ಹೊಸ ರೂಪಾಂತರಿ ಕೊರೊನಾ ಹಿನ್ನಲೆಯಲ್ಲಿ ಬುಧವಾರದಿಂದ ಜನವರಿ 2 ರವರೆಗೆ ’ರಾತ್ರಿ ಕರ್ಫ್ಯೂ’ ಜಾರಿಗೊಳಿಸಲಾಗಿದೆ ಎಂದಿದ್ದ ಮುಖ್ಯಮಂತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇದೀಗ ಮತ್ತೇ ತಮ್ಮ ನಿಲುವನ್ನು ಬದಲಿಸಿದ್ದಾರೆ. ಇದೀಗ ಟ್ವೀಟ್‌ನಲ್ಲಿ “ದಿನಾಂಕ 24.12.2020 ರಿಂದ ಜನವರಿ 01, 2021 ರವರೆಗೆ ರಾತ್ರಿ ಕರ್ಫ್ಯೂ ಇರಲಿದೆ” ಎಂದಿದ್ದಾರೆ.
ಇಂದು ಮಧ್ಯಾಹ್ನ ಪತ್ರಕರ್ತರೊಂಗಿಗೆ ಮಾತನಾಡಿದ್ದ ಮುಖ್ಯಮಂತ್ರಿ, “ರಾಜ್ಯದಲ್ಲಿ ಬುಧವಾರದಿಂದ ಜನವರಿ 2 ರವರೆಗೆ ’ರಾತ್ರಿ ಕರ್ಫ್ಯೂ’ ಜಾರಿಗೊಳಿಸಲಾಗಿದೆ. ಈ ಆದೇಶವು ಇಡೀ ರಾಜ್ಯಕ್ಕೆ ಅನ್ವಯವಾಗಲಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬುಧವಾರ ರಾತ್ರಿಯಿಂದಲೇ ಈ ಕ್ರಮ ಜಾರಿಗೆ ಬರಲಿದೆ” ಎಂದು ತಿಳಿಸಿದ್ದರು.
ಇದನ್ನೂ ಓದಿ: ಇಂದಿನಿಂದ ರಾಜ್ಯದಲ್ಲಿ ’ರಾತ್ರಿ ಕರ್ಫ್ಯೂ’ ಜಾರಿ: ಮುಖ್ಯಮಂತ್ರಿ ಯಡಿಯೂರಪ್ಪ
ಆದರೆ ಸಂಜೆ 5:30 ಕ್ಕೆ ಟ್ವೀಟ್ ಮಾಡಿರುವ ಅವರು, “ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ಬದಲಾಗಿ ನಾಳೆ, ಅಂದರೆ ದಿನಾಂಕ 24.12.2020 ರಿಂದ ಜನವರಿ 01, 2021 ರವರೆಗೆ, ರಾತ್ರಿ 11:00 ಗಂಟೆಯಿಂದ ಬೆಳಗ್ಗೆ 5:00 ಗಂಟೆಯವರೆಗೆ (ದಿನಾಂಕ 02.01.2021ರ ಬೆಳಗ್ಗೆ 5:00 ಗಂಟೆ) ಜಾರಿಯಲ್ಲಿರುತ್ತದೆ” ಎಂದು ಹೇಳಿದ್ದಾರೆ.
“ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ, ದಿನಾಂಕ 24.12.2020 ರ ರಾತ್ರಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೆ ಮಾಡಬಹುದು” ಎಂದು ಅವರು ಹೇಳಿದ್ದಾರೆ.
ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ, ದಿನಾಂಕ 24.12.2020 ರ ರಾತ್ರಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೆ ಮಾಡಬಹುದು. (2/2)
— CM of Karnataka (@CMofKarnataka) December 23, 2020
ಇದನ್ನೂ ಓದಿ: ಹೊಸ ಕೊರೊನಾ ಆತಂಕ: ಲಂಡನ್‌ನಿಂದ ಬಂದಿದ್ದ 6 ಮಂದಿಗೆ ಕೊರೊನಾ ಸೋಂಕು
ಇನ್ನೆರೆಡು ದಿನದಲ್ಲಿ ಕ್ರಿಸ್‌ಮಸ್ ಹಬ್ಬ ಇರುವುದರಿಂದ ಮುಖ್ಯಮಂತ್ರಿ ರಾತ್ರಿ ಕರ್ಫ್ಯೂ ಹೇರಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಡಿಸೆಂಬರ್ 21 ರಂದು ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದ್ದು, ವಿಶ್ವದಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿದೆ. ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಭಾರತದ ವಿಮಾನಯಾನ ಸಚಿವಾಲಯ ಯುಕೆಯಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಡಿಸೆಂಬರ್ 31 ರ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು.
ಕಳೆದ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ನ ವಿಜ್ಞಾನಿಗಳು ರೋಗಿಯೊಬ್ಬರಲ್ಲಿ ಹೊಸ ರೂಪದ ಕೊರೊನಾ ವೈರಸ್ ಅನ್ನು ಕಂಡು ಹಿಡಿದಿದ್ದರು. ಬ್ರಿಟನ್‌ನಲ್ಲಿ ನವೆಂಬರ್ ತಿಂಗಳಲ್ಲಿ ಹೆಚ್ಚಾದ ಕೊರೊನಾ ಪ್ರಕರಣಗಳಲ್ಲಿ ಈ ವೈರಸ್ ಹೆಚ್ಚಾಗಿದ್ದರಿಂದ ಡಿಸೆಂಬರ್ 11 ರಂದು ಸರ್ಕಾರಕ್ಕೆ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಯುಕೆಯಿಂದ ಬಂದ ಪ್ರಯಾಣಿಕರಿಗಾಗಿಯೇ ಈ ಹೊಸ ಎಸ್‌ಒಪಿ ಮಾರ್ಗಸೂಚಿ ಸಿದ್ಧಪಡಿಸಿದ್ದು, ರಾಜ್ಯ ಸಕಾರಗಳಿಗೆ ನಿಗಾ ವಹಿಸುವಂತೆ ಸೂಚನೆ ನೀಡಿದೆ. ಆರೋಗ್ಯ ಸಚಿವಾಲಯವು ತನ್ನ ಎಸ್‌ಒಪಿಗಳಲ್ಲಿ 2020 ರ ನವೆಂಬರ್ 25 ರಿಂದ ಡಿಸೆಂಬರ್ 8 ರ ನಡುವೆ ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ ಪ್ರಯಾಣಿಕರ ಮೇಲೆ ರಾಜ್ಯ ಸರ್ಕಾರ ನಿಗಾ ಇಟ್ಟು ಟೆಸ್ಟ್ ಮಾಡಿಸಲು ತಿಳಿಸಲಾಗಿದೆ. ಯುಕೆಯಿಂದ ಬಂದಿಳಿದಿರುವ ಪ್ರಯಾಣಿಕರನ್ನ ಆರ್ಟಿಪಿಸಿಆರ್ ಟೆಸ್ಟ್ಗೆ ಒಳಪಡಿಸುವುದು ಸೇರಿದಂತೆ ಹಲವು ನಿಯಮಗಳನ್ನು ಪರಿಚಯಿಸಿದೆ.
ಇದನ್ನೂ ಓದಿ: ಹೊಸ ಕೊರೊನಾ ಆತಂಕ: ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ


