ಮಹಾಡ್ ಚವದರ್ ಕೆರೆ ಚಳುವಳಿ ದಲಿತ ಚಳುವಳಿಯಲ್ಲಿ ಒಂದು ಮರೆಯಲಾಗದ ಅಧ್ಯಾಯ. ಈ ಕುರಿತು 2016ರಲ್ಲಿ ಇಂಗ್ಲೀಷಿನಲ್ಲಿ ಡಾ. ಆನಂದ್ ತೆಲತುಂಬ್ಡೆ ಅವರು “Mahad : The Making of the First Dalit Revolt” ಎಂಬ ಮಹತ್ವದ ವಿವರವಾದ ವಿಶ್ಲೇಷಣಾತ್ಮಕ ಪುಸ್ತಕ ಬರೆದು ಪ್ರಕಟಿಸಿದರು. ಈ ಪುಸ್ತಕವನ್ನು ಪ್ರಸಿದ್ಧ ಸಂವಹನಕಾರ ಮತ್ತು ಲೇಖಕ ಪ್ರೊ.ಅಬ್ದುಲ್ ರಹಮಾನ್ ಪಾಷಾ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದು ಕ್ರಿಯಾ ಮಾಧ್ಯಮ ಈ ಪುಸ್ತಕವನ್ನು ಎರಡು ಭಾಗಗಳಲ್ಲಿ ಪ್ರಕಟಿಸಿದೆ. ಮಹಾಡ್ – ಮೊದಲ ದಲಿತ ಬಂಡಾಯ ಮತ್ತು ‘ಮಹಾಡ್ ಕೆರೆ ಸತ್ಯಾಗ್ರಹ – ದಲಿತ ಚಳುವಳಿಗಳ ಒರೆಗಲ್ಲು’ ಎಂಬ ಈ ಪುಸ್ತಕಕಗಳ ಕೆಲವು ಆಯ್ದ ಭಾಗಗಳು ಆರ್.ಬಿ.ಮೋರೆ ಸಂಘಟಿಸಿದ ಡಾ. ಅಂಬೇಡ್ಕರ್ ಅವರ ನಾಯಕತ್ವದಲ್ಲಿ ನಡೆದ ಚಾರಿತ್ರಿಕ ಮಹಾಡ್ ಚಳುವಳಿಯ ಸಮಗ್ರ ಪರಿಚಯವನ್ನು ಮಾಡುತ್ತವೆ.
ಲೇಖಕ ಡಾ. ಆನಂದ್ ತೆಲತುಂಬ್ಡೆ ಈ ಪುಸ್ತಕ ಹುಟ್ಟಿದ ಬಗೆ ಕುರಿತು ಹೀಗೆಂದಿದ್ದಾರೆ : “ಈ ಪುಸ್ತಕಕ್ಕೆ ಪ್ರಾಥಮಿಕ ಪ್ರೇರಣೆ ದೊರೆತದ್ದು ಕಾಮ್ರೇಡ್ ಆರ್.ಬಿ.ಮೋರೆಯವರು ಮೊದಲ ಮಹಾಡ್ ಸಮ್ಮೇಳನದ ಕುರಿತು ಬರೆದ ವಿವರಣೆಗಳಿಂದ; ಅವರು, ದಲಿತರು ತಮ್ಮ ನಾಗರಿಕ ಹಕ್ಕುಗಳಿಗಾಗಿ ಮಾಡಿದ ಹೋರಾಟಕ್ಕೆ ನಾಂದಿ ಹಾಡಿದ ಆ ಸಮ್ಮೇಳನದ ಪ್ರಧಾನ ಸಂಘಟಕರಾಗಿದ್ದರು. ಕಾ.