ನನಗೆ ಜಾಗತಿಕ ಸಿನಿಮಾಗಳಿಗೆ ಪ್ರವೇಶವನ್ನು ಒದಗಿಸಿಕೊಟ್ಟ ಪ್ರಾರಂಭದ ನಿರ್ದೇಶಕರುಗಳಲ್ಲಿ ಇರಾನಿನ ’ಮಾಜಿದ್ ಮಾಜಿದಿ’ ಮೊದಲಿಗರಾದರೆ, ನಂತರದವರು ದಕ್ಷಿಣ ಕೊರಿಯಾದ ’ಕಿಮ್ ಕಿ ಡುಕ್. ಈ ಇಬ್ಬರ ಸಿನಿಮಾಗಳ ಮೂಲ ಸ್ವಭಾವ ಒಂದೇ ಆದರೂ, ಅವುಗಳನ್ನು ಕಟ್ಟುವ ಮತ್ತು ಪ್ರಸ್ತುತ ಪಡಿಸುವ ರೀತಿ ಎರಡು ವಿರುದ್ಧ ಧ್ರುವಗಳು. ತೃತೀಯ ಜಗತ್ತಿನ ಸಾಮಾಜಿಕ ಪರಿಸರದ ಹಿನ್ನೆಲೆಯ ಸಿನಿಮಾ ಪ್ರೇಕ್ಷಕನಿಗೆ ಈ ಇಬ್ಬರ ಸಿನಿಮಾಗಳು ಬಹಳ ಬೇಗ ಕನೆಕ್ಟ್ ಆಗುತ್ತವೆ ಅನಿಸುತ್ತದೆ.
ಕಿಮ್ ನನಗೆ ಮೊದಲು ಪರಿಚಯವಾಗಿದ್ದು 2013ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಅವನ Pieta(2012) ಸಿನಿಮಾ ಮೂಲಕ. ಒಂದು ಹಂತದಲ್ಲಿ ಆ ಸಿನಿಮಾದಲ್ಲಿನ ಹಿಂಸೆ ಅತಿರೇಕ ಎನಿಸಿ ಕಸಿವಿಸಿಯಾಗುತ್ತಿದ್ದರೂ, ಅಂತ್ಯದ ವೇಳೆಗೆ ದಿಗ್ಭ್ರಮೆಗೊಳಿಸಿ ನನ್ನನ್ನು ಅಲ್ಲಾಡಿಸಿಬಿಟ್ಟಿತು. ಚಿತ್ರೋತ್ಸವ ಮುಗಿಸಿ ಬಂದ ತಕ್ಷಣ ನಾನು ಮಾಡಿದ ಮೊದಲ ಕೆಲಸ, ಕಿಮ್‌ನ ಪ್ರಾರಂಭದ ಸಿನಿಮಾ Crocodile (1996) ಆದಿಯಾಗಿ The Isle (2000), Bad Guy (2001), Spring, Summer, Fall, Winter and Spring (2003), Samaritan Girl (2004), 3 Iron (2004), The Bow (2005), Time (2006), Dream (2008), Amen (2011) Moebius (2012) ಇವಿಷ್ಟು ಸಿನಿಮಾಗಳನ್ನು ಒಂದೇ ಉಸಿರಿನಲ್ಲಿ ನೋಡಿದ್ದು. ಪ್ರತಿಯೊಂದು ಸಿನಿಮಾಗಳು ಭಿನ್ನ ಭಿನ್ನ ಅನುಭೂತಿಯನ್ನೊದಗಿಸಿದವು.
ಕಿಮ್, ಸಿನಿಮಾ ಕುರಿತು ಅಧ್ಯಯನ ಮಾಡಿದವನಲ್ಲ ಅಥವಾ ಸಿನಿಮಾ ತಯಾರಿಕೆಗೆ ಸಂಬಂಧಿಸಿದಂತೆ ಯಾವುದೇ ಶಾಸ್ತ್ರೀಯ ಶಿಕ್ಷಣವನ್ನು ಪಡೆದವನಲ್ಲ. ಕಿಮ್ ಮೂಲತಃ ಬಡ ಕೆಸ್ತರದ ಕುಟುಂಬದಿಂದ ಬಂದವನು. ಶಿಕ್ಷಣದಿಂದ ಅರ್ಧಕ್ಕೆ ಹೊರಬಂದು, ಕಾರ್ಖಾನೆಗಳಲ್ಲಿ ಕೆಲಸ ಮಾಡಿಕೊಂಡು ನಂತರದ ಕೆಲ ವರ್ಷಗಳು ಸೈನ್ಯದಲ್ಲಿ ಸೇವೆ ಸಲ್ಲಿಸಿದ. 1990-1993ರ ಅವಧಿಯಲ್ಲಿ ಫ್ರಾನ್ಸ್‌ಗೆ ತೆರಳಿ Fine Arts ಅಭ್ಯಾಸ ಮಾಡಿದ ನಂತರ, ಕೊರಿಯಾಗೆ ಮರಳಿದ. ಪ್ರಾರಂಭದಲ್ಲಿ ಚಿತ್ರಕಥೆ ಬರೆಹಗಾರನಾಗಿ ವೃತ್ತಿ ಪ್ರಾರಂಭಿಸಿದ ಕಿಮ್, ತನ್ನ ನಿರ್ದೆಶನದ ಮೊದಲ ಸಿನಿಮಾದಲ್ಲೇ (Crocodile, 1996) ಅಂತರರಾಷ್ಟ್ರೀಯ ಮನ್ನಣೆ ಪಡೆದುಬಿಟ್ಟ.
’ನಾವೆಲ್ಲರೂ ಸಮಾನವಾಗಿ ಹುಟ್ಟುತ್ತೇವೆ, ಸಮಾನ ಹಕ್ಕು ಮತ್ತು ಸಮಾನ ಅರ್ಹತೆಯನ್ನು ಹೊಂದಿದವರಾಗಿರುತ್ತೇವೆ, ಆದರೆ ಬೆಳೆಯುತ್ತಾ ಸಮಾಜ ನಮ್ಮನ್ನು ಕೆಲವು ಮಾನದಂಡಗಳ ಮೇಲೆ ಪ್ರತ್ಯೇಕಿಸುತ್ತದೆ. ಈ ಮಾನದಂಡಗಳು ನಮ್ಮನ್ನು ಶ್ರೇಣೀಕರಣಗೊಳಿಸಿ ವಿವಿಧ ಸಾಮಾಜಿಕ ವರ್ಗಗಳನ್ನಾಗಿ ಮಾಡಿಬಿಡುತ್ತದೆ. ಈ ಮಾನದಂಡಗಳು ಮನುಷ್ಯನನ್ನು ಜೊತೆಯಲ್ಲಿ ಬದುಕಲು ಬಿಡುವುದಿಲ್ಲ. ಹೀಗೆ ವರ್ಗೀಕೃತಗೊಂಡ ಮನುಷ್ಯ ಸಮಾಜವನ್ನ ಒಗ್ಗೂಡಿಸಲು ಅಸಾಧ್ಯವೇ ಎಂಬ ಪ್ರಶ್ನೆಯನ್ನು ನಾನು ನನ್ನ ಸಿನಿಮಾ ಮೂಲಕ ಕೇಳಲು ಬಯಸುತ್ತೇನೆ’ – ಇದು ಕಿಮ್ ತನ್ನ Bad Guy (2001) ಸಿನಿಮಾ ಕುರಿತ ಒಂದು ಸಂದರ್ಶನದಲ್ಲಿ ಹೇಳಿದ ಮಾತು. ಒಳ್ಳೆಯದು ಅನ್ನುವುದು ಯಾವುದು? ಕೆಟ್ಟದ್ದು ಅನ್ನುವುದು ಯಾವುದು? ಸರಿ ಯಾವುದು? ತಪ್ಪು ಯಾವುದು? ಯಾವುದು ನೈತಿಕ? ಯಾವುದು ಅನೈತಿಕ? ನಿಜವಾದ ಪ್ರೀತಿ ಮತ್ತು ಅಂತಃಕರಣ ಅಂದರೇನು? ಮನುಷ್ಯ ಮೂಲತಃ ಕ್ರೂರಿಯೇ? ಮನುಷ್ಯನ ಸ್ವಭಾವಕ್ಕೆ ಅವನ ಸುತ್ತಲಿನ ಸಮಾಜ ಹೇಗೆ ಪೂರಕ ಈ ಎಲ್ಲಾ ಜಿಜ್ಞಾಸೆಗಳು ಬಿಡಿಬಿಡಿಯಾಗಿ ಅವನ ಸಿನಿಮಾಗಳಲ್ಲಿ ಪ್ರಸ್ತುತಗೊಂಡಿವೆ.
