ಸೈನ್ಯದಲ್ಲಿ ಕಳಪೆ ಆಹಾರ ನೀಡುವುದರಿಂದ ಬೇಸೆತ್ತು ಸೋಷಿಯಲ್ ಮಿಡೀಯಾದಲ್ಲಿ ದೊಡ್ಡ ಪ್ರಚಾರಾಂದೋಲನ ನಡೆಸಿದ್ದ ತೇಜ್ ಬಹದ್ದೂರ್ ಯಾದವ್ ಎಂಬ ಯೋಧನು ನರೇಂದ್ರ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕಳೆದ ವರ್ಷ ಇವರು ಬಿಎಸ್ಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾಗ ಸರಿಯಾದ ಸೌಲಭ್ಯಗಳಿಲ್ಲದಿರುವುದು ಮತ್ತು ಅತ್ಯಂತ ಕಳಪೆ ಆಹಾರದ ವಿರುದ್ಧ ದನಿಯೆತ್ತಿ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಬೆಂಬಲಿಸಿ ಸಾವಿರಾರು ಜನ ವಿಡಿಯೋವನ್ನು ಷೇರ್ ಮಾಡಿದ್ದರು. ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋ ಮೋದಿ ಸರ್ಕಾರಕ್ಕೆ ಮುಜುಗರ ತಂದಿತ್ತು. ಆ ಸಮಸ್ಯೆಯನ್ನು ಬಗೆಹರಿಸುವ ಬದಲು ಆತನನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು.
ಹರಿಯಾಣದ ರಿವಾರಿ ನಿವಾಸಿಯಾದ ತೇಜ್ ಬಹದ್ದೂರ್ ಯಾದವ್ ರವರನ್ನು ತಮ್ಮ ಪಕ್ಷಕ್ಕೆ ಸೇರುವಂತೆ ಹಲವು ಪಕ್ಷಗಳು ಆಹ್ವಾನ ನೀಡಿದ್ದವು. ಆದರೆ ಅದನ್ನು ತಿರಸ್ಕರಿಸಿರುವ ಅವರು ಸದ್ಯ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಮೋದಿ ವಿರುದ್ಧವೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದು, ಸೋಲುವುದು ನನಗೆ ಮುಖ್ಯವಲ್ಲ, ನನ್ನ ಸ್ಫರ್ಧೆಯ ಮೂಲಕ ಸೇನೆಯ ಬಗ್ಗೆ ಈ ಸರ್ಕಾರ ಹೊಂದಿರವು ತಿರಸ್ಕಾರದ ಭಾವನೆಯನ್ನು, ಸೈನ್ಯದಲ್ಲಿನ ಭ್ರಷ್ಟಾಚಾರವನ್ನು ಮುಖ್ಯವಾಹಿನಿ ಚರ್ಚೆಗೆ ತರಬೇಕು, ಅದರಲ್ಲಿಯೂ ಪ್ಯಾರಮಿಲಿಟರಿ ಸೇನೆ ಅನುಭವಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಸಿಗಬೇಕು ಎಂದು ತೇಜ್ ಬಹದ್ದೂರ್ ಹೇಳುತ್ತಾರೆ.
ಇತ್ತೀಚೆಗೆ ಪುಲ್ವಾಮ ಘಟನೆಯಲ್ಲಿ 40ಕ್ಕೂ ಹೆಚ್ಚು ಸಿ.ಆರ್.ಪಿ.ಎಫ್ ಯೋಧರು ಮೃತಪಟ್ಟಿದ್ದರೂ ಈವರೆಗೆ ಅವರಿಗೆ ಹುತಾತ್ಮ ಪಟ್ಟ ನೀಡಲು ಮೋದಿ ಸರ್ಕಾರ ಸಿದ್ಧವಿಲ್ಲ, ಬದಲಿಗೆ ಸೈನಿಕರ ಹೆಸರಿನಲ್ಲಿ ವೋಟು ಪಡೆಯಲು ಮಾತ್ರ ಈ ಸರ್ಕಾರ ಹವಣಿಸುತ್ತಿದ್ದು ಸೈನಿಕರು ಸಂಕಷ್ಟದಲ್ಲಿದ್ದಾರೆ ಎಂದು ಅವರು ನೇರ ಆರೋಪ ಮಾಡಿದ್ದಾರೆ. ನಾನು ಸೈನ್ಯದಲ್ಲಿನ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದೆ. ಅದನ್ನು ಸರಿಪಡಿಸುವ ಬದಲು ನನ್ನ ಮೇಲೆಯೇ ಸುಳ್ಳು ಕೇಸುಗಳನ್ನು ಹಾಕಿ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿಯೇ ವಾರಣಾಸಿಗೆ ತೆರಳಿ ಮಾಜಿ ಯೋಧರು ಮತ್ತು ರೈತರ ನೆರವಿನಿಂದ ಚುನಾವಣಾ ಪ್ರಚಾರ ಕೈಗೊಳ್ಳುವುದಾಗಿ ಅವರು ಘೋಷಿಸಿದ್ದಾರೆ.
ನಾವೆಲ್ಲರೂ ಸೈನ್ಯಕ್ಕೆ ಬಹಳ ಗೌರವ ಕೊಡುತ್ತೇವೆ, ಆದರೆ ಅಲ್ಲಿಯೇ ಭ್ರಷ್ಟಾಚಾರವಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕಿದೆ. ಭಾರತದ ಬಹುತೇಕ ಮಾಧ್ಯಮಗಳು ಮೋದಿ ಪರವಾಗಿಯೂ, ಸೈನ್ಯವನ್ನು ವಿಜೃಂಭಿಸಿ ವರದಿ ಪ್ರಸಾರ ಮಾಡುತ್ತಿರುವಾಗ ತೇಜ್ ಬಹದ್ದೂರ್ ರವರ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.


