ದೆಹಲಿಯ ಸಿಂಘು ಗಡಿಯಲ್ಲಿ “ರೈತರಿಗಾಗಿ ನಾನು ನನ್ನ ಜೀವವನ್ನೇ ತ್ಯಾಗ ಮಾಡುತ್ತಿದ್ದೇನೆ” ಎಂದು ಬರೆದಿಟ್ಟು ಸಿಖ್ ಧರ್ಮಗುರು ಬಾಬಾ ರಾಮ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುಂಚೆ ಅವರು ಬರೆದಿಟ್ಟಿದ್ದ ಪತ್ರವೊಂದು ದೊರಕಿದ್ದು, ಅದರಲ್ಲಿ, “ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿಖ್ ಜನಾಂಗವನ್ನೇ ಮುಗಿಸಲು ಪ್ರಯತ್ನಿಸುತ್ತಿದೆ” ಎಂದು ಬರೆದಿರುವುದು ಈಗ ಬಹಿರಂಗವಾಗಿದೆ.
ಈ ಕುರಿತು ವರದಿ ಮಾಡಿರುವ ದಿ ಪ್ರಿಂಟ್, “ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೇವಲ ರೈತರಿಗೆ ಮಾತ್ರ ಅನ್ಯಾಯ ಮಾಡುತ್ತಿಲ್ಲ. ಸಂಪೂರ್ಣ ಸಿಖ್ ಜನಾಂಗವನ್ನೇ ಮುಗಿಸಲು ಹವಣಿಸುತ್ತಿದೆ. ಇವರಿಂದ ಸಿಖ್ ಸಮುದಾಯವು ಹಲವು ಬಾರಿ ಆಕ್ರಮಣಕ್ಕೊಳಗಾಗಿದೆ ಮತ್ತು ಈಗಲೂ ಅಗುತ್ತಲೆ ಇದೆ. ಕೆಲವು ಸಿಖ್‌ಗಳು ಆರ್‌ಎಸ್‌ಎಸ್‌ನ ಅಂದಾಭಿಮಾನಿಗಳಾಗಿದ್ದಾರೆ. ಆರ್‌ಎಸ್‌ಎಸ್‌ನೊಂದಿಗೆ ಸಿಖ್‌ಗಳು ಸೇರಿಕೊಂಡಿರುವುದು ನಿಜಕ್ಕೂ ನಾಚಿಗೇಡು. ಕೆಲವರು ಅಧಿಕಾರದಾಸೆಯಿಂದ, ಕೆಲವರು ಹಣದಾಸೆಗಾಗಿ ಇನ್ನು ಕೆಲವರು ಬಲಾತ್ಕಾರದಿಂದ ಆರ್‌ಎಸ್‌ಎಸ್ ಮತ್ತು ಬಿಜೆಪಿ ಜೊತೆಗಿದ್ದಾರೆ. ಹಾವಿನಂತೆ ಆರ್‌ಎಸ್‌ಎಸ್ ಸಿಖ್ ಸಮುದಾಯದ ಬಳಿ ಸುಳಿಯುತ್ತಲೇ ಇದೆ” ಎಂದು ಬರೆಯಲಾಗಿದೆ ಎಂಬುದನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: ಸೈನಿಕರ ವೇತನ ಲೂಟಿ ಮಾಡಿ ಕೋಟ್ಯಾಂತರ ರೂ.ಗಳನ್ನು ಸಂಗ್ರಹಿಸಿದ PM-CARES?
ಬಾಬಾ ರಾಮ್ ಸಿಂಗ್ ಒಟ್ಟು 10 ಪುಟಗಳ ಪತ್ರವನ್ನು ಬರೆದಿದ್ದು, ಈ ಪತ್ರದಲ್ಲಿ ಹಲವಾರು ವಿಚಾರಗಳನ್ನು ಉಲ್ಲೇಖಿಸಲಾಗಿದೆ. “ಈ ಪತ್ರದಲ್ಲಿರುವ ಕೈಬರಹವು ಬಾಬಾ ರಾಮ್ ಸಿಂಗ್ ಅವರದ್ದೇ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಈ ಕುರಿತು ಯಾರಿಗಾದರೂ ಸಂಶಯಗಳಿದ್ದರೆ ಯಾವುದೇ ರೀತಿಯ ಪರೀಕ್ಷೆಯನ್ನೂ ನಡೆಸಬಹುದು” ಎಂದು ರಾಮ್ ಸಿಂಗ್ ಅವರ ಅನುಯಾಯಿ ಸಂತ್ ಭೋಲಾ ಹೇಳಿದ್ದಾರೆ.
“ರೈತರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಡುತ್ತಿದ್ದಾರೆ. ಆ ನೋವನ್ನು ನಾನೂ ಅನುಭವಿಸುತ್ತಿದ್ದೇನೆ… ಸರ್ಕಾರವು ಅವರಿಗೆ ನ್ಯಾಯ ಒದಗಿಸದ ಕಾರಣ ನಾನೂ ಅವರ ನೋವನ್ನು ಹಂಚಿಕೊಳ್ಳುತ್ತೇನೆ. ಅನ್ಯಾಯವನ್ನು ಮಾಡುವುದು ಪಾಪ, ಆದರೆ ಅನ್ಯಾಯವನ್ನು ಸಹಿಸುವುದು ಕೂಡಾ ಪಾಪವಾಗಿದೆ. ರೈತರನ್ನು ಬೆಂಬಲಿಸಲು, ಕೆಲವರು ತಮ್ಮ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ನಾನು ನನ್ನ ಪ್ರಾಣವನ್ನು ತ್ಯಾಗ ಮಾಡಲು ನಿರ್ಧರಿಸಿದ್ದೇನೆ” ಎಂದು ಬರೆದಿದ್ದರು.
ಇದನ್ನೂ ಓದಿ: ’ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿಯಾದುದು’: ಮಾಜಿ ಮುಖ್ಯ ನ್ಯಾಯಮೂರ್ತಿ ಎಪಿ ಶಾ
ಈ ಕುರಿತು ಟ್ವೀಟ್ ಮಾಡಿರುವ ಶಿರೋಮಣಿ ಅಕಾಲಿ ದಳದ ಮುಖಂಡ ಸುಖ್‌ಬೀರ್ ಸಿಂಗ್ “ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿನ ರೈತರ ಸಂಕಟವನ್ನು ನೋಡುತ್ತಿದ್ದ ಸಂತ ಬಾಬಾ ರಾಮ್ ಸಿಂಗ್ ಜಿ ನಾನಕ್ಸರ್ ಸಿಂಗ್ರಾ ವಾಲೆ, ಸ್ವತಃ ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಸಂತ ಜಿ ಅವರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಪರಿಸ್ಥಿತಿ ಹದಗೆಡುವ ಮುನ್ನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕೇರಳದಲ್ಲಿ ಮತ್ತೊಮ್ಮೆ LDF ?- ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳ ಸೂಚನೆಯೇನು?