ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಐಫೋನ್ ತಯಾರಿಕ ಕಂಪೆನಿಯಾದ ವಿಸ್ಟ್ರಾನ್‌ನ ಕಾರ್ಮಿಕರು ಕಂಪೆನಿಯು ತಮಗೆ ಸಂಬಳ ನೀಡಿಲ್ಲ ಹಾಗೂ ಅವಧಿ ಮೀರಿ ದುಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕಂಪೆನಿಯ ಒಂದು ಭಾಗಕ್ಕೆ ಬೆಂಕಿ ಹಚ್ಚಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಸುಮಾರು 100 ಜನರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಂಪೆನಿಯು ಕಳೆದ ಮೂರು-ನಾಲ್ಕು ತಿಂಗಳಿನಿಂದ ಸಂಬಳ ನೀಡಿಲ್ಲ ಹಾಗೂ 8 ಗಂಟೆಗಳ ಬದಲು 12 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದೆ ಎಂದು ಹಲವು ದಿನಗಳಿಂದ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ ತಾಳ್ಮೆ ಕಳೆದುಕೊಂಡ ಸಾವಿರಾರು ಕಾರ್ಮಿಕರು ಕಂಪನಿಯ ಒಂದು ಭಾಗಕ್ಕೆ ಬೆಂಕಿ ಹಚ್ಚಿ, ಕಿಟಕಿ ಗಾಜುಗಳನ್ನು ಒಡೆದು, ಕಾರುಗಳನ್ನು ಜಖಂಗೊಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ನರಸಾಪುರ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಂಬಳ ಕೊಡದ ಆರೋಪ: ಐಫೋನ್ ತಯಾರಿಕ ನರಸಾಪುರದ ‘ವಿಸ್ಟ್ರಾನ್’ ಕಂಪನಿಗೆ ಬೆಂಕಿ ಹಚ್ಚಿದ ಕಾರ್ಮಿಕರು
ಈ ಬಗ್ಗೆ ನಾನುಗೌರಿ.ಕಾಮ್ ಜೊತೆ ಮಾತನಾಡಿದ ನರಸಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಕೇಶವ ಗೌಡ, ಘಟನೆಯ ಬಗ್ಗೆ ನೂರು ಜನರನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಘಟನೆಯ ಬಗ್ಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, “ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದ್ದು, ಆದಷ್ಟು ಬೇಗ ಬಿಕ್ಕಟ್ಟು ಬಗೆಹರಿಯಲಿದೆ. ಹಿರಿಯ ಅಧಿಕಾರಿಗಳು ಕೂಡ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ವಿಸ್ಟ್ರಾನ್ ಸಂಸ್ಥೆಯ ಪ್ರತಿನಿಧಿಗಳ ಜತೆಗೂ ಮಾತುಕತೆ ನಡೆಸಿ, ಬಿಕ್ಕಟ್ಟು ಶಮನ ಮಾಡಲಾಗುವುದು” ಎಂದು ಹೇಳಿದ್ದಾರೆಂದು ಪ್ರಜಾವಾಣಿ ವರದಿ ಮಾಡಿದೆ.
“ಇಂಥ ಘಟನೆ ನಡೆಯಬಾರದಿತ್ತು. ದುರದೃಷ್ಟಕರ ಘಟನೆ. ಯಾರೂ ಇಂಥ ಘಟನೆಯನ್ನು ಒಪ್ಪಲು ಸಾಧ್ಯವಿಲ್ಲ ಹಾಗೂ ಸಹಿಸುವ ಪ್ರಶ್ನೆಯೂ ಇಲ್ಲ. ಆ ಕಾರ್ಖಾನೆಯ ವಿರುದ್ಧ ದಾಳಿ ನಡೆಸಿ ಅದರ ಆಸ್ತಿ ನಷ್ಟಕ್ಕೆ ಕಾರಣವಾಗಿರುವ ಕಾರ್ಮಿಕರೇ ಇರಲಿ, ಇನ್ನು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಟೊಯೊಟಾ ಕಿರ್ಲೋಸ್ಕರ್ ದರ್ಪ ಮುಂದುವರಿಕೆ: ’ಛತ್ರಿ ಚಳುವಳಿ’ ಆರಂಭಿಸಿದ ಕಾರ್ಮಿಕರು!
“ಕಾರ್ಮಿಕರಿಗೆ ವೇತನ ನೀಡಿಲ್ಲ ಅಥವಾ ವೇತನ ಕಡಿತ ಮಾಡಿ ನೀಡಲಾಗುತ್ತಿತ್ತು ಎಂಬ ಅಂಶಗಳ ಬಗ್ಗೆಯೂ ವಿಚಾರಣೆ ನಡೆಸಲಾಗುವುದು. ಕಾರ್ಮಿಕರಿಗೆ ಅಂಥ ಸಮಸ್ಯೆ ಇದ್ದರೆ ಕಾರ್ಮಿಕ ಆಯುಕ್ತರಿಗೆ ದೂರು ನೀಡಬಹುದಿತ್ತು ಅಥವಾ ಜಿಲ್ಲಾಧಿಕಾರಿಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವ ಇಂಥ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ವಿಸ್ಟ್ರಾನ್ ಕಾರ್ಪ್‌ನ ಫೋನ್ ಉತ್ಪಾದನಾ ಘಟಕವು ಕರ್ನಾಟಕ ಸರ್ಕಾರವು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಂಜೂರು ಮಾಡಿದ 43 ಎಕರೆ ಜಮೀನಿನಲ್ಲಿದೆ. 2,9000 ಕೋಟಿ ರೂ. ಹೂಡಿಕೆ ಮಾಡುತ್ತಿರುವ ಕಂಪನಿಯು ಸುಮಾರು 15 ಸಾವಿರ ಜನರಿಗೆ ಉದ್ಯೋಗ ಕೊಡುವುದಾಗಿ ಘೋಷಿಸಿತ್ತು. ಆದರೆ ಕಂಪನಿಯ ಖಾಯಂ ಉದ್ಯೋಗಗಳನ್ನು ಬೇರೆ ರಾಜ್ಯದವರಿಗೆ ನೀಡಿ, 12 ಸಾವಿರಕ್ಕೆ ನಾಲ್ಕನೇ ದರ್ಜೆಯ ಗುತ್ತಿಗೆ ಉದ್ಯೋಗಗಳನ್ನು ಮಾತ್ರ ಸ್ಥಳೀಯರಿಗೆ ನೀಡಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ದೇಶವ್ಯಾಪಿ ಕಾರ್ಮಿಕ ಮುಷ್ಕರ: ಕರ್ನಾಟಕದಲ್ಲೂ ಯಶಸ್ವಿ – ಒಂದು ಝಲಕ್!


