ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ ನೂತನ ಸರಕಾರ ರಚನೆಯಾದ ಮೇಲೆ ಭಾರಿ ಬದಲಾವಣೆಯಾಗುತ್ತೆ ಎನ್ನುವ ನಂಬಿಕೆಯ ಮೇಲೆ ಜನರಿದ್ದರು. ಅದೇ ಸಂದರ್ಭದಲ್ಲಿ ಸರಕಾರ ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ ಮಾಡಿತ್ತು. ಇದರಿಂದ ಉತ್ತೇಜಿತರಾದ ಈ ಭಾಗದ ಜನ ಬಹಳಷ್ಟು ಅಭಿವೃದ್ದಿಯ ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಕಳೆದ ವರ್ಷ ಸೆಪ್ಟಂಬರ್ 17 ಕ್ಕೆ ಕಲಬುರಗಿಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಹೊಸ ಭಾಷ್ಯೆ ಬರೆಯುವದಾಗಿ, 371ಜೆ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವದಾಗಿ ಪುಂಗಿ ಊದಿ ಹೋಗಿದ್ದು ಬಿಟ್ಟರೆ ಇಲ್ಲಿಯವರೆಗೆ ಏನೂ ಮಾಡಲಿಲ್ಲ ಎನ್ನುವದು ಸತ್ಯ.

ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ದಿ 371ಜೆಯ ಸಮರ್ಪಕ ಅನುಷ್ಠಾನದಿಂದ ಸಾಧ್ಯ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಹೆಚ್ಚಿನ ಅನುದಾನ ನೀಡಿ ಅದರ ಸದ್ಬಳಕೆಗೆ ಸೂಕ್ತ ವ್ಯವಸ್ಥೆ ಮಾಡಿದಾಗ ಮಾತ್ರ ಆ ಪ್ರದೇಶದ ಮೂಲಭೂತ ಸೌಕರ್ಯ ಹಾಗೂ ಜನಜೀವನ ಸುಧಾರಣೆಯಾಗುತ್ತದೆ. ಆದರೆ, ಬಿ.ಎಸ್.ಯಡಿಯೂರಪ್ಪನವರ ಸರಕಾರ ಬಂದ ಮೇಲೆ ಇಲ್ಲಿಯವರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಅಧ್ಯಕ್ಷರನ್ನೇ ನೇಮಿಸದೇ ನಿರ್ಲಕ್ಷ್ಯ ಮಾಡಲಾಗಿದೆ. ಅಧ್ಯಕ್ಷರೇ ಇಲ್ಲದೆ ಸದರಿ ಮಂಡಳಿ ಸಂಪೂರ್ಣ ನೆಲ ಕಚ್ಚಿದ್ದು, ಇದಕ್ಕೆ ತಾಜಾ ಉದಾಹರಣೆಯಂತೆ ಕಳೆದ ಆರ್ಥಿಕ ವರ್ಷದ 1500 ಕೋಟಿ ರೂ. ಅನುದಾನದಲ್ಲಿ ಕೇವಲ 306.55 ಕೋಟಿ ರೂ ಮಾತ್ರ ಖರ್ಚು ಮಾಡಲಾಗಿದೆ. ಸಾವಿರಾರು ಸಮಸ್ಯೆಗಳಿದ್ದುರೂ, ಕೋಟ್ಯಂತರ ರೂ ಅನುದಾನ ಲಭ್ಯವಿದ್ದರೂ ಖರ್ಚು ಮಾಡದೇ ಜನರ ಜೀವನದ ಜೊತೆಗೆ ಚೆಲ್ಲಾಟವಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರ ನಡುವೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ, ಆ ಪ್ರದೇಶದ ಜಿಲ್ಲಾ ಉಸ್ತವಾರಿ ಸಚಿವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸುವ ನಿಯಮವಿದ್ದ ಕಾನೂನು ತಿದ್ದುಪಡಿ ಮಾಡಿ, ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಅಧಿಸೂಚನೆ ನೀಡಿದೆ. ಇದರಿಂದ ತಮ್ಮ ಪಕ್ಷದ ಶಾಸಕರನ್ನು ತೃಪ್ತಿಪಡಿಸಲು ಶಾಸನಬದ್ಧ ಮಂಡಳಿಯನ್ನೇ ಬಲಿ ಕೊಡಲು ಬಿ.ಎಸ್.ಯಡಿಯೂರಪ್ಪ ಮುಂದಾಗಿರುವದು ಅತ್ಯಂತ ನಾಚೀಕೆಗೇಡಿನ ಸಂಗತಿ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಈ ಭಾಗದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, 12 ಜನ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಒಬ್ಬರು ಲೋಕಸಭಾ ಸದಸ್ಯರು, ಒಬ್ಬರು ರಾಜ್ಯಸಭಾ ಸದಸ್ಯರು, ಒಬ್ಬರು ಜಿಲ್ಲಾ ಪಂಚಾಯತ ಅಧ್ಯಕ್ಷರು ಹಾಗೂ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಅಂತಹ ಮಂಡಳಿಗೆ ಸಚಿವರೇ ಅಧ್ಯಕ್ಷರಾಗಿದ್ದರೆ, ಮಂಡಳಿ ಕಾರ್ಯನಿರ್ವಹಿಸಲು ಸೂಕ್ತವಾಗಿರುತ್ತಿತ್ತು. ಆದರೆ, ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಲ್ಲಿ ಮಂಡಳಿ ಸಂಪೂರ್ಣ ನೆಲಕಚ್ಚುವ ಸಾದ್ಯತೆಯಿದೆ. ಈ ಹಿಂದೆ 1991 ರಿಂದ 2013 ರವರೆಗೆ ಇದ್ದಂತಹ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ ಎನ್ನುವದು ಈ ಭಾಗದ ಜನ ನೋಡಿದ್ದಾರೆ. ಸಿದ್ದರಾಮಯ್ಯನವರ ಸರಕಾರದಲ್ಲಿ ದಿ.ಖಮರುಲ್ ಇಸ್ಲಾಂ, ಡಾ.ಶರಣ ಪ್ರಕಾಶ ಪಾಟೀಲ್ ಹಾಗೂ ಬಸವರಾಜ ರಾಯರೆಡ್ಡಿ ಸಚಿವರಾಗಿ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ, ಅದೇ ರೀತಿ ಹೆಚ್.ಡಿ ಕುಮಾರಸ್ವಾಮಿ ಸರಕಾರದಲ್ಲಿ ರಾಜಶೇಖರ ಪಾಟೀಲ್ ಹುಮನಾಬಾದ, ಸಚಿವರಾಗಿ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ಒಂದು ದಿನವೂ ಮಂಡಳಿಯ ಅಧ್ಯಕ್ಷ ಸ್ಥಾನ ಖಾಲಿ ಇಡಲಾಗಿಲ್ಲ. ಆದರೆ, ಈಗಿನ ಬಿ.ಎಸ್.ಯಡಿಯೂರಪ್ಪನವರ ಸರಕಾರ ಬಂದು ಒಂದು ವರ್ಷವಾದರೂ ಮಂಡಳಿಗೆ ಅಧ್ಯಕ್ಷರನ್ನು ನೇಮಿಸದೇ ಈ ಪ್ರದೇಶವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವದ ಭಾವನೆ ಜನರಲ್ಲಿ ಮೂಡಿದೆ.

