| ಗುರುಬಸವ ಬರಗೂರು |
ನೋಟಾ ಮತ ಚಲಾವಣೆ ಜಾರಿಯಾದ ನಂತರ ವಿವಿಧ ಉದ್ದೇಶಗಳಿಗಾಗಿ ನೋಟಾ ಮತ ಚಲಾಯಿಸುವಂತೆ ಬಹಳಷ್ಟು ಸಂಘ ಸಂಸ್ಥೆಗಳು, ವ್ಯಕ್ತಿಗಳು ಪ್ರಚಾರ ಮಾಡಿದ್ದು ನಮಗೆ ನೆನಪಿದೆ. ಬಹುತೇಕ ವಿದ್ಯಾವಂತರು ಮಾತ್ರ ನೋಟ ಕುರಿತು ಯೋಚಿಸುತ್ತಿದ್ದರು. ಅಭ್ಯರ್ಥಿಗಳು ಭ್ರಷ್ಟಾಚಾರಿಗಳಾಗಿದ್ದು, ಇವರು ಯಾರು ನಮ್ಮ ಆಯ್ಕೆಯಲ್ಲ ಎಂದು ಹೇಳಿದ್ದಿದೆ. ಆದರೆ ನಮ್ಮ ಭವಿಷ್ಯಕ್ಕಾಗಿ ಮದ್ಯವನ್ನು ನಿಷೇಧಿಸಿ, ಕುಟುಂಬಗಳನ್ನು ರಕ್ಷಿಸಿ ಎಂಬ ಆಶಯಕ್ಕಾಗಿ ಮದ್ಯ ನಿಷೇಧ ಆಂದೋಲನದ ಕಾರ್ಯಕರ್ತರು ಮುಖ್ಯವಾಗಿ ಮಹಿಳೆಯರು ರಾಜ್ಯದ ಹಲವು ಜಿಲ್ಲೆಗಳಲ್ಲಿ ನೋಟಾ ಮತ ಚಲಾಯಿಸಿ ಎಂದು ಬಹಿರಂಗ ಪ್ರಚಾರಾಂದೋಲನಕ್ಕೆ ಇಳಿದಿದ್ದಾರೆ.
ಪ್ರಜಾಪ್ರಭುತ್ವವೆಂದರೆ ಕೇವಲ ಮತ ಚಲಾಯಿಸುವುದಲ್ಲ, ಪ್ರಜಾಪ್ರಭುತ್ವದಲ್ಲಿ ಜನರಿಗೆ ಪ್ರತಿಭಟಿಸುವ ಹಕ್ಕು ಸಹ ಇದೆ. ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವ ಮುನ್ನ ನಾವು ಸಂವಿಧಾನದ ಆಶಯಗಳಿಗೆ ಬದ್ಧರಾಗಿರುತ್ತೇವೆ ಮತ್ತು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಾರೆ. ಆದರೆ ಅದೇ ಸಂವಿಧಾನದ 47ನೇ ಪರಿಚ್ಛೇದ ಸಾಮಾಜಿಕ ಒಳಿತಿಗಾಗಿ ಮದ್ಯ ನಿಷೇಧದ ಬಗ್ಗೆ ಮಾತಾಡುತ್ತದೆ. ಆದರೆ ಅನದ್ನು ಅನುಷ್ಠಾನ ಮಾಡುತ್ತಿಲ್ಲ ಏಕೆ ಎಂದು ಆಂದೋಲನದ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ಮದ್ಯ ನಿಷೇಷ ಆಂದೋಲನ ವೇದಿಕೆಯು ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿದೆ. ಅಲ್ಲೆಲ್ಲಾ ಪ್ರತಿ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿಯೂ ಮೂರು ಪಕ್ಷದ ಮುಖಂಡರಿಗೆ ಮದ್ಯ ನಿಷೇಧಿಸುವಂತೆ ಪತ್ರ ಚಳವಳಿ ನಡೆಸಲಾಗುತ್ತಿದೆ. ಇದುವರೆಗೂ ಯಾವುದೇ ಪಕ್ಷವೂ ಮದ್ಯ ನಿಷೇಧಿಸುವ ಕುರಿತು ಸ್ಪಷ್ಟ ಭರವಸೆ ನೀಡಿಲ್ಲದ ಕಾರಣಕ್ಕಾಗಿ ಪ್ರತಿ ಊರಿಗೂ ಹೋಗಿ ನೋಟಾ ಮತ ಚಲಾವಣೆ ಮಾಡುವಂತೆ ಜನರಿಗೆ ಕರೆ ನೀಡುತ್ತಿದ್ದಾರೆ. ಬೆಂಗಳೂರು, ಮಂಡ್ಯ, ಹಾಸನ, ತುಮಕೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಮ್ಮ ವೇದಿಕೆಯ ಪ್ರಭಾವ ಕಡಿಮೆ ಇರುವುದರಿಂದ ರಾಯಚೂರು, ಕೊಪ್ಪಳ ಜಿಲ್ಲೆಯ ಕಾರ್ಯಕರ್ತರು ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಬಂದು ಸ್ವಯಂ ಪ್ರೇರಿತರಾಗಿ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಈ ಮದ್ಯ ಸೇವನೆಯಿಂದಾಗಿ ದಿನ ನಿತ್ಯ ಎಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಎಷ್ಟೋ ಮಕ್ಕಳು ತಬ್ಬಲಿಗಳಾದರೆ ಮಹಿಳೆಯರು ವಿಧವೆಯರಾಗುವ ಪರಿಸ್ಥಿತಿ ಬಂದಿದೆ. ಕಷ್ಟ ಪಟ್ಟು ದುಡಿದರೂ ಹಣವೆಲ್ಲಾ ಮದ್ಯಕ್ಕೆ ಹೋಗುವುದರಿಂದ ಜೀವನ ನಡೆಸಲು ಸಾಧ್ಯವಾಗದೆ ಬಹಳಷ್ಟು ಕುಟುಂಬಗಳು ಬೀದಿಗೆ ಬರುತ್ತಿವೆ. ಈ ಎಲ್ಲಾ ಸಮಸ್ಯೆಗೆ ಪರಿಹಾರವಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧವಾಗಬೇಕೆಂದು ಪ್ರಚಾರಾಂದೋಲನ ತಂಡದಲ್ಲಿರುವ ಮದ್ಯ ನಿಷೇಧ ಆಂದೋಲನದ ಮೋಕ್ಷಮ್ಮ, ರಜಿಯ ಬೇಗಂ, ಅಕ್ಕಮ್ಮ, ಹುಲಿಗೇಮ್ಮ, ಅಮರೇಶ, ಬಸವರಾಜ ಮುಂತಾದವರು ಅಭಿಪ್ರಾಯಪಡುತ್ತಾರೆ.
2016 ಆಕ್ಟೋಬರ್ 02 ರ ಗಾಂಧೀಜಿ ಜನ್ಮದಿನದಂದು ಅವರ ಆಶಯದಂತೆ ಮದ್ಯ ನಿಷೇಧ ಆಗಲೇಬೇಕು ಎಂದು ಸುಮಾರು 40 ಸಾವಿರ ಮಹಿಳೆಯರು ರಾಯಚೂರಿನಲ್ಲಿ ಪ್ರತಿಭಟನೆ ಶುರು ಮಾಡಿದರು. ನಂತರ ಅದೇ ವರ್ಷ ಜನವರಿ 30 (ಗಾಂಧೀಜಿ ನಿಧನವಾದ ದಿನ) ರಂದು “ನಮ್ಮ ಗಾಂಧಿ, ನಮಗೆ ಕೊಡಿ” ಎಂದು 16 ಜಿಲ್ಲೆಗಳಲ್ಲಿ ಈ ಹೋರಾಟವನ್ನು ಮಾಡಲಾಯಿತು. ಅದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸುಮಾರು 71 ದಿನಗಳ ಕಾಲ ರಾಯಚೂರು ನಗರದಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು. 
ಹೀಗೆ ನಿರಂತರ ಶಾಂತಿಯುತವಾಗಿ ಹೋರಾಟಗಳು ನಡೆಯುತ್ತಾ ಬಂದರೂ ಸಹ ಯಾವ ರಾಜಕೀಯ ಪಕ್ಷಗಳು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಇದರಿಂದ ಬೇಸತ್ತ ಮಹಿಳೆಯರು 2019ರ ಜನವರಿ 19 ರಂದು ಚಿತ್ರದುರ್ಗದಿಂದ ಬೆಂಗಳೂರಿಗೆ ರಾಜ್ಯದ ಸುಮಾರು 3000 ಕ್ಕೂ ಹೆಚ್ಚು ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಪಾದಯಾತ್ರೆಯನ್ನು ಕೈಗೊಂಡಿದ್ದರು. ಪಾದಯಾತ್ರೆಯ ದಾರಿಯ ಮಧ್ಯದಲ್ಲಿ ರೇಣುಕಮ್ಮ ಎಂಬ ಮಹಿಳೆ ಪ್ರಾಣ ಕಳೆದುಕೊಂಡರು ಸಹ ಯಾವ ಪಕ್ಷದ ಮುಖಂಡರೂ ಬಂದು ಮಹಿಳೆಯರನ್ನು ಭೇಟಿ ಮಾಡದೇ ನಮ್ಮನ್ನು ಹಾಗೂ ನಮ್ಮ ಹೋರಾಟವನ್ನು ನಿರ್ಲಕ್ಷಿಸಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ನೋಟಾ ಚಲಾಯಿಸುವ ಮೂಲಕ ಮಹಿಳೆಯರ ಶಕ್ತಿ ಏನೆಂದು ಆಳುವವರಿಗೆ ತಿಳಿಸಲು ಮುಂದಾಗಿದ್ದೇವೆ ಅನ್ನುತ್ತಾರೆ ಹೋರಾಟಗಾರ್ತಿ ವಿರುಪಮ್ಮನವರು.
