ಚಿತೆ ಉರಿಯುತ್ತಿತ್ತು!
ಚಿತ್ತವೇ ಚಿತೆಯಾದಂತೆ;
ಬದುಕು ಬೆಂಕಿಯಾದಂತೆ;
ಅನುಭವಗಳೆಲ್ಲ ಸುಟ್ಟು ಚಟ್ಟವಾದಂತೆ;
ಉರಿದುರಿದು ಬೂದಿಯಾದಂತೆ;
ಬೂದಿಯಲ್ಲಿ ನೆನಪು ಪುಡಿಯಾದಂತೆ;
ಪುಡಿಯೆಲ್ಲ ಇಡಿಯಾಗಿ ಕಾಡಿಸಿದಂತೆ!
ಕಾಡಲ್ಲಿ ಅಗೋಚರ ಅಲೆದಂತೆ!

ಎಂಥ ವಿಸ್ಮಯ! ಕಟ್ಟಿದ ಬದುಕು ಚಟ್ಟವೇರಿ, ಬೆಂಕಿಯಲ್ಲಿ ಬೂದಿಯಾಗಿ, ಉರಿಯ ಉಯ್ಯಾಲೆಯಲ್ಲಿ ಆಕಾರ ನಿರಾಕಾರದತ್ತ ಸಾಗಿದ ಸಾವಿನ ಸಂಕಟ! ಗಾಂಧಿ ನೋಡುತ್ತ ನಿಂತಿದ್ದರು. ಬಾಲ್ಯದಿಂದಲೂ ಒಟ್ಟಿಗೆ ಬೆಳೆಯುತ್ತ, ಸಂಸಾರಿಗಳಾಗುತ್ತ, ಸಂಚಾರಿಗಳಾಗುತ್ತ, ಸಮಸ್ಯೆ, ಸವಾಲು, ಸಂಘರ್ಷಗಳ ಸುಳಿಯಲ್ಲಿ ಸಿಲುಕಿಯೂ ಸೋಲದ ದೋಣಿ ಪಯಣದ ಸಂಗಾತಿ ಕಸ್ತೂರ್‌ಬಾ ಇನ್ನಿಲ್ಲ! ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗಾಂಧಿಯವರ ಜೊತೆಗಿದ್ದ ಜನ ಹೊರಟುನಿಂತರು. ‘ಬನ್ನಿ ಬಾಪು’ ಎಂದರು. ಬಾಪು ಹೊರಡಲಿಲ್ಲ. ಒತ್ತಾಯಿಸಿದರು: ‘ಎಲ್ಲ ಮುಗಿಯಿತಲ್ಲ ಬಾಪು, ಬನ್ನಿ’

‘ಮುಗಿದಿಲ್ಲ. ಆರಂಭವಾಗಿದೆ’ – ಎಂದರು ಗಾಂಧಿ!

ಕೇಳಿದವರಿಗೆ ಅಚ್ಚರಿ!
ಗಾಂಧಿಯೇ ಹೀಗೆ! ಇತರರು ಆರಂಭ ಎಂದದ್ದನ್ನು ಅಂತ್ಯ ಎನ್ನುವ, ಅಂತ್ಯ ಎಂದದ್ದನ್ನು ಆರಂಭ ಎನ್ನುವ ವಿಶಿಷ್ಟ ವ್ಯಕ್ತಿತ್ವ. ಸಲ್ಲದ ವಿಷಯಗಳ ಆರಂಭಕ್ಕೆ, ಉತ್ತಮ ವಿಷಯಗಳ ಅಂತ್ಯಕ್ಕೆ ಅವಕಾಶ ಕೊಡದ ಸಂಕಲ್ಪಿಗ! ಕರೆದವರಿಗೆ ‘ನೀವು ಹೋಗಿ’ ಎಂದರು. ಅವರ್‍ಯಾರೂ ಹೆಚ್ಚುಕಾಲ ಅಲ್ಲಿ ಇರುವಂತಿರಲಿಲ್ಲ;