ಮೋರೆಯವರು ಮರಾಠಿಯಲ್ಲಿ ಒಂದು ದೀರ್ಘ ಲೇಖನವನ್ನು ಬರೆದಿದ್ದರು, ಅದರಲ್ಲಿ, ಮಹಾಡ್ ಸಮ್ಮೇಳನವನ್ನು ಅವರು ಹೇಗೆ ಪರಿಕಲ್ಪಿಸಿಕೊಂಡರು ಎಂಬುದರ ಕುರಿತು ಸುಮಾರು 35 ವರ್ಷಗಳ ನಂತರ ಸ್ಮರಿಸಿಕೊಂಡಿದ್ದರು. ಇಂಥ ಐತಿಹಾಸಿಕ ದಾಖಲೆ ಹೆಚ್ಚು ಜನರಿಗೆ ತಲುಪಬೇಕು, ಮೊದಲ ದಲಿತ ಹೋರಾಟ ಹೇಗೆ ನಡೆಯಿತು ಎಂಬುದನ್ನು ತಿಳಿಯುವ ಆಸಕ್ತಿಯುಳ್ಳ ಎಲ್ಲರೂ ಇದನ್ನು ಓದುವಂತಾಗಬೇಕು ಎಂಬ ಅರಿವು ಮೂಡಿತು. ಆದ್ದರಿಂದ ಅದನ್ನು ಇಂಗ್ಲಿಷ್‌ನಲ್ಲಿ ಅನುವಾದಿಸಲಾಯಿತು.
ಈ ಲೇಖನದುದ್ದದ ಕಿರುಹೊತ್ತಿಗೆಯನ್ನು ಯಾವ ರೂಪದಲ್ಲಿ ಪ್ರಕಟಿಸಬೇಕು ಎಂದು ಚರ್ಚಿಸುತ್ತಿರುವ ಹೊತ್ತಿನಲ್ಲಿ, ನಾನು ಅದಕ್ಕೆ ಒಂದು ಸಮಗ್ರವಾದ ಪ್ರಸ್ತಾವನೆಯನ್ನು ಬರೆಯಬೇಕು ಎಂದು ತೀರ್ಮಾನವಾಯಿತು. ಈ ಪೀಠಿಕೆಯನ್ನು ಬರೆಯುವ ಪ್ರಕ್ರಿಯೆಯು ಉದ್ದವಾಗಿ ಬೆಳೆದು ನೀವೀಗ ಓದುತ್ತಿರುವ ಪುಸ್ತಕದ ರೂಪವನ್ನು ತಾಳಿತು ಎಂದು ತೇಲ್‌ತುಂಬ್ಡೆ ಹೇಳಿದ್ದಾರೆ.
ಪುಸ್ತಕದಲ್ಲಿರುವ ಆರ್.ಬಿ. ಮೋರೆ ಅವರ ಮೂಲ ಕಥನದ ಕೆಲವು ರೋಮಾಂಚಕ ಭಾಗ ಹೀಗಿದೆ:
ಅಂಬೇಡ್ಕರ್ ಗೆ ಸಾವಿರಾರು ಕೋಲುಗಳ ವಂದನೆ!
19 ಮಾರ್ಚ್ 1927, ಮಧ್ಯಾಹ್ನ 2 ಗಂಟೆಗೆ, ಡಾ.ಭೀಮ್‌ರಾವ್ ಮತ್ತು ಅವರ ಸಹೋದ್ಯೋಗಿಗಳು ವೀರೇಶ್ವರ ಥಿಯೇಟರ್‌ನೊಳಗೆ ಆಗಮಿಸಿದರು. ಸಭಾಂಗಣ ಜನರಿಂದ ಕಿಕ್ಕಿರಿದು ತುಂಬಿತ್ತು; ಹಲವರು ಒಳಗೆ ಜಾಗ ಸಿಗದೇ ಹೊರಗಡೆ ಕುಳಿತಿದ್ದರು. ಸಮ್ಮೇಳನದ ಅಧ್ಯಕ್ಷರಾದ ಡಾ.ಭೀಮ್‌ರಾವ್ ಅವರು ವೇದಿಕೆಯನ್ನು ಹತ್ತಿದಾಗ ಜನ ಚಪ್ಪಾಳೆ ಬಾರಿಸಲಿಲ್ಲ, ಬದಲಿಗೆ ಎದ್ದು ನಿಂತು ತಮ್ಮ ಕೋಲುಗಳನ್ನು ಎತ್ತಿ ಅಭಿನಂದನೆಯನ್ನು ಸಲ್ಲಿಸಿದರು. ಐದು ಸಾವಿರಕ್ಕಿಂತ ಹೆಚ್ಚು ಕೋಲುಗಳು ಒಂದೇ ಸಲಕ್ಕೆ ಮೇಲಕ್ಕೇರಿದ ಇಡೀ ದೃಶ್ಯ ಮೈನವಿರೇಳಿಸುವಂತಿತ್ತು. ಮತ್ತು ಹಬ್ಬದ ವಾತಾವರಣವಿತ್ತು.

