ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕೃಷಿ ಸಂಬಂಧಿ ಕಾಯ್ದೆಗಳಿಂದ ತಮ್ಮ ಮೇಲೆ ಪ್ರತಿಕೂಲ ಪರಿಣಾಮ ಆಗಲಿದೆ ಎಂಬುದನ್ನು ಮನಗಂಡಿರುವ ಕೃಷಿ ಕಾರ್ಮಿಕರು, ಹಲವು ಭಿನ್ನಾಭಿಪ್ರಾಯಗಳ ನಡುವೆಯೂ, ರೈತರ ಹೋರಾಟಕ್ಕೆ ಭುಜಕ್ಕೆ ಭುಜ ಕೊಟ್ಟು ಭಾಗಿಯಾಗುತ್ತಿದ್ದಾರೆ.

ಕೃಷಿ-ವ್ಯಾಪಾರದಲ್ಲಿ ತೊಡಗಿರುವ ಬೃಹತ್ ಕಾರ್ಪೊರೆಟ್ ಕಂಪನಿಗಳಿಂದ ಕೃಷಿ ಕ್ಷೇತ್ರ ಮತ್ತು ಆಹಾರ ಭದ್ರತೆಯನ್ನು ರಕ್ಷಿಸುವುದಕ್ಕಾಗಿ ಈಗ ಭಾರತದಲ್ಲಿ ನಡೆಯುತ್ತಿರುವ ಅಭೂತಪೂರ್ವ ಹೋರಾಟವು ಒಂದು ಸಮೂಹ ಚಳುವಳಿಯಾಗಿ (mass movement) ರೂಪಾಂತರಗೊಂಡಿದೆ. ರೈತರ ಹೋರಾಟದಲ್ಲಿ ಜನಸಮೂಹದ ಪಾಲ್ಗೊಳ್ಳುವಿಕೆ ಮತ್ತು ಹೋರಾಟದ ಪರ ಹೆಚ್ಚುತ್ತಿರುವ ಸಾರ್ವಜನಿಕ ಬೆಂಬಲಕ್ಕೆ ಕಾರಣವಾದ ಅಂಶಗಳಲ್ಲಿ, ರೈತಾಪಿಗಳ ಬಗ್ಗೆ ಸಾರ್ವಜನಿಕರಲ್ಲಿ ಇರುವ ಅನುಕಂಪವೂ ಒಂದು ಕಾರಣ. ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಬಿತರಾದ ಬೃಹತ್ ಸಂಖ್ಯೆಯ ಭೂರಹಿತ ಕೃಷಿ ಕಾರ್ಮಿಕರು, ಟೆನೆಂಟ್ ಹಿಡುವಳಿದಾರರು ಕೂಡ ಈ ಈ ರೈತ ಹೋರಾಟದ ಭಾಗವಾಗಿದ್ದಾರೆ.

ಈ ಹೋರಾಟದ ಆರಂಭದಿಂದಲೂ ಕೃಷಿ ಕೆಲಸಗಾರರು ಇದರ ಭಾಗವಾಗಿದ್ದಾರೆ. ರೈತರು ಮತ್ತು ಕೃಷಿ ಕಾರ್ಮಿಕರ ನಡುವೆ ಹಲವಾರು ವೈರುಧ್ಯಗಳು ಮತ್ತು ಭಿನ್ನಾಭಿಪ್ರಾಯಗಳು ಇವೆ ಎಂಬ ಒಂದು ಜನಜನಿತ ನಂಬಿಕೆಯನ್ನು ನಂಬಿರುವ ಸಾಕಷ್ಟು ಜನರಿಗೆ ಇದು ಆಶ್ಚರ್ಯ ಉಂಟು ಮಾಡಬಹುದು. ಹೌದು, ವೈರುಧ್ಯಗಳ ವಿಷಯದಲ್ಲಿ ಒಂದಿಷ್ಟು ಸತ್ಯವೂ ಇದೆ. ಇತ್ತೀಚೆಗಷ್ಟೆ ಹರ‍್ಯಾಣ ಮತ್ತು ಪಂಜಾಬ್‌ಗಳಲ್ಲಿ ಭತ್ತದ ಕೃಷಿಯಲ್ಲಿನ ಕೂಲಿ ದರದಲ್ಲಿನ ವಿಷಯವಾಗಿ ನಡೆದ ಸಂಘರ್ಷದಲ್ಲಿ ಈ ವೈರುಧ್ಯ ಬಿಂಬಿತವಾಗಿತ್ತು. ಆದರೆ, ದೆಹಲಿ ಗಡಿಯಲ್ಲಿ ಈಗ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡವರ ಸಂಯೋಜನೆ, ಭಾಗವಹಿಸುವಿಕೆಯನ್ನೆಲ್ಲ ನೋಡಿದಾಗ, ಕೃಷಿ ಕಾರ್ಮಿಕರು ಅಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತಿದ್ದಾರೆ. ಈ ಬಗೆಯ ಅಪೂರ್ವ ಒಗ್ಗಟ್ಟಿನ ಹಿಂದಿನ ಮೂಲ ಕಾರಣ, ಈಗಿನ ಈ ಮೂರು ಕೃಷಿ ಕಾಯ್ದೆಗಳು ರೈತಾಪಿ-ಗ್ರಾಮೀಣ ಸಮುದಾಯದ ಮೇಲೆ ಬೀರಲಿರುವ ದುಷ್ಪರಿಣಾಮ. ಈ ಕಾರಣಕ್ಕಾಗಿ ಈಗ ತುರ್ತಾಗಿ ವಿದ್ಯುತ್ ತಿದ್ದುಪಡಿ ಕಾಯ್ದೆಯೂ ಸೇರಿ ಈ ಮೂರು ಕೃಷಿ ಕಾಯ್ದೆಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಶುರುವಾಗಬೇಕಿದೆ. ಏಕೆಂದರೆ, ಇದೆಲ್ಲ 14, 43, 29, 833ಕ್ಕೂ (2011ರ ಜನಗಣತಿ) ಹೆಚ್ಚಿನ ಜನರ ಬದುಕಿನ ಮೇಲೆ ಪರಿಣಾಮ ಬೀರಲಿದೆ.

