Homeಚಳವಳಿಕೊರೆಯುವ ಚಳಿಯಲ್ಲಿ ರೈತ ಹೋರಾಟಗಾರರು; ಕರುಣೆ ಇಲ್ಲದ ಸರ್ಕಾರ!

ಕೊರೆಯುವ ಚಳಿಯಲ್ಲಿ ರೈತ ಹೋರಾಟಗಾರರು; ಕರುಣೆ ಇಲ್ಲದ ಸರ್ಕಾರ!

ಸರ್ಕಾರದ ಕಣ್ಣುಪೊರೆ ಜಾಸ್ತಿಯಾಗಿದೆ, ಕಿವಿ ಕುರುಡಾಗಿದೆ, ಹೃದಯ ಇಲ್ಲವೆ ಇಲ್ಲ. ಕೊರೆಯುವ ಚಳಿಯಲ್ಲಿ ಅನ್ನದಾತರನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತಿರುವುದು ಯಾವುದೆ ನಾಗರೀಕ ಸರ್ಕಾರ ಮಾಡುವಂತದ್ದಲ್ಲ.

- Advertisement -
- Advertisement -

ದೆಹಲಿಯ ತಾಪಮಾನ ಇಂದು 4.1 ಸೆಲ್ಸಿಯಸ್ ಡಿಗ್ರಿ ತಲುಪಿದ್ದು, ಕೇಂದ್ರದ ಕೃಷಿ ಕಾನೂನಿನ ವಿರುದ್ದ ಹೋರಾಟ ಮಾಡುತ್ತಿರುವ ಅನ್ನದಾತರು ಕೊರೆಯುವ ಚಳಿಯಲ್ಲಿ ನಿರಂತರ 20 ನೇ ದಿನವನ್ನು ಕಳೆದಿದ್ದಾರೆ. ಇಂದಿನ ತಾಪಮಾನವು ಸಾಮಾನ್ಯಕ್ಕಿಂತ ಐದು ಡಿಗ್ರಿಗಳಷ್ಟು ಕಡಿಮೆಯಾಗಿದೆ ಎಂದು ಸಫ್ದರ್‌‌ಜಂಗ್ ವೀಕ್ಷಣಾಲಯ ಹೇಳಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನನ್ನು ರದ್ದುಗೊಳಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಕೇಂದ್ರ ಸಚಿವರೊಂದಿಗೆ ನಡೆದ ಆರು ಸುತ್ತಿನ ಮಾತುಕತೆ ವಿಫಲಗೊಂಡಿದೆ. ಪ್ರತಿಭಾರಿ ಮಾತುಕತೆಯಲ್ಲೂ ಕೇಂದ್ರವು ಒಂದೆ ರೀತಿಯ ಪ್ರಸ್ತಾಪದೊಂದಿಗೆ ಬರುತ್ತಿರುವುದಕ್ಕೆ ರೈತ ಹೋರಾಟಗಾರರು ಅಸಮಧಾನಗೊಂಡಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ: ದೆಹಲಿ-ಜೈಪುರ ಹೆದ್ದಾರಿಯಲ್ಲಿ ಪೊಲೀಸರೊಂದಿಗೆ ಘರ್ಷಣೆ- 20 ರೈತರ ಬಂಧನ 

ಆಂದೋಲನವು ನಿನ್ನೆಯಿಂದ ತೀವ್ರಗೊಂಡಿದ್ದು, ಹೋರಾಟ ನಿರತ ರೈತರು ಉಪವಾಸ ಸತ್ಯಾಗ್ರಹಕ್ಕೆ ಕರೆಕೊಟ್ಟಿದ್ದಾರೆ. ಅಲ್ಲದೆ ಆಂದೋಲನವನ್ನು ಸೇರಿಕೊಳ್ಳಲು ತಮಿಳುನಾಡು, ರಾಜಸ್ಥಾನ ಸೇರಿದಂತೆ ಇನ್ನೂ ಸಾವಿರಾರು ರೈತರು ದೆಹಲಿಗೆ ಹೊರಟಿದ್ದಾರೆ.

