ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಆಡಳಿತವಿರುವ ಗೋವಾ ರಾಜ್ಯವು ಭಾರೀ ಪ್ರಮಾಣದಲ್ಲಿ ಗೋಮಾಂಸದ ಕೊರತೆ ಅನುಭವಿಸುತ್ತಿದೆ. ಹಾಗಾಗಿ ಕೂಡಲೇ ಕರ್ನಾಟಕದಿಂದ ಗೋಮಾಂಸ ಆಮದು ಮಾಡಿಕೊಳ್ಳುವುದಾಗಿ ಗೋವಾ ಸಿಎಂ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. ಇದಕ್ಕೆ ಕರ್ನಾಟಕ ಕಾಂಗ್ರೆಸ್ ತೀಕ್ಷ್ಣ ರೀತಿಯಲ್ಲಿ ಪ್ರತಿಕ್ರಿಯಿಸಿದೆ.
ಕರ್ನಾಟಕದ ಬಿಜೆಪಿ ಸರ್ಕಾರವು ಗೋಹತ್ಯೆ ನಿಷೇಧ ಮಸೂದೆ- 2020 ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಹಾಗಾಗಿ ಕೆಲವೆಡೆ ಗೋಮಾಂಸದ ಮಾರಾಟ ಮತ್ತು ರಫ್ತು ನಿಲ್ಲಿಸಲಾಗಿದೆ. ಇದು ಗೋವಾ ರಾಜ್ಯದ ಮೇಲೆ ಪರಿಣಾಮ ಬೀರಿದೆ. ಗೋವಾದಲ್ಲಿ ಹಬ್ಬಗಳು ಆರಂಭವಾಗಿದ್ದು ಗೋಮಾಂಸ ಅವರ ಪ್ರಮುಖ ಖಾದ್ಯವಾಗಿದೆ. ಗೋಮಾಂಸ ಮಾರಾಟಗಾರರು ಬುಧವಾರ ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಹಾಗಾಗಿ ಕೂಡಲೇ ಕರ್ನಾಟಕದಿಂದ ಆಮದು ಮಾಡಿಕೊಳ್ಳಲು ವ್ಯವಸ್ಥೆ ಮಾಡುವುದಾಗಿ ಸಿಎಂ ಪ್ರಮೋದ್ ಸಾವಂತ್ ಗೋಮಾಂಸ ಮಾರಾಟಗಾರರಿಗೆ ಭರವಸೆ ನೀಡಿದ್ದಾರೆ.
ಗೋವುಗಳು ಬಿಜೆಪಿ ಬಯಸಿದ ರಾಜ್ಯಗಳಲ್ಲಿ ಮಾತ್ರ ಮಾತೆ! ಉಳಿದ ಕಡೆಯಲ್ಲಿಲ್ಲ ಅವರ ಕ್ಯಾತೆ! ಮೋದಿ ಆಳ್ವಿಕೆಯಲ್ಲಿ ಬೀಫ್ ರಫ್ತಿನಲ್ಲಿ ಭಾರತ ಉತ್ತುಂಗಕ್ಕೇರಿದೆ. ಗೋವಾದ ಬಿಜೆಪಿ ಸರ್ಕಾರ ಗೋಮಾಂಸದ ಕೊರತೆ ನೀಗಿಸಲು ರಾಜ್ಯದಿಂದಾಗುವ ಪೂರೈಕೆಯ ಕಡೆ ಆಸೆಯಿಂದ ನೋಡುತ್ತಿದೆ! ಇದಕ್ಕೆ ಬಿಜೆಪಿ ಕರ್ನಾಟಕದ
ಅಭಿಪ್ರಾಯ ಮತ್ತು ಉತ್ತರ ಏನು? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ಗೋವುಗಳು @BJP4India
ಬಯಸಿದ ರಾಜ್ಯಗಳಲ್ಲಿ ಮಾತ್ರ ಮಾತೆ!
ಉಳಿದ ಕಡೆಯಲ್ಲಿಲ್ಲ ಅವರ ಕ್ಯಾತೆ!●ಮೋದಿ ಆಳ್ವಿಕೆಯಲ್ಲಿ ಬೀಫ್ ರಫ್ತಿನಲ್ಲಿ ಭಾರತ ಉತ್ತುಂಗಕ್ಕೇರಿದೆ
●ಗೋವಾದ ಬಿಜೆಪಿ ಸರ್ಕಾರ ಗೋಮಾಂಸದ ಕೊರತೆ ನೀಗಿಸಲು ರಾಜ್ಯದಿಂದಾಗುವ ಪೂರೈಕೆಯ ಕಡೆ ಆಸೆಯಿಂದ ನೋಡುತ್ತಿದೆ!
ಇದಕ್ಕೆ @BJP4Karnataka ಅಭಿಪ್ರಾಯ ಮತ್ತು ಉತ್ತರ ಏನು ? pic.twitter.com/w0OnGd0se2
— Karnataka Congress (@INCKarnataka) December 18, 2020
ಬಿಜೆಪಿ ಆಳ್ವಿಕೆಯಿರುವ ಗೋವಾ ರಾಜ್ಯವು ಪ್ರತಿದಿನ ಸುಮಾರು 15-20 ಟನ್ ಗೋಮಾಂಸವನ್ನು ಬಳಸುತ್ತದೆ. ಅಲ್ಲಿ ಗೋಹತ್ಯೆ, ಗೋಮಾಂಸ ನಿಷೇಧವಿಲ್ಲ. ಆದರೆ ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರ್ಕಾರದ ಮಾಂಸ ಸಂಕೀರ್ಣವನ್ನು ಸ್ಥಗಿತಗೊಳಿಸಿದ್ದರಿಂದ, ರಾಜ್ಯದ ಗೋಮಾಂಸ ವ್ಯಾಪಾರಿಗಳು ಮುಖ್ಯವಾಗಿ ಕರ್ನಾಟಕದಿಂದ ಮಾಂಸವನ್ನು ಆಮದು ಮಾಡಿಕೊಳ್ಳುತ್ತಾರೆ.
“ಅಂಗಡಿಗಳನ್ನು ಮುಚ್ಚಲಾಗಿದೆ. ಆದಾಯವಿಲ್ಲ. ಸಾವಿರಾರು ಕಾರ್ಮಿಕರು ಮತ್ತು ಕುಟುಂಬಗಳು ಈ ವ್ಯಾಪಾರವನ್ನು ಅವಲಂಬಿಸಿವೆ. ಇದಲ್ಲದೆ, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಬೇಕರಿಗಳಿವೆ. ಈ ಋತುವಿನಲ್ಲಿ ಮತ್ತು ಹೊಸ ವರ್ಷದಲ್ಲಿ ಪ್ರವಾಸಿಗರಿಂದ ಗೋಮಾಂಸಕ್ಕೆ ಸಾಕಷ್ಟು ಬೇಡಿಕೆಯಿದೆ” ಎಂದು ಸ್ಥಳೀಯರೊಬ್ಬರ ಹೇಳಿಕೆ ಉಲ್ಲೇಖಿಸಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಕರ್ನಾಟಕದ ಮಾಂಸ ವ್ಯಾಪಾರಿಗಳ ಸಂಘವು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಲು ನಾವು ಕಾಯುತ್ತಿದ್ದೇವೆ. ಗೋವಾ ಸರ್ಕಾರ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕು. ಗೋವಾ ಗೋಮಾಂಸ ಪೂರೈಕೆಗಾಗಿ ಕರ್ನಾಟಕದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಆದರೆ ಒಂದು ವಾರದಿಂದ ನಾವು ಕರ್ನಾಟಕದಿಂದ ಮಾಂಸ ಅಥವಾ ಜಾನುವಾರುಗಳನ್ನು ಸ್ವೀಕರಿಸಿಲ್ಲ” ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ: ಕೃಷಿ ಕಾನೂನುಗಳು ಅದಾನಿ ಪರವಾಗಿವೆಯೆಂದು ದಾಖಲೆ ಬಿಡುಗಡೆ ಮಾಡಿದ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ!