ಬೆಂಗಳೂರಿನ ತಂಡವು ಈಗಾಗಲೇ ಶ್ರೀ ರಾಂಪುರ ಮತ್ತು ಶೇಷಾದ್ರಿಪುರಂ ಸ್ಲಂಗಳಲ್ಲಿ ಪ್ರಚಾರ ನಡೆಸಿದ್ದಾರೆ. ಇನ್ನೊಂದು ತಂಡವು ಮಂಡ್ಯದ ಹಲವು ಸ್ಲಂಗಳಲ್ಲಿ ಪ್ರಚಾರ ಮುಗಿಸಿದ್ದಾರೆ. ಪ್ರಚಾರದ ವೇಳೆ ಅಲ್ಲಿನ ಮಹಿಳೆಯರು ಸಹ ತಮ್ಮ ಜೀವನದ ನೋವಿನ ಕಥೆಗಳನ್ನು ಹೇಳುತ್ತಿದ್ದಾರೆ, ಖಂಡಿತ ನೋಟಾಗೆ ಓಟು ಹಾಕುತ್ತೇವೆ ಎಂದು ಬೆಂಬಲ ವ್ಯಕ್ತಿವಾಗಿದೆ ಎನ್ನುತ್ತಾರೆ ವಿರುಪಮ್ಮ.
ಚುನಾವಣೆಯ ದಿವಸ ನಿಮ್ಮ ನಿಮ್ಮ ಹಳ್ಳಿಗಳಲ್ಲಿ ಬಹಳಷ್ಟು ಸಂಖ್ಯೆಗಳಲ್ಲಿ ಜನ ಒಂದೆಡೆ ಸೇರಿಕೊಂಡು ಶಾಂತಿಯುತವಾದ ಸತ್ಯಾಗ್ರಹ (ಬಹಿರಂಗ ನೋಟಾ) ಮಾಡಿ ನಿಮ್ಮ ಸಿಟ್ಟನ್ನು ರಾಜಕೀಯ ಪಕ್ಷಿಗಳಿಗೆ ತೋರಿಸಬೇಕು. ಮದ್ಯ ನಿಷೇಧದ ಪರವಾಗಿರುವ ಜನರು ಮುಂದಿನ ತಿಂಗಳು ರಾಜಕೀಯ ಪಕ್ಷಗಳ ಮುಖಂಡರಿಗೆ/ಅಧ್ಯಕ್ಷರಿಗೆ ಲಕ್ಷಾಂತರ ಪತ್ರಗಳನ್ನು ಬರೆಯಿರಿ. ಪತ್ರದಲ್ಲಿ ಸಹೋದರರೇ ಅಥವಾ ಮುಖಂಡರೇ ನೀವು ನಿಮ್ಮ ಸರ್ಕಾರಕ್ಕೆ ಬರುವ ಆದಾಯದ ಚಿಂತೆ ಮಾಡದೇ ಸಮಾಜದ ಆರೋಗ್ಯದ ಚಿಂತೆ ಮಾಡಿ ಹಾಗೂ ಮಹಿಳೆಯರ ಗೌರವಕ್ಕೆ ಆದ್ಯತೆ ನೀಡಿ. ಇದು ಮಹಿಳೆಯರ ಬದುಕಿನ ಪ್ರಶ್ನೆ ಎಂದು ಮನದಟ್ಟು ಮಾಡಿರಿ ಎಂದು ಜನರಲ್ಲಿ ಮನವಿ ಮಾಡುತ್ತಿರುವುದು ಕಂಡುಬರುತ್ತಿದೆ. ಫಲಿತಾಂಶದ ದಿನ ಇದರ ಪ್ರಭಾವ ರಾಜಕೀಯ ಪಕ್ಷಗಳಿಗೆ ಅರ್ಥವಾಗಬಹುದು ಕಾದು ನೋಡೋಣ.


