ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಕೈಗೊಳ್ಳಲು ಕೇರಳ ವಿಧಾನಸಭೆಯ ವಿಶೇಷ ಅಧಿವೇಶನವನ್ನು ತುರ್ತಾಗಿ ಕರೆಯಬೇಕೆಂದು ಮಾಡಿರುವ ಮನವಿಯನ್ನು ನಿರಾಕರಿಸಿರುವ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ತೀರ್ಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರತಿ ಪಕ್ಷ ನಾಯಕ ರಮೇಶ್ ಚನ್ನಿತಾಲ್ ಹಾಗೂ ಕಾನೂನುತಜ್ಞರು ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಅಂಗೀಕರಿಸಿರುವ ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಕೇರಳ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚಿಸಲು ಮತ್ತು ನಿರ್ಣಯ ಕೈಗೊಳ್ಳಲು ರಾಜ್ಯಪಾಲರು ಅವಕಾಶ ನೀಡದೇ ಇರಲು ನಿರ್ಧರಿಸಿದ್ದಾರೆ ಎಂದು ದಿವೈರ್.ಇನ್ ವರದಿ ಮಾಡಿದೆ.
ವಿಶೇಷ ಅಧಿವೇಶನ ಕರೆಯುವಂತೆ ಕೇರಳ ಸಚಿವ ಸಂಪುಟವು ಮಾಡಿದ ಮನವಿಯನ್ನು ರಾಜ್ಯಪಾಲರು ಇದೇ ಮೊದಲ ಬಾರಿಗೆ ನಿರಾಕರಿಸಿದ್ದಾರೆ. ಸರ್ಕಾರ ಅಧಿವೇಶನ ಕರೆಯುವ ಮೊದಲು 15 ದಿನಗಳ ನೋಟೀಸ್ ಅವಧಿ ನೀಡುವ ಸಂಬಂಧದ ನಿಯಮಗಳನ್ನು ಪಾಲಿಸಿಲ್ಲ. ನೋಟಿಸ್ ಅವಧಿಯ ನಿಯಮಗಳನ್ನು ಅನುಸರಿಸಿಲ್ಲ. ವಿಶೇಷ ಅಧಿವೇಶನ ಕರೆದಿರುವ ತುರ್ತು ಕಾರಣ ತೃಪ್ತಿಕರವಾಗಿಲ್ಲ. ಜೊತೆಗೆ ಜನವರಿ 8ರಂದು ಬಜೆಟ್ ಅಧಿವೇಶನ ಕರೆಯಲು ಸಮ್ಮತಿ ನೀಡಲಾಗಿದೆ. ಹಾಗಾಗಿ ಈ ವಿಶೇಷ ಅಧಿವೇಶನಕ್ಕೆ ಅವಕಾಶವಿಲ್ಲ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಉದ್ದೇಶಿತ ಕೇರಳ ಸರ್ಕಾರದ ನಿರ್ಣಯವು ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ವಿರುದ್ಧವಾಗಿದೆ. ಬಿಜೆಪಿಯ ಒಬ್ಬ ಸದಸ್ಯರನ್ನು ಹೊರತುಪಡಿಸಿ 140 ಸದಸ್ಯ ಬಲದ ವಿಧಾನಸಭೆಯಲ್ಲಿ 139 ಮಂದಿ ಸದಸ್ಯರು ಕೃಷಿ ಕಾಯ್ದೆಗಳ ವಿರುದ್ಧವಾಗಿದ್ದಾರೆ. ಹೀಗಾಗಿ ರಾಜ್ಯಪಾಲರು ವಿಶೇಷ ಅಧಿವೇಶನ ಕರೆಯದಿರಲು ತೀರ್ಮಾನಿಸಿರಬಹುದು ಎಂದು ಟೀಕಿಸಲಾಗಿದೆ.