ಅದೇ ರೀತಿ 371ಜೆ ಸಮರ್ಪಕ ಅನುಷ್ಠಾನಕ್ಕಾಗಿ ಹಿಂದಿನ ಸಿದ್ದರಾಮಯ್ಯನವರ ಸರಕಾರ 371ಜೆ ಅನುಷ್ಠಾನ ಸಚಿವ ಸಂಪುಟ ಉಪಸಮಿತಿ ರಚಿಸಿ, ಅದಕ್ಕೆ ಹೆಚ್.ಕೆ.ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿತ್ತು. ನಂತರ ಹೆಚ್.ಡಿ.ಕುಮಾರಸ್ವಾಮಿಯವರ ಸರಕಾರದಲ್ಲಿ ಪ್ರಿಯಾಂಕ ಖರ್ಗೆ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಮಿತಿಯು ನಿಯಮಿತವಾಗಿ ಸಭೆಗಳನ್ನು ಮಾಡಿ 371ಜೆ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನೆ ಮಾಡುತ್ತಿರಬೇಕು. ಈಗಿನ ಸರಕಾರ ಹಿರಿಯರಾದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರನ್ನು ಉಪಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ. ಆದರೆ ಈ ಮಹಾಶಯರು ಕಳೆದ ಒಂದು ವರ್ಷದಲ್ಲಿ ಒಂದೇ ಒಂದು ಸಭೆ ಮಾಡದೇ, ಯಾರನ್ನು ಭೇಟಿ ಮಾಡದೇ ಉಡಾಫೆಯ ಮಾತನಾಡುತ್ತ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಸಂಪೂರ್ಣ ಹಾಳು ಮಾಡಲು ಹೊರಟಿದ್ದಾರೆ. ಇಂತಹವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರಿಂದ ಈ ಭಾಗ ಹಳ್ಳ ಹಿಡಿಯುತ್ತದೆ ಎಂದು ಹೋರಾಟಗಾರು ಭಾವಿಸಿದ್ದಾರೆ.

ಇನ್ನೂ ಸರಕಾರದಲ್ಲಿ ಈಗಾಗಲೇ ಲಕ್ಷಾಂತರ ಹುದ್ದೆಗಳು ಖಾಲಿ ಇರುವದು ಅಂಕಿ ಅಂಶಗಳಲ್ಲಿ ಸ್ಪಷ್ಟವಾಗಿವೆ. 2019 ರಲ್ಲಿ 2,57,000 ಹುದ್ದೆಗಳು ಖಾಲಿ ಇವೆ ಎಂದು ಸರಕಾರ ಹೇಳಿದೆ. ಆದರೆ, ಈಗ ಕೋವಿಡ್-19 ಹೆಸರಿನಲ್ಲಿ ಆರ್ಥಿಕ ಇಲಾಖೆಯ ಮುಂದಿನ ಆದೇಶದವರೆಗೆ ಎಲ್ಲ ನೇಮಕಾತಿಗಳನ್ನು ತಡೆಹಿಡಿಯಲಾಗಿದೆ ಎಂದು ಸೂಚಿಸಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಹುದ್ದೆಗಳು, ಬ್ಯಾಕಲಾಗ್ ಹುದ್ದೆಗಳು ಸೇರಿದಂತೆ ಎಲ್ಲ ರೀತಿಯ ನೇರ ನೇಮಕಾತಿಗಳನ್ನು ತಡೆಹಿಡಿದಿದ್ದಾರೆ. ಹಿಂದಿನ ಸರಕಾರ 371ಜೆ ಕಾನೂನು ರಚಿಸುವಾಗ ನಿಯಮಗಳಲ್ಲಿ ಸ್ಥಳೀಯ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯ ಪೂರ್ವಾನುಮತಿ ಇದೆಯೆಂದು ಭಾವಿಸತಕ್ಕದ್ದು ಎಂದೂ ಮತ್ತು ಯಾವುದೇ ಆರ್ಥಿಕ ಮಿತವ್ಯಯ ಅನ್ವಯಿಸುವದಿಲ್ಲವೆಂದು ಆದೇಶಿಸಿದೆ. ಇದರಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಹುದ್ದೆಗಳನ್ನಿಟ್ಟುಕೊಂಡು ಅಭಿವೃದ್ದಿ ಯಾವ ರೀತಿ ಮಾಡಲಾಗುತ್ತದೆ ಎಂದು ಪ್ರಶ್ನೆ ಮಾಡುವಂತ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ.