ಯಾಕೆಂದರೆ ಅದು ಪುಣೆಯ ಆಗಾಖಾನ್ ಅರಮನೆ! ಬಂಗಲೆಯನ್ನೇ ಅರಮನೆಯೆಂದು ಕರೆಯಲಾಗುತ್ತಿತ್ತು. ಈಗ ಅರಮನೆಯೇ ಜೈಲಾಗಿತ್ತು. ಹೌದು. ಹಿಂದೆ ಅರಮನೆಯಲ್ಲಿದ್ದ ರಾಣಿಯರಾದಿಯಾಗಿ ಅನೇಕರಿಗೆ ಅದು ಒಂದು ರೀತಿಯ ವೈಭವೋಪೇತ ಜೈಲು; ಹೊರಗೆ ಹೋಗದೆ ಒಳಗಿದ್ದೇ ಶ್ರೀಮಂತಿಕೆಯ ವೈಭವವನ್ನೇ ಉಸಿರಾಗಿಸಿಕೊಂಡು ಭ್ರಮೆಯಲ್ಲಿ ಬದುಕಬೇಕಾದ ಜೈಲುಗಳಲ್ಲವೆ ಅನೇಕ ಅರಮನೆಗಳು! ಜನ ಸಂಪರ್ಕವಿಲ್ಲದ ಜೈಲುಗಳು! ರಾಜರಿಗೆ ಮಾತ್ರ ಒಳಗೆ, ಹೊರಗೆ ಉಸಿರು; ರಾಣಿಯರಿಗೆ ಒಳಗಷ್ಟೇ ಆವರಿಸಿದ ಉಸಿರು! ಹೊರಗೆ ಅನುಭವಿಸದ ಹಸಿರು!

ಈಗ ಹಳೆಯ ಅರಮನೆಗಳ ವಿಷಯ ಹಾಗಿರಲಿ. ಆಗಾಖಾನ್ ಅರಮನೆಯು ಜೈಲಾದದ್ದಂತೂ ನಿಜ. ಬ್ರಿಟಿಷರ ವಿರುದ್ಧ ‘ಮಾಡು ಇಲ್ಲವೆ ಮಡಿ’ ಎಂದು ಕರೆಕೊಟ್ಟ ಗಾಂಧಿ, ಅಸಹಕಾರ ಚಳವಳಿ ಆರಂಭಿಸಿ, ಬಂಧಿತರಾದಾಗ ಅವರನ್ನು ಆಗಾಖಾನ್ ಅರಮನೆಯಲ್ಲಿಟ್ಟು, ಅದನ್ನು ಗೃಹಬಂಧನದ ಜೈಲಾಗಿ ಪರಿವರ್ತಿಸಿತ್ತು ಬ್ರಿಟಿಷ್ ಸರ್ಕಾರ. ಗಾಂಧಿಯವರ ಗೈರುಹಾಜರಿಯಲ್ಲಿ ಚಳವಳಿಯಲ್ಲಿ ಸಕ್ರಿಯರಾದ ಗಾಂಧಿ ಪತ್ನಿ ಕಸ್ತೂರ್‌ಬಾ ಅವರನ್ನೂ ಬಂಧಿಸಿ, ಮೊದಲು ಅರ್ತೂರು ರಸ್ತೆಯ ಸಣ್ಣದಾದ ಸಾಮಾನ್ಯ ಜೈಲಲ್ಲಿಟ್ಟು, ಆನಂತರ ಆಗಾಖಾನ್ ‘ಜೈಲ್’ಗೆ ಸ್ಥಳಾಂತರಿಸಲಾಗಿತ್ತು.

ಈ ‘ಜೈಲಿನಲ್ಲಿ’ 1944ರ ಫೆಬ್ರವರಿ 22 ರಂದು ಕಸ್ತೂರ್‌ಬಾ ನಿಧನರಾದರು. ಅದೇ ಕಟ್ಟಡದ ಆವರಣದಲ್ಲಿ ಫೆಬ್ರವರಿ 23ರಂದು ಅಂತ್ಯಕ್ರಿಯೆ ನಡೆಯುತ್ತಿದೆ. ಅಂತ್ಯಕ್ರಿಯೆಗೆ ಬಂದವರು ಹೆಚ್ಚುಕಾಲ ಆವರಣದಲ್ಲಿ ಇರುವಂತಿಲ್ಲ. ಅವರೆಲ್ಲ ಹೋಗಲೇಬೇಕಿತ್ತು. ಆದರೆ ಗಾಂಧಿಯವರನ್ನು ಬಿಟ್ಟುಹೋಗಲು ಅವರಾರಿಗೂ ಮನಸ್ಸಿಲ್ಲ. ಹಾಗೆಂದು ಅವರು ಅಲ್ಲೇ ಇರುವಂತಿಲ್ಲ. ಗಾಂಧಿ ಮಾತ್ರ ಹೊರಹೋಗುವಂತಿಲ್ಲ. ‘ಬಾಳಬಂಧನ’ದಿಂದ ಬಿಡುಗಡೆ ಹೊಂದಿದ ಕಸ್ತೂರ್ ಬಾ ಅವರ ಬೂದಿಯನ್ನು ಅಲ್ಲೇ ಬಿಟ್ಟು ಬಂಗಲೆಯೊಳಗೆ ಹೋಗಿ ಬಂಧಿಯಾಗಲೇಬೇಕಿತ್ತು. ಆಗಾಖಾನ್ ಬಂಗಲೆ ಮತ್ತೆ ಜೈಲು ಅನ್ನಿಸಿಕೊಳ್ಳಲೇಬೇಕಿತ್ತು.