ದೇಶದಾದ್ಯಂತ ಆಂದೋಲನ ತೀವ್ರಗೊಳ್ಳುತ್ತಿದ್ದರೂ ಪ್ರಧಾನಿ ಮೋದಿ ಮಾತ್ರ ವಿವಾದಿತ ಕಾನೂನನ್ನು ಮತ್ತೆ ಮತ್ತೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರತಿಭಟನಾ ನಿರತರನ್ನು ಅವಮಾನಿಸುವ ಹಾಗೂ ಅನುಮಾನಿಸುವ ಕಾರ್ಯ ಕೇಂದ್ರ ಸರ್ಕಾರದ ಪ್ರತಿನಿಧಿಗಳಿಂದ ಹಾಗೂ ಸರ್ಕಾರವನ್ನು ಬೆಂಬಲಿಸುವವರಿಂದ ನಡೆಯುತ್ತಲೇ ಇದೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು, “ಸರ್ಕಾರದ ಕಣ್ಣುಪೊರೆ ಜಾಸ್ತಿಯಾಗಿದೆ, ಕಿವಿ ಕುರುಡಾಗಿದೆ, ಹೃದಯ ಇಲ್ಲವೇ ಇಲ್ಲ. ಕೊರೆಯುವ ಚಳಿಯಲ್ಲಿ ಅನ್ನದಾತರನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತಿರುವುದು ಯಾವುದೆ ನಾಗರೀಕ ಸರ್ಕಾರ ಮಾಡುವಂತದ್ದಲ್ಲ. ಇದು ಪ್ರಪಂಚವೆ ತಲೆತಗ್ಗಿಸುವಂತಹ ನಡವಳಿಕೆ. ಈ ಹಂತದಲ್ಲಿ ರೈತರ ಸಾವು-ನೋವಾದರೆ ಇದಕ್ಕೆ ಮೋದಿ ಮತ್ತು ಅಮಿತ್‌ ಶಾನೇ ನೇರವಾದ ಕಾರಣ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ 25,000 ಸೇನಾ ಪದಕಗಳನ್ನು ಹಿಂದಿರುಗಿಸಲು ಮುಂದಾದ ಮಾಜಿ ಸೈನಿಕರು!

ಕರ್ನಾಟಕ ಸರ್ಕಾರದ ಕೃಷಿ ಬೆಲೆ ಅಯೋಗದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ಅವರು ಮಾತನಾಡಿ,”ಒಂದು ಕಡೆ ತಮ್ಮ ಸರ್ಕಾರದ ಭಾಗವಾಗಿರುವ ಪಕ್ಷಗಳು ಈ ಕಾನೂನಿನ ವಿಷಯದಲ್ಲಿ ಎನ್‌ಡಿಎಯನ್ನು ಕೈಬಿಟ್ಟಿವೆ. ಇನ್ನೊಂದು ಕಡೆ ದೇಶದಾದ್ಯಂತ ರೈತರು ಬೀದಿಗಿಳಿದ್ದಾರೆ. ಇಷ್ಟೇ ಅಲ್ಲದೆ ಇವರದೇ ಮಾತೃ ಸಂಘಟನೆಯಾದ ಆರೆಸ್ಸೆಸ್ ಕೂಡಾ ಇದನ್ನು ವಿರೋಧಿಸುತ್ತಿದೆ. ರಾಜಕೀಯವಾಗಿ ದೊಡ್ಡ ಬೆಲೆ ತೆರಬೇಕಾದರು ಕೂಡಾ ಸರ್ಕಾರ ತಮ್ಮ ಹಠವನ್ನು ಬಿಡುತ್ತಿಲ್ಲವೆಂದರೆ, ಸರ್ಕಾರ ಆಳವಾದ ಹುನ್ನಾರದಲ್ಲಿ ತೊಡಗಿದೆ ಎನ್ನುವುದಲ್ಲಿ ಅನುಮಾನವೆ ಇಲ್ಲ” ಎಂದು ಹೇಳಿದರು.

