ಬ್ರಿಟನ್‌ನಲ್ಲಿ ಹೊಸ ಸ್ಪರೂಪದ ಕೊರೊನಾ ವೈರಸ್ ತೀವ್ರ ವೇಗದಲ್ಲಿ ಹಬ್ಬುತಿದ್ದು, ಭಾರತದಲ್ಲೂ ಆತಂಕಕ್ಕೆ ಕಾರಣವಾಗಿದೆ. ಡಿ.21ರ ರಾತ್ರಿ ಲಂಡನ್‌ನಿಂದ ಏರ್ ಇಂಡಿಯಾ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ ಆರು ಪ್ರಯಾಣಿಕರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.

ದೆಹಲಿಗೆ ಬೆಳಿಗ್ಗೆ ಬಂದಿಳಿದ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿದ್ದವರನ್ನು ಕೊರೊನಾಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರಿಟನ್‌ನಲ್ಲಿ ಹೊಸ ವೈರಸ್ ಕಾಣಿಸಿಕೊಂಡಿದ್ದು, ಅಲ್ಲಿಂದಲೇ ಬಂದಿರುವ ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಯುಕೆಯಿಂದ ಭಾರತಕ್ಕೆ ಬರುವ ವಿಮಾನಗಳ ತಾತ್ಕಾಲಿಕ ನಿಷೇಧವು ಇಂದು ರಾತ್ರಿಯಿಂದ ಜಾರಿಗೆ ಬರಲಿದ್ದು, ಇದು ಡಿಸೆಂಬರ್ 31 ರವರೆಗೆ ಇರುತ್ತದೆ. ಅಲ್ಲಿಯವರೆಗೆ, ಬ್ರಿಟನ್‌ನಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲೇ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.

ಇದನ್ನೂ ಓದಿ: ಹೊಸ ಕೊರೊನಾ ಆತಂಕ: ಕಳೆದ 14 ದಿನದಲ್ಲಿ ಹೊರ ದೇಶಗಳಿಂದ ರಾಜ್ಯಕ್ಕೆ ಬಂದವರಿಗೆ ಟೆಸ್ಟ್

ಡಿ.21 ರ ಸೋಮವಾರ ರಾತ್ರಿ ಲಂಡನ್‌ನಿಂದ ಭಾರತಕ್ಕೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನದಲ್ಲಿ 266 ಜನ ಪ್ರಯಾಣಿಕರಿದ್ದರು. ಅವರಲ್ಲಿ 6 ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೊರೊನಾ ಪರೀಕ್ಷೆಗಳನ್ನು ನಡೆಸಲು ಸಹಾಯ ಮಾಡುತ್ತಿರುವ ಸರ್ಕಾರಿ ಅಧಿಕಾರಿ ಅವನಿಶ್ ಕುಮಾರ್ ಹೇಳುವಂತೆ, ಈ ಆರು ಜನರಲ್ಲಿ ಹೊಸ ಸ್ವರೂಪದ ಕೊರೊನಾ ಇದೆಯಾ ಎಂಬುದು ಇನ್ನು ಸ್ಪಷ್ಟವಾಗಿಲ್ಲ, ಎನ್‌ಸಿಡಿಸಿ (National Centre for Disease Control) ಇದನ್ನು ಖಚಿತಪಡಿಸುತ್ತದೆ ಎಂದಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿರುವ ಮಾದರಿಗಳನ್ನು ಎನ್‌ಸಿಡಿಸಿಗೆ ಕಳುಹಿಸಲಾಗಿದೆ.

ದೇಶದಲ್ಲಿ, ಬ್ರಿಟನ್ ವಿಮಾನ ನಿಷೇಧ ಘೋಷಣೆಯಾದಾಗಿನಿಂದ ಬ್ರಿಟನ್‌ನಿಂದ ಎರಡು ವಿಮಾನಗಳು ಭಾರತಕ್ಕೆ ಬಂದಿವೆ. ಒಂದು ಮುಂಬೈ ಮತ್ತು ಇನ್ನೊಂದು ಪಂಜಾಬ್‌ನ ಅಮೃತಸರದಲ್ಲಿ ಇಳಿದಿವೆ. ಅಮೃತಸರದಲ್ಲಿ  ಆಗಮಿಸಿದ 240 ಪ್ರಯಾಣಿಕರ ಪರೀಕ್ಷಾ ಫಲಿತಾಂಶಗಳು ಮಂಗಳವಾರ(ಡಿ.22) ಮಧ್ಯಾಹ್ನ ಬರಲಿವೆ ಎಂದು ಸರ್ಕಾರಿ ಅಧಿಕಾರಿ ದೀಪಕ್ ಭಾಟಿಯಾ ತಿಳಿಸಿದ್ದಾರೆ.

ಹೊಸ ಸ್ವರೂಪದ ಕೊರೊನಾ ನಿಯಂತ್ರಣಕ್ಕಾಗಿ ಇಂಗ್ಲೆಂಡ್‌ ಸರ್ಕಾರ ಈಗಾಗಲೇ ನಾಲ್ಕನೇ ಹಂತದ ಲಾಕ್‌ಡೌನ್ ಘೋಷಿಸಿ, ಜನರನ್ನು ಮನೆಯಲ್ಲಿಯೇ ಇರುವಂತೆ ಮನವಿ ಮಾಡಿದೆ. ದೇಶದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.


ಇದನ್ನೂ ಓದಿ: ಬ್ರಿಟನ್‌ನಲ್ಲಿ ಹೊಸ ಕೊರೊನಾ ವೈರಸ್ ಪತ್ತೆ: ಯುಕೆ ವಿಮಾನಗಳನ್ನು ನಿರ್ಬಂಧಿಸಿದ ಭಾರತ

LEAVE A REPLY

Please enter your comment!
Please enter your name here