ಈ ಸಲ ಕಪ್ ನಮ್ಮದಲ್ಲ, RCB ಸೋಲಿಗೆ ಕಾರಣಗಳೇನು?

0
| ಮುತ್ತುರಾಜು |
“ಈ ಸಲ ಕಪ್ ನಮ್ದೆ” ಈ ಸ್ಲೋಗನ್ ಎಷ್ಟು ಪ್ರಖ್ಯಾತಿ ಪಡೆದಿತ್ತೆಂದರೆ ಈಗ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಟ್ರೋಲ್ ಗೆ ಒಳಗಾಗಿದೆ. ಯಾರಾದರೂ ಈ ಸಲ ಕಪ್ ನಮ್ದೆ ಎಂದರೆ ಎಲ್ಲರೂ ಆತನನ್ನು ನೋಡಿ ಬಿದ್ದು ಬಿದ್ದು ನಗುತ್ತಾರೆ ಅಷ್ಟೇ. ಏಕೆ ಹೀಗಾಯಿತು ನೋಡೋಣ ಬನ್ನಿ  
ಆರ್ ಸಿ ಬಿಗೆ ಸತತ ಮೂರನೇ ಸೋಲು. ಅಭಿಮಾನಿಗಳ ನಿರಾಸೆಗೆ ಕಾರಣವಾದರೂ ಏನು? 
2008ರಲ್ಲಿ ಆರಂಭವಾದ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್. ಮೊದಲ ಎಡಿಸನ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದ್ದಿದ್ದ, ವಿಜಯ್ ಮಲ್ಯ ಮಾಲೀಕತ್ವದ ಆರ್ ಸಿ ಬಿ ಕಳಪೆ ಪ್ರದರ್ಶನ ನೀಡಿತ್ತು. 2008ರಲ್ಲಿ ರಾಹುಲ್ ದ್ರಾವಿಡ್ ತಂಡದ ನಾಯಕತ್ವ ಜವಾಬ್ದಾರಿ ಹೊತ್ತಿದ್ದರು. ರಾಹುಲ್ ದ್ರಾವಿಡ್ ಬಗ್ಗೆ ಒಂದು ಮೆಚ್ಚುಗೆಯ ಮಾತು ಗೊತ್ತೆ? ವೇಗದ ಬೌಲರ್ ಶೋಯಬ್ ಅಖ್ತರ್ ಹೇಳುತ್ತಾರೆ, ನನ್ನ ಎಸೆತಗಳಿಗೆ ನಿರ್ದಯವಾಗಿ ದಂಡಿಸುವ ಸಚಿನ್ ಮತ್ತು ಸೆಹ್ವಾಗ್ ಮೇಲೆ ನನಗೆ ಬೇಸರವಿಲ್ಲ. ಆದರೆ ಅಷ್ಟು ವೇಗದ ಬಾಲ್ ಗಳನ್ನು ಆಡಿ ಕ್ರೀಸಿನಿಂದ ಹೊರಕ್ಕೂ ಹೋಗದಂತೆ ತಡೆಯುವ ಕಲೆ ಇರುವ ದ್ರಾವಿಡ್ ಮೇಲೆ ತುಂಬಾ ಹೊಟ್ಟೆಕಿಚ್ಚು ಎಂದು ಹೇಳಿದ್ದರು. ವಾಲ್ ಖ್ಯಾತಿಯ ದ್ರಾವಿಡ್ ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರನಾಗಿದ್ದರಿಂದ ಟಿ 20 ಆಟ ಅವರಿಗೆ ಒಗ್ಗಲಿಲ್ಲ. ಮೊದಲ ಎಡಿಸನ್ ನಲ್ಲಿ RCB ಹೀನಾಯವಾಗಿ ಸೋತಿತು.
2009ಕ್ಕೆ ತಂಡದ ನಾಯಕತ್ವವನ್ನು ಕೆವಿನ್ ಪೀಟರ್ಸನ್ ಗೆ ನೀಡಲಾಯಿತು. ಆಗಲೂ ತೀರಾ ಕೆಟ್ಟದಾಗಿ ತಂಡ ಆಡಿತು. ಇನ್ನು ಕೇವಲ  07 ಪಂದ್ಯಗಳು ಮಾತ್ರ ಉಳಿದಿದ್ದಾಗ ಅನಿಲ್ ಕುಂಬ್ಳೆಗೆ ನಾಯಕತ್ವವನ್ನು ವರ್ಗಾಯಿಸಲಾಯಿತು. ಆಗ ಅಮೋಘ ಪ್ರದರ್ಶನ ನೀಡಿದ RCB ಉಳಿದ 07 ಪಂದ್ಯಗಳಲ್ಲಿ 06ನ್ನು ಗೆದ್ದು ಫೈನಲ್ ತಲುಪಿತ್ತು. ಆದರೆ ಫೈನಲ್ ನಲ್ಲಿ ಆ್ಯಡಂ ಗಿಲ್ ಕ್ರಿಸ್ಟ್ ನಾಯಕತ್ವದ ಆಗಿನ ಡೆಕ್ಕನ್ ಚಾರ್ಜಸ್ ವಿರುದ್ಧ ಸೋತು ಪ್ರಶಸ್ತಿ ಕೈ ತಪ್ಪಿತು.
ಅನಿಲ್ ಕುಂಬ್ಳೆ ಐಪಿಎಲ್ ಗೆ ವಿದಾಯ ಹೇಳಿದರು. ನಾಯಕತ್ವ ಸ್ಥಾನ ಡೇನಿಯಲ್ ವೆಟೋರಿಗೆ ಒಲಿದು ಬಂತು. ಮತ್ತೆ 2011ರಲ್ಲಿ ಒಟ್ಟಾರೆ 10 ತಂಡಗಳು ಆಡಿದಾಗಲೂ RCB ಮತ್ತೆ ಫೈನಲ್ ಗೇರಿತ್ತು. ಎದುರಾಳಿ ದೋನಿ ನಾಯಕತ್ವದ ಚನ್ನೈ ಸೂಪರ್ ಕಿಂಗ್ಸ್. ಅಲ್ಲಿಯೂ RCB ಮುಗ್ಗರಿಸಿತು. ಕಪ್ ಕನಸಾಗಿಯೇ ಉಳಿಯಿತು.
ವೆಟೋರಿ ನಂತರ ವಿರಾಟ್ ಕೊಹ್ಲಿ  ಜವಾಬ್ದಾರಿ ತೆಗೆದುಕೊಂಡರೂ ಸಹ ನಂತರದ ನಾಲ್ಕು ಎಡಿಷನ್ ಗಳಲ್ಲಿ ಅದೇ ಕಳಪೆ ಪ್ರದರ್ಶನದಿಂದ ಕಪ್ ನ ಸನಿಹಕ್ಕೂ ಬರಲಾಗಲಿಲ್ಲ. ಆದರೆ ಮತ್ತೆ 2016ರಲ್ಲಿ ಫೈನಲ್ ತಲುಪಿತು. ಕಪ್ ನ ಆಸಗೆ ಮತ್ತೆ ಜೀವ ಬಂತು. ಆದರೆ ಅದೃಷ್ಟ RCB ಪರವಾಗಿ ಇರಲಿಲ್ಲ. ಸನ್ ರೈಸರ್ಸ್ ಹೈದರಾಬಾದಿನ ಎದುರು ಮುಗ್ಗರಿಸಿತು. ಅಭಿಮಾನಿಗಳಿಗೆ ತೀವ್ರ ನಿರಾಶೆಯಾಯಿತು.
ಅಷ್ಟರಲ್ಲಿ ಹೈದರಾಬಾದ್, ಮುಂಬೈ, ಕೋಲ್ಕತ್ತ ಮತ್ತು ಚನ್ನೈ ತಂಡಗಳು ತಲಾ ಎರಡು ಬಾರಿ ಕಪ್ ಎತ್ತಿದ್ದರು. ರಾಜಸ್ಥಾನ ಒಮ್ಮೆ ಚಾಂಪಿಯನ್ ಆಗಿತ್ತು. ಆದರೆ ಬೆಂಗಳೂರು ಒಮ್ಮೆಯೂ ಕಪ್ ಎತ್ತುವ ಅದೃಷ್ಟ ಪಡೆದಿರಲಿಲ್ಲ. ಪಂಜಾಬ್, ಡೆಲ್ಲಿ, ಪುಣೆ ತಂಡಗಳು ಇದೇ ಪರಿಸ್ಥಿತಿಯಲ್ಲಿದ್ದವು.
ಮತ್ತೆ 2017ರ ಐಪಿಎಲ್ ಕ್ರೇಜ್ ಹೆಚ್ಚುತ್ತಿತ್ತು. RCB ಈ ಬಾರಿ ಗೆದ್ದೇ ತೀರುವ ಹುಮ್ಮಸ್ಸಿನಲ್ಲಿತ್ತು. ಆಗ ಅಭಿಮಾನಿಗಳಿಂದ ‘ಈ ಸಲ ಕಪ್ ನಮ್ದೆ’ ಎನ್ನುವ ಘೋಷವಾಕ್ಯ ಪಾಪ್ಯುಲರ್ ಆಯಿತು ಮಾತ್ರವಲ್ಲ ದೊಡ್ಡ ಮಟ್ಟಕ್ಕೆ ಟ್ರೆಂಡ್ ಆಯ್ತು. ಆದರೆ 2017-18 ಎರಡು ವರ್ಷ ಕಪ್ ಮಾತ್ರ ಒಲಿಯಲಿಲ್ಲ. ಈಗ ಮೂರನೇ ಸಲ ನೋಡೇ ಬಿಡೋಣ ಎಂದರೆ ಮೊದಲ ಮೂರು ಪಂದ್ಯಗಳಲ್ಲಿಯೂ RCB ಮುಗ್ಗರಿಸಿದೆ.
ಆರಂಭಿಕ ಮೊದಲ ಪಂದ್ಯ ಸೋತಾಗ ಫಸ್ಟ್ ಮ್ಯಾಚ್ ದೇವರಿಗೆ ಬಿಟ್ಟಿದ್ದೇವೆ ಎಂದರು. ಎರಡನೇ ಪಂದ್ಯ ಸೋತಾಗ ಎಲ್ಲೋ ಎರಡು ಸಬ್ಜೆಕ್ಟ್ ಫೇಲ್ ಆದರೆ ಓದೋದು ಬಿಡೋಕ್ಕಾಗುತ್ತಾ ಎಂದರು. ಮೂರನೇಯ ಪಂದ್ಯವೂ ಹೊಗೆ ಹಾಕಿಸಿಕೊಂಡಿದೆ. ಈಗ ಮೂರು ನಾಮ ಹಾಕಿಬಿಟ್ಟಿದ್ದಾರೆಂದು ಅಭಿಮಾನಿಗಳು ಬೈಯ್ದು ಬಿಸಾಕಿದ್ದಾರೆ. ಬಿಸಿಸಿಐ ಗೆ ಅಭಿಮಾನಿಯೊಬ್ಬ ಪತ್ರ ಬರೆದು ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಯಲ್ಲಿ ಬೆಂಗಳೂರು ಪದ ಕೈಬಿಡುವಂತೆ ಒತ್ತಾಯಿದ್ದಾರೆ. ಇದರಿಂದ ಬೆಂಗಳೂರಿಗೆ ಅವಮಾನವಾಗುತ್ತಿದೆ ಎಂದು ದೂರಿದ್ದಾರೆ. ಸದ್ಯ RCB ಯಲ್ಲಿ ಕನ್ನಡಿಗ ಆಟಗಾರರಿಲ್ಲದಿರುವುದಕ್ಕೂ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಯಾಕಿಷ್ಟು ಅಸಮಾಧಾನ?
