ಬಿಳಿತೊಗಲಿನ ಬ್ರಿಟಿಷರಿಂದ ಚಂಪಾರಣ್ ರೈತ ಹೋರಾಟದಲ್ಲಿ ನ್ಯಾಯ ಕೇಳಿದ ಗಾಂಧಿ ಈಗ ಇಲ್ಲ. ಇದ್ದಿದ್ದರೆ ಅವರು ಕೂಡ ದೇಶದ್ರೋಹದ ಅಪಾದನೆ ಹೊತ್ತು ಜೈಲಿನಲ್ಲಿ ಕೊಳೆಯುತ್ತಿದ್ದರು.
1922ರ ಮಾರ್ಚ್ ತಿಂಗಳು. ದೇಶದ್ರೋಹದ ಆಪಾದನೆಯ ಮೇರೆಗೆ ಗಾಂಧೀಜಿಯವರನ್ನು ಬಂಧಿಸಿ ಅಹಮದಾಬಾದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅಂದು ಜಾರಿಯಲ್ಲಿದ್ದ ಕಾನೂನಿನ ಪ್ರಕಾರ, ಜಾತಿ ಅಥವಾ ಕಸುಬಿನಿಂದ ತಮ್ಮನ್ನು ಗುರುತಿಸಿಕೊಳ್ಳುವಂತೆ ನ್ಯಾಯಾಧೀಶರು ಗಾಂಧೀಜಿಯನ್ನು ಕೇಳಿದರು. ’ನಾನೊಬ್ಬ ರೈತ ಮತ್ತು ನೇಕಾರ’ ಎಂದರು ಗಾಂಧಿ. ಚಕಿತಗೊಂಡ ನ್ಯಾಯಾಧೀಶ ಪುನಃ ಅದೇ ಪ್ರಶ್ನೆ ಕೇಳಿದರು. ಗಾಂಧೀ ಅದೇ ಉತ್ತರವನ್ನೂ ನೀಡಿದರು.
ತಮ್ಮ ಧಮನಿಗಳಲ್ಲಿ ಹರಿಯುತ್ತಿರುವುದು ಝಣ ಝಣ ಹಣ ಮತ್ತು ವ್ಯಾಪಾರ ಎನ್ನುತ್ತಾರೆ ಅದೇ ಗುಜರಾತಿನ ನೆಲದಲ್ಲಿ ಹುಟ್ಟಿ ಬಂದಿರುವ ಪ್ರಧಾನ ಸೇವಕ ನರೇಂದ್ರ ಮೋದಿ. ದೆಹಲಿಯ ಗಡಿಗಳ ಬಟಾಬಯಲುಗಳಲ್ಲಿ ಭಾರೀ ರೈತ ಸಮೂಹಗಳು, ನಾಲ್ಕೈದು ಡಿಗ್ರಿಗೆ ಕುಸಿದ ಎಲುಬು ಕೊರೆಯತೊಡಗಿರುವ ಥಂಡಿಯಲ್ಲಿ ಸತ್ಯಾಗ್ರಹದಲ್ಲಿ ತೊಡಗಿವೆ. ರೈತರನ್ನು ಶೋಷಣೆಯ ಬಾಣಲೆಯಿಂದ ಕಡುಶೋಷಣೆಯ ಉರಿಬೆಂಕಿಗೆ ತಳ್ಳುವ ಕರಾಳ ಕಾನೂನುಗಳನ್ನು ವಾಪಸು ಪಡೆಯಬೇಕೆಂದು ಶಾಂತಿಯುತ ಆಗ್ರಹದಲ್ಲಿ ತೊಡಗಿ ಇನ್ನೇನು ತಿಂಗಳೊಪ್ಪತ್ತು ಉರುಳಲಿದೆ. ಮಣ್ಣನ್ನು ಉತ್ತು ಅನ್ನ ಬೆಳೆದುಕೊಡುವ ರೈತ ಅಕ್ಷರಶಃ ಬೀದಿಪಾಲಾಗಿದ್ದಾನೆ. ಹೀಗಿದ್ದಾಗ ದೇಶವನ್ನು ಆಳುವ ನಾಯಕನಿಗೆ ಎದೆಯಲ್ಲಿ ನೀರಿನ ಪಸೆಯಂತಹದು ಏನಾದರೂ ಉಳಿದಿದ್ದರೆ ಆತ ನಿದ್ದೆ ನೀರಡಿಕೆಗಳನ್ನು ಕಳೆದುಕೊಳ್ಳಬೇಕು. ಆದರೆ ಪ್ರಧಾನಮಂತ್ರಿಯವರು ಸುಖದ ಸುಪ್ಪತ್ತಿಗೆಗೆ, ಆಮೋದ ಪ್ರಮೋದಗಳಿಗೆ ಯಾವ ಭಂಗವೂ ಬಂದಂತಿಲ್ಲ.
ವ್ಯವಸಾಯವೇ ಭಾರತದ ಅರ್ಥವ್ಯವಸ್ಥೆಯ ಬೆನ್ನೆಲುಬು ಎಂದಿದ್ದರು ಮಹಾತ್ಮಾ ಗಾಂಧಿ. ಈ ಮಾತುಗಳನ್ನು ಇಂದು ಕೂಡ ಹೆಚ್ಚು ಬದಲಾಯಿಸಬೇಕಿಲ್ಲ. ಬಹುದೊಡ್ಡ ಪ್ರಮಾಣದ ಜನಸಂಖ್ಯೆ ಉದ್ಯೋಗಕ್ಕಾಗಿ ಇಂದಿಗೂ ಆಧರಿಸಿರುವುದು ಕೃಷಿಯನ್ನೇ.
ಆದರೆ ಬಾಬಾಸಾಹೇಬ ಅಂಬೇಡ್ಕರ್ ಗಾಂಧೀಜಿಗಿಂತ ಭಿನ್ನ ನಿಲುವನ್ನು ಹೊಂದಿದ್ದನ್ನು ಇಲ್ಲಿ ದಾಖಲಿಸಲೇಬೇಕಿದೆ. ಅವರ ಈ ನಿಲುವು ಒಕ್ಕಲುತನದಿಂದ ದೂರವಿಟ್ಟ ಭೂವಂಚಿತ ದಲಿತ ಸಮುದಾಯಗಳನ್ನೂ ದೃಷ್ಟಿಯಲ್ಲಿಟ್ಟುಕೊಂಡಿತ್ತು. ಅವರು ಪ್ರತಿಪಾದಿಸಿದ ಕೃಷಿ ನೀತಿಯಲ್ಲಿ ಜಾತಿವಿನಾಶದ ಬೀಜಗಳಿದ್ದವು. ಸಮಾಜವಾದಿ ಮೂಲದ ನಗರೀಕರಣ ಮತ್ತು ಕೈಗಾರಿಕೀಕರಣವನ್ನು ಕೃಷಿ ನೀತಿ ಒಳಗೊಳ್ಳಬೇಕು ಎಂದಿದ್ದರು. ಭೂಮಾಲೀಕನ ದರ್ಪ ಮತ್ತು ಭೂಮಿಹೀನನ ದೈನ್ಯವನ್ನು ಅಳಿಸಿ ಹಾಕುವ ಅವರ ಕೃಷಿ ನೀತಿ ಅತ್ಯಂತ ಕ್ರಾಂತಿಕಾರಿಯಾಗಿತ್ತು ಎಂದು ನೆನೆಯುತ್ತಾರೆ ಚಿಂತಕ ಶಿವಸುಂದರ್.
ಇದನ್ನೂ ಓದಿ: ‘ಕೃಷಿ ಸುಧಾರಣೆಯಲ್ಲಿ ಜಾತಿ ವಿನಾಶದ ಬೀಜಗಳಿವೆ’ – ಕೃಷಿ ಕುರಿತ ಅಂಬೇಡ್ಕರ್ ಚಿಂತನೆಗಳು
“ಭಾರೀ ಜನಸಂಖ್ಯೆ ಮತ್ತು ಅತ್ಯಲ್ಪ ಸಾಗುವಳಿ ಭೂಮಿಯ ಅರ್ಥವೇನೆಂದರೆ, ಕೃಷಿಯನ್ನು ಆಧರಿಸಿರುವ ಜನಸಂಖ್ಯೆಯ ಬಹುಪಾಲು ಕೆಲಸವಿಲ್ಲದೆ ಕಾಲಹರಣದಲ್ಲಿ ತೊಡಗುವುದು. ನಿರರ್ಥಕವಾಗಿರುವ ಈ ಅಪಾರ ಶ್ರಮವನ್ನು ಸಾರ್ಥಕ ಉತ್ಪಾದನೆಗೆ ತೊಡಗಿಸಿದರೆ ಪರಸ್ಪರರನ್ನು ಸುಲಿದು ತಿನ್ನುವುದು ನಿಲ್ಲುತ್ತದೆ. ಹೆಚ್ಚುವರಿ ಉತ್ಪಾದನೆಯೂ ಸಾಧ್ಯ. ಹೆಚ್ಚು ಉತ್ಪಾದನೆಯ ಅರ್ಥ ಹೆಚ್ಚು ಬಂಡವಾಳದ ಸೃಷ್ಟಿ. ಚುಟುಕಾಗಿ ಹೇಳಬೇಕೆಂದರೆ ಭಾರತದ ಕೈಗಾರಿಕೀಕರಣವೇ ಭಾರತದ ಕೃಷಿ ಸಮಸ್ಯೆಗಳಿಗೆ ಸಮರ್ಥ ಪರಿಹಾರ…” ಎಂದಿದ್ದರು ಬಾಬಾಸಾಹೇಬರು. ಆದರೆ ಬಾಬಾಸಾಹೇಬರ ಕಲ್ಪನೆಯ ಸಮಾಜವಾದಿ ಆಶಯದ ನಗರೀಕರಣ ಮತ್ತು ಕೈಗಾರಿಕೀಕರಣದಿಂದ ಇಂದಿನ ಭಾರತ ಬಹುದೂರ ಸಾಗಿ ಹೋಗಿದೆ.
ಬಂಡವಾಳಶಾಹಿ ಕ್ರೌರ್ಯ ಅದರ ರಕ್ತದ ಕಣಕಣಗಳಲ್ಲಿ ತುಂಬಿ ಹೋಗಿದೆ. ಭಾರತದ ರೈತಾಪಿ ಬದುಕಿನೊಂದಿಗೆ ಗಾಂಧೀಜಿಯ ಮೊದಲ ಮತ್ತು ನೇರ ಮುಖಾಮುಖಿ ಆಗಿದ್ದು ಉತ್ತರಬಿಹಾರದ ಚಂಪಾರಣ್‌ನಲ್ಲಿ. ಸಾಮ್ರಾಜ್ಯಶಾಹಿಯ ವಿರುದ್ಧ ಮುಂಬರುವ ದಶಕಗಳಲ್ಲಿ ಗಾಂಧೀಜಿ ಸಾರುವ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಮುಂತಾದ ಸ್ವಾತಂತ್ರ್ಯ ಹೋರಾಟದ ಹಲವು ಸಮರಗಳಿಗೆ ಪೂರ್ವಸಿದ್ಧತೆಯ ಕಸುವನ್ನು ನೀಡಿದ್ದು ಚಂಪಾರಣ್ ರೈತ ಹೋರಾಟ. ಸತ್ಯಾಗ್ರಹ ಎಂಬ ಗಾಂಧೀ ಹೋರಾಟದ ಪರಿಕಲ್ಪನೆಯ ಪ್ರಯೋಗಶಾಲೆಯಾಗಿದ್ದು ಇದೇ ನೀಲಿ ಸತ್ಯಾಗ್ರಹ. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಭಾರತೀಯರ ಪ್ರತಿರೋಧದ ಪ್ರತೀಕವಾಯಿತು.

ಬ್ರಿಟನ್‌ನ ತನ್ನ ಜವಳಿ ಗಿರಣಿಗಳಿಗೆ ಕಚ್ಚಾವಸ್ತು ಪೂರೈಕೆಗಾಗಿ ನೀಲಿ ಬೆಳೆಯುವಂತೆ ಚಂಪಾರಣ್ ರೈತರನ್ನು ಬಲವಂತಪಡಿಸುತ್ತದೆ ಬ್ರಿಟಿಷ್ ಸರ್ಕಾರ. ಅದನ್ನು ತೀರಾ ಅಗ್ಗದ ದರಗಳನ್ನು ನೀಡಿ ಖರೀದಿಸುತ್ತದೆ. ತನ್ನ ಈ ಹುಕುಂಅನ್ನು ಉಲ್ಲಂಘಿಸಿದ ರೈತರ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಈ ಸೀಮೆಗೆ ಭೇಟಿ ನೀಡುವ ಗಾಂಧಿ ಐದಾರು ತಿಂಗಳ ಕಾಲ ಅಲ್ಲಿಯೇ ನೆಲೆಸುತ್ತಾರೆ. ಮಣ್ಣಿನ ಮಕ್ಕಳ ವಿಶ್ವಾಸ ಸಂಪಾದಿಸುತ್ತಾರೆ. ಅವರ ಕಷ್ಟ ಕಣ್ಣೀರುಗಳನ್ನು ಅರಿಯುತ್ತಾರೆ. ಆರೇ ವಾರಗಳಲ್ಲಿ ಏಳು ಸಾವಿರ ಮಂದಿಯ ಹೇಳಿಕೆಗಳನ್ನು ಖುದ್ದು ಸಂಗ್ರಹಿಸುತ್ತಾರೆ. ಅವುಗಳನ್ನು ಆಳುವವರ ಮುಂದಿಡುತ್ತಾರೆ. ಬಿಹಾರ ಸರ್ಕಾರ ಚಂಪಾರಣ್ ಕೃಷಿ ವಿಚಾರಣಾ ಸಮಿತಿಯನ್ನು ನೇಮಕ ಮಾಡುತ್ತದೆ. ನಾಲ್ವರು ಐಸಿಎಸ್ ಅಧಿಕಾರಿಗಳು ಮತ್ತು ಗಾಂಧೀಜಿ ಸೇರಿದಂತೆ ಏಳು ಮಂದಿ ಸದಸ್ಯರು. ಕೆಲವೇ ತಿಂಗಳುಗಳಲ್ಲಿ ಈ ಸಮಿತಿ ಸಲ್ಲಿಸುವ ವರದಿ ಬಹುತೇಕ ರೈತ ಹಿತದ ಪರವಾಗಿರುತ್ತದೆ. ರೈತರ ತಲೆಯ ಮೇಲೆ ತೂಗಿದ ನೀಲಿ ಬೆಳೆಯುವ ಕಡ್ಡಾಯದ ಕತ್ತಿಯನ್ನು ನಿವಾರಿಸುತ್ತಾರೆ.
ತಮ್ಮ ಎದುರಾಳಿ ಬ್ರಿಟಿಷ್ ವಸಾಹತುಶಾಹಿಯ ಆಳ ಅಗಲಗಳ ತಿಳಿವಳಿಕೆಯನ್ನು ಗಾಂಧೀಜಿಗೆ ನೀಡಿದ ಆಂದೋಲನವಿದು. ಮುಂಬರುವ ದಶಕಗಳಲ್ಲಿ ಜನಸಮೂಹಗಳ ಮನ ಗೆಲ್ಲುವ ವಿಶ್ವಾಸವನ್ನು ಗಾಂಧೀಜಿಗೆ ನೀಡಿದ್ದು ಇದೇ ಚಂಪಾರಣ್.
ದೆಹಲಿಯ ಗಡಿಗಳಲ್ಲಿ ನಡೆದಿರುವ ರೈತ ಹೋರಾಟ ಸ್ವತಂತ್ರ ಭಾರತದ ಸರ್ವಾಧಿಕಾರಿ ಮತ್ತು ರೈತವಿರೋಧಿ ಆಡಳಿತದ ವಿರುದ್ಧ ಚಂಪಾರಣ್ ಮಾದರಿಯ ತಿಳಿವಳಿಕೆಯನ್ನೂ ಸ್ಫೂರ್ತಿ ಪ್ರೇರಣೆಗಳನ್ನು ನೀಡುತ್ತದೆಯೇ ಕಾದು ನೋಡಬೇಕಿದೆ.
ನೂರು ವರ್ಷಗಳ ಹಿಂದಿನ ಚಂಪಾರಣ್ ರೈತರ ಸ್ಥಿತಿಯೇ ಇಂದಿನ ಭಾರತದ ರೈತರ ಸ್ಥಿತಿಗತಿಯೂ ಆಗಿದೆ ಎನ್ನುತ್ತಾರೆ ಗಾಂಧೀಜಿಯ ಮೊಮ್ಮಗ ತುಷಾರ್ ಗಾಂಧಿ. ಅತಿ ದೀನ ದಲಿತ ರೈತರ ಶೋಷಣೆ ಇಂದಿಗೂ ನಿಂತಿಲ್ಲ. ಬ್ರಿಟಿಷರ ಭಾರತದಲ್ಲಿ ಲಾಭಬಡುಕತನವೇ ರೈತರ ಶೋಷಣೆಯ ಮೂಲವಾಗಿತ್ತು. ಸ್ವತಂತ್ರ ಭಾರತದಲ್ಲಿಯೂ ಈ ಸ್ಥಿತಿ ಬದಲಾಗಿಲ್ಲ. ಕಚ್ಚಾ ಉತ್ಪನ್ನವನ್ನು ಬಿಕರಿಗಿಟ್ಟ ರೈತ ಮತ್ತು ಸಿದ್ಧ ಉತ್ಪನ್ನವನ್ನು ಖರೀದಿಸುವ ಬಳಕೆದಾರ ಇಬ್ಬರ ಕಣ್ಣಿಗೂ ಸುಣ್ಣವೇ. ಬೆಣ್ಣೆ ಉಣ್ಣುವವರು ಅಂದೂ ಪೊಗದಸ್ತಾಗಿದ್ದರು, ಇಂದೂ ಪೊಗದಸ್ತಾಗೇ ಮೆರೆದಿದ್ದಾರೆ.
ನೀಲಿ ಸತ್ಯಾಗ್ರಹ ಇಂದು ಹಿಂದೆಂದಿಗಿತ ಹೆಚ್ಚು ಪ್ರಸ್ತುತ. ತುಳಿತಕ್ಕೆ ಒಳಗಾದವರಿಗೆ ಶಕ್ತಿಯನ್ನು ಕೊಟ್ಟ ಆಂದೋಲನ ಅದು. ’ನೀಲಿ ಸತ್ಯಾಗ್ರಹ’ವನ್ನು ಸ್ವತಂತ್ರ ಭಾರತದಲ್ಲಿ ಕಟ್ಟುವುದು ಬ್ರಿಟಿಷರ ಭಾರತದಲ್ಲಿ ಕಟ್ಟಿದ್ದಕ್ಕಿಂತ ಕಷ್ಟದ ಕೆಲಸ ಎಂಬುದನ್ನು ಮೋದಿ ಸರ್ಕಾರ ಮನವರಿಕೆ ಮಾಡಿಕೊಡತೊಡಗಿದೆ.
ರೈತರನ್ನು ಬಾಧಿಸುವ ಸಂಗತಿಗಳು ಅಂತಿಮವಾಗಿ ಇಡೀ ಸಮಾಜವನ್ನು ಬಾಧಿಸುತ್ತವೆ ಎಂಬ ಆಳದ ತಿಳಿವಳಿಕೆ ಗಾಂಧೀಜಿಗೆ ಇತ್ತು. ಇಂತಹ ಅರಿವಿನ ಬೀಜವನ್ನು ಮೋದಿಯವರ ಕಲ್ಲೆದೆಯಲ್ಲಿ ಬಿತ್ತಿ ಬೆಳೆಯುವ ಅಸಾಧ್ಯ ಸವಾಲನ್ನು ಇಂದಿನ ರೈತ ಆಂದೋಲನ ಎದುರಿಸಿದೆ.
ರೈತರನ್ನು ಶೋಷಿಸುವ ಚಂಪಾರಣ್‌ಗಳು ಸ್ವತಂತ್ರ ಭಾರತದಲ್ಲಿ ಇನ್ನಷ್ಟು ಹುಲುಸಾಗಿ ಬೆಳೆದಿವೆ. ಕೊಬ್ಬಿ ಹಬ್ಬಿವೆ. ನೂರಾರು ಚಂಪಾರಣ್‌ಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳತೊಡಗಿರುವ ಸಾವಿರಾರು ರೈತ ಕುಟುಂಬಗಳ ಕಷ್ಟ ಕಣ್ಣೀರುಗಳ ಕಥನಗಳನ್ನು ಆಲಿಸಲು, ಅವುಗಳನ್ನು ಕಂದು ತೊಗಲಿನ ಸಾಹೇಬರುಗಳ ಸರ್ಕಾರದ ಮುಂದಿರಿಸಿ ನ್ಯಾಯ ಕೇಳುವ ಗಾಂಧಿ ಈಗ ಇಲ್ಲ. ಇದ್ದಿದ್ದರೆ ಅವರು ಆಜೀವ ಪಯಂತ ಜೈಲಿನಲ್ಲಿ ಕೊಳೆಯುತ್ತಿದ್ದರು.


