ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಪಕ್ಷವು ನಾವಿಕನಿಲ್ಲದ ದೋಣಿಯಂತಾಗಿದೆ. ಇದಕ್ಕೆ ನಾವಿಕನನ್ನು ಹುಡುಕಲು ನ್ಯಾಯಯುತವಾದ ಚುನಾವಣೆಯನ್ನು ಆಶ್ರಯಿಸಬೇಕು, ಇಲ್ಲದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಈ ಕುರಿತು ಸೋನಿಯಾ ಗಾಂಧಿ ಇವರೆಲ್ಲರನ್ನೂ ಕೂಡಿ ಚರ್ಚೆ ಮಾಡುವುದಾಗಿ ಇತ್ತೀಚೆಗೆ ತಿಳಿಸಿದ್ದರು.
ಈ ಕುರಿತು, ಇಂದಿನಿಂದ ಹತ್ತು ದಿನಗಳವರೆಗೆ ಪಕ್ಷದ ಹಿರಿಯ ನಾಯಕರುಗಳೊಂದಿಗೆ ಸಭೆ ನಡೆಯಲಿದೆ. ಆದರೆ ಕೆಲವು ನಾಯಕರು ರಾಹುಲ್ ಗಾಂಧಿಯೇ ಅಧ್ಯಕ್ಷರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಮಯ ಬಂದಾಗಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ ಪಕ್ಷದ ಮುಖಂಡ ರಣದೀಪ್ ಸುರ್ಜೆವಾಲ, “ನನ್ನನ್ನೂ ಸೇರಿದಂತೆ ಕಾಂಗ್ರೆಸ್ ನ 99.9% ನಾಯಕರು ರಾಹುಲ್ ಗಾಂಧಿಯೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕು ಎಂದು ಬಯಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಬೀಳಿಸುವುದಾಗಿದ್ದರೆ ಕುಮಾರಸ್ವಾಮಿಯನ್ನು ಸಿಎಂ ಆಗುವುದಕ್ಕೆ ಬಿಡುತ್ತಿರಲಿಲ್ಲ: ಸಿದ್ದರಾಮಯ್ಯ
“ಪಕ್ಷಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಕಾಂಗ್ರೆಸ್‌ನ ಚುನಾವಣಾ ಸಂಸ್ಥೆ, ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿ ಪಕ್ಷದ ಮುಂದಿನ ಅಧ್ಯಕ್ಷರ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ. ನನ್ನನ್ನೂ ಸೇರಿದಂತೆ 99.9% ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯೇ ರಾಷ್ಟ್ರಾಧ್ಯಕ್ಷರಾಗಲಿ ಎಂದು ಬಯಸುತ್ತಿದ್ದಾರೆ” ಎಂದು ಹೇಳಿದರು.
2017ರಲ್ಲಿ ಸೋನಿಯಾ ಗಾಂಧಿಯವರ ಬಳಿಕ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನದ ಬಳಿಕ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ.
ಇದನ್ನೂ ಓದಿ: ಸೈನಿಕರ ವೇತನ ಲೂಟಿ ಮಾಡಿ ಕೋಟ್ಯಾಂತರ ರೂ.ಗಳನ್ನು ಸಂಗ್ರಹಿಸಿದ PM-CARES?