ದುಡಿಮೆಯಲ್ಲಿ ಕುಸಿತ

ಈಗಾಗಲೇ ಸ್ಪಷ್ಟವಾಗಿರುವಂತೆ, ಈ ಮೂರು ಕೃಷಿ ಕಾಯ್ದೆಗಳಿಂದ ಕೃಷಿ ಕೇತ್ರಕ್ಕೆ ಸರ್ಕಾರ ನೀಡುವ ನೆರವು (ಸಬ್ಸಿಡಿ ಇತ್ಯಾದಿ) ಇನ್ನಷ್ಟು ಕಡಿತವಾಗಲಿದೆ. ಕೃಷಿ ಸಂಬಂಧಿತ ಬೀಜ, ಗೊಬ್ಬರ ಮತ್ತು ಇತರ ಉಪಕರಣಗಳ ವಿಷಯದಲ್ಲಿ ಇನ್ನು ಮುಂದೆ ರೈತರಿಗೆ ನಿರೀಕ್ಷಿತ ಸರ್ಕಾರಿ ನೆರವು ಸಿಗುವುದಿಲ್ಲ. ಈ ಕಾಯ್ದೆಗಳನ್ನು ತರುತ್ತಿರುವುದರ ಮೂಲ ಉದ್ದೇಶಗಳ ಪೈಕಿ ಇದೂ ಒಂದಾಗಿದೆ. ನಂತರದಲ್ಲಿ, ಗುತ್ತಿಗೆ ಕೃಷಿ (ಕಾಂಟ್ರ್ಯಾಕ್ಟ್ ಫಾರ್ಮಿಂಗ್) ಸರ್ಕಾರದ ಆದ್ಯತೆಯಾಗಲಿದೆ. ಸಾಮಾನ್ಯವಾಗಿ ಗುತ್ತಿಗೆ ಕೃಷಿ ದೊಡ್ಡ ರೈತರಿಗೆ ಲಾಭಕರ, ಆದರೆ ಸರ್ಕಾರದ ಯಾವ ನೆರವು ಸಿಗದ ಮಧ್ಯಮ ಮತ್ತು ಸಣ್ಣ ರೈತರು ಸೇರಿ ಎಲ್ಲ ರೈತಾಪಿ ಸಮುದಾಯ ತಮ್ಮ ಜಮೀನುಗಳನ್ನು ಗುತ್ತಿಗೆಗೆ ಬಿಟ್ಟುಕೊಡಬೇಕಾದ ಒತ್ತಡಕ್ಕೆ ಸಿಲುಕಲಿದೆ. ಇದು ಕೃಷಿ ಕಾರ್ಮಿಕರ ಮೇಲೆ ನೇರ ಪರಿಣಾಮ ಬೀರಲಿದೆ. ಕೃಷಿಯ ಕಾರ್ಪೊರೆಟೀರಣದ ಪರಿಣಾಮವಾಗಿ ಯಾಂತ್ರೀಕರಣ ಹೆಚ್ಚುವುದರಿಂದ, ಕೃಷಿ ಕಾರ್ಮಿಕರ ದುಡಿಮೆಯ ಅವಕಾಶಗಳಿಗೆ ಕತ್ತರಿ ಬೀಳಲಿದೆ. ಕಾರ್ಪೊರೇಟ್ ಕೃಷಿಯ ಪ್ರಥಮ ಮತ್ತು ಅತಿ ಮುಖ್ಯ ಆದ್ಯತೆಯೇ ಗರಿಷ್ಠ ಪ್ರಮಾಣದ ಲಾಭ ಹೊಂದುವುದು. ಇದನ್ನು ಸಾಧಿಸಲು ಅವರಿಗಿರುವ ಸುಲಭ ಮಾರ್ಗ ಕೃಷಿ ಕಾರ್ಮಿಕರ ಮೇಲೆ ವ್ಯಯಿಸುವ ವೆಚ್ಚವನ್ನು ಕಡಿಮೆ ಮಾಡುವುದು. ಈ ಕಾರಣಕ್ಕೆ ಬೃಹತ್ ಯಂತ್ರಗಳನ್ನು ಬಳಸಲಾಗುತ್ತದೆ, ಇದರಿಂದ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ದುಡಿಮೆಯಿಂದ ವಂಚಿತರಾಗುತ್ತಾರೆ.

ಕನಿಷ್ಠ ಕೂಲಿ (ಕನಿಷ್ಠ ವೇತನ)

ರೈತರು ಮತು ಕೃಷಿ ಕಾರ್ಮಿಕರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರುವ ಅಂಶಗಳಲ್ಲಿ ಕನಿಷ್ಠ ಕೂಲಿ ದರದ ವಿಷಯವೂ ಒಂದಾಗಿದೆ. ಆದರೆ, ಕೃಷಿ ಕಾರ್ಮಿಕರು ತಮ್ಮ ಅನುಭವದಿಂದ ಕಲಿತ ಸತ್ಯವೆಂದರೆ, ಕನಿಷ್ಠ ವೇತನವು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದೆ ಎನ್ನುವುದು. (ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ, ಸಿ2+50 ಸೂತ್ರದ ಅನ್ವಯ, ಕೃಷಿ ಉತ್ಪಾದನಾ ವೆಚ್ಚದಲ್ಲಿ ಕೃಷಿ ಕಾರ್ಮಿಕರ ವೇತನವೂ ಪರಿಗಣೆಯಾಗಬೇಕು). ಹೀಗಾಗಿ, ಕನಿಷ್ಠ ಬೆಂಬಲ ಬೆಲೆ ಲೆಕ್ಕ ಹಾಕುವಾಗ ಸರ್ಕಾರವು, ಕೃಷಿ ಕಾರ್ಮಿಕರಿಗೆ ಸಂಬಂಧಿಸಿದಂತೆ, ತಾನೇ ಘೋಷಿಸಿರುವ ಕನಿಷ್ಠ ವೇತನವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಸದ್ಯಕ್ಕೆ ಕನಿಷ್ಠ ಬೆಂಬಲ ಬೆಲೆ ಸಿಗದೇ ಸಂಕಷ್ಟದಲ್ಲಿರುವ ರೈತರು ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲಾಗದ ಪರಿಸ್ಥಿತಿಯಲ್ಲಿ ಇದ್ದಾರೆ. ಹೊಸ ಕೃಷಿ ಕಾಯ್ದೆಗಳಿಂದ ಕನಿಷ್ಠ ಬೆಂಬಲ ಬೆಲೆಯೇ ಅಸಂಭವಾಗಬಹುದಾದ್ದರಿಂದ, ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ ಕೊಡಲೂ ಆಗದ ಪರಿಸ್ಥಿತಿ ಉದ್ಭವಿಸಲಿದೆ. ಆದರೆ, ಕನಿಷ್ಠ ಬೆಂಬಲ ಬೆಲೆ ಮುಂದುವರೆಯಲಿದೆ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ.

