Homeಮುಖಪುಟಮದುಮಗಳು ರಂಗದ ಹಿಂದಿನ ವಿಶ್ವಮಾನವ ಶಕ್ತಿ

ಮದುಮಗಳು ರಂಗದ ಹಿಂದಿನ ವಿಶ್ವಮಾನವ ಶಕ್ತಿ

- Advertisement -
- Advertisement -

ಇಲ್ಲಿ ಯಾರೂ ಮುಖ್ಯರಲ್ಲ,
ಯಾರೂ ಅಮುಖ್ಯರಲ್ಲ,
ಯಾವುದೂ ಯಃಕಶ್ಚಿತವಲ್ಲ…

ಈ ಮೇರು ತಾತ್ವಿಕತೆಯು ರೂಪತಾಳಿದ್ದು ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ. ವಿಶ್ವಮಾನವ ಸಂದೇಶವನ್ನು ಸಾರಿದ ಕುವೆಂಪುರವರ ಅತ್ಯುತ್ಕೃಷ್ಟ ಗದ್ಯಕೃತಿ ಮಲೆಗಳಲ್ಲಿ ಮದುಮಗಳು. ಇದು ಹಿರಿಯ ರಂಗಕರ್ಮಿ ಬಸವಲಿಂಗಯ್ಯನವರ ನಿರ್ದೇಶನದಲ್ಲಿ ರಂಗರೂಪಕವಾಗಿ ಅಹೋರಾತ್ರಿ ಸಾವಿರಾರು ಪ್ರೇಕ್ಷಕರ ಸಮ್ಮುಖ ನೂರಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು ಈಗ ಇತಿಹಾಸ. ಇದು ಕೇವಲ ಕನ್ನಡ ರಂಗಭೂಮಿ ಮಾತ್ರವೇ ಅಲ್ಲದೇ ಭಾರತೀಯ ರಂಗಭೂಮಿಯ ಇತಿಹಾಸದಲ್ಲೇ ಅಚ್ಚಳಿಯದ ದಾಖಲೆ.

ಓದುಗನಿಗೆ ಕಾದಂಬರಿ ಕಟ್ಟಿಕೊಡುವ ಲೋಕವೇ ಬೇರೆ, ಪ್ರೇಕ್ಷಕನಿಗೆ ರಂಗಪ್ರಯೋಗ ಕಟ್ಟಿಕೊಡುವ ಲೋಕವೇ ಬೇರೆ. ಹಾಗೆಯೇ ಈ ರಂಗಪ್ರಯೋಗದಲ್ಲಿ ಭಾಗಿಯಾಗುವ ಕಲಾವಿದರಿಗೆ ದೊರೆಯುವ ಅನುಭವ ಲೋಕವೇ ಇನ್ನೊಂದು ತೆರನಾದದ್ದು. ಹೀಗಿರುವಾಗ ಇಡೀ ರಂಗಪ್ರಯೋಗದಲ್ಲಿನ ಕೆಲವು ಅನುಭವಗಳು ಇದರಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕಲಾವಿದರಿಗೂ ಆಗಿದೆ ಎಂಬುದು ಅತಿಶಯೋಕ್ತಿ ಅಲ್ಲ.

