 ವರ್ಷಗಳಲ್ಲಿ 150 ಕೋ.ರೂ. ಯಿಂದ 1500 ಕೋ.ರೂ. ಗೆ ಹೆಚ್ಚಿಸಿ ಅಭಿವೃದ್ದಿಗೆ ಮಾನದಂಡ ನಿಗದಿಗೊಳಿಸಿ, ಹಿಂದುಳಿದ ಪ್ರದೇಶದ ಅಭಿವೃದ್ದಿಗೆ ಸರಕಾರಕ್ಕೆ ಇದ್ದ ಬದ್ದತೆ ತೋರಿಸಿತ್ತು. ನಂತರ ಬಂದ ಹೆಚ್.ಡಿಕುಮಾರಸ್ವಾಮಿ ನೇತೃತ್ವದ ಸರಕಾರ ಮಂಡಳಿಗೆ ಇದ್ದ 1500 ಕೋ.ರೂ ಅನುದಾನವನ್ನು 2500 ಕೋ.ರೂ. ಗೆ ಹೆಚ್ಚಿಸುವ ಬಗ್ಗೆ ನಿರ್ಣಯ ಮಾಡಿದ್ದರು. ಆದರೆ ಈ ಭಾಗದ ದುರಾದೃಷ್ಟ ಅವರ ಸರಕಾರ ಬಿದ್ದು ಹೋಯಿತು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ: ಹೆಸರೇನೋ ಬದಲಾಯಿತು – ಕಲ್ಯಾಣ ಎಂದು?

ಸಂವಿಧಾನದ 371 ಜೆ ಅಡಿಯಲ್ಲಿ ರಚಿಸಲಾದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ 2014 ರಿಂದ ಸರಕಾರವು ಸತತವಾಗಿ ಪೂರ್ಣ ಪ್ರಮಾಣದ ಆಡಳಿತ ಮಂಡಳಿಯನ್ನು ರಚಿಸುತ್ತ ಬಂದಿತ್ತು. ಪೂರ್ಣ ಪ್ರಮಾಣದ ಆಡಳಿತ ಮಂಡಳಿ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರನ್ನು, ಸದಸ್ಯರಾಗಿ ಈ ಭಾಗದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಒಂದು ವರ್ಷದ ಅವಧಿಗೆ ಸರದಿ ಮೂಲಕ ನಾಮನಿರ್ದೇಶಿಸುವ 8 ಜನ ವಿಧಾನಸಭಾ ಸದಸ್ಯರು, 2 ಜನ ವಿಧಾನ ಪರಿಷತ್ ಸದಸ್ಯರು, 1 ಲೋಕಸಭಾ ಸದಸ್ಯರು, 1 ಜಿಲ್ಲಾ ಪಂಚಾಯತ ಅಧ್ಯಕ್ಷರು, 1 ನಗರಸಭೆ ಸದಸ್ಯರು ಹಾಗೂ 5 ಜನ ವಿಷಯ ಪರಿಣಿತರು ರಾಜ್ಯದ ಯೋಜನಾ ಕಾರ್ಯವಿಧಾನ, ಹಣಕಾಸು ವಿಷಯಗಳು ಹಾಗೂ ಲೆಕ್ಕಪತ್ರಗಳು, ಕೃಷಿ ಮತ್ತು ಕೈಗಾರಿಕೆ, ನೀರಾವರಿ ಮತ್ತು ಲೊಕೋಪಯೋಗಿ ಕಾಮಗಾರಿಗಳು ಹಾಗೂ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರನ್ನು ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಇದರ ಜೊತೆಗೆ ಪ್ರಾದೇಶಿಕ ಆಯುಕ್ತರು, ಯೋಜನಾ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸರಕಾರದ ಕಾರ್ಯದರ್ಶಿಗಳು ಪದನಿಮಿತ್ಯ ಸದಸ್ಯರಾಗಿರುತ್ತಾರೆ.