ಜನ ಎಂದಿಲ್ಲದಂತೆ ತದೇಕ ಲಕ್ಷ್ಯದಿಂದ ಅವರ ಒಂದೊಂದು ಪದವನ್ನೂ ಆಲಿಸಿದರು. ಅವರಿಗೆ ತಮ್ಮ ಬದುಕಿನ ಬಗ್ಗೆ ಹೊಸ ಬೆಳಕು ಕಂಡಿತ್ತು. ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ಹಾಗೆ ಅವರ ಮನಸ್ಸಿನ ಆಳದಲ್ಲಿ ತಮ್ಮ ಮೇಲೆ ಅನ್ಯಾಯವನ್ನು ಎಸಗುತ್ತಿರುವವರ ವಿರುದ್ಧ ಅಸಹನೆ ಕಲಕಿತ್ತು; ಬಾಬಾಸಾಹೇಬ್‌ರ ಬೋಧನೆಯ ಪ್ರಕಾರ ಹೋರಾಡುವ ಕೆಚ್ಚು ಗಟ್ಟಿಯಾಗತೊಡಗಿತ್ತು. ಸಮ್ಮೇಳನದ ಕಾರ್ಯಕಲಾಪಗಳು ರಾತ್ರಿಯ ವರೆಗೂ ಮುಂದುವರೆದವು. ಮೊದಲ ದಿನದ ಕಾರ್ಯಕಲಾಪಗಳು ಮುಕ್ತಾಯವಾದವು.
ನಾವೊಮ್ಮೆ ಸಾವಿನ ದವಡೆಯಲ್ಲಿದ್ದೆವು
ಅಂದು ಸವರ್ಣೀಯ ಹಿಂದೂ ಗೂಂಡಾಗಳು ಮತ್ತು ದಲಿತರ ನಡುವೆ ಹಲವು ಗಂಟೆಗಳ ಕಾಲ ಮಹಾಡ್ ನಲ್ಲಿ ಯುದ್ಧವೇ ನಡೆಯಿತು ಎನ್ನುವ ಮೋರೆ ಅವರು ಅದರ ಮುಕ್ತಾಯವನ್ನು ಈ ರೀತಿ ವಿವರಿಸುತ್ತಾರೆ:
ಸರಕಾರಿ ಅಧಿಕಾರಿಗಳು ಅವರ ಈ ಗದ್ದಲವನ್ನು ನಿಲ್ಲಿಸಲು ಅವರ ನಾಯಕರುಗಳಿಗೆ ಸೂಚಿಸಿದರು. ಡಾ.ಅಂಬೇಡ್ಕರ್ ಮತ್ತು ಅವರೊಂದಿಗೆ ಹೋಗಿದ್ದವರು ರಸ್ತೆಯ ಮೇಲೆ ಬಹಳ ವಿಚಿತ್ರವಾದ ಸನ್ನಿವೇಶದಲ್ಲಿ ನಿಂತಿದ್ದರು. ದೇವಸ್ಥಾನದ ಆವರಣದಲ್ಲಿ ಸೇರಿದ್ದ ಸೃಶ್ಯರ ನಾಯಕರು ಒಂದು ಕಡೆ. 40-50 ಅಡಿ ದೂರದಲ್ಲಿ ರಸ್ತೆಯ ಮೇಲೆ ನಿಂತಿದ್ದ ಅಸ್ಪೃಶ್ಯರು ಇನ್ನೊಂದು ಕಡೆ. ಇವರಿಬ್ಬರ ನಡುವೆ ಹಾಗೆಯೇ ಸಂಧಾನ ನಡೆಯಬೇಕಾಗಿತ್ತು. ನಡೆದ ಚರ್ಚೆ ಪ್ರಶ್ನೋತ್ತರ ರೂಪದಲ್ಲಿತ್ತು, ಹೀಗೆ:
ದಿನ್‌ಗಾಂಕರ್: ನೀವು ಚವದಾರ್ ಕೆರೆಗೆ ಹೋಗಿ ಅದನ್ನು ಅಪವಿತ್ರಗೊಳಿಸಿದ್ದು ಹೌದೇ?