ಮುಖ್ಯವಾಗಿ ಕುವೆಂಪು ಒಬ್ಬ ದಾರ್ಶನಿಕ ಕವಿ. ಅವರ ’ಜಡವೆಂಬುದು ಕೇವಲ ಜಡವಲ್ಲ ಮಾತು ಈ ಪ್ರಯೋಗದಲ್ಲಿ ಪ್ರಕೃತಿಯ ನಿತ್ಯ ಪ್ರಕ್ರಿಯೆಗಳಾದ ಮಳೆ, ಗಾಳಿ, ಕಲ್ಲು, ಮಣ್ಣು ಎಲ್ಲವೂ ಜೀವ ಪಡೆದು ನಾಟಕದಲ್ಲಿ ಸಜೀವ ಭಾಗಗಳಾಗಿ ಸಾಬೀತುಗೊಳ್ಳುತ್ತಿದ್ದವು. ಇದರೊಂದಿಗೆ ಪ್ರತಿಯೊಬ್ಬ ಕಲಾವಿದರು ಮುಖಾಮುಖಿಗೊಂಡೇ ತಮ್ಮತಮ್ಮ ಪಾತ್ರಗಳನ್ನು ನಿರ್ವಹಿಸಬೇಕಾಗಿತ್ತು. ಇದು ಗುತ್ತಿ ತನ್ನ ಅತ್ತೆ ಮಗಳನ್ನು ಹಾರಿಸಿಕೊಂಡು ಬರಲು ಹೋಗುವಾಗ ದನಗೋಳು ಮಳೆಯಲ್ಲಿ ದೀವರ ಮಕ್ಕಳು ಮೀನು ಹಿಡಿಯಲು ಹೋಗುವ ದೃಶ್ಯದ ಸಂದರ್ಭದಲ್ಲಿ ಆ ಸಂಗೀತ ಮತ್ತು ಮಳೆಯ ಶಬ್ದಗಳು ಪ್ರೇಕ್ಷಕರಿಗೆ ಮಲೆನಾಡಿನ ಅನುಭವ ನೀಡುತ್ತಿದ್ದರೆ, ಅದೇ ಸಂದರ್ಭದಲ್ಲಿ ರಂಗದ ಹಿಂದೆ ಇದ್ದ ಕಲಾವಿದರಿಗೂ ಆ ಅನುಭವವಾಗುತ್ತಿತ್ತು. ಹಾಗೆಯೇ ಗುತ್ತಿಯ ಛಲವನ್ನು ಹೆಚ್ಚಿಸುವ ಸಗಣಿ ಹುಳುಗಳು ಬಂದಾಗ ರಂಗಪ್ರಯೋಗದ ಜಾಗದಲ್ಲಿ ಇದ್ದಂತಹ ಸಣ್ಣ ಸಣ್ಣ ಹುಳು ಹುಪ್ಪಟೆಗಳು ಕೂಡ ಅಲ್ಲಿದ್ದ ಕಲಾವಿದರಿಗೆ ವಿಸ್ಮಯಕಾರಿಯಾಗಿ ಕಾಣುತ್ತಿದ್ದವು.

ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಕಾರಣದಿಂದಾಗಿ ಎಷ್ಟೋ ಪ್ರಯೋಗಗಳು ನಿಂತುಹೋಗಿವೆ. ಇಂತಹ ಮಳೆ ಸುರಿದಾಗ ಮುಖ್ಯವಾಗಿ ಕೆರೆ ಅಂಗಳದಲ್ಲಿ ಮಣ್ಣಿನಿಂದ ಮೇಲೆದ್ದು ಬಂದು ಕಾಲುಕಾಲಿಗೆ ಸಿಗುತ್ತಿದ್ದಂತಹ ಏಡಿಯ ಮರಿಗಳನ್ನು ಎಲ್ಲರೂ ವಿಸ್ಮಯದಿಂದಲೇ ಕಾಣುತ್ತಿದ್ದೆವು. ಏಕೆಂದರೆ ಇಷ್ಟು ದಿನ ಆ ಜಾಗದಲ್ಲಿ ಅವುಗಳ ಕುರುಹೇ ಕಾಣುತ್ತಿರಲಿಲ್ಲ. ಆದರೆ ಒಂದು ಜೋರು ಮಳೆಗೆ ಮಣ್ಣಿನಿಂದ ಮರಿಗಳು ಎದ್ದು ಬಂದು ಕೆರೆಯ ನೀರಿಗೆ ನಡೆದುಹೋಗುತ್ತಿದ್ದವು. ಎಷ್ಟೋ ಕಲಾವಿದರು ಅವುಗಳನ್ನು ಹಿಡಿದು ಜೇಬಿನಲ್ಲಿ ಇಟ್ಟ್ಟುಕೊಂಡು ಪ್ರದರ್ಶನದಲ್ಲಿ ಮತ್ತೊಬ್ಬ ಕಲಾವಿದರ ಕೈಗೆ ಕೊಟ್ಟು ತಮಾಷೆಯಲ್ಲಿ ತೊಡಗಿಕೊಳ್ಳುವುದರ ಜೊತೆಗೆ ತಾವು ಆ ಪ್ರಕೃತಿಯ ಭಾಗವಾಗಿಯೇ ಬದುಕುತ್ತಿದ್ದರು.

ಅದೇ ರೀತಿಯಲ್ಲಿ ’ಮಸೇಕಲ್ಲು. ಕುವೆಂಪುರವರು ಮಸೇಕಲ್ಲಿನ ಮುಖಾಂತರ ತಲೆತಲೆಮಾರಿನ ಕತೆಗಳನ್ನು ಸುಬ್ಬಣ್ಣ ಹೆಗ್ಗಡೆಯ ಮೂಲಕ ಹೇಳಿಸುತ್ತಾರೆ. ಈ ಮಾತುಗಳನ್ನು ಸುಬ್ಬಣ್ಣ ಹೆಗ್ಗಡೆ ಹೇಳುವಾಗ ರಂಗದ ಹಿಂದೆ ಕುಳಿತ ಕಲಾವಿದರು ತಮಗೆ ಅರಿವಿಲ್ಲದೆಯೆ ತಾವುಗಳು ಕುಳಿತುಕೊಂಡಿರುವ ಕಲ್ಲುಗಳ ಬಗ್ಗೆ ಚಿಂತಿಸುತ್ತಿದ್ದರು. ಆ ಸಂದರ್ಭದಲ್ಲಿ ಕುವೆಂಪುರವರ ’ಶಿಲಾತಪಸ್ವಿ ಕವನವನ್ನು ಕೆಲವರು ನೆನೆಯುತ್ತಿದ್ದರು. ಇಲ್ಲಿ ಮತ್ತೊಂದು ಮಾತು ಹೇಳುವುದು ಉಚಿತ ಎನಿಸುತ್ತದೆ. ಅಲ್ಲಿದ್ದ ಯಾವ ಕಲಾವಿದರಿಗೂ ಯಾರು ಯಾವ ಜಾತಿ, ಯಾವ ಧರ್ಮ ಎಂದು ಗೊತ್ತಿರಲಿಲ್ಲ. ಎಲ್ಲರೂ ’ಮನುಷ್ಯಜಾತಿತಾನೊಂದೇ ವಲಂ’ ಎಂಬುದನ್ನು ನಂಬಿ ಒಟ್ಟಾಗಿ ಸೇರಿದ್ದವರು. ಹೀಗಿದ್ದರೂ ಹುಲಿಕಲ್ಲು ನೆತ್ತಿ ಹತ್ತುವಾಗ ಕುಸಿದು ಬಿದ್ದ ಸಮಯದಲ್ಲಿ ಸುಬ್ಬಣ್ಣ ಹೆಗ್ಗಡೆಗೆ ಆಸರೆಯಾಗಿ ಬಂದು, ತಮ್ಮ ಹೆಗಲನ್ನು ಕೊಟ್ಟು ದೊಡ್ಡಬೀರ ಮತ್ತು ಆತನ ಮಗ ಕರೆದುಕೊಂಡು ಹೋಗುವಾಗ ಇಷ್ಟು ದಿನ ಜಾತಿ ವ್ಯವಸ್ಥೆಯನ್ನು ಬಲವಾಗಿ ನಂಬಿದ್ದ ಸುಬ್ಬಣ್ಣ ಹೆಗ್ಗಡೆಗೆ ಮಾನವಧರ್ಮದ ಪರಿಚಯವಾಗುತ್ತಿತ್ತು. ಈ ಸಂದರ್ಭದಲ್ಲಿ ಎಷ್ಟೋ ಕಲಾವಿದರು ತಮ್ಮ ಪಕ್ಕದ ಕಲಾವಿದರ ಕೈಕೈ ಹಿಡಿದು ಗಟ್ಟಿ ಮಾಡಿಕೊಳ್ಳುತ್ತಿದ್ದುದು ಆಗಿದೆ. ಪ್ರತಿಯೊಬ್ಬರಲ್ಲೂ ಸುಪ್ತವಾಗಿ ಇದ್ದಂತಹ ವಿಶ್ವಮಾನವಗುಣ ಎದ್ದು ಹೊರಬಂದಂತೆ ಕಾಣುತ್ತಿತ್ತು. ಆಗ ಕುವೆಂಪುರವರ ವಿಶ್ವಮಾನವಗೀತೆಯ ’ನೂರು ಮತದ ಹೊಟ್ಟ ತೂರಿ, ಎಲ್ಲತತ್ವದೆಲ್ಲೆ ಮೀರಿ, ನಿರ್ದಿಗಂತವಾಗಿ ಏರಿ, ಓ ನನ್ನ ಚೇತನ ಆಗು ನೀ ಅನಿಕೇತನ’ ಸಾಲು ನೆನಪಾಗುತ್ತಿತ್ತು.

ಕುವೆಂಪುರವರು ಕಲಾವಿದರ ಮೇಲೆ ಎಷ್ಟು ಪ್ರಭಾವ ಬೀರಿದ್ದರು ಎಂಬುದಕ್ಕೆ ಮತ್ತೊಂದು ಉದಾಹಾರಣೆ ಎಂದರೆ ಅವರು ಪ್ರತಿಪಾದಿಸಿದ ಮಹತ್ವಾಕಾಂಕ್ಷೆಯ ’ಮಂತ್ರಮಾಂಗಲ್ಯ ವಿವಾಹ. ಇದರಿಂದ ಪ್ರೇರಣೆಯಾಗಿ ನಮ್ಮ ಕಲಾವಿದರಲ್ಲೇ ಐದು ಜೋಡಿಗಳು ಪ್ರೇಮ-ವಿವಾಹವಾಗಿದ್ದು ಸಂತಸದ ಸಂಗತಿ. ಇದು ಕೇವಲ ಕಲಾವಿದರು ಮಾತ್ರವಲ್ಲ ಎಷ್ಟೋ ಪ್ರೇಕ್ಷಕರಲ್ಲೂ ಕೂಡ ಪ್ರೇಮಾಂಕುರಕ್ಕೆ ಕಾರಣವಾಗಿ ಲೆಕ್ಕವಿಲ್ಲದಷ್ಟು ಮಂತ್ರಮಾಂಗಲ್ಯಗಳು ನಡೆದಿವೆ. ಅದು ಒತ್ತಟ್ಟಿಗಿರಲಿ, ಮದುಮಗಳು ರಂಗಪ್ರಯೋಗದ ಕಲಾವಿದ ತರುಣತರುಣಿಯರಲ್ಲಿ ಪ್ರೇಮಾಂಕುರವಾಗಿ ಅವರು ತಮ್ಮ ಮನೆಯವರ ಒಪ್ಪಿಗೆಯನ್ನು ಪಡೆದು ವಿವಾಹವಾಗಿದ್ದು, ಮತ್ತು ಅವರ ಮನೆಯವರು ಈ ವಿವಾಹಕ್ಕೆ ಬೆಂಗಾವಲಾಗಿ ನಿಂತಿದ್ದು ವಿಶೇಷಗಳಲ್ಲಿ ವಿಶೇಷ. ಅದರಲ್ಲೂ ಪ್ರತಿ ಎರಡು ಮೂರು ವರ್ಷಕ್ಕೆ ಕೆಲವು ಪ್ರದರ್ಶನಗಳಂತೆ ನಡೆಯುತ್ತಿದ್ದ ಮದುಮಗಳ ಪ್ರತಿ ದಿಬ್ಬಣದಲ್ಲೂ ಈ ರೀತಿಯ ಒಂದಲ್ಲ ಒಂದು ಪ್ರೇಮವಿವಾಹ ಮಂತ್ರಮಾಂಗಲ್ಯದ ಮೂಲಕ ಜರುಗುತಿತ್ತು.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಎಲ್ಲಕ್ಕೂ ಮುಖ್ಯವಾಗಿ ಮದುಮಗಳು ಶತಕದ ಸಂಭ್ರಮದ ನಂತರ ನಡೆದ ವಿವಾಹ ವಿಶೇಷಗಳಲ್ಲೇ ವಿಶೇಷ. ಐತ ಪಾತ್ರಧಾರಿ ’ಸ್ವಾಮಿ’ ಹಾಗೂ ಕಾವೇರಿ ಮತ್ತು ತಿಮ್ಮಿ ಪಾತ್ರವನ್ನು ನಿರ್ವಹಿಸಿದ್ದ ’ಮೀನಾಕ್ಷಿಯ ಪ್ರೇಮವಿವಾಹವು ಮದುಮಗಳು ರಂಗಭೂಮಿಯಲ್ಲೇ ಮಂತ್ರಮಾಂಗಲ್ಯದ ಮೂಲಕ ಜರುಗಿದ್ದು ಅವಿಸ್ಮರಣೀಯ. ಆಗ ಎಲ್ಲಾ ಕಲಾವಿದರು ತಮ್ಮ ಮನೆಯ ಮದುವೆಯೇ ಎಂಬಂತೆ ಸಂಭ್ರಮಿಸಿದರು. ಅಂದು ಹಬ್ಬದ ವಾತಾವರಣದಿಂದ ಇಡೀ ಮದುಮಗಳು ತಂಡ ತೇಲಾಡುತ್ತಿತ್ತು. ಆ ಮೂಲಕ ಕುವೆಂಪುರವರ ಚಿಂತನೆಗಳು ನಮ್ಮ ಬದುಕಿನ ದಾರಿದೀಪವಾಯಿತು.

ಕುವೆಂಪುರವರ ಸ್ತ್ರೀವಾದ ಅತ್ಯಂತ ಮಾನವೀಯ ಮೌಲ್ಯಗಳಿಂದ ಕೂಡಿರುವಂತಹದ್ದು. ಅವರ ಎರಡೂ ಕಾದಂಬರಿಗಳೂ ಹೆಣ್ಣನ್ನು ಕೇಂದ್ರವಾಗಿಸಿಕೊಂಡು ರಚಿಸಿದವು. ನಮ್ಮೊಳಗಿನ ಆಧುನಿಕತೆಯ ಭ್ರಮೆಯನ್ನು ಕೂಡ ಅವು ಮರು ವಿವೇಚನೆಗೆ ಒಳಪಡಿಸುತ್ತದೆ. ದೇಯಿ ಪಾತ್ರದ ಸಾವಿನಲ್ಲಿ ಚೀಂಕ್ರನ ವರ್ತನೆ. ಜೊತೆಗೆ ಕಾವೇರಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಸಾವಿಗೆ ಕಾರಣವಾಗುವ ಚೀಂಕ್ರ ಮತ್ತು ಅವನ ಸಹಚರರ ದೃಶ್ಯಗಳು ರಂಗದ ಮೇಲೆ ನಡೆಯುತ್ತಿದ್ದರೆ ರಂಗದ ಹಿಂದೆ ಇದ್ದಂತಹ ಹುಡುಗರಿಗೆ ತಮ್ಮೊಳಗಿನ ಗಂಡು ಅಹಂಗೆ ಪೆಟ್ಟು ಬಿದ್ದಂತಾಗಿ ಜಾಗೃತಗೊಳ್ಳುತ್ತಿದ್ದೆವು.

ಇದೇ ರೀತಿ ನಮ್ಮದೇ ತಂಡದ ಕಲಾವಿದೆ ’ಮಾದೇವಿ’ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಇಂದಿಗೂ ತಂಡದ ಪ್ರತಿ ಕಲಾವಿದನಿಗೂ ಮರೆಯಲಾಗದ ನೋವಿನ ಸಂಗತಿಯಾಗಿದೆ. ಅಲ್ಲದೇ ಪ್ರತಿ ಸರಣಿಯಲ್ಲೂ ನಮ್ಮ ಒಂದು ಪ್ರದರ್ಶನವನ್ನು ಮಾದೇವಿಗೆ ಅರ್ಪಿಸುತ್ತ್ತಿದ್ದವು. ಅದೇನೇ ಇರಲಿ ಕಾವೇರಿ ಸಾವಿನ ನಂತರ ಬರುತ್ತಿದ್ದ ಡಾ.ಕೆ.ವೈ ನಾರಾಯಣಸ್ವಾಮಿಯವರು ರಚಿಸಿದ ’ದೇವರೆಂಬುದು ಒಂದು ಉರುಳು, ಸಿಲುಕಿದೆ ಅದರಲಿ ಮನುಜನ ಕೊರಳು, ಆ ಮತ ಈ ಮತ ಎನ್ನುವುದು ಅದರ ನೆರಳು, ನಾಮವ ನೇಮವ ಕೊರಕಲು ದಾಟಿ ನೀ ವಿಶ್ವ ಪಥಕೆ ಮರಳು ಮರಳು…’ ಗೀತೆ ಎಲ್ಲರನ್ನು ವಿಶ್ವಮಾನವತತ್ವದೆಡೆಗೆ ಕರೆಯುತ್ತಿತ್ತು.

ಒಟ್ಟಿನಲ್ಲಿ ನಾಟಕ ಮುಗಿದು ಎಲ್ಲಾ ಕಲಾವಿದರು ತಮ್ಮತಮ್ಮ ಮನೆಗಳಿಗೆ ಹೊರಡುವಾಗ ಎಲ್ಲರಿಗೂ ಏನೋ ಕಳೆದುಕೊಳ್ಳುತ್ತಿರುವ ದುಃಖದೊಂದಿಗೆ ಕುವೆಂಪುರವರ ’ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ ಎಂಬ ಮುನ್ನುಡಿಯು ಅಕ್ಷರಶಃ ಅರಿವಿಗೆ ಬಂದೇ ಬರುತ್ತಿತ್ತು. ಇದರೊಂದಿಗೆ ಇಂತಹ ರಂಗಪ್ರಯೋಗದ ಭಾಗವಾಗಿದ್ದಕ್ಕೆ ಎಲ್ಲರಲ್ಲೂ ಧನ್ಯತೆಯ ಭಾವವೊಂದು ಮೂಡುತಿತ್ತು. ಹೀಗೆ ವಿಶ್ವದ ಮೂಲೆಮೂಲೆಗೂ ರಂಗಭೂಮಿ ಒಂದಲ್ಲ ಒಂದು ರೀತಿ ಮಾನವೀಯತೆಯ ಔಷಧಿಯನ್ನು ಉಣಿಸುತ್ತಿದೆ. ಹೀಗಿರುವಾಗ ವಿಶ್ವಮಾನವನ ಮೇರುಕೃತಿ ಮದುಮಗಳು ರಂಗಪ್ರಯೋಗದ ಮೂಲಕ ವಿಶ್ವಮಾನವ ಸಂದೇಶ ಕಲಾವಿದರ ಎದೆಗೆ ಇಳಿದಿರುವುದರಲ್ಲಿ ಅಚ್ಚರಿಯಿಲ್ಲ.

ಪುನೀತ್ ಕುಮಾರ್

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ, ರಂಗನಟ. ನಾಟಕಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಇವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ ಪಾದ್ರಿ ಜೀವರತ್ನಯ್ಯ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: Too Much Democracy: ಹೆಚ್ಚು ಪ್ರಜಾಪ್ರಭುತ್ವಕ್ಕೆ ಅತಿ ಪ್ರಜಾಪ್ರಭುತ್ವವೇ ಪರಿಹಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...