’ತನ್ನ ಒಡೆಯನ ಆಜ್ಞೆಯಂತೆ ಅತ್ಯಂತ ಕ್ರೂರ ವಿಧಾನದಲ್ಲಿ ಸಾಲ ವಸೂಲಿ ಮಾಡುವ 25 ವಯಸ್ಸಿನ ’ಲೀ ಕಾಂಗ್‌ನ ಬದುಕಿ ಒಂದು ದಿನ ತನ್ನ ಬಾಲ್ಯದಲ್ಲಿ ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿದ್ದ ತಾಯಿ ದಿಢೀರ್ ಪ್ರತ್ಯಕ್ಷವಾಗುತ್ತಾಳೆ. ತನ್ನನ್ನು ಕ್ಷಮಿಸಿ ತಾಯಿಯಾಗಿ ಸ್ವೀಕರಿಸುವಂತೆ ಅಂಗಲಾಚುತ್ತಾಳೆ. ಆದರೆ ಲೀ ಅವಳನ್ನು ಯಾವ ಪರಿಯಲ್ಲಿ ಪರೀಕ್ಷೆಗೆ ಒಳಪಡಿಸುತ್ತಾನೆ ಎಂದರೆ ಒಂದು ಅಂತದಲ್ಲಿ ಅವಳ ವೆಜಿನಾ ಒಳಗಡೆ ಕೈ ಹಾಕಿ, ’ನಾನು ನಿಜವಾಗಿ ಇಲ್ಲಿಂದಲೇ ಹುಟ್ಟಿದವನಾ’ ಎಂದು ಪ್ರಶ್ನೆ ಮಾಡುತ್ತಾನೆ.’ Pieta(2012) ಸಿನಿಮಾದ ಈ ದೃಶ್ಯ ನೋಡುತ್ತಿದ್ದಾಗ ಬಹಳ ಹೇಸಿಗೆ ಅನಿಸಿಬಿಡುತ್ತೆ. ಆದರೆ, ಮುಂದೆ ಲೀ ಪಾತ್ರ ತಾಯಿಯ ಮಮತೆಯಲ್ಲಿ ಸ್ಥಿತ್ಯಂತರವಾಗುವುದಿದೆಯಲ್ಲಾ ಅಬ್ಬಾ! ಅದು ಮಾತ್ರ ಅದ್ಭುತ.
ಕಿಮ್‌ನ Samaritan Girl (2004) ವೈಯಕ್ತಿಕವಾಗಿ ಬಹಳ ಇಷ್ಟದ ಸಿನಿಮಾ. ಇದಕ್ಕೆ ಕಾನ್ ಅಂತಾರಾಷ್ಟ್ರೀಯ ಉತ್ಸವದ Un Certain Regard ಕೆಟಗರಿಯಲ್ಲಿ ಪ್ರಶಸ್ತಿ ಕೂಡ ಲಭಿಸಿದೆ. ಬಾಲ್ಯ, ಯೌವ್ವನ ಬಹುಶಃ ಮುಪ್ಪಿನವರೆಗೂ ಸಮಾಜದ ನೈತಿಕ ಭಾರ ನಮ್ಮ ಮೇಲೆ ಇರುತ್ತದೆ. ವೈಯಕ್ತಿಕ ಸ್ವಾತಂತ್ರ್ಯ ಅನ್ನುವುದು ದೂರದ ಮಾತಾಯಿತು. ಕನಿಷ್ಟ ನಮ್ಮ ದೃಷ್ಟಿಕೋನವೂ ಸಾಮಾಜಿಕ ನೈತಿಕತೆಯ ಕಣ್ತಪ್ಪಿನಿಂದ ಹೊರಚಾಚುವುದಿಲ್ಲ. ಹಾಗಾಗಿ ಕೆಲವರ ವೈಯಕ್ತಿಕ ಆಯ್ಕೆ ನಮಗೆ ಅನೈತಿಕವಾಗಿ ಅಥವಾ ಸಮಾಜಘಾತುಕವಾಗಿ ಕಾಣುತ್ತೆ. ಜೇ-ಯಿಯಾಂಗ್ ಎಂಬ ಒಬ್ಬ ಹರೆಯದ ಹೆಣ್ಣು ಮಗಳು ಬೌದ್ಧ ಸನ್ಯಾಸಿನಿಯಾದ ಭಾರತದ ’ವಸುಮಿತ್ರಳ ಪ್ರಭಾವದಿಂದ ತಾನು ವೇಶ್ಯೆ ಯಾಗಬೇಕೆಂದು ನಿರ್ಧರಿಸುತ್ತಾಳೆ.