ಇದನ್ನೂ ಓದಿ: ಕರ್ನಾಟಕದ ಹೋರಾಟನಿರತ ರೈತರಿಂದ ಪ್ರಧಾನಿಗೆ ಪತ್ರ; ಅಷ್ಟಕ್ಕೂ ಅವರ ಹಕ್ಕೊತ್ತಾಯಗಳೇನು?

ಆದರೆ, ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಆಡಳಿತ ಮಂಡಳಿಯನ್ನೇ ನೇಮಿಸದೇ ನಿರ್ಲಕ್ಷ್ಯ ಸಾಧಿಸಿತು. ನಂತರ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಬೇಕಾದ ಮಂಡಳಿಯ ನಿಯಮಕ್ಕೆ ಯಾರ ಅಭಿಪ್ರಾಯ ಸಂಗ್ರಹಿಸದೇ ತಿದ್ದುಪಡಿ ಮಾಡಿ ಶಾಸಕರನ್ನು ಅಧ್ಯಕ್ಷರನ್ನಾಗಿಸುವ ತಿರ್ಮಾನ ತೆಗೆದುಕೊಂಡು ಮಂಡಳಿಯ ಘನತೆ ಕಡಿಮೆ ಮಾಡಿದರು.

ಅದಾಗ್ಯೂ ಒಂದು ವರ್ಷದವರೆಗೆ ಮಂಡಳಿಗೆ ಅಧ್ಯಕ್ಷರನ್ನು ನೇಮಿಸದೇ ಮಂಡಳಿ ಕಳೆದ 6 ವರ್ಷದಿಂದ ನಡೆಸಿಕೊಂಡು ಬಂದಿರುವಂತ ಕಾರ್ಯಕ್ಷಮತೆಯನ್ನು ಹಾಳು ಮಾಡಿದ ಶ್ರೇಯಸ್ಸು ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಅಳೆದು ತೂಗಿ ರಾಜಕೀಯ ಆಶ್ರಯತಾಣ ಮಾಡಿರುವ ಮಂಡಳಿಗೆ ಕೊನೆಗೂ ಕಲಬುರಗಿ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ದತ್ರಾತ್ರೇಯ ಪಾಟೀಲ್ ರೇವುರ್ ಇವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಕೈ ತೊಳೆದುಕೊಂಡರು.

ಇದನ್ನೂ ಓದಿ: ಕರ್ನಾಟಕದ ಕೊರೊನಾ ಸಾವುಗಳು: ರಕ್ತದೊತ್ತಡ ಮತ್ತು ಮಧುಮೇಹಿ ರೋಗಿಗಳೆ ಹೆಚ್ಚೆಂದ ವರದಿ!

ದುರಾದೃಷ್ಟವಷಾತ್ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ ನಿಯಮಗಳಲ್ಲಿ ಅಧ್ಯಕ್ಷರಿಗೆ ನಿರ್ಣಯ ಕೈಗೊಳ್ಳುವ ಅಧಿಕಾರವಿಲ್ಲ. ಈ ಕಾರಣದಿಂದ 2020-21ನೇ ಸಾಲಿನ ಕ್ರೀಯಾ ಯೋಜನೆಗೆ ಅನುಮೋದನೆ ನೀಡುವ ಅಧಿಕಾರ ಸರಕಾರಕ್ಕೆ ಹೋಯಿತು. ಸರಕಾರ ಆರ್ಥಿಕ ವರ್ಷ ಪ್ರಾರಂಭದಲ್ಲಿ ಕ್ರೀಯಾ ಯೋಜನೆ ಪಡೆದು ನೀಡಬಹುದಾಗಿತ್ತು. ಆದರೆ ಕಾಟಾಚಾರದ ಇವರ ಕಾಳಜಿಯಿಂದಾಗಿ ಡಿಸೆಂಬರ್ ಮುಗಿಯುತ್ತ ಬಂದರೂ ಕ್ರೀಯಾ ಯೋಜನೆ ಅನುಮೋದನೆ ನೀಡಲು ಸರಕಾರಕ್ಕೆ ಸಾಧ್ಯವಾಗಿಲ್ಲ.

