ನಮ್ಮ ಸುತ್ತಮುತ್ತಲೆಲ್ಲಾ ಶಾಂತಿ-ಸಮೃದ್ಧಿ, ಸಮಾಧಾನ-ಶ್ರೀಮಂತಿಕೆ ತುಂಬಿ ತುಳುಕುತ್ತಿರುವ ಈ ದುರಿತ ಕಾಲದಲ್ಲಿ ಆಲ್ಫ್ರೆಡ್ ಇಮ್ಯಾನುಯೆಲ್ ಸ್ಮಿತ್ ಅನ್ನುವ ಪುಣ್ಯಾತ್ಮನ ನೆನಪು ಆಗತಾನು. ಪ್ರಜಾತಂತ್ರವನ್ನು ಗಟ್ಟಿಯಾಗಿ ನಂಬಿದ, ನಂಬಿದಂತೆಯೇ ಬದುಕಿದ, ಅದರ ಬಗ್ಗೆ ಮಾತಾಡಿದ-ಬರೆದ ಅಮೆರಿಕದ ಚಿಂತಕ ಮತ್ತು ರಾಜಕಾರಣಿ ಆತ. ತನ್ನ ರಾಜ್ಯದ ಶಾಸನ ಸಭೆಯಲ್ಲಿ ದುಡಿಯುವ ವರ್ಗದ ಜನರ ಬದುಕಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಲು ಶ್ರಮಿಸಿದವನು ಸ್ಮಿತ್.

PC : Maine Public (ಫ್ರಾನ್ಸಿಸ್ ಪರ್ಕಿನಸ್)

ನ್ಯೂಯಾರ್ಕ್‌ನ ಟಮಾನಿ ಸ್ಕ್ವೇರ್ ಅನ್ನುವ ಚಿಂತಕರ ಚಾವಡಿಯ ಸದಸ್ಯನಾಗಿ ರಾಜಕೀಯ ಪಾಠಗಳನ್ನು ಕಲಿತ ಸ್ಮಿತ್, ತುಂಬ ಒಳ್ಳೆಯ ವಾಗ್ಮಿಯಾಗಿದ್ದ. ಸೈಲೆಂಟ್ ಚಾರ್ಲಿ ಮರ್ಫಿ, ಫ್ರಾನ್ಸಿಸ್ ಪರ್ಕಿನಸ್‌ರಂತಹ ಉದಾರವಾದಿ -ಪ್ರಗತಿಪರ ನಾಯಕರ ಸಂಗದಲ್ಲಿ ಬೆಳೆದವನು.

ಮೊದಲ ಮಹಾಯುದ್ಧದ ನಂತರ ಅಮೆರಿಕದ ಆರ್ಥಿಕತೆಗೆ ದೊಡ್ಡ ಏಟು ಬಿತ್ತು. ಸುಮಾರು 15 ವರ್ಷ ‘ಮಹಾ ಆರ್ಥಿಕ ಹಿಂಜರಿತ’ದಿಂದ ದೇಶ ಜರ್ಜರಿತವಾಗಿತ್ತು. ಒಂದು ಹೊತ್ತಿನ ಊಟಕ್ಕೆ ಜನ ತಮ್ಮ ಕುದುರೆ ಬಂಡಿಗಳನ್ನು ಮಾರಾಟ ಮಾಡುವ ಸ್ಥಿತಿ ಬಂತು. ಆ ಸಂಕಷ್ಟದಿಂದ ಹೊರಗೆ ಬರಲು ಅಧ್ಯಕ್ಷ ಫ್ರಾಂಕ್ಲಿನ್ ರೂಸವೆಲ್ಟ್ ಅವರು ಅನೇಕ ಕಲ್ಯಾಣ ಕಾರ್ಯಕ್ರಮ ಶುರು ಮಾಡಿದರು.

ಬಡವರಿಗೆ ಕಡಲೆ ಕಾಳು – ಬೆಂದ ಬಟಾಟಿ, ಬ್ರೆಡ್ – ಹಾಲು ಹೊಂದಿದ ಉಚಿತ ಊಟ ಮತ್ತು ಕೃಷಿ ಕೂಲಿ ಹಾಗೂ ನಗರ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿಯಂತಹ ಯೋಜನೆ ಆರಂಭಿಸಿದರು. ಸರ್ಕಾರದ ನೀತಿಗಳ ದಿಕ್ಕನ್ನು ಬದಲಾಯಿಸಿ ಶಿಕ್ಷಣ, ಆರೋಗ್ಯ, ಸರ್ಕಾರದಿಂದ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳು, ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರಿಗೆ ಸರ್ಕಾರಿ ನೌಕರಿ ಕೊಡುವುದು, ವೃದ್ಧಾಪ್ಯ ವೇತನ, ಅಂಗವಿಕಲರಿಗೆ ಸವಲತ್ತು ಇತ್ಯಾದಿಗಳನ್ನು ರೂಸವೆಲ್ಟ್ ಸರಕಾರ ನೀಡಿತು.

ಈ ಯೋಜನೆ ಹಾಗೂ ನೀತಿಗಳನ್ನು ರೂಪಿಸಿದ ತಂಡದಲ್ಲಿ ಇದ್ದವರು ಫ್ರಾನ್ಸಿಸ್ ಪರ್ಕಿನಸ್ ಹಾಗೂ ಸ್ಮಿತ್. ನ್ಯೂಯಾರ್ಕ್ ಗವರ್ನರ್ ಆಗಿದ್ದ ಸ್ಮಿತ್ ಕೊನೆಯ ವರ್ಷಗಳಲ್ಲಿ ಪಕ್ಷ ರಾಜಕೀಯ ಹಾಗೂ ಇತರ ಕಾರಣಗಳಿಗಾಗಿ ರೂಸವೆಲ್ಟ್‌ನ ವಿರೋಧಿಯಾಗಿ ಬದಲಾದ.

ಕೆಟ್ಟ ಕಾಲದಲ್ಲಿ ಅನೇಕ ಜನಪರ ಯೋಜನೆಗಳಿಂದಾಗಿ ಅಮೆರಿಕದ ಸರಕಾರಕ್ಕೆ ಸರಿಯಾದ ದಿಕ್ಕು ತೋರಿದ. ತನ್ನ ನಂಬಿಕೆ-ನಿಲುವುಗಳಿಂದಾಗಿ ಪ್ರಜಾತಂತ್ರ ವ್ಯವಸ್ಥೆಯ ವಿಕಾಸಕ್ಕೆ ವಿಶೇಷ ಕೊಡುಗೆ ನೀಡಿದ ಸ್ಮಿತ್ ಅವರ ಹೇಳಿಕೆಗಳು ಬಹು ಜನಪ್ರಿಯ.

ಅವುಗಳಲ್ಲಿ ಎರಡು ಇಲ್ಲಿ ಮುಖ್ಯ ಅಂತ ನನಗ ಅನಸತೇತಿ.

“ಯಾರು ಆಡಳಿತ ಮಾಡತಾರ ಅನ್ನೋದು ಮುಖ್ಯ ಅಲ್ಲ. ಹೆಂಗ ಆಡಳಿತ ಮಾಡತಾರ ಅನ್ನೋದು ಮುಖ್ಯ – ಸ್ಮಿತ್ 1904ರ ಸುಮಾರಿಗೆ ಹೇಳಿದ ಈ ಮಾತನ್ನ 2008ರಾಗ ಬರಾಕ್ ಒಬಾಮಾ ಅವರು ಚುನಾವಣೆಗೆ ನಿಂತಿದ್ದಾಗ ಬಹಳ ಜನ ನೆನಪಿಸಿಕೊಂಡರು. ಬಿಳಿಯರ ದೇಶದೊಳಗ ಕರಿಯ ನಾಯಕನೊಬ್ಬ ಅಧ್ಯಕ್ಷ ಆಗಲಿಕ್ಕೆ ಪ್ರಯತ್ನ ಮಾಡಾಕ ಹತ್ಯಾನ ಅನ್ನೋದು ಅಲ್ಲೆ ಭಾರಿ ಗದ್ದಲ ಮಾಡಿತ್ತು.

ಆಗ ಅಲ್ಲಿನ ಕೆಲವು ಚಿಂತಕರು ನೂರು ವರ್ಷದ ಹಿಂದ ನಡೆದ ಸ್ಮಿತ್‌ನ ಚುನಾವಣೆ ನೆನಪು ಮಾಡಿಕೊಂಡರು. ಕ್ರಿಶ್ಚಿಯನ್ ಪ್ರೊಟೆಸ್ಟಂಟ್ ಮತದಾರರು ಬಹು ಸಂಖ್ಯೆಯಲ್ಲಿ ಇದ್ದ ಅಮೆರಿಕದೊಳಗ ಕ್ಯಾಥೊಲಿಕ್ ಆಗಿದ್ದ ಸ್ಮಿತ್ ಅಧ್ಯಕ್ಷೀಯ ಚುನಾವಣೆಗೆ ನಿಂತಿದ್ದ.

PC : Wikipedia (ಫ್ರಾಂಕ್ಲಿನ್ ರೂಸವೆಲ್ಟ್)

“ನಮ್ಮನ್ನು ಆಳಲು ಈ ಸ್ಮಿತ್ ಯಾರು? ಇವ ಗೆದ್ದರೆ ಅಮೆರಿಕ ರೋಮನ್ ಪೋಪ್‌ನ ಆಡಳಿತಕ್ಕೆ ಒಳಪಡುತ್ತದೆ. ಈತ ಭಾಳ ಬುದ್ಧಿವಂತ – ಒಳ್ಳೆಯವ ಇದ್ದರ ಇರವಲ್ಲ, ನಮಗ ಪ್ರೊಟೆಸ್ಟಂಟ್ ನಾಯಕನೇ ಬೇಕು. ಅವ ಇವನಿಗಿಂತ ದಡ್ಡ ಇದ್ದರೂ ಪರವಾಗಿಲ್ಲ ಅಂತ ಅಲ್ಲೆ ಬಹಿರಂಗ ಚರ್ಚೆ ನಡೀತು.

ಸ್ಮಿತ್ ಪ್ರಜಾರಾಜ್ಯದ ಘಟ್ಟಗಳು ಅಂತ ಒಂದು ಲೇಖನ ಬರೆದ, ಅದರ ಬಗ್ಗೆ ಭಾಷಣ ಮಾಡಿದ. ಅದನ್ನ ಸ್ವದೇಶಿ-ಸುಶಾಸನ ಸಿದ್ಧಾಂತ ಅಂತ ಕರೆಯಬಹುದು.

ದೇಶವೊಂದು ಇತರ ದೇಶದ ಆಳ್ವಿಕೆಯಿಂದ ಬಿಡುಗಡೆಗೊಂಡು ಸ್ವತಂತ್ರವಾದಾಗ ಅಲ್ಲಿನ ಜನರಿಗೆ ಪರಕೀಯರು ನಮ್ಮನ್ನು ಬಿಟ್ಟುಹೋದರೆ ಸಾಕು ಅಂತ ಅನ್ನಿಸುತ್ತದೆ. “ಇಲ್ಲಿ ಪ್ರಜಾರಾಜ್ಯ ಸ್ಥಾಪಿತವಾಗಬೇಕು. ನಮ್ಮನ್ನು ನಾವು ಹೇಗಾದರೂ ಆಳಿಕೊಳ್ಳುತ್ತೇವೆ. ಸರಿಯೋ ತಪ್ಪೋ ಆಡಳಿತ ನಡೆಸುತ್ತಾ ಹೋಗುತ್ತೇವೆ. ಕಾಲ ಕಳೆದಂತೆ ನಮ್ಮನ್ನು ನಾವು ತಿದ್ದಿಕೊಂಡು ಸುಧಾರಿಸುತ್ತೇವೆ” ಅಂತ ಅಂದುಕೊಳ್ಳುತ್ತಾರೆ.

“ಆದರೆ ಸ್ವಲ್ಪ ಕಾಲದ ನಂತರ ಎಲ್ಲರ ಗಮನ ಆಳ್ವಿಕೆಯ ಗುಣಮಟ್ಟದ ಕಡೆಗೆ ಹರಿಯುತ್ತದೆ. ಆನಂತರ ನಮ್ಮ ನಾಯಕ ಪ್ರೊಟೆಸ್ಟಂಟ್, ಕ್ಯಾಥೊಲಿಕ್, ಮಹಿಳೆ, ದುಡಿಯುವ ವರ್ಗದವ, ಕರಿಯ, ಬಿಳಿಯ, ಅಂಗವಿಕಲ ಅನ್ನುವ ವ್ಯತ್ಯಾಸಗಳು ಅಳಿಸುತ್ತಾ ಹೋಗುತ್ತವೆ. ನಮ್ಮ ಅಭ್ಯರ್ಥಿ ನಮ್ಮ ದೇಶದ ನಾಗರಿಕ ಇದ್ದರೆ ಸಾಕು, ಅವನ ಹುಟ್ಟು ನಮಗೆ ಅಮುಖ್ಯವಾಗುತ್ತದೆ. ಅವನ ಸ್ವಭಾವ, ಬುದ್ಧಿವಂತಿಕೆ ಹಾಗೂ ಆಡಳಿತ ಶೈಲಿ ಮುಖ್ಯವಾಗುತ್ತದೆ” ಅಂತ ಹೇಳಿದ.

ಯಾರು ಯಾವ ಕೆಲಸ ಮಾಡಿದರು ಅನ್ನುವದಕ್ಕಿಂತ ಈ ಕೆಲಸವನ್ನು ಯಾರು ಮಾಡಿದರು ಅನ್ನುವುದು ಮುಖ್ಯವಾಗಿರುವ ಈ ದಿನಗಳಲ್ಲಿ ನಾವು ಭಾರತೀಯರು ಎಲ್ಲರೂ ಸ್ಮಿತ್‌ನ ಬದುಕು-ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳಬೇಕು.

ಸ್ಮಿತ್ ಅವರ ಇನ್ನೊಂದು ಮಾತು ಸಹಿತ ಜನಪ್ರಿಯ ಆಗೀತಿ. ಯಾರಾದರೂ ನಿಮಗೆ, ಈ ದೇಶದಲ್ಲಿ ಪ್ರಜಾಪ್ರಭುತ್ವ ಹೆಚ್ಚಾಗಿದೆ, ಅದರಿಂದ ಅನೇಕ ಸಮಸ್ಯೆಗಳು ಉಂಟಾಗಿವೆ ಅಂತ ಹೇಳಿದರೆ, ಅವರಿಗೆ ನೀವು ಹೇಳಬೇಕಾದ ಮಾತು ಇದು- “ಹೆಚ್ಚು ಪ್ರಜಾಪ್ರಭುತ್ವಕ್ಕೆ ಅತಿ ಪ್ರಜಾಪ್ರಭುತ್ವವೇ ಪರಿಹಾರ”.

ಅಮಿತಾಬ ಅನ್ನೋದು ಬೋಧಿಸತ್ವ ಬುದ್ಧನ ಹೆಸರು. ಅಪರಿಮಿತ ಕಾಂತಿ ಅನ್ನುವುದು ಅದರ ಅರ್ಥ. ಈ ಪದವನ್ನು ಬಚ್ಚನ್ ಸಾಹೇಬರು ಫೇಮಸ್ ಮಾಡೋಗಿಂತ ಎರಡು ಸಾವಿರ ವರ್ಷ ಮೊದಲೇ ಈ ನಾಡಿನೊಳಗ ಇತ್ತು.

ಅಷ್ಟು ಪವಿತ್ರ ಹೆಸರು ಇಟ್ಟುಕೊಂಡ ಅಮಿತಾಬ್ ಕಾಂತ ಸಾಹೇಬರು ನೀತಿ ಆಯೋಗದ ಮೀಟಿಂಗ್‌ದೊಳಗ ಕೂತು, ಈ ದೇಶದೊಳಗ ಪ್ರಜಾಪ್ರಭುತ್ವ ಹೆಚ್ಚಾಗಿದೆ, ಅದರಿಂದ ನಾವು ಅಪರಿಮಿತ ಸುಧಾರಣೆ ತರಲು ಸಾಧ್ಯವಾಗುತ್ತಿಲ್ಲ ಅನ್ನುವ ಅಣಿಮುತ್ತು ಉದುರಿಸಿಬಿಟ್ಟಾರ.

ಇದನ್ನ ನಾವು ಹೆಂಗ ಅರ್ಥ ಮಾಡಿಕೊಳ್ಳಬೇಕು? ನಮಗ ಇಷ್ಟು ಪ್ರಜಾಪ್ರಭುತ್ವ ಹೆಚ್ಚು ಆಗತದ ಅಂತನೋ? ಬಡಪಾಯಿ ಭಾರತೀಯರು ಪ್ರಜಾಪ್ರಭುತ್ವಕ್ಕ ಅರ್ಹರಲ್ಲ ಅಂತನೋ, ಅಥವಾ ತಾನು ಪ್ರಜಾಸೇವಕ ಅಂತ ಘೋಷಿಸಿಕೊಂಡು ನಮ್ಮ ಪಂಥ ಪ್ರಧಾನ ಸೇವಕರು ತಪ್ಪು ಮಾಡಿಬಿಟ್ಟರು ಅಂತನೋ?

PC : NITI Aayog (ಅಮಿತಾಬ್ ಕಾಂತ)

ಈಗಾಗಲೇ ಬಾಲ ಕತ್ತರಿಸಿಕೊಂಡಿರುವ ಚುನಾವಣಾ ಆಯೋಗ ಪುಟ್ಟಾ ಪೂರಾ ರದ್ದು ಮಾಡಿ ಸರ್ವಾಧಿಕಾರತ್ವ ಘೋಷಣೆ ಮಾಡಿ ವೆಸ್ಟ್ ಇಂಡಿಯಾ ಕಂಪನಿಗೆ ಆಡಳಿತದ ಚುಕ್ಕಾಣಿ ಕೊಟ್ಟುಬಿಡಬೇಕು ಅಂತನೋ?

‘ಸಾಕ್ಷರಹ ವಿಪರೀತೋ ರಾಕ್ಷಸಹ’ ಅಂತ ಒಂದು ಗಾದಿ ಮಾತು ಐತಿ. ಮೊದಲನೇ ಸಲ ಕೇಳಿದರ ಅದರ ಅರ್ಥ ‘ಜಾಸ್ತಿ ಓದಿದವರು ರಾಕ್ಷಸರು’ ಅಂತ ಅನ್ನಸತೇತಿ. ಆದರ ವಿಪರೀತ ಅನ್ನುವ ಶಬ್ದಕ್ಕ ಇನ್ನೊಂದು ಅರ್ಥ ಐತಿ. ಅದು ಉಲ್ಟಾ ಅಂತ. ಅದಕ್ಕ ವಿಧಿ ವಿಪರೀತ ಅಂದ್ರ ದುರ್ವಿಧಿ ಅಂತ ಅರ್ಥ. ಇದರ ಪ್ರಕಾರ ಹೆಚ್ಚು ಓದಿದವರು ಉಲ್ಟಾ ವಿಚಾರ ಮಾಡತಾರ, ಮಾನವೀಯತೆ ಕಳೆದುಕೊಂಡು ರಾಕ್ಷಸರಾಗಿಬಿಡತಾರ ಅಂತ ಈ ಮಾತಿನ ಅರ್ಥ.

ಅಮಿತಾಬ್ ಸಾಹೇಬರು ಪ್ರಜಾರಾಜ್ಯ ಹೆಚ್ಚು ಅಗೆತಿ ಅಂತ ಅಂದಾಗ ಅವರು ಎನರ ವಿಪರೀತ ಅನ್ನೋ ಅರ್ಥದೊಳಗ ಹೇಳಿದರೇನು ಮತ್ತ?

ಇಲ್ಲೆ ಸೂಫಿ ಕವಿ-ಸಂತ ಹಫೀಜ್‌ನ ಒಂದು ಮಾತು ನೆನಪು ಮಾಡಿಕೊಳ್ಳಬಹುದು. ಅದು ಎನಪ ಅಂದ್ರ – “ಸಾಮಾನ್ಯ ಮನುಷ್ಯ ಓದಿಕೊಂಡರೆ ತಜ್ಞನಾಗುತ್ತಾನೆ, ತಜ್ಞ ಓದಿದರೆ ಸಾಮಾನ್ಯ ಮನುಷ್ಯನಾಗುತ್ತಾನೆ”. ಅದಕ್ಕೆ ಈಗ ನಾವು ತಿಳಿದುಕೊಳ್ಳುವ ಮಾತು ಏನು ಅಂದರೆ ತಜ್ಞರೆಲ್ಲರೂ ಓದಿಕೊಳ್ಳಬೇಕು. ಸಾಮಾನ್ಯ ಮನುಷ್ಯರಾಗಬೇಕು. ಸಾಮಾನ್ಯ ಮನುಷ್ಯ ಜ್ಞಾನ ದಕ್ಕಿಸಿಕೊಳ್ಳಬೇಕು.


ಇದನ್ನೂ ಓದಿ: ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿಯ ಸಿಇಒ ವಿಕಾಸ್ ಖಂಚಂದಾನಿಗೆ ಜಾಮೀನು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಬೈ ಡೇಟಾಮ್ಯಾಟಿಕ್ಸ್
+ posts

LEAVE A REPLY

Please enter your comment!
Please enter your name here