ಟೊಯೊಟಾ ಕಿರ್ಲೋಸ್ಕರ್ ಆಡಳಿತ ಮಂಡಳಿಯ ದೌರ್ಜನ್ಯದ ವಿರುದ್ದ ಕಂಪೆನಿಯ ಕಾರ್ಮಿಕರು ನಡೆಸುತ್ತಿರುವ ಹೋರಾಟ ಇಂದಿಗೆ 33 ನೇ ದಿನಕ್ಕೆ ಕಾಲಿಟ್ಟಿದೆ. ಕಂಪೆನಿಯ ಗೇಟ್ ಮುಂಬಾಗ ಪ್ರತಿಭಟನಾ ನಿರತ ಕಾರ್ಮಿಕರು ಹಾಕಿದ್ದ ಪೆಂಡಾಲನ್ನು ಕಂಪೆನಿಯೂ ಕುತಂತ್ರದಿಂದ ತೆರವುಗೊಳಿಸಿದೆ ಎಂದು ಆರೋಪಿಸಿ ಕಾರ್ಮಿಕರು ವಿನೂತನ “ಛತ್ರಿ ಚಳುವಳಿ” ಆರಂಭಿಸಿದ್ದಾರೆ.
ಕಾರ್ಮಿಕರು ಇಷ್ಟು ದಿನ ಪ್ರತಿಭಟನೆ ನಡೆಸುತ್ತಿದ್ದ ಪೆಂಡಾಲನ್ನು ಪೊಲೀಸರು ತೆರವುಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಆದರೆ ಕಾರ್ಮಿಕರು ಏನೇ ಆದರೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅದೇ ಸ್ಥಳದಲ್ಲಿ ಛತ್ರಿಗಳನ್ನು ಹಿಡಿದು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ: ದರ್ಪ ಮುಂದುವರೆಸಿದ ಟೊಯೋಟಾ ಕಿರ್ಲೋಸ್ಕರ್; ಮತ್ತೇ 20 ಕಾರ್ಮಿಕರ ಅಮಾನತು
ಈ ಬಗ್ಗೆ ನಾನುಗೌರಿ.ಕಾಮ್ ಜೊತೆ ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಕಾರ್ಮಿಕ ಸಂಘಟನೆಯ ಮುಖಂಡ ಗಂಗಾಧರ್, “ದಿನೇ ದಿನೇ ತೀವ್ರತೆ ಪಡೆಯುತ್ತಿರುವ ನಮ್ಮ ಹೋರಾಟವನ್ನು ಸಹಿಸದ ಕಂಪೆನಿಯ ಆಡಳಿತ ಮಂಡಳಿಯು ವಾಮಮಾರ್ಗದ ಮೂಲಕ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ನಾವು ಸತ್ಯಾಗ್ರಹ ಮಾಡುತ್ತಿರುವ ಜಾಗದ ಮಾಲೀಕರಿಗೆ KIADB ಕಡೆಯಿಂದ ನೋಟೀಸ್ ಕಳುಹಿಸಿ, ’KIADB ನೀಡಿರುವ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದು ನೀಡಿರುವ ಜಾಗವನ್ನು ರದ್ದು ಪಡಿಸುತ್ತೇವ’ ಎಂದು ಹೆದರಿಸಿದ್ದಾರೆ, ಅದಕ್ಕಾಗಿ ಮಾಲೀಕರು ಒತ್ತಡದಿಂದ ಪೆಂಡಾಲ್ ತೆಗೆಸಿದ್ದಾರೆ. ಆದರೆ ಕಾರ್ಮಿಕ ಸಂಘವು KIADB ಜೊತೆಗೆ ಮಾತನಾಡಿ ವ್ಯವಸ್ಥೆ ಮಾಡುವ ಪ್ರಯತ್ನ ನಡಸುತ್ತಿದೆ” ಎಂದರು.
ಕಂಪೆನಿಯು ಇದುವರೆಗೂ ಒಟ್ಟು 60 ಕಾರ್ಮಿಕರನ್ನು ಅಮಾನತ್ತು ಮಾಡಿದೆ. ಅಮಾನತ್ತು ರದ್ದು ಮಾಡಿ ಕಾರ್ಮಿಕರ ಬೇಡಿಕೆ ಈಡೇರಿಸದೇ ಇದ್ದರೆ ಹೋರಾಟದ ರೂಪರೇಷೆಗಳನ್ನು ಇನ್ನಷ್ಟೂ ಚುರುಕು ಮಾಡಲಾಗುವುದು ಎಂದು ಕಾರ್ಮಿಕ ಸಂಘವು ಕಂಪೆನಿಯ ಆಡಳಿತ ಮಂಡಳಿಗೆ ಎಚ್ಚರಿಸಿದೆ.
ಈ ನಡುವೆ ಕೇಂದ್ರದ ಹಾಗೂ ರಾಜ್ಯ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಹೋರಾಟಕ್ಕೆ ಟೊಯೊಟಾ ಕಾರ್ಮಿಕರು ಸಂಪೂರ್ಣ ಬೆಂಬಲ ನೀಡಿದ್ದು, ಕಳೆದ ಎರಡು ದಿನಗಳಿಂದ ರೈತರೊಂದಿಗೆ ವಿಧಾನ ಸೌದ ಮುತ್ತಿಗೆ ಹಾಗೂ ರಾಜಭವನ ಮುತ್ತಿಗೆ ಹೋರಾಟದಲ್ಲಿ ಕೈಜೋಡಿಸಿದ್ದರು.
ಇದನ್ನೂ ಓದಿ: ಲಾಕೌಟ್ ಹಿಂಪಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ: ಟೊಯೋಟಾ ಕಾರ್ಮಿಕರ ಎಚ್ಚರಿಕೆ
ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಆಡಳಿತ ಮಂಡಳಿ ತಮ್ಮ ಮೇಲೆ ನಡೆಸಿದ ದೌರ್ಜನ್ಯವನ್ನು ಪ್ರಶ್ನಿಸಿದ ಕಾರಣಕ್ಕಾಗಿ, ಕಂಪೆನಿಯು ಕಾರ್ಮಿಕರು ಮುಷ್ಕರ ಹೂಡಿದ್ದಾರೆ ಎಂದು ಆರೋಪಿಸಿ ಲಾಕೌಟ್ ಘೋಷಿಸಿತ್ತು.
ಈ ನಡುವೆ ರಾಜ್ಯ ಸರ್ಕಾರವು ಕೈಗಾರಿಕಾ ವಿವಾದ ಕಾಯ್ದೆ 1947 ಕಲಂ 10(3) ರ ಅಧಿಕಾರ ಬಳಿಸಿ ಕಾರ್ಮಿಕರು ಮುಷ್ಕರ ನಿಲ್ಲಿಸಬೇಕು ಮತ್ತು ಕಂಪೆನಿಯು ಲಾಕ್‌ಔಟ್ ತೆರವುಗೊಳಿಸಬೇಕೆಂದು ನವೆಂಬರ್ 18 ರಂದು ಆದೇಶ ಹೊರಡಿಸಿತ್ತು. ಆದರೆ ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ತೆರಳುತ್ತೇವೆ ಎಂದು ಹೊರಟರೂ ಕಂಪೆನಿಯು ಅವರನ್ನು ಒಳಕ್ಕೆ ಬಿಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಕಾರ್ಮಿಕರು ಮತ್ತು ಜಪಾನಿ ಆಡಳಿತದ ನಡುವಿನ ತಿಕ್ಕಾಟ: ಟೊಯೋಟಾದಲ್ಲಿ ನಡೆಯುತ್ತಿರುವುದೇನು?