“ಇಲ್ಲಿ ಹಣದ ಆಮಿಷಗಳು, ಸೇರಿದಂತೆ ಇದರ ಹಿಂದೆ ಅಡಗಿರುವಂತಹ ಶಕ್ತಿಗಳು ಬಹಳ ಪ್ರಭಲವಾಗಿದೆ. ಆದರೆ ಇವುಗಳೆಲ್ಲವು ಹೋರಾಟ ನಿರತ ರೈತರ ಮನೋಸ್ಥಿತಿಯನ್ನು ಇನ್ನೂ ಹರಿತ ಮಾಡುತ್ತಿದೆ. ಈ ಕೊರೆಯುವ ಚಳಿಯಲ್ಲೂ ಅವರು ಕೂತಿದ್ದಾರೆಂದರೆ ದೇಶದ ರೈತರು ಎಲ್ಲಕ್ಕೂ ಸಿದ್ದವಾಗಿಯೇ ಇದ್ದಾರೆ. ಇದು ನಮ್ಮ ದೇಶದ ಚರಿತ್ರೆಯಲ್ಲಿ ಒಂದು ನಿರ್ಣಾಯಕ ಹಂತವಾಗಿದೆ” ಎಂದು ತಿಳಿಸಿದರು.

ರೈತ-ದಲಿತ-ಕಾರ್ಮಿಕ-ಜನಪರ ಸಂಘಟನೆಗಳ ಐಕ್ಯ ಹೋರಾಟದ ಕೋರ್‌ ಕಮಿಟಿ ಸದಸ್ಯರಾದ ಸಿರಿಮನೆ ನಾಗರಾಜ್ ಅವರು ಮಾತನಾಡಿ, “ಮೈ ಮಾತ್ರವಲ್ಲ ಮೂಳೆಯನ್ನೇ ಕೊರೆಯುವ ಇಂಥ ಚಳಿಯಿಂದಾಗಿ ಈಗಾಗಲೇ 40 ಕ್ಕೂ ಹೆಚ್ಚು ಜನ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ-ಕಾರ್ಮಿಕ-ಜನವಿರೋಧಿ ಕಾಯ್ದೆಗಳು ರದ್ದಾಗದೆ ವಾಪಸ್ ಹೋಗುವುದಿಲ್ಲ ಎಂದು ಪ್ರಾಣದ ಹಂಗು ತೊರೆದು ಹೋರಾಟ ನಡೆಸಿದ್ದಾರೆ. ಕೇಂದ್ರ ಸರ್ಕಾರವು ಹೋರಾಟಗಾರರನ್ನು ಸುಳ್ಳೇ ಮಾತುಕತೆಯ ಸುಳಿಯಲ್ಲಿ ಸುತ್ತಿಸುತ್ತ, ಸಮಯವನ್ನು ಮಾತ್ರವಲ್ಲ, ರೈತರನ್ನೂ ಕೊಲ್ಲುತ್ತಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇದು ತೀವ್ರ ಖಂಡನಾರ್ಹವಾಗಿದ್ದು. ಕೇಂದ್ರ ಸರ್ಕಾರ ಕೂಡಲೇ ರೈತರ-ಕಾರ್ಮಿಕರ ಹಕ್ಕೊತ್ತಾಯಗಳನ್ನು ಬೇಶರತ್ತಾಗಿ ಒಪ್ಪಿಕೊಂಡು, ಕಾಯ್ದೆಗಳನ್ನು ಹಿಂಪಡೆಯಬೇಕು. ಈ ಮೂಲಕ ಈ ಚಳವಳಿಗೆ ಅಂತ್ಯ ಹಾಡಿ, ಅಮಾಯಕ ಅನ್ನದಾತರ-ಶ್ರಮಜೀವಿಗಳ ಸಾಮೂಹಿಕ ಕಗ್ಗೊಲೆಯನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ವಿಶ್ವದ ಅತ್ಯಂತ ಕಿರಿಯ ಪರಿಸರ ಹೋರಾಟಗಾರ್ತಿಯ ಬೆಂಬಲ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...