ಅಂಬೇಡ್ಕರ್: ಕೆರೆ ಒಂದು ಸಾರ್ವಜನಿಕ ಸ್ವತ್ತು, ಆದ್ದರಿಂದ ಅದರ ನೀರನ್ನು ಬಳಸುವ ಹಕ್ಕು ನಮಗೂ ಇದೆ. ನಾವು ನಮ್ಮ ಹಕ್ಕನ್ನು ಚಲಾಯಿಸಿದ್ದು ನಿಜ.
ದಿನ್‌ಗಾಂಕರ್: ನೀವು ವಿಶ್ವೇಶ್ವರ ದೇವಸ್ಥಾನವನ್ನು ಪ್ರವೇಶಿಸಬೇಕೆನ್ನುತ್ತೀರಿ ಎನ್ನುವುದು ನಿಜವೇ?
ಅಂಬೇಡ್ಕರ್: ಇಲ್ಲ. ನಾವು ದೇವಸ್ಥಾನವನ್ನು ಪ್ರವೇಶಿಸುವ ನಿರ್ಧಾರವನ್ನು ತೆಗೆದುಕೊಂಡಿಲ್ಲ; ಅದರ ಅಗತ್ಯವೂ ನಮಗಿಲ್ಲ.
ಈ ಸಂಕ್ಷಿಪ್ತ ಸಂಭಾಷಣೆಯ ನಂತರ ಮಾತುಕತೆ ಮುಕ್ತಾಯವಾಯಿತು, ನಾವು ಡಾಕ್ ಬಂಗಲೆಗೆ ಹಿಂದಿರುಗಿದೆವು. ಈ ಮಾತುಕತೆ ನಡೆದದ್ದು ರಸ್ತೆಯ ಮೇಲೆ, ಸಾವಿರಾರು ಜನರ ನಡುವೆ. ಅಸ್ಪೃಶ್ಯರ ಹೋರಾಟದ ಇತಿಹಾಸದಲ್ಲಿ ಚಿನ್ನದ ಅಕ್ಷರಗಳಲ್ಲಿ ಬರೆದಿಡಬೇಕಾದ ಘಟನೆ ಇದಾಗಿತ್ತು. ಮಾತುಕತೆ ನಡೆದಿರುವಾಗಲೇ ವಿರುದ್ಧ ದಿಕ್ಕಿನಿಂದ ಹಾರಿ ಬಂದ ಕಲ್ಲುಗಳಿಗೆ ಗುರಿಯಾಗಿ ನಮ್ಮ ಕಡೆ ಇದ್ದವರಲ್ಲಿ ಇಬ್ಬರು ಗಾಯಗೊಂಡರು. ಈ ಘಟನೆಯನ್ನು ಬಾಬಾಸಾಹೇಬ್ ಬಹಿಷ್ಕೃತ್ ಭಾರತ್‌ನಲ್ಲಿ ನಾವೊಮ್ಮೆ ಸಾವಿನ ದವಡೆಯಲ್ಲಿದ್ದೆವು ಎಂದು ವರ್ಣಿಸಿದ್ದಾರೆ.

ತೆಲತುಂಬ್ಡೆ ಅವರು ಮಹಾಡ್‌ನ ಸಾಧನೆಗಳನ್ನು ಈ ರೀತಿ ನಿರೂಪಿಸುತ್ತಾರೆ.
ಮಹಾಡ್ ಹೋರಾಟದ ಅಂತರ್ನಿಹಿತ ಕಾರ್ಯತಂತ್ರದ ಉದ್ದೇಶವು ಅಸ್ಪೃಶ್ಯತೆಯ ಅನ್ಯಾಯದ ಪದ್ಧತಿಗಳ ಕುರಿತು ಹಿಂದೂಗಳನ್ನು ಸಂವೇದನಾಶೀಲರನ್ನಾಗಿ ಮಾಡುವುದು ಮತ್ತು ಅವರಲ್ಲಿನ ಮುಂದುವರಿದ ಜನವಿಭಾಗಗಳನ್ನು ಸಮಾಜದ ಒಳಗೆಯೇ ಕೆಲವು ಸುಧಾರಣೆಗಳನ್ನು ತರಲು ಒತ್ತಾಯಿಸುವುದಾಗಿತ್ತು. ಅಸ್ಪೃಶ್ಯರನ್ನು ತಮ್ಮ ಹಕ್ಕುಗಳ ಪರವಾಗಿ ಕ್ರಿಯಾಶೀಲರಾಗುವಂತೆ ಉದ್ದೀಪಿಸಿ ಹೋರಾಟಕ್ಕೆ ಅವರನ್ನು ಪ್ರೇರೇಪಿಸುವುದೂ ಅದರ ಉದ್ದೇಶವಾಗಿತ್ತು. ಸರಕಾರವು, ಕೆರೆ ಬಾವಿಗಳು, ರಸ್ತೆಗಳು, ದೇವಸ್ಥಾನಗಳು ಇತ್ಯಾದಿ ಸಾರ್ವಜನಿಕ ಸ್ಥಳಗಳನ್ನು ಬಳಸುವ ಕುರಿತು ಅವರಿಗೆ ನಾಗರಿಕ ಹಕ್ಕುಗಳನ್ನು ನೀಡಿತ್ತು. ನಾಗರಿಕ ಸಮಾಜದ ಬಹುಸಂಖ್ಯಾತ ಭಾಗ ಒಪ್ಪಿಕೊಳ್ಳದಿದ್ದರೆ ಈ ನಾಗರಿಕ ಹಕ್ಕುಗಳು ನಿಷ್ಪ್ರಯೋಜಕ. ಮಹಾಡ್ ಹೋರಾಟ ಉದ್ದೇಶ ನಾಗರಿಕ ಸಮಾಜ ಈ ಹಕ್ಕುಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದೇ ಆಗಿತ್ತು.
ಡಾ.ಅಂಬೇಡ್ಕರ್ ಅವರೇ ನಂತರ ಹೇಳಿದ ಹಾಗೆ, ಮಹಾಡ್‌ನಲ್ಲಿಯ ಕೆರೆ, ನಾಸಿಕ್‌ನಲ್ಲಿಯ ಕಾಲಾರಾಮ್ ದೇವಸ್ಥಾನ ಮತ್ತು ಮಲಬಾರಿನ ಗುರುವಾಯೂರು ದೇವಸ್ಥಾನದ ಕುರಿತು ನೇರ ಕಾರ್ಯಾಚರಣೆಯು ಕೆಲವೇ ದಿನಗಳಲ್ಲಿ, ಸಮಾಜ ಸುಧಾರಕರು ಹತ್ತು ಲಕ್ಷ ದಿನಗಳ ಕಾಲ ಮಾಡಿದ ಉಪದೇಶದಿಂದ ಆಗದಷ್ಟು, ಸಾಧನೆಯನ್ನು ಮಾಡಿದವು. ಆದ್ದರಿಂದ ನಾನು ದಮನಿತ ವರ್ಗಗಳಿಗೆ ನಾಗರಿಕ ಹಕ್ಕುಗಳನ್ನು ಪಡೆಯುವುದಕ್ಕಾಗಿ ನೇರ ಕಾರ್ಯಾಚರಣೆಯ ಪ್ರಚಾರಾಂದೋಲನವನ್ನು ಅಸ್ಪೃಶ್ಯತಾ-ವಿರೋಧಿ ಲೀಗ್ ನ ಅಂಗೀಕಾರಕ್ಕಾಗಿ ಶಿಫಾರಸ್ಸು ಮಾಡುತ್ತೇನೆ. 24 ಮಹಾಡ್ ತಮ್ಮ ನಾಗರಿಕ ಹಕ್ಕುಗಳಿಗಾಗಿ ದಲಿತರನ್ನು ನಿಜವಾಗಿಯೂ ಜಾಗೃತಿಗೊಳಿಸಿತ್ತು ಮತ್ತು ಆ ಹಕ್ಕುಗಳ ಚಲಾವಣೆಗಾಗಿ ಹೋರಾಡುವುದಕ್ಕಾಗಿ ಪ್ರೇರಣೆ ನೀಡಿತ್ತು. ಅದರ ಉಪಪರಿಣಾಮವಾಗಿ, ದಲಿತರು ಎತ್ತಿದ ಪ್ರಶ್ನೆಗಳಿಗೆ ಪರಿಹಾರವನ್ನು ಕಂಡುಕೊಳ್ಳದೇ ಇದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಸಂಭವನೀಯ ಭಯವನ್ನೂ ಹೆಚ್ಚು ವಿಸ್ತೃತ ಹಿಂದೂ ಸಮಾಜದಲ್ಲಿ ಮೂಡಿಸಿತ್ತು. ಆದರೂ, ಅವರು ಸುಧಾರಣೆಗಾಗಿ ಮುಂದೆ ಬರುತ್ತಾರೆ ಎನ್ನುವ ಆಶಯ ಮಾತ್ರ ಈಡೇರಿಲಿಲ್ಲ.
ಎರಡನೆಯ ಸಮ್ಮೇಳನದ ನಂತರ ಅವುಗಳ ಪ್ರಭಾವ ದಲಿತರ ಮೇಲೆ ಎದ್ದುಕಾಣುತ್ತಿತ್ತು. ಉದಾಹರಣೆಗೆ, ಡಾ.ಅಂಬೇಡ್ಕರ್ ಅವರನ್ನು ಕಾಣಲು ಬರುತ್ತಿದ್ದ ಮಹಿಳೆಯರು ಅವರ ಸಲಹೆಯನ್ನು ಅನುಸರಿಸಿ ಒಂದೇ ದಿನದಲ್ಲಿ ಬದಲಾಗಿದ್ದರು. ಸಮಾಜದಲ್ಲಿನ ತಮ್ಮ ಸ್ಥಾನವು ತಮ್ಮ ವಿಧಿಯೆಂದು ಭಾವನೆಯನ್ನು ಮನಸ್ಸಿನಲ್ಲಿ ಬೇರೂರಿಸಿಕೊಂಡಿರುವ ಅಸ್ಪೃಶ್ಯರ ಜಡತ್ವವನ್ನು ಗಮನದಲ್ಲಿರಿಸಿಕೊಂಡು ನೋಡುವುದಾದರೆ ಈ ಬದಲಾವಣೆಯನ್ನು ಗೌಣವಾಗಿ ಕಾಣುವಂತಿಲ್ಲ. ಕೊಂಕಣ್ ಪ್ರದೇಶದ ಹಲವು ಗ್ರಾಮಗಳಲ್ಲಿ ಮಹಾರ್‌ರು ಅನ್ನಕ್ಕಾಗಿ ಭಿಕ್ಷೆ ಬೇಡುವುದನ್ನು ನಿಲ್ಲಿಸಿದ್ದರು, ಸತ್ತ ಪ್ರಾಣಿಗಳನ್ನು ಎಳೆದೊಯ್ಯುವುದು ಮತ್ತು ಅವುಗಳ ಚರ್ಮವನ್ನು ಸುಲಿಯುವುದನ್ನು ನಿಲ್ಲಿಸಿದ್ದರು, ಸಾಂಪ್ರದಾಯಿಕ ವೇತ್‌ಬೇಗಾರಿಯನ್ನು(ಅಂದರೆ ಗ್ರಾಮದವರು ನಿಗದಿಪಡಿಸಿದ, ಸಂಭಾವನೆಯಿಲ್ಲದೆ ಮಾಡುವ ತಮ್ಮ ಕೆಲಸಗಳನ್ನು) ನಿರಾಕರಿಸಿದ್ದರು, (ನಿಮ್ನ ಜಾತಿಯ ಕೆಲಸಗಾರ, ಎಂದರೆ) ಮಾಹಾರ್‌ಕಿ ಎಂಬುದನ್ನು ಬಿಟ್ಟಿದ್ದರು; ಇವೆಲ್ಲವುಗಳ ಮೂಲಕ ತಮ್ಮ ಮಹತ್ವದ ಬಗ್ಗೆ ಸವರ್ಣೀಯರ ಕಣ್ತೆರಿಸಿದ್ದರು. ಇದೆಲ್ಲಾ ಮಾಡುವಾಗ ಹಲವು ಸ್ಥಳಗಳಲ್ಲಿ ಬಹಿಷ್ಕಾರ ಮತ್ತು ದೈಹಿಕ ಹಲ್ಲೆಗಳ ರೂಪದಲ್ಲಿ ದುಷ್ಪ್ರರಿಣಾಮಗಳನ್ನೂ ಎದುರಿಸಿದರು, ಮತ್ತು ಅವುಗಳನ್ನೆಲ್ಲಾ ಅವರು ದೃಢ ಮನಸ್ಸಿನಿಂದ ಸಹಿಸಿಕೊಂಡರು ಎನ್ನುವ ಮಾತೂ ನಿಜ.
ಪುಸ್ತಕ: ‘ಮಹಾಡ್ – ಮೊದಲ ದಲಿತ ಬಂಡಾಯ’
ಬೆಲೆ: 200 ರೂ.
ಪುಸ್ತಕ: ‘ಮಹಾಡ್ ಕೆರೆ ಸತ್ಯಾಗ್ರಹ – ದಲಿತ ಚಳುವಳಿಗಳ ಒರೆಗಲ್ಲು’
ಬೆಲೆ: 180 ರೂ.
ಮೂಲ: ಡಾ.ಆನಂದ್ ತೇಲ್‌ತುಂಬ್ಡೆ
ಕನ್ನಡಕ್ಕೆ: ಪ್ರೊ. ಅಬ್ದುಲ್ ರೆಹಮಾನ್ ಪಾಷಾ
ಪ್ರಕಾಶನ: ಕ್ರಿಯಾ ಪ್ರಕಾಶನ.
ಪುಸ್ತಕ ಬೇಕಿದ್ದವರು ಕ್ರಿಯಾ ಮಾಧ್ಯಮದ ನಿರ್ದೇಶಕರಾದ ವಸಂತರಾಜ ಎನ್.ಕೆ 9845172249 ಇವರನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: ಕಸ್ತೂರ್‌ಬಾ vs ಗಾಂಧಿ ಪುಸ್ತಕದ ಆಯ್ದ ಅಧ್ಯಾಯ: ಕಷ್ಟವಾದರೂ ಇಷ್ಟಪಟ್ಟು ಬದುಕಿದ ಕಸ್ತೂರ್‌ಬಾ ಗಾಂಧಿ ನಾನೇ