ಈಗ ಕ್ರೀಯಾ ಯೋಜನೆ ಅನುಮೋದನೆ ನೀಡಿದರೂ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಈ ಆರ್ಥಿಕ ವರ್ಷದಲ್ಲಿ ಸಾಧ್ಯವೇ ಎನ್ನುವದು ಈಗಿರುವ ಪ್ರಶ್ನೆ ಮತ್ತು ಆತಂಕವಾಗಿದೆ. ಸರಕಾರದಲ್ಲಿ ಕೋವಿಡ್-19 ಕಾರಣಕ್ಕೆ ತೆರಿಗೆ ಸಂಗ್ರಹವಾಗಿಲ್ಲ ಎನ್ನುವ ಬಿ.ಎಸ್.ಯಡಿಯೂರಪ್ಪನವರ ಸರಕಾರದ ಇತರೆ ಭ್ರಷ್ಟ ವ್ಯವಸ್ಥೆಯ ಕೆಲಸಗಳು ಯಾವ ತೆರಿಗೆಯಲ್ಲಿ ಆಗುತ್ತಿವೆ.

ಇದನ್ನೂ ಓದಿ: ರಾಜ್ಯಗಳ ವಿತ್ತೀಯ ಸ್ವಾಯತ್ತತೆಗೆ ಕಂಟಕ: ಬಡವಾಗಲಿರುವ ಕರ್ನಾಟಕ – ಕೃಷ್ಣ ಭೈರೇಗೌಡ

ಇತ್ತೀಚಿಗೆ ನಡೆದ ವಿಧಾನ ಮಂಡಳ ಅಧಿವೇಶನದಲ್ಲಿ ಮಂಡಳಿಗೆ ಅನುದಾನ ಬಿಡುಗಡೆಯಾಗಿಲ್ಲವೆಂದು ಚರ್ಚೆಯಾಯಿತು. ಆದರೆ ಗಂಭೀರವಾಗಿ ಕ್ರೀಯಾ ಯೋಜನೆಯನ್ನೇ ಅನುಮೋದನೆ ನೀಡಲಿಲ್ಲ ಯಾಕೆ ಎಂದು ಈ ಭಾಗದ 41 ಜನ ವಿಧಾನಸಭಾ ಸದಸ್ಯರಿದ್ದು ಯಾರೂ ಸರಕಾರವನ್ನು ಪ್ರಶ್ನೆ ಮಾಡಲಿಲ್ಲ. ಇನ್ನೂ ಮುಂದೆ ಹೋಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಕ್ರೀಯಾ ಯೋಜನೆ ಅನುಮೋದನೆ ನೀಡುವ ಅಧಿಕಾರವಿದ್ದು ಸರಕಾರ ಅನುಮೋದನೆ ನೀಡುವ ಪರಸ್ಥಿತಿ ಬಂದಿದ್ದಾದರೂ ಏತಕ್ಕೆ ಎಂದು ಪ್ರಶ್ನೆ ಮಾಡಬಹುದಿತ್ತು, ಅದು ಆಗಲಿಲ್ಲ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸಿದೇ ಇರುವದರಿಂದ ಮಂಡಳಿಯ ಕ್ರೀಯಾ ಯೋಜನೆ ಅನುಮೋದನೆ ನೀಡುವ ಪರಸ್ಥಿತಿ ಸರಕಾರಕ್ಕೆ ಬಂದಿದೆ ಎನ್ನುವ ಕನಿಷ್ಠ ತಿಳುವಳಿಕೆ ಈ ಭಾಗದ ಜನಪ್ರತಿನಿಧಿಗಳಿಗೆ ಇಲ್ಲದಿರುವದು ದುರಂತ. ಮಂಡಳಿಗೆ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸಲು ಇರುವ ತೊಂದರೆಯಾದರೂ ಏನೂ ಎನ್ನುವದು ತಿಳಿಯದಾಗಿದೆ. ಮಂಡಳಿಗೆ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸದೇ ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ಲಭಿಸಿದ ಸಂವಿಧಾನ ಬದ್ದವಾದ ಹಕ್ಕನ್ನು ಕಸಿದುಕೊಳ್ಳಲು ಈ ಸರಕಾರಕ್ಕೆ ಅಧಿಕಾರ ನೀಡಿದವರು ಯಾರೂ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ

ಕೋವಿಡ್-19 ಕಾರಣ ಹೇಳಿ ಸರಕಾರ ಮಂಡಳಿಗೆ ನೀಡಿರುವ ಅನುದಾನ ಬಜೆಟ್‌ನಲ್ಲಿ 1500 ಕೋ. ಎಂದು ಘೋಷಿಸಿದರೂ ಕ್ರೀಯಾ ಯೋಜನೆ ಮಾತ್ರ 1100 ಕೋ.ಗೆ ಮಾಡಲು ಮೌಖಿಕವಾಗಿ ಮಂಡಳಿಗೆ ಸೂಚಿಸಲಾಗಿತ್ತು. ಹಿಂದುಳಿದ ಪ್ರದೇಶದ ಅಭಿವೃದ್ದಿಗೆ ಇದ್ದಂತಹ ಅನುದಾನ ಕಡಿಗೊಳಿಸುವ ಸರಕಾರದ ನಿಲುವು ಪ್ರಶ್ನಾರ್ಹವಾಗಿದೆ. ಯಾಕೆಂದರೆ ಹಿಂದುಳಿದ ಸಮುದಾಯಗಳಿಗೆ ನೂರಾರು ಕೋಟಿ ಅನುದಾನ ಬಜೆಟನಲ್ಲಿ ಇಲ್ಲದಿದ್ದರೂ ನೀಡಲು ಮುಂದಾಗುವ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ನಿಗದಿಗೊಳಿಸಲಾದ ಅನುದಾನ ಕಡಿತಗೊಳಿಸುವದು ಯಾವ ನ್ಯಾಯ. ಸರಕಾರದ ಒಟ್ಟು ಬಜೆಟ್ ಗಾತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುವದು ಕೂಡ ಗಮನಾರ್ಹವಾಗಿದೆ. ಕೋವಿಡ್‌-19 ಎಂದು ಪರಿಷ್ಕೃತ ಬಜೆಟ್ ಮಂಡಿಸಿ ತೆರಿಗೆ ಸಂಗ್ರಹವಾಗಿಲ್ಲ ಹಾಗಾಗಿ ಬಜೆಟ್ ಗಾತ್ರವನ್ನು ಶೇ 30-50 ರಷ್ಟು ಕಡಿಮೆಗೊಳಿಸುತ್ತೇವೆ ಎಂದು ಚರ್ಚಿಸಿಲ್ಲ. ಅಂದರೆ ಸರಕಾರ ತಮಗೆ ಬೇಕಾದ ಕೆಲಸಗಳಿಗೆ ಕೋವಿಡ್‌-19 ಅಡ್ಡಿಯಾಗುವದಿಲ್ಲ. ಆದರೆ ತೊಂದರೆಯಲ್ಲಿರುವ ಜನರ ಬೇಡಿಕೆಗಳನ್ನು ಈಡೇರಿಸಲು ಕೋವಿಡ್‌-19 ಅಡ್ಡ ಬರುತ್ತಿದೆಯೇ?