ಗಾಂಧಿ ನಿಂತೇ ಇದ್ದರು. ಕಣ್ಣಲ್ಲಿ ನೀರು;
ಮನುಷ್ಯಮಾತ್ರನಾದ ಮಹಾತ್ಮ!
ಎದುರಿಗೆ ಬೆಂಕಿ ಉರಿದುರಿದು ಬೂದಿಯಾಯಿತು;
ಬೂದಿಯೇ ಎದೆಹೊಕ್ಕು ಬಯಲಾಯಿತು.
ಕಣ್ಣಲ್ಲಿ ಕುಟುಂಬ ತುಂಬಿ ಹನಿಯಾಯಿತು.

ಗಾಂಧಿ, ತನ್ನ ಜೊತೆಯಲ್ಲಿ ಇದ್ದವರಿಗೆ ಮರಳುವಂತೆ ಸನ್ನೆ ಮಾಡಿದರು. ಹೋಗಲಾರದೆ ಹೋದ ಅವರ ಕಡೆ ಗಾಂಧಿ ನೋಡಲಿಲ್ಲ. ತನಗೆ ಎದುರಾಗುತ್ತಲೇ ಒಳಗೊಳ್ಳುತ್ತಿದ್ದ ಮುಖಾಮುಖಿಯ ಶಕ್ತಿಸ್ವರೂಪಿ ಸುಟ್ಟು ಮೌನವಾದದ್ದನ್ನು ಅವರಿಗೆ ತಡೆದುಕೊಳ್ಳಲು ಆಗಲಿಲ್ಲ. ವೇದನೆಯೇ ಸಂವೇದನೆಯಾದ ಮನದುರಿಯಲ್ಲಿ ಮತ್ತು ಮೌನಯಾತನೆಯಲ್ಲಿ ನಿಜದ ನೆನಪುಗಳ ನವಿಲುಗರಿಗಳು ಸುಟ್ಟಿದ್ದವು!

ಕಸ್ತೂರ್‌ಬಾ vs ಗಾಂಧಿ
ಕಾದಂಬರಿ
ಪ್ರಕಾಶನ: ಅಭಿರುಚಿ, ಮೈಸೂರು
ಬೆಲೆ: 160/

ಆತ್ಮವಿಮರ್ಶೆಗೆ ಹಚ್ಚುತ್ತಿದ್ದ ನಂದಾದೀಪ ನಂದಿಹೋಗಿತ್ತು. ಒಳಬೆಳಕು ಬಂಧಿಯಾಗಿತ್ತು. ಜನರ ನಡುವೆ ನಾಯಕರಾಗಿದ್ದ ಗಾಂಧಿಯವರ ಹೊರ ಆಕಾರ ಕುಸಿದಂತಾಗಿ, ಒಳಗು ಒಂಟಿಯಾಗಿ, ಬೆಳಗಿಲ್ಲದ ಭಾವ ಕಾಡತೊಡಗಿತ್ತು. ನಿಧಾನವಾಗಿ ಹೆಜ್ಜೆಹಾಕಿದರು. ಬಂಗಲೆಯ ಒಳಗೆ ಹೋಗಿ ಬಂಧಿಯಾಗಲೇ ಬೇಕಿತ್ತು. ಆದರೆ ಮನಸ್ಸನ್ನು ಬಂಧಿಸಲು ಯಾರಿಗೂ ಸಾಧ್ಯವಿಲ್ಲವಲ್ಲ!

ಗಾಂಧಿ ತನ್ನ ತುಂಬಿದ ಕಣ್ಣನ್ನು ಮುಚ್ಚಿ ದುಃಖವನ್ನು ತಡೆದುಕೊಳ್ಳಲು ಪ್ರಯತ್ನಿಸಿದರು. ಮುಚ್ಚ್ಚಿದ ಕಣ್ಣಲ್ಲಿ ಮನಸ್ಸು ತೆರೆದುಕೊಂಡಿತು; ಯಾರಿಗೂ ಗೋಚರಿಸದ ಗಾಳಿಯಲ್ಲಿ ಗಾಳಿಯಾಗಿ ಸಬರಮತಿ ಆಶ್ರಮದತ್ತ ಸಾಗಿತು. 1915ರ ಜನವರಿಯಲ್ಲಿ ಭಾರತಕ್ಕೆ ಬಂದು, ಒಂದು ವರ್ಷ ಕಾಲ ದೇಶ ಸುತ್ತಾಡಿ, ಮೊದಲಿಗೆ ಕಟ್ಟಿದ ಈ ಆಶ್ರಮದಲ್ಲೇ ಎಲ್ಲ ಕಾಣಲು ಬಂದ ಗಾಂಧಿ ಮನ, ಮೈವೆತ್ತು ಕೂತಿತು.