ಇದೇ ಮೊದಲ ಬಾರಿಗೆ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರಕ್ಕೆ ರಾಜ್ಯಪಾಲರು ಸಮ್ಮತಿ ನೀಡಿಲ್ಲ. ರಾಜ್ಯಪಾಲರ ಈ ತೀರ್ಮಾನಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆಡಳಿತಾರೂಢ ಎಲ್.ಡಿ.ಎಫ್ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿವೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, “ಕೇಂದ್ರ ಕೃಷಿ ಕಾಯ್ದೆಗಳು ಸಂವಿಧಾನ, ಸುಪ್ರೀಂ ಕೋರ್ಟ್ ತೀರ್ಪು ಮತ್ತು ಪ್ರಜಾಪ್ರಭುತ್ವದ ಪದ್ದತಿಯ ವಿಸ್ತರಣೆಗೆ ವಿರುದ್ಧವಾಗಿದೆ” ಎಂದು ಹೇಳಿದರೆ, ಪ್ರತಿಪಕ್ಷ ನಾಯಕ ರಮೇಶ್ ಚನ್ನಿತಾಲ್ “ರಾಜ್ಯಪಾಲರ ನಿರ್ಧಾರ ಅಪ್ರಜಾಸತ್ತಾತ್ಮಕವಾಗಿದೆ” ಎಂದು ಟೀಕಿಸಿದ್ದಾರೆ.
ವಿಶೇಷ ಅಧಿವೇಶನ ನಡೆಸಲು ರಾಜ್ಯಪಾಲರು ನಿರಾಕರಿಸಿದ ಬೆನ್ನಲ್ಲೇ ಎಲ್.ಡಿ.ಎಫ್ ನೇತೃತ್ವದಲ್ಲಿ ಸಭೆ ಸೇರಿದ ಮುಖ್ಯಮಂತ್ರಿ, ಸಂಪುಟದ ಸಹದ್ಯೋಗಿಗಳು ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
“ರೈತರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿರುವುದನ್ನು ಎಂದೂ ನೋಡಿಲ್ಲ. ರೈತರು ನಡೆಸುತ್ತಿರುವ ಪ್ರತಿಭಟನೆ ಸರಿಯಾಗಿದೆ. ರೈತರ ಬೇಡಿಕೆಗಳು ದೇಶದ ಬೇಡಿಕೆಗಳಾಗಿವೆ. ರೈತರ ಪ್ರತಿಭಟನೆ ಸಾಮೂಹಿಕ ಚಳವಳಿಯಾಗಿದೆ. ಇಂತಹ ಸಾಮೂಹಿಕ ಚಳವಳಿಯನ್ನು ಪ್ರಧಾನಿ ನರೇಂದ್ರ ಮೋದಿಯಿಂದ ಸೋಲಿಸಲು ಸಾಧ್ಯವಿಲ್ಲ. ರೈತರ ಪ್ರತಿಭಟನೆಯಿಂದ ಸರ್ಕಾರದ ಅಹಂ ಕೊಂಚೆ ಕಡಿಮೆ ಆಗಿದೆ. ಆದರೂ ಜನಪರ ಪ್ರತಿಭಟನೆಯನ್ನು ನಾಶ ಮಾಡಲು ಮತ್ತು ಛಿದ್ರಗೊಳಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಾಪ್ರಹಾರ ನಡೆಸಿದ್ದಾರೆ.
ಕಾಂಗ್ರೆಸ್ ಮುಖಂಡ ಹಾಗೂ ಪ್ರತಿಪಕ್ಷ ನಾಯಕ ರಮೇಶ್ ಚನ್ನಿತಾಲ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ಪರ್ಯಾಯವಾಗಿ ಕಾನೂನುಗಳನ್ನು ರಾಜ್ಯದಲ್ಲಿ ತರಬೇಕು ಎಂದು ಒತ್ತಾಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿಯೂ ಕೂಡ ಒತ್ತಾಯಿಸಿದ್ದು ಕಾಂಗ್ರೆಸ್ ನೇತೃತ್ವದ ಪಂಜಾಬ್, ರಾಜಸ್ಥಾನ ಮತ್ತು ಛತ್ತೀಸ್ ಘಡ ಸರ್ಕಾರಗಳು ರೈತಪರ ಕಾನೂನುಗಳನ್ನು ಜಾರಿಗೊಳಿಸಿವೆ. ಅದೇ ರೀತಿ ಕೇರಳ ಸರ್ಕಾರವೂ ಮುಂದುವರಿಯಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯಪಾಲರು ವಿಶೇಷ ಅಧಿವೇಶನ ಕರೆಯಲು ನಿರಾಕರಿಸಿ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು ಟೀಕೆಗೂ ಗುರಿಯಾಗಿದೆ.
ಇದನ್ನೂ ಓದಿ: ಐತಿಹಾಸಿಕ ರೈತ ಹೋರಾಟದೊಂದಿಗೆ ಕೈಜೋಡಿಸಿದ ದೊಡ್ಡ ಸಂಖ್ಯೆಯ ಕೃಷಿ ಕಾರ್ಮಿಕರು!


