ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಪಕ್ಷಾಂತರದ ಬಿರುಗಾಳಿ ಬೀಸುತ್ತಿದ್ದು, ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಐವರು ಶಾಸಕರು ಸೇರಿದಂತೆ ಒಂಬುತ್ತು ಶಾಸಕರು ನಿನ್ನೆ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ.
ಪ್ರಭಾವಿ ಮುಖಂಡ ಮತ್ತು ಮಾಜಿ ಸಚಿವ ಸುವೇಂದು ಅಧಿಕಾರಿ ಸೇರಿದಂತೆ, 2018ರಲ್ಲಿ ಸಿಪಿಎಂ ತೊರೆದು ಟಿಎಂಸಿ ಸೇರಿದ್ದ ಶಾಸಕಿ ದೀಪಾಲಿ ಬಿಸ್ವಾಸ್ ಮತ್ತು ಸಿಪಿಎಂ, ಸಿಪಿಐ ಹಾಗೂ ಕಾಂಗ್ರೆಸ್‌ನ ತಲಾ ಒಬ್ಬ ಶಾಸಕರು ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಮೇದಿನಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಿದರು. ಬರ್ಧಮಾನ್ ಪೂರ್ವ ಕ್ಷೇತ್ರದ ಟಿಎಂಸಿ ಸಂಸದ ಸುನಿಲ್ ಮಂಡಲ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷಕ್ಕೆ ಅತ್ಯಂತ ದೊಡ್ಡ ಹಿನ್ನಡೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮುಸ್ಲಿಮರು ಯಾರೂ ಗೋಮಾಂಸ ತಿನ್ನಬೇಡಿ: ಸಿ.ಎಂ. ಇಬ್ರಾಹಿಂ
“ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇರಬೇಕು ಎಂದು ನಾನು ಬಯಸುತ್ತೇನೆ. ಇಲ್ಲದೇ ಇದ್ದರೆ ಪಶ್ಚಿಮ ಬಂಗಾಳಕ್ಕೆ ಉಳಿಗಾಲವಿಲ್ಲ. ಇಲ್ಲಿನ ಅರ್ಥ ವ್ಯವಸ್ಥೆ ಮುರಿದುಬಿದ್ದಿದೆ. ಉದ್ಯೋಗ ಇಲ್ಲ, ಎಲ್ಲೆಡೆ ಭ್ರಷ್ಟಾಚಾರ ಇದೆ. ಈ ಎಲ್ಲದರಿಂದ ಹೊರಗೆ ಬರಲು ಇರುವ ಏಕೈಕ ದಾರಿಯೆಂದರೆ ರಾಜ್ಯವನ್ನು ಮೋದಿ ಕೈಗೆ ನೀಡುವುದು” ಎಂದು ಪಕ್ಷಾಂತರಗೊಂಡ ಸುವೇಂದು ಅಧಿಕಾರಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿಯವರಿಗೆ ಸವಾಲು ಹಾಕಿದ ಸುವೇಂದು ಅಧಿಕಾರಿ, ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿನ ವಿಧಾನಸಭೆಯ ಸದಸ್ಯ ಬಲ 294.
ಇದನ್ನೂ ಓದಿ: ಕೃಷಿ ಸಚಿವರು ಬೇಡ; ಮೋದಿ-ಶಾ ಬಂದು ನಮ್ಮ ಜೊತೆ ಮಾತಾಡಲಿ – ಕಿಸಾನ್ ಒಕ್ಕೂಟ