ಕತ್ತಲು!
ಬೆಳಕಿನ ಬತ್ತಿ ಕರಕಲಾದ ಕತ್ತಲು;
ಕತ್ತಲಲ್ಲಿ ಬೆತ್ತಲಾಗಿ ನಿಂತ ಸಬರಮತಿ ಆಶ್ರಮ.
ಎಲ್ಲಾ ಖಾಲಿ ಖಾಲಿ; ಇಲ್ಲಿ ವಾಸವಿದ್ದು, ಅನಿವಾರ್ಯವಾಗಿ
ಬಿಟ್ಟು ವಾರ್ಧಾಕ್ಕೆ ಹೋದ ಮೇಲೆ ಮತ್ತೆ ಈಗ ಬರುವಂತೆ ಮಾಡಿದ
‘ಮನಸ್ಸು’ ಒಮ್ಮೆ ದಿಟ್ಟಿಸಿತು:
ಜಗಲಿಯಲ್ಲೊಂದು ಚರಕ
ಬದುಕು ನೇಯುವ ರೂಪಕ
ಕೂತಲ್ಲೇ ಕೂತ ಭೂತಕಾಲ
ಹೆಣೆದುಕೊಂಡ ಜೇಡರ ಜಾಲ!

ಗಾಂಧಿ ಕೂತರು; ಕತ್ತಲಲ್ಲೂ ಚರಕ ಬೆಳಕಿನಂತೆ ಕಂಡಿತು. ಆದರದು ಈಗ ಚಲನೆಯಿಲ್ಲದ ಚರಕ. ಹಾಗಾದರೆ ಬೆಳಕಿಗೆ ಚಲನೆಯಿಲ್ಲವೆ? ಇದೆ. ಆದರೆ ಗಾಂಧಿ, ಬೆಳಕನ್ನೂ ಹಿಡಿದು ಉಂಡೆ ಮಾಡಿ ಒಳಗಿಟ್ಟುಕೊಂಡರು; ಬೆಳಕಿನುಂಡೆಯನ್ನು ಬಿಡುಗಡೆ ಮಾಡುತ್ತ ಮೈತುಂಬಿಕೊಂಡರು. ಆದರೆ ಹೊರಗೆ ಕತ್ತಲು ಕೆನೆಯುತ್ತಲೇ ಇತ್ತು. ಒಳಗೆ ಬೆಳಕು ಬೆಳೆಯುತ್ತಲೇ ಇತ್ತು. ಕತ್ತಲಕುದುರೆ, ಬೆಳಕಿನ ಬೆಳ್ಳಕ್ಕಿ ಒಂದೆಡೆ ಸೇರಿದವು. ಕುದುರೆ ಮೇಲೆ ಕೂತ ಬೆಳ್ಳಕ್ಕಿ ದೂರಕ್ಕೆ ನೋಟ ಬೀರಿತು.

ತೊಟ್ಟಿಕ್ಕುವ ಹನಿಗೆ ಕಟ್ಟೆ ಕಟ್ಟದೆ ಕೂತಿದ್ದರು ಗಾಂಧಿ.
ಏನೆಲ್ಲವನ್ನ, ಯಾರೆಲ್ಲರನ್ನ, ಕಟ್ಟಿಹಾಕದ ಈ ‘ಮಹಾತ್ಮ’ನೆಂಬ
ಮನುಷ್ಯನ ಮನಸ್ಸು ಮಗುವಾಗಿತ್ತು. ಕುದುರೆಮೇಲೆ
ಕೂತ ಬೆಳ್ಳಕ್ಕಿಯ ಬೆಳಕು ತೊರೆಯಾಗಿತ್ತು!
ಮೌನ; ಒಂಟಿತನ; ಸಂಕಟಯಾನ:

‘ಬಾಪು’ ಎಂದು ಕರೆದಂತಾಯಿತು! ಇದೇನು ಭ್ರಮೆಯೊ ವಾಸ್ತವವೊ ಗೊತ್ತಾಗದೆ ಹಾಗೇ ಕೂತಿದ್ದರು ಗಾಂಧಿ. ಮತ್ತೆ ‘ಬಾಪು’ ಎಂಬ ಕರೆ, ಅದೇ.. ಅದೇ… ದನಿ; ಆಕೆಯದೇ ಕಂಠ! ಕಣ್ತೆರೆದರು:

ಚರಕ ಚಲಿಸುತ್ತಿತ್ತು.
ಹಿಮ್ಮುಖವೊ ಮುಮ್ಮುಖವೋ ತಿಳಿಯಲಿಲ್ಲ.
‘ಬಾಪು, ಇಲ್ನೋಡಿ; ಸರ್‍ಯಾಗ್ ನೋಡಿ, ನಾನು’
ಮತ್ತೆ ಕೇಳಿಸಿದ ದನಿ; ಚರಕದ ಜೊತೆ ಕಸ್ತೂರ್‌ಬಾ!
ವೃದ್ಧೆ ಕಸ್ತೂರ್‌ಬಾ ಬಿಂಬ!

ತನ್ನರಿವಿಗೇ ಬಾರದಂತೆ ಗಾಂಧಿ ‘ಕಸ್ತೂರ್’ ಎಂದರು ಮೆಲುದನಿಯಲ್ಲಿ. “ಹೌದು, ನಾನೇ ಕಷ್ಟವಾದರೂ ಇಷ್ಟಪಟ್ಟು ಬದುಕಿದ ಕಸ್ತೂರ್‌ಬಾ ಗಾಂಧಿ ನಾನೇ” ಎಂದರು ಕಸ್ತೂರ್‌ಬಾ. ಅವರು ಅಲ್ಲಿಗೇ ಸುಮ್ಮನಾಗಲಿಲ್ಲ; ಕೆಣಕುವಂತೆ ಕೇಳಿದರು:

“ಯಾಕ್ ಬಾಪು, ನಿಮ್ ಕಣ್‌ತುಂಬಾ ನೀರು?”
ಬಾಪು ಗಾಂಧಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ.
ಯಾವತ್ತೂ ಹೀಗೆ ಕಣ್ಣೀರು ತುಂಬಿ ಬಂದಿರಲಿಲ್ಲ.
ಮತ್ತೆ ಕಸ್ತೂರ್‌ಬಾ ಕೇಳಿದರು ಅಥವಾ ಕೆಣಕಿದರು:
“ನನ್ ಕಣ್ಣೀರು ನಿಮ್ ಕಣ್ಣಲ್ ಬರ್‍ತಾ ಇದ್ಯಾ?”
ಆಗಲೂ ಗಾಂಧಿ ಉತ್ತರಿಸಲಿಲ್ಲ; ಉತ್ತರಿಸಲಾಗಲಿಲ್ಲ.
ಉತ್ತರಿಸಲಾಗದೆ ತತ್ತರಿಸಿದ ಕತ್ತರಿ ಮೌನ!
ಕಸ್ತೂರ್‌ಬಾ ಬಿಡಲಿಲ್ಲ.
“ನನ್ ಕಣ್ಣೀರು ನಿಮ್ಮ ಕಣ್ಣಲ್ ತುಂಬಿರೋದ್ರಿಂದ್ಲೆ ನನ್ನ ಕಣ್ಣು
ಬತ್ತಿ ಹೋಗಿದೆ ಅನ್ಸುತ್ತೆ. ಈಗ ನನ್ ಕಣ್ಣಲ್ಲಿ ನೀರಿಲ್ಲ – ಎಂದರು.
ಗಾಂಧಿಗೆ ಸಂಕಟದ ಸುಳಿ;
ಕಸ್ತೂರ್‌ಬಾರಿಂದ ಮಾತಿನ ಉಳಿ!
ಉಳಿಯಲ್ಲಿ ಕೆತ್ತುತ್ತ, ಕಡೆಯುತ್ತ,
ಶಿಲೆಯು ನಿರ್ದಿಷ್ಟ ರೂಪ ತಾಳುತ್ತ
ಸಾಕಾರಗೊಂಡ ಆಕಾರದ ಅನುಭವ
ಇದು ಗಾಂಧಿ ಬದುಕಿನ ಅನುಭಾವ.
ಕಸ್ತೂರ್‌ಬಾ ಬಾಳಿನ ರೂಪಾಂಜಲಿ
ಅನುಭವದ ಹಾದಿಯ ತಾಪಾಂಜಲಿ!

ಈಗ ಗಾಂಧಿಗೆ ಸುಮ್ಮನಿರಲಾಗಲಿಲ್ಲ. ಸುಮ್ಮನಿರುವುದು ಸರಿಯೆಂದೂ ಅನ್ನಿಸಲಿಲ್ಲ. ಮುಖಾಮುಖಿಯಾಗುವುದೆ? ಮುನಿಸುಕೊಂಡು ಸುಮ್ಮನಾಗುವುದೆ? ಈಗ ಎರಡೂ ಸರಿಯಲ್ಲ.

“ಹಾಗೆಲ್ಲ ಮಾತಾಡ್‌ಬೇಡ ಕಸ್ತೂರ್, ಕರುಳಿನ ಮೇಲೆ ಕೆಂಡ ಬಿದ್ದಂತಾಗುತ್ತೆ;” ಎಂದು ನಿವೇದಿಸಿದರು ಗಾಂಧಿ. ಕಸ್ತೂರ್‌ಬಾ ತಕ್ಷಣವೇ ಪ್ರತಿಕ್ರಿಯಿಸಿದರು:

“ನನ್ ಕರುಳಲ್ಲೇ ಕೆಂಡ ಇದೆ. ನಾನು ಸುಡೋ ಕೆಂಡಕ್ಕೆ ಸೆಡ್ ಹೊಡ್ದು ಬದುಕ್ತಾ ಬಂದೆ ಅಲ್ವ ಬಾಪು. ಅದ್ರಲ್ಲೂ ನಿಮ್ ಜೊತೆ ಸಂಸಾರ ಅಷ್ಟು ಸುಲಭಾನ?”

“ಮತ್ತೆ ಹೀಗೆಲ್ಲ ಚುಚ್ಚಬೇಡ ಮನಸ್ಸನ್ನ, ನೋವಾಗುತ್ತೆ ಕಸ್ತೂರ್.”

“ನೋವು ನನ್ನ ನೆಂಟ ಅಂದ್ಕೊಂಡ್ ಬದುಕಿದವಳು ನಾನು. ಹೆಂಗಸರ ನೋವು ಗಂಡಸ್ರಿಗೆ – ಅದ್ರಲ್ಲೂ ನಿಮ್‌ತರಾ ಹಠವಾದಿ ಗಂಡಸ್ರಿಗೆ, ಸುಲಭವಾಗಿ ಅರ್ಥ ಆಗಲ್ಲ – ಎಂದು ಕಸ್ತೂರ್‌ಬಾ ನೇರ ನುಡಿದರು.

ಗಾಂಧಿಗೆ ಘಾಸಿಯಾದರೂ ಸಮಾಧಾನವಾಗಿಯೇ ಹೇಳಿದರು:

“ಅರ್ಥ ಆಗಿದೆ; ನೀನು ನನಗೆ ಅರ್ಥ ಮಾಡ್ಸಿದ್ದೀಯ. ಅದಕ್ಕೇ ನನ್ನ ಆತ್ಮಕತೇಲಿ ನೀನಿಲ್ಲದೆ ನಾನು ಅರ್ಧ ಆಗಿರ್‍ತಿದ್ದೆ ಅನ್ನೋ ಅರ್ಥ ಬರೋ ಮಾತ್ ಬರ್‍ದಿದ್ದೀನಿ. 1927ರಲ್ಲೇ ಈ ಮಾತು ದಾಖಲಾಯ್ತು ಗೊತ್ತ?”

“ಗೊತ್ತಿಲ್ದೆ ಏನು? ನೀವು ದಾಖಲು ಮಾಡ್ತೀರಿ, ಬಯಲೂ ಮಾಡ್ತೀರಿ, ಅದಕ್ಕೆ ನಿಮ್ ಜೀವನಾನ ತೆರೆದ ಪುಸ್ತಕ ಅಂತೀರಿ. ಆದ್ರೆ ನಾವ್ ಹೆಂಗಸರು – ನಿಮ್ ಹಾಗೆ ತೆರೆದ ಪುಸ್ತಕ ಆಗೋಕ್ ಆಗಲ್ಲ – ಎಂದು ನೇರಾನೇರ ನುಡಿದ ಕಸ್ತೂರ್‌ಬಾ ಅವರಿಗೆ ಗಾಂಧಿ ‘ನಮ್ ಸಮಾಜಾನೇ ಹಾಗಿದ್ಯಲ್ವ’ ಎಂದು ಸಮಾಧಾನಿಸಲು ಪ್ರಯತ್ನಿಸಿದರು. ಆದರೆ ಕಸ್ತೂರ್‌ಬಾ ಅಲ್ಲಿಗೇ ಸುಮ್ಮನಾಗಲಿಲ್ಲ.

“ನೀವೂ ಒಂದೊಂದ್ಸಾರಿ ಹಾಗೇ ಇರ್‍ತೀರಿ. ಸ್ತ್ರೀಯರನ್ನ ದೇವತೆಗಳಿಗೆ ಹೋಲಿಸಿ ಸ್ವಾತಂತ್ರ್ಯ ಕಸ್ಕೋತೀರಿ” ಎಂದು ಆರೋಪಿಸಿಯೇಬಿಟ್ಟರು.

ಗಾಂಧಿಗೆ ತಡೆಯಲಾಗಲಿಲ್ಲ. ಸಮಾಧಾನದಿಂದ ಮಾತಾಡಿದರೂ ಈಕೆ ತನ್ನ ಪಟ್ಟು ಬಿಡುತ್ತಿಲ್ಲ ಎಂದು ಸಿಟ್ಟು ಬಂತು, “ಏನ್ ಮಾತು ಅಂತ ಆಡ್ತೀಯ ನೀನು? ನಾನು ಸ್ವಾತಂತ್ರ್ಯ ಹೋರಾಟಕ್ಕಾಗಿ ಜೀವನ ಮುಡುಪಿಟ್ಟೋನು” ಎಂದರು ಗದರುದನಿಯಲ್ಲಿ. ಕಸ್ತೂರ್‌ಬಾ ಥಟ್ಟನೆ ಹೇಳಿದರು:

“ಸಂಸಾರದಲ್ಲಿ ಸ್ವಾತಂತ್ರ್ಯ, ಸಮಾಜದಲ್ಲಿ ಸ್ವಾತಂತ್ರ್ಯ-ಎರಡಕ್ಕೂ ಹೆಣಗಾಡಿದ ಜೀವ ನಂದು. ಸಮಾಜ-ದೇಶ ಅಂತ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಜೀವನ ನಿಮ್ದು.”

ಗಾಂಧಿಯೂ ತಿರುಗೇಟು ನೀಡಿದರು. ಗದರದೆಯೇ ನೆದರು ತುಂಬಿದ ನಾಲಗೆಯಾದರು;

“ನಾನು ಎಲ್ಲಾ ಗಂಡಸ್ರಂತಲ್ಲ. ನಿನಗ್ ನಾನು ಸ್ವಾತಂತ್ರ್ಯ ಕೊಟ್ಟಿಲ್ವ? ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿಲ್ವ?”

ಕಸ್ತೂರ್‌ಬಾ ಏನೂ ಕಡಿಮೆಯಲ್ಲ. ಅಸಲನ್ನು ಬಡ್ಡಿ ಸಮೇತ ತೀರಿಸುವಂತೆ ತಿರುಗುಬಾಣವಾದರು:

“ನೀವ್ ಸ್ವಾತಂತ್ರ್ಯ ಕೊಟ್ರೋ, ನಾನೇ ಸ್ವಾತಂತ್ರ್ಯ ತಗೊಂಡ್ನೋ ಸ್ವಲ್ಪ ಸಾವಧಾನದಿಂದ ಸ್ಮರಿಸ್ಕೊಳ್ಳಿ.”
ಗಾಂಧಿ ಒಳಗೆ ಚುಚ್ಚಿತು. ಗುರುತು ಕಾಣದ ಗಾಯ; ಹೊರಗೆ ಚಿಮ್ಮದ ನೆತ್ತರು ಒಳಗೇ, ಎಲ್ಲಾ ಒಳಗೇ. ನೋವು, ನೆತ್ತರು, ಎಲ್ಲಾ ಒಳಗೇ. ಹೊರಹೊಮ್ಮಿದರೆ ಒಳಗೆಂಬುದು ಗಾಯದ ಗಹೆಯಾಗುವುದಿಲ್ಲ. ಗಾಂಧಿ, ಒಳಗೆ ಒತ್ತರಿಸುವ ನೆತ್ತರನ್ನು ಹತ್ತಿಕ್ಕುತ್ತ ಮೌನವಾದರು; ‘ಗಾಯವೇ ಒಳಗೆ ಮಾಯವಾಗು’ ಎನ್ನುತ್ತಾ ಕೂತರು. ಇದು ಕಸ್ತೂರ್‌ಬಾ ಅವರಿಗೂ ಅರ್ಥವಾಯಿತು. ತನ್ನ ಬದುಕಿನಲ್ಲಿ ಕಟ್ಟಿಕೊಂಡ ಕಟುತ್ವದ ಕಟ್ಟಡವನ್ನು ಸ್ವಯಂ ಕೆಡವುದು ಕೆಟ್ಟದ್ದು ಎನ್ನಿಸಿ ತಾವೇ ಸಮಾಧಾನ ಸ್ಥಿತಿಗೆ ಬಂದರು. ಬಾಲ್ಯದ ಮಾತು ತೆಗೆದರು:

“ನಮ್ ಬಾಲ್ಯ ಎಷ್ಟ್ ಚೆಂದ ಇತ್ತು ಅಲ್ವ?”
ಗಾಂಧಿಗೆ ಆಶ್ಚರ್ಯವಾಯಿತು. ಇದ್ದಕ್ಕಿದ್ದಂತೆ ಬಾಲ್ಯಕ್ಕೆ ಹೋದ ವೃದ್ಧಾಪ್ಯದ ಮನಸ್ಸು; ತಕ್ಷಣ ನುಡಿದರು:
“ಹೌದು ಕಸ್ತೂರ್, ಇಳೀ ವಯಸ್ನಲ್ಲಿ ಎಳೀ ವಯಸ್ಸು, ಯಾವಾಗ್ಲೂ ಚೆಂದ ಕಾಣ್ಸುತ್ತೆ.”
“ನಿಮ್ದು ಎಳೀ ವಯಸ್ನಲ್ಲೂ ಇಳೀ ವಯಸ್ಸಿನ ಸ್ವಭಾವಾನೇ”
ಕಸ್ತೂರ್‌ಬಾ ಇಲ್ಲಿಯೂ ಸ್ವಲ್ಪ ಛೇಡಿಸಿದರು.
“ಅದು ಹೇಗೆ? ಎಳೀ ವಯಸ್ನಲ್ಲಿ ಮುಗ್ಧವಾಗಿರ್‍ತೀವಿ. ಒಮ್ಮೊಮ್ಮೆ ಮೂರ್ಖರೂ ಆಗಿರ್‍ತೀವಿ.”
ಕಸ್ತೂರ್‌ಬಾ ನಸು ನಕ್ಕರು. ಮಾತಾಡಲಿಲ್ಲ. ಮಾತಿಗೆ ಮಾತು ಬೆಳೆಯದಿದ್ದರೆ ಗಾಂಧಿಗೆ ಕಸಿವಿಸಿ. ಉಸಿರಿನ ಬಿಸಿ.
“ಯಾಕ್ ಒಳಗೊಳಗೇ ನಗ್ತಿದ್ದೀಯ?” – ಎಂದು ಕೇಳಿಯೇಬಿಟ್ಟರು.

“ಮಾತಾಡ್ತ ಮಾತಾಡ್ತ ನಿಮ್ಮ ಕಣ್ಣೀರ್ ಹೋಗಿ ಕಾಂತಿ ಬಂತಲ್ಲ, ಅದಕ್ ನಗು ಬಂತು, ಅದಕ್ಕೂ ಅಪಾರ್ಥ ಮಾಡಿ ಉಪವಾಸ ಸತ್ಯಾಗ್ರಹ ಮಾಡ್‌ಬಿಟ್ಟೀರ!” ಎಂದು ಹೇಳಿದಾಗ ಗಾಂಧಿ ಫಕ್ಕನೆ ನಕ್ಕರು, ಕಸ್ತೂರ್‌ಬಾಗೂ ಸಂತೋಷವಾಯ್ತು.

“ನೀವ್ ಏನೇ ಹೇಳಿ ಬಾಪು. ಸುಮಾರು ಅರವತ್ತು ವರ್ಷ ನಿಮ್ ಜೊತೆ ಸಂಸಾರ ಮಾಡಿದ್ ಮೇಲೂ ನನಗೆ ನನ್ ಬಾಲ್ಯದ ಸುಖಾನೇ ದೊಡ್ಡದು ಅನ್ಸುತ್ತೆ. ಬಾಲ್ಯದಲ್ಲೇ ಹೆಚ್ಚು ಸ್ವತಂತ್ರವಾಗಿದ್ದೆ ಅನ್ಸುತ್ತೆ.” ಎಂದರು ಕಸ್ತೂರ್‌ಬಾ.

“ಎಲ್ಲರ ಜೀವನದಲ್ಲೂ ಇದು ಸಹಜ ಕಸ್ತೂರ್. ಬಾಲ್ಯದ ಸುಖ ಮನಸ್ಸಿನ್ ಸುಖ. ಅದಕ್ ಸಾಟಿ ಇಲ್ಲ ಎನ್ನುತ್ತಾ ಗಾಂಧಿ ಹಾಗೇ ಬಾಲ್ಯಕ್ಕೆ ತೆರಳಿದಂತೆ ಕಂಡರು.

  • ಬರಗೂರು ರಾಮಚಂದ್ರಪ್ಪ

ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಆ ಬಳಿಕ ಎರಡು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಕನ್ನಡನಾಡಿನ ಪ್ರಮುಖ ಚಿಂತಕರಲ್ಲಿ ಒಬ್ಬರು. ಬಂಡಾಯ ಸಾಹಿತ್ಯ ಚಳುವಳಿಯ ನೇತಾರರಲ್ಲಿ ಒಬ್ಬರು. ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.


ಇದನ್ನೂ ಓದಿ: ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಬರಗೂರು ರಾಮಚಂದ್ರಪ್ಪ

LEAVE A REPLY

Please enter your comment!
Please enter your name here