ಡಾ.ಡಿ.ಎಂ.ನಂಜುಂಡಪ್ಪನವರ ವರದಿ 2007-08 ರಲ್ಲಿ ಅನುಷ್ಠಾನವಾಗಿ 2014-15ರ ವರೆಗೆ ರಾಜ್ಯದ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಯ ದೃಷ್ಠಿಕೋನ ಹೊಂದಿತ್ತು. ಆದರೆ, ಹಿಂದುಳಿದ ತಾಲ್ಲೂಕುಗಳ ಪರಸ್ಥಿತಿ ಸಂಪೂರ್ಣವಾಗಿ ಸುಧಾರಿಸಲಿ ಎನ್ನುವ ಕಾರಣಕ್ಕೆ 2015 ರಲ್ಲಿ ಸಿದ್ದರಾಮಯ್ಯನವರು ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ಅನುಷ್ಠಾನವನ್ನು ಮುಂದಿನ 5 ವರ್ಷಗಳ ಅವಧಿಗೆ ಮುಂದುವರೆಸಿ ಆದೇಶಿಸಿದ್ದರು. ಅದು 2020ಕ್ಕೆ ಮುಗಿಯಬೇಕಾಗಿತ್ತು. ಈ ಹಂತದಲ್ಲಿ ಬಿ.ಎಸ್.ಯಡಿಯೂರಪ್ಪನವರ ಸರಕಾರ ಅದನ್ನು 2020-21ನೇ ಸಾಲಿಗೆ ಮುಂದುವರೆಸಿದೆ, ಆದರೆ ಎಲ್ಲಿಯವರೆಗೆ ಮುಂದುವರೆಸಲಾಗಿದೆ ಎಂದು ಎಲ್ಲಿಯೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಇದರಿಂದ ಹಿಂದುಳಿದ ತಾಲ್ಲೂಕುಗಳ ಜನತೆಗೆ ತುಂಬಾ ಅನುಮಾನ ಉಂಡಾಗಿದೆ. ಯಾಕೆಂದರೆ ಕಳೆದ 15 ವರ್ಷಗಳಿಂದ ಅನುಷ್ಠಾನದಲ್ಲಿರುವ ಈ ವರದಿಯು ಕೇವಲ 6 ತಾಲ್ಲೂಕುಗಳನ್ನು ಮಾತ್ರ ಹಿಂದುಳಿದ ಪಟ್ಟಿಯಿಂದ ಅಭಿವೃದ್ದಿ ಹೊಂದಿದ ತಾಲ್ಲೂಕುಗಳ ಪಟ್ಟಿಗೆ ಸೇರಿಸಲು ಸಾದ್ಯವಾಗಿದೆ. ಅಂದರೆ ಇನ್ನುಳಿದ 108 ಹಿಂದುಳಿದ ತಾಲ್ಲೂಕುಗಳನ್ನು ಅಭಿವೃದ್ದಿಪಡಿಸಲು ಇನ್ನೂ 150 ವರ್ಷವಾದರೂ ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಸರಕಾರ ಹಾಗೂ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಸರಕಾರದ ಈ ಬೇಜವಾಬ್ದಾರಿ ನಡೆಯಿಂದಾಗಿ ಜನತೆ ಪರಿತಪಿಸುವಂತಾಗಿದ್ದರೂ ಸರಕಾರ ಯಾವುದೇ ಅಳುಕು ಇಲ್ಲದ ರೀತಿ ವರ್ತಿಸುತ್ತಿದೆ. ಇನ್ನು ಮುಂದಾದರೂ ಜನತೆ ಎಚ್ಚೆತ್ತುಕೊಂಡು ಸರಕಾರದ ಈ ಅನೀತಿಗಳ ವಿರುದ್ದ ಸಾಂಘಿಕವಾಗಿ ಹೋರಾಟ ಮಾಡಬೇಕಿದೆ.

  • ರಜಾಕ್ ಉಸ್ತಾದ್ (ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖ ಮುಖಂಡರು.)

ಇದನ್ನು ಓದಿ: ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ; ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳವುದು ಇನ್ಯಾವಾಗ?

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts