Photo Courtesy: ANI

ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಹೋರಾಡುತ್ತಿರುವ ರೈತರಲ್ಲಿ 30 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬೆನ್ನಲ್ಲೆ ಇಂದು ಪಂಜಾಬ್‌ನ ಮತ್ತೊಬ್ಬ ರೈತ ದೆಹಲಿಯ ಸಿಂಘೂ ಗಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ವರದಿಯಾಗಿದೆ.

ಪಂಜಾಬ್‌ನ ತಾರ್ನ್ ತರಣ್ ಜಿಲ್ಲೆಯ 65 ವರ್ಷದ ನಿರಂಜನ್ ಸಿಂಗ್‌ ಎಂಬುವವರೆ ಆತ್ಮಹತ್ಯೆಗೆ ಪ್ರಯತ್ನಿಸಿದವರಾಗಿದ್ದಾರೆ. ಅವರನ್ನು ಇಂದು ಬೆಳಿಗ್ಗೆ ರೋಹ್ಟಕ್‌ನ ಪಿಜಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಆತ್ಮಹತ್ಯೆ ಮಾಡಿಕೊಂಡರಾದರೂ ಕೇಂದ್ರ ಸರ್ಕಾರ ರೈತರ ಮಾತುಗಳನ್ನು ಕೇಳುತ್ತದೆ ಎಂದು ನಾವು ಭಾವಿಸಿದ್ದೇ. ಹಾಗಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದೆ. ಸಾಮಾನ್ಯ ಪ್ರಕರಣಗಳಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಮೇಲೆ ದೂರು ದಾಖಲಾಗುತ್ತದೆ. ಆದರೆ ನಾನು ಆತ್ಮಹತ್ಯೆಗೆ ಯತ್ನಿಸಲು ಮೋದಿ-ಶಾರೇ ಕಾರಣರು. ಹಾಗಾಗಿ ಅವರ ಮೇಲೆ ದೂರು ದಾಖಲಿಸಬೇಕೆಂದು” ಒತ್ತಾಯಿಸಿದ್ದಾರೆ.

ದೇಶದಲ್ಲಿ ರೈತರು ಇಲ್ಲದಿದ್ದರೆ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿರುವ ಅವರು, ಕೂಡಲೇ ಸರ್ಕಾರ ಕೃ‍ಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಇಂದು ಪಂಜಾಬ್‌ನ ಬಂಥಿಂಧ ಜಿಲ್ಲೆಯ ಕುಲಬೀರ್‌ ಸಿಂಗ್ (22) ಎಂಬ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಆತ ಭಾನುವಾರ ದೆಹಲಿಯಿಂದ ಹೋರಾಟದ ಜಾಗದಿಂದ ಪಂಜಾಬ್‌ಗೆ ವಾಪಸ್‌ ಆಗಿದ್ದು, 8 ಲಕ್ಷ ರೂ ಸಾಲ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರೈತ ಹೋರಾಟವನ್ನು ಬೆಂಬಲಿಸಿ ಕಳೆದ ವಾರ ಸಿಖ್ ಧರ್ಮಗುರು ಬಾಬಾ ರಾಮ್ ಸಿಂಗ್ ಜಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ತಮ್ಮ ಆತ್ಮಹತ್ಯಾ ಬರಹದಲ್ಲಿ “ರೈತರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಡುತ್ತಿದ್ದಾರೆ. ಆ ನೋವನ್ನು ನಾನೂ ಅನುಭವಿಸುತ್ತಿದ್ದೇನೆ… ಸರ್ಕಾರವು ಅವರಿಗೆ ನ್ಯಾಯ ಒದಗಿಸದ ಕಾರಣ ನಾನೂ ಅವರ ನೋವನ್ನು ಹಂಚಿಕೊಳ್ಳುತ್ತೇನೆ. ಅನ್ಯಾಯವನ್ನು ಮಾಡುವುದು ಪಾಪ, ಆದರೆ ಅನ್ಯಾಯವನ್ನು ಸಹಿಸುವುದು ಕೂಡಾ ಪಾಪವಾಗಿದೆ. ರೈತರನ್ನು ಬೆಂಬಲಿಸಲು, ಕೆಲವರು ತಮ್ಮ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ನಾನು ನನ್ನ ಪ್ರಾಣವನ್ನು ತ್ಯಾಗ ಮಾಡಲು ನಿರ್ಧರಿಸಿದ್ದೇನೆ” ಎಂದು ಬರೆದುಕೊಂಡಿದ್ದರು.

ದೆಹಲಿಯಲ್ಲಿ ಹೋರಾಟ ಆರಂಭವಾದಾಗಿನಿಂದ ಚಳಿಗಾಳಿ, ಅನಾರೋಗ್ಯ, ಆತ್ಮಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ 30 ಹೆಚ್ಚು ರೈತರು ಸಾವನಪ್ಪಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಡಿಸೆಂಬರ್ 20ರ ಭಾನುವಾರ ಮಡಿದವರ ನೆನಪಿನಲ್ಲಿ ಶ್ರದ್ಧಾಂಜಲಿ ದಿವಸ್ ಆಚರಿಸಲಾಗಿದೆ.

ಇದನ್ನೂ ಓದಿ: ರೈತ ಹೋರಾಟವನ್ನು ಬೆಂಬಲಿಸಿ ಆತ್ಮಹತ್ಯೆ ಮಾಡಿಕೊಂಡ ಸಿಖ್ ಧರ್ಮಗುರು!


ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ: 104

LEAVE A REPLY

Please enter your comment!
Please enter your name here