ತನ್ನ ಗೆಳತಿ ಮತ್ತು ಆತ್ಮ ಸಂಗಾತಿ ಯಿಓ-ಜಿನ್ ಎಷ್ಟು ಹೇಳಿದರೂ ಕೇಳುವುದಿಲ್ಲ. ಕೊನೆಗೆ ಯಿಓ-ಜಿನ್ ಸಹಾಯದಿಂದಲೇ ಹಲವಾರು ಗಂಡಸರನ್ನು ಕೂಡುತ್ತಾಳೆ ಮತ್ತು ಆ ಎಲ್ಲಾ ವಿವರಗಳನ್ನ ಒಂದು ಪುಸ್ತಕದಲ್ಲಿ ನಮೂದಿಸುತ್ತಿರುತ್ತಾಳೆ. ಒಂದು ದಿನ ಪೊಲೀಸ್ ರೈಡಿನಲ್ಲಿ ಜೇ-ಯಿಯಾಂಗ್ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾಳೆ. ಈ ಘಟನೆ ಸ್ನೇಹಿತೆ ಯಿಓ-ಜಿನ್‌ಳನ್ನು ಯಾವಪರಿ ಬಾಧಿಸುತ್ತೆ ಎಂದರೆ, ತನ್ನ ಸ್ನೇಹಿತೆ ಯಾವ ಯಾವ ಗಂಡಸರ ಜೊತೆ ಕೂಡಿರುತ್ತಾಳೊ ಆ ಎಲ್ಲರ ಜೊತೆಯೂ ಕೂಡಲು ನಿರ್ಧರಿಸುತ್ತಾಳೆ.
ಕಿಮ್‌ನ ಸಿನಿಮಾಗಳಲ್ಲೆ ಜಗತ್ತಿನೆಲ್ಲೆಡೆ ಅತಿ ಹೆಚ್ಚು ಪ್ರೇಕ್ಷಕರನ್ನ ತಲುಪಿದ ಸಿನಿಮಾ ಬಹುಶಃ Spring, Summer, Fall, Winter and Spring (2003) ಅನಿಸುತ್ತೆ. ಈ ಸಿನಿಮಾದ ಪ್ರತಿಯೊಂದು ದೃಶ್ಯ ಚಿತ್ರ ಕಲಾವಿದನ ಕುಂಚದಿಂದ ಬಿಡಿಸಿದ ಚಿತ್ರಿಕೆಗಳಂತಿವೆ ಎಂಬ ಪ್ರಶಂಸೆ ಕೂಡ ಇದೆ. ಕಿಮ್ ಮೂಲತಃ ಚಿತ್ರ ಕಲಾವಿದ ಆಗಿದ್ದದ್ದು ಇದಕ್ಕೆ ಕಾರಣ ಇರಬಹುದು. ಈ ಸಿನಿಮಾದಲ್ಲಿ ಮನುಷ್ಯನ ವಯೋಸಹಜ ಸ್ಥಿತ್ಯಂತರಗಳನ್ನು ನಿಸರ್ಗದ ಋತುಗಳೊಂದಿಗೆ ಮೇಳೈಸಿದ್ದಾನೆ. ಈ ಸಿನಿಮಾ ಬೌದ್ಧ ಧರ್ಮದ ಕಥೆಯೂ ಇರಬಹುದು. ಈ ಸಿನಿಮಾ, ತನ್ನ ಹಿಂಸೆಯಿಂದ ಕಾರುಣ್ಯದ ಕಡೆಗಿನ ಮನುಷ್ಯನ ಚಲನೆಯ ಕಥೆಯೂ ಹೌದು.
ಸಾಮಾನ್ಯ ಕಿಮ್ ಸಿನಿಮಾಗಳಲ್ಲಿ ಮಾತುಗಳು ಕಡಿಮೆ. ಕಿಮ್‌ನನ್ನು ಈ ಬಗ್ಗೆ ಪ್ರಶ್ನೆ ಮಾಡಿದರೆ, ಅವನು ಹೇಳುವುದು. “ನನ್ನ ಸಿನಿಮಾದಲ್ಲಿ ಬರುವ ಪಾತ್ರಗಳು ಹೆಚ್ಚು ಮಾತಾನಾಡುವುದಿಲ್ಲ, ಕಾರಣ ಅವರನ್ನು ಯಾವುದೋ ಒಂದು ಸಂಗತಿ ಆಳವಾಗಿ ಘಾಸಿಗೊಳಿಸಿದೆ. ಆ ಪಾತ್ರಗಳು ಮನುಷ್ಯ ಮನುಷ್ಯ ನಡುವಿನ ನಂಬಿಕೆಯನ್ನು ಕಳೆದುಕೊಂಡುಬಿಟ್ಟಿವೆ. ಅವರು ತಮ್ಮ ನಂಬಿಕೆಯಲ್ಲಿ ಎಲ್ಲೋ ಮೋಸಹೋಗಿದ್ದಾರೆ. ಹಾಗಾಗಿ ನಾನು ಪಾತ್ರಗಳ ದೇಹ ಭಾಷೆಯನ್ನು ಆಯ್ಕೆ ಮಾಡಿಕೊಂಡೆ. ಅದು ಹಿಂಸೆಯ ಸಂವಹನ ಕೂಡ ಹೌದು.” ಕಿಮ್‌ನ ಮಾತುಗಳನ್ನು ಒಪ್ಪುವುದು ಬಹಳ ಕಷ್ಟ. ಅವನ ಸಿನಿಮಾಗಳಲ್ಲಿ ಅತ್ಯಂತ ಕಡಿಮೆ ಮಾತಿನ ಸಿನಿಮಾ 3 Iron (2004). ಇತರೆ ಸಿನಿಮಾಗಳಿಗೆ ಹೋಲಿಸಿದರೆ ಸ್ವಲ್ಪ ಹಿಂಸೆಯೂ ಕಡಿಮೆನೇ. ಗಂಡು-ಹೆಣ್ಣು ನಡುವಿನ ಪ್ರೀತಿಗೆ ಮತ್ತದರ ಸಂವಹನಕ್ಕೆ ಸಂಬಂಧಿಸಿದಂತೆ ನಾನು ಇದುವರೆಗೂ ನೋಡಿರುವ ಸಿನಿಮಾಗಳಲ್ಲೇ 3 Iron ಬಹಳ ಅದ್ಭುತವಾದ ಸಿನಿಮಾ.
ನಮಗೆ ಕೊರಿಯಾ ಎನ್ನುವ ಹೆಸರು ಕೇಳಿದ ತಕ್ಷಣ ಸಾಮಾನ್ಯವಾಗಿ ನೆನಪಿಗೆ ಬರುವುದು ದಕ್ಷಿಣ ಮತ್ತು ಉತ್ತರ ಕೊರಿಯಾಗಳ ನಡುವಿನ ವಿವಾದ. ಕಿಮ್‌ನ 2015ರವರೆಗಿನ ಸಿನಿಮಾಗಳಲ್ಲಿ ಈ ಎರಡು ದೇಶಗಳ ನಡುವಿನ ವಿವಾದದ ಪ್ರಸ್ತಾಪವೇ ಇಲ್ಲ. ಹಾಗಾದರೆ ಕಿಮ್ ಒಬ್ಬ ಅಪೊಲಿಟಿಕಲ್ ಸಿನಿಮಾ ನಿರ್ದೇಶಕನೇ? ಖಂಡಿತ ಇಲ್ಲ. The Net (2016) ಸಿನಿಮಾ ಸಂಪೂರ್ಣ ಈ ಎರಡು ದಾಯಾದಿ ದೇಶಗಳ ಕುರಿತದ್ದು. ಕಿಮ್‌ನ ಹೆಗ್ಗಳಿಕೆ ಅಂದರೆ ಈ ಸಿನಿಮಾ ಏಕಪಕ್ಷೀಯವಾದ ನಿಲುವಿಗೆ ಬರುವುದಿಲ್ಲ. ಈ ಎರಡು ದೇಶಗಳ ಪ್ರತಿಷ್ಠೆಗಳು ಸಾಮಾನ್ಯನೊಬ್ಬನ ಬದುಕನ್ನು ಹೇಗೆ ಮೂರಬಟ್ಟೆ ಮಾಡಿಬಿಡುತ್ತೆ ಎಂಬುದನ್ನು ಮನಮುಟ್ಟುವಂತೆ ಕಟ್ಟಿಕೊಡುತ್ತಾನೆ. ಈ ಸಿನಿಮಾ ಒಂದು ರೀತಿಯಲ್ಲಿ ಮಾಂಟೊನ ’ತೋಬಾ ತೇಕ್ ಸಿಂಗ್ ಕಥೆಯಂತೆಯೇ.