ವಿರಾಟ್ ಕೊಹ್ಲಿ ಸದ್ಯ ಭಾರತ ತಂಡದ ಯಶಸ್ವಿ ನಾಯಕ. ರನ್ ಮೆಷಿನ್ ಎಂಬ ಅಗ್ಗಳಿಕೆ ಬೇರೆ. ಇಷ್ಟೆಲ್ಲಾ ಗರಿಗಿಳಿರುವ ಇವರ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ. ಒಂದು ಸಲ ಕಪ್ ಎತ್ತಿಬಿಟ್ಟರೆ ಸಾಕು ಎಂಬ ಹಂಬಲ ಎಲ್ಲರದು. ಆದರೆ ಅದೇ ತಂಡದ ಮೇಲೆ ತೀವ್ರ ಒತ್ತಡ ಉಂಟುಮಾಡಿದೆ. ಗೆಲ್ಲಲ್ಲೇಬೇಕೆಂಬ ಛಲವಿದ್ದರೂ ಮೂರು ಬಾರಿ ಫೈನಲ್ ನಲ್ಲಿ ಮುಗ್ಗರಿಸಿದೆ. ಒಂಥರಾ ಅಸಮಾಧಾನ, ಹತಾಶೆಯ ಭಾವನೆ ಎಲ್ಲರಲ್ಲಿಯೂ ಮೂಡಿದೆ. ಸತತ 12 ವರ್ಷ ಐಪಿಎಲ್ ಆಡಿದರೂ ಒಮ್ಮೆಯೂ ಚಾಂಪಿಯನ್ ಆಗದಿದ್ದರೆ ಎಂಥವರಿಗೂ ಬೇಸರ ಆಗುವುದಿಲ್ಲವೇ?
ಒಂದು ದೊಡ್ಡ ಸಮಾಧಾನವಿದೆ. ಅದೆಂದರೆ ಕ್ರಿಕೆಟ್ ನಲ್ಲಿ ಕಪ್ ಸಿಗದಿದ್ದರೂ ಪ್ರೋ ಕಬ್ಬಡ್ಡಿ ಸೀಸನ್ 06ರಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿದೆ. ಈ ವರ್ಷ ಜನವರಿ 05ರಂದು ನಡೆದ ಫೈನಲ್ ನಲ್ಲಿ ಬಲಿಷ್ಟ ಗುಜರಾತ್ ವಿರುದ್ಧ ಅಮೋಘ ಜಯ ದಾಖಲಿಸಿ ಈ ಸಲ ಕಪ್ ನಮ್ಮದಾಗಿಸಿದೆ. ಬೆಂಗಳೂರು ಟೂರ್ನಿ ಪೂರ್ತಿ ಮೇಲುಗೈ ಸಾಧಿಸಿ ಉತ್ತಮ ಆಟವಾಡಿತ್ತು.
ಐಪಿಎಲ್ ಹಿಂದೆ ಲಲಿತ್ ಮೋದಿ ಹಗರಣದ ವಾಸನೆ ಇದೆ. ಬಂಡವಾಳಶಾಹಿ ಆಟ ಮಾತ್ರವಲ್ಲ ಆಟಗಾರರ ಹರಾಜು ಹಾಕುವುದು ಕೀಳುಮಟ್ಟದ್ದು ಎನ್ನುವ ಭಾವನೆಯಿದೆ. ದುಡ್ಡಿಗಾಗಿ ಆಡುತ್ತಾರೆಯೇ ಹೊರತು ದೇಶಕ್ಕಾಗಿ ಅಲ್ಲ, ಬೆಂಗಳೂರು ತಂಡದಲ್ಲಿ ಕರ್ನಾಟಕದವರೇ ಇಲ್ಲ ಎಂಬ ಆಪಾದನೆಗಳಿವೆ. ಆದರೂ ಹಲವು ದೇಶಗಳ ಆಟಗಾರರು ಒಟ್ಟಿಗೆ ಆಡುತ್ತಾರೆ ಮತ್ತು ಬೆರೆಯುತ್ತಾರೆ. ವಿಶ್ವದ ಶ್ರೇಷ್ಟ ಬ್ಯಾಟ್ಸ್ ಮನ್ ಗಳು ಮತ್ತು ಬೌಲರ್ ಗಳ ಆಟದ ಸೊಬಗನ್ನು ಕಣ್ತುಂಬಿಕೊಳ್ಳಲು ಇದು ಒಂದು ಉತ್ತಮ ಸಂದರ್ಭವಾಗಿದೆ. ಆರ್ ಸಿ ಬಿ ಸೋಲು ಗೆಲುವುಗಳಾಚೆಗೆ ಇಡೀ ಟೂರ್ನಿಯನ್ನು ಸಮಭಾವದಿಂದ ನೋಡೋಣ ಬನ್ನಿ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here