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿಯ ಬಗ್ಗೆ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರಕ್ಕೆ ಯಾವುದೇ ಕಾಳಜಿ ಇಲ್ಲ ಎನ್ನುವದು ಈ ಎರಡು ವರ್ಷದಲ್ಲಿ ನಡೆದ ಎಲ್ಲ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತದೆ. ಕೇವಲ ಹೆಸರು ಬದಲಾವಣೆಯಿಂದ ಮಾತ್ರ ಯಾವುದೇ ಪ್ರದೇಶ ಅಭಿವೃದ್ದಿಯಾಗುವದಿಲ್ಲ ಎನ್ನುವ ಕನಿಷ್ಠ ಜ್ಞಾನ ಆಳುವ ವರ್ಗಕ್ಕೆ ಇಲ್ಲದಿರುವದು ವಿಪರ್ಯಾಸ.

ಇದನ್ನೂ ಓದಿ: ಕೋವಿಡ್ ಸಾಂಕ್ರಾಮಿಕ ದಕ್ಷಿಣಕ್ಕಿಂತ ಉತ್ತರ ಕರ್ನಾಟಕಕ್ಕೆ ಹೆಚ್ಚು ಅಪಾಯಕಾರಿ. ಏಕೆ?

ಸರಕಾರದ ಈ ನಿರ್ಲಕ್ಷ್ಯ, ಉದಾಸೀನತೆ, ಅಭಿವೃದ್ದಿ ವಿರೋಧಿ ನಿಲುವು ಪ್ರಶ್ನೆ ಮಾಡುವ ಛಾತಿ ಈ ಭಾಗದ ಜನಪ್ರತಿನಿಧಿಗಳಿಗೆ ಇಲ್ಲದಿರುವದು ಇದಕ್ಕಿಂತ ದೊಡ್ಡ ವಿಪರ್ಯಾಸ ಎಂದು ಹೇಳಬಹುದು. 41 ಜನ ವಿಧಾನಸಭಾ ಸದಸ್ಯರು, 9 ಜನ ವಿಧಾನ ಪರಿಷತ್ ಸದಸ್ಯರು ಮತ್ತು 7 ಜನ ಸಂಸದರು ಇದ್ದು ಸರಕಾರಕ್ಕೆ ಚಾಟಿ ಬೀಸಲು ಸಾಧ್ಯವಾಗದೇ ಇರುವದು ಇವರ ಅಸಹಾಯಕತೆಗೆ ಸಾಕ್ಷಿಯಂತಿದೆ. ಈ ರೀತಿಯಾದರೆ ಇಂತಹ ಏಷ್ಟು 371 ಜೆ ಬಂದರೂ ಈ ಭಾಗದ ಅಭಿವೃದ್ದಿ ಸಾಧ್ಯವೇ ಎನ್ನುವ ಪ್ರಶ್ನೆ ಜನ ಸಾಮಾನ್ಯನಿಗೆ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.

ಯಾವುದ್ಯಾವುದೋ ಸಂಬಂಧವೇ ಇಲ್ಲದ ವಿಷಯಗಳಿಗೆ ಕಷ್ಟ ಪಡುವ, ಹೋರಾಟ, ರಸ್ತೆ ತಡೆ, ಬಂದ್ ಮಾಡುವ ಸಂಘ ಸಂಸ್ಥೆಗಳು, ಹೋರಾಟ ಸಮಿತಿಗಳು ಈ ಭಾಗದ ಗಂಭೀರ ಸಮಸ್ಯೆಯೊಂದಕ್ಕೆ ಸ್ಪಂದಿಸಿ ಹೋರಾಟ ಮಾಡುವ ದರ್ದು ಯಾಕಿಲ್ಲ ಇವರಿಗೆ?

ಡಾ.ರಝಾಕ ಉಸ್ತಾದ, ರಾಯಚೂರು

ಇದನ್ನೂ ಓದಿ: ಹೈದ್ರಾಬಾದ್ ಕರ್ನಾಟಕದ ಮೇಲೆ ನಡೆಯುತ್ತಿದೆ ನಿರಂತರ ವಂಚನೆ : ಡಾ.ರಝಾಕ ಉಸ್ತಾದ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಡಾ.ರಝಾಕ ಉಸ್ತಾದ, ರಾಯಚೂರು

LEAVE A REPLY

Please enter your comment!
Please enter your name here