ಇಷ್ಟಲ್ಲ ಮೆಚ್ಚುಗೆಯ ನಡುವೆಯೂ ಕಿಮ್ ಸಿನಿಮಾಗಳಲ್ಲಿ ಬರುವ ಅತಿರೇಕದ ಹಿಂಸೆಯ ಬಗ್ಗೆ ನನಗೆ ಯಾವಾಗಲೂ ತಕರಾರು. ಆದರೆ ಇವನ ಸಿನಿಮಾಗಳು ಕೇವಲ ಹಿಂಸೆಯನ್ನು ವಿಜೃಂಭಿಸುವ ಅಥವಾ ಹಿಂಸೆಯನ್ನು ಅಶ್ಲೀಲಗೊಳಿಸುವಂತಹವು ಎಂದೂ ಹೇಳಲಾಗುವುದಿಲ್ಲ. ಒಬ್ಬ ಸೂಕ್ಷ್ಮ ಕಲಾವಿದ ಯಾವುದನ್ನು ವಾಚ್ಯವಾಗಿ ಹೇಳಬಾರದು. ಅದು ಕಲಾವಿದನೊಬ್ಬನ ನಿಜದ ಸಾಮರ್ಥ್ಯ. ಕಿಮ್ ಯಾಕೆ ಹಿಂಸೆಯನ್ನು ಇಷ್ಟೂ ವಾಚ್ಯಗೊಳಿಸುತ್ತಾನೆ ಎನ್ನುವುದು ಸೋಜಿಗ. ಇವನ ಸಿನಿಮಾಗಳು ಹಿಂಸೆ ರಹಿತವಾಗಿದ್ದರೆ ಪ್ರೇಕ್ಷಕನಲ್ಲಿ ಈಗ ಮಾಡಿರುವಷ್ಟು ಪರಿಣಾಮವನ್ನುಂಟು ಮಾಡುತ್ತಿದ್ದವೆ? ಅದನ್ನೂ ಖಚಿತವಾಗಿ ಹೇಳಲಾರೆ. ಇವನದೇ ದೇಶದ ಲೀ ಚಾಂಗ್-ಡಾಂಗ್ ತನ್ನ ‘Poetry (2010) ಮತ್ತು Burning (2018)’ ಸಿನಿಮಾಗಳಲ್ಲಿ ಸಮಾಜದ ಹಿಂಸೆಯನ್ನು ದೃಶ್ಯಗಳಲ್ಲಿ ವಾಚ್ಯಗೊಳಿಸದೆ ಆ ಹಿಂಸೆಯ ಅನುಭವವನ್ನು ಮಾತ್ರ ಪ್ರೇಕ್ಷಕನ ಎದೆಗೆ ದಾಟಿಸುತ್ತಾನೆ. ಸ್ವೀಡಿಷ್ ನಿರ್ದೇಶಕ ಮೈಕೆಲ್ ಹನೆಕೆಯ 2015ರ ಸಿನಿಮಾ ‘Cache (Hidden)’ ಎಷ್ಟು ಹಿಂಸೆಯದ್ದಾಗಿದ್ದರೂ, ಹನೆಕೆ ಎಲ್ಲಿಯೂ ಹಿಂಸೆಯನ್ನು ದೃಶ್ಯಕ್ಕೆ ತಂದು ವಾಚ್ಯಗೊಳಿಸುವುದಿಲ್ಲ.
ಕಿಮ್ ಕಿ ಡುಕ್ ಸಿನಿಮಾಗಳು ಜಗತ್ತಿನಾದ್ಯಂತ ಬಹಳ ಪ್ರಸಿದ್ಧಿ, ಪ್ರಶಂಸೆ, ಮತ್ತು ಪ್ರಶಸ್ತಿಗಳನ್ನು ಪಡೆದಿವೆ. ಅವನ ಸಿನಿಮಾಗಳ ಅಸಂಖ್ಯ ಅಭಿಮಾನಿಗಳು ಪ್ರಪಂಚದಾದ್ಯಂತ ಇದ್ದಾರೆ. ಆದರೆ, ನಮ್ಮ ನೆರೆಯ ಕೇರಳದಲ್ಲಿ ಸ್ವಲ್ಪ ಹೆಚ್ಚೆ ಅಭಿಮಾನಿ ವರ್ಗವಿದೆ. 2009ರಲ್ಲಿ ಬಿನುಕುಮಾರ್ ಎಂಬ ನಿರ್ದೇಶಕ, ದೂರದ ಗುಡ್ಡಗಾಡಿನ ಸಣ್ಣಹಳ್ಳಿಯೊಂದರಲ್ಲಿ ಬದುಕುವ ಯುವಕನೊಬ್ಬ ಕಿಮ್ ಕಿ ಡುಕ್ ಸಿನಿಮಾ ನೋಡಲು ತವಕಿಸುವ ಕಥೆಯನ್ನೊಳಗೊಂಡ ‘Dear Kim’ ಎಂಬ ಮೂವತ್ತು ನಿಮಿಷದ ಸಾಕ್ಷ್ಯಚಿತ್ರ ಕೂಡ ಮಾಡಿದ್ದಾನೆ. 2013ರಲ್ಲಿ ಕೇರಳಕ್ಕೆ ಬಂದಿದ್ದ ಕಿಮ್ ’ಕೇರಳ ತನ್ನ ತವರು ಮನೆ ಎನಿಸುವಷ್ಟು ಆಪ್ತವಾಗಿದೆ’ ಎಂದು ಹೇಳಿದ ನೆನಪು. 2016ರ ಕೇರಳ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ, ತಿರುವನಂತಪುರಂನ ಪದ್ಮನಾಭ ದೇವಸ್ಥಾನದ ಬಗಲಿಗೆ ಇರುವ ಸುಮಾರು 1000 ಆಸನಗಳ ಸಾಮರ್ಥ್ಯದ ’ಅಂಜನ್ ಥಿಯೆಟರ್ ಮುಂದೆ ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತರೂ ಕಿಮ್‌ನ The Net (2016) ಸಿನಿಮಾ ನೋಡಲು ಸೀಟು ಸಿಗಲಿಲ್ಲ.
ಡಿಸೆಂಬರ್ 10ರಂದು ಕಿಮ್ ಕಿ ಡುಕ್ ಸಾವಿನ ಸುದ್ದಿ ಮಾತ್ರ ಆಕಸ್ಮಿಕವಾಗಿತ್ತು. ತಕ್ಷಣಕ್ಕೆ ಅವನ ಸಾವನ್ನು ಒಪ್ಪಿಕೊಳ್ಳೋದು ಸ್ವಲ್ಪ ಕಷ್ಟ ಆಯ್ತು. ನನ್ನಂಥ ಸಿನಿಮಾ ಪ್ರೇಕ್ಷಕನಿಗೆ ಕಿಮ್ ಬಹಳ ಅಮೂಲ್ಯವಾದ ಕಲಾಕೃತಿಗಳನ್ನು ಕರುಣಿಸಿ ಹೋಗಿದ್ದಾನೆ. ಕಿಮ್ ಕಿ ಡುಕ್‌ಗೆ ಪ್ರೀತಿಯ ವಿದಾಯ.
- ಯದುನಂದನ್ ಕೀಲಾರ

ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು
ತೀಕ್ಷ್ಣವಾಗಿ ಶೋಧಿಸುತ್ತಾರೆ.