ಈ ಒಂದು ವೈರುಧ್ಯಮಯ ಮತ್ತು ಅನಿಶ್ಚಿತ ಸಂದರ್ಭದ ಕಾರಣದಿಂದಾಗಿ, ರೈತರು ತಮ್ಮ ಬೆಳೆಯ ವೆಚ್ಚವನ್ನು ನಿರ್ಧರಿಸಲಾಗದ ಸ್ಥಿತಿಗೆ ತಲುಪುತ್ತಾರೆ. ಈ ಕಾರಣಕ್ಕೆ ಅವರು ಕೃಷಿ ಕಾರ್ಮಿಕರ ವೇತನವನ್ನು ಇನ್ನಷ್ಟು ಕಡಿತ ಮಾಡಬೇಕಾಗಬಹುದು. ರೈತರಿಗೆ ಕನಿಷ್ಠ ಬೆಂಬಲ ಬೆಲೆ ದೊರಕಿದ ನಂತರ, ಕನಿಷ್ಠ ವೇತನಕ್ಕಾಗಿನ ಹೋರಾಟ ಗಟ್ಟಿಗೊಳ್ಳಬಹುದು. ಹೀಗಾಗಿ ಕನಿಷ್ಠ ಬೆಂಬಲ ಬೆಲೆಯ ಖಾತ್ರಿಗಾಗಿ ರೈತರು ನಡೆಸಿರುವ ಈ ಸಂಘರ್ಷ, ಹೋರಾಟವು ಕೃಷಿ ಕಾರ್ಮಿಕರ ಕನಿಷ್ಠ ವೇತನದ ಬೇಡಿಕೆಯೊಂದಿಗೆ ತಳುಕು ಹಾಕಿಕೊಂಡಿದೆ. ಇವೆರಡೂ ಪ್ರತ್ಯೇಕವಲ್ಲವೇ ಅಲ್ಲ. ಹೀಗಾಗಿ ಈ ವಿಷಯಾಧಾರಿತ ಸಂಗತಿಯೇ ಸದ್ಯದ ರೈತರು ಮತ್ತು ಕೃಷಿ ಕಾರ್ಮಿಕರ ಚಳವಳಿಗೆ ಬಲ ತಂದಿದೆ.

ಪಿಡಿಎಸ್ ಮತ್ತು ಆಹಾರ ಭದ್ರತೆ

ಯಾವುದೇ ಭೂ ಒಡೆತನ ಮತು ಇತರ ಸಂಪನ್ಮೂಲಗಳ ಒಡೆತನವಿಲ್ಲದ, ಕನಿಷ್ಠ ಆದಾಯ ಮೂಲಗಳನ್ನು ನಂಬಿಕೊಂಡಿರುವ ಕೃಷಿ ಕಾರ್ಮಿಕರು ಸಾಮಾಜಿಕ ಕಲ್ಯಾಣ ಯೊಜನೆಗಳ ಮೇಲೆ ಅವಲಂಬಿತರಾಗಿದ್ದಾರೆ. ಸದ್ಯ ಈ ಯೋಜನೆಗಳ ಮೂಲಕೇಂದ್ರವಾಗಿರುವುದು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ(ಪಿಡಿಎಸ್). ನವ ಉದಾರೀಕರಣ ಅರ್ಥ ವ್ಯವಸ್ಥೆ ಜಾರಿಗೆ ಬಂದ ನಂತರ, ಪಿಡಿಎಸ್ ಸೇರಿದಂತೆ ಇತರ ಎಲ್ಲ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಕಡೆಗಣಿಸುತ್ತ ಬರಲಾಗಿದೆ. 25 ವರ್ಷಗಳ ಈ ನವ ಉದಾಕರೀಣಕರಣ ನೀತಿಯಿಂದಾಗಿ ಜನ ಸಾಮಾನ್ಯರು, ಅದರಲ್ಲೂ ಗ್ರಾಮೀಣ ಕೃಷಿ ಕಾರ್ಮಿಕರು ಸಾಕಷ್ಟು ತೊಂದರೆಗೆ ಈಡಾಗಿರುವುದು ಕಣ್ಮುಂದೆಯೇ ಇದೆ. ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಕೆಲವು ನಿಗದಿತ (ಟಾರ್ಗೆಟೆಡ್) ಕುಟುಂಬಗಳಿಗಷ್ಟೇ ಸಿಮೀತಗೊಳಿಸಿದ ಪರಿಣಾಮ ಲಕ್ಷಾಂತರ ಕುಟುಂಬಗಳು ಈ ವ್ಯವಸ್ಥೆಯಿಂದ ಹೊರಗುಳಿಯುವಂತಾಗಿದೆ. ಬಿಜೆಪಿ ಸರ್ಕಾರ ಮತ್ತು ಅದರ ಐಟಿ ಸೆಲ್ ಪ್ರಚಾರದ ನಂತರವೂ, ಮುಂದಿನ ದಿನಗಳಲ್ಲಿ ಆಹಾರ ಶೇಖರಣೆ ಯಾವ ರೀತಿಯಲ್ಲಿ ನಡೆಯಲಿದೆ ಎಂಬ ಬಗ್ಗೆ ಜನಸಮೂಹದಲ್ಲಿ ದೊಡ್ಡ ಸಂದೇಹವಿದೆ. ಪ್ರಮುಖ ಮಾಧ್ಯಮಗಳಲ್ಲಿ ಬರೆಯುವ/ಮಾತನಾಡುವ ನವ ಉದಾರೀಕರಣದ ವಕ್ತಾರರು ಈ ಕೃಷಿ ಕಾಯ್ದೆಗಳ ಪರ ವಕಾಲತ್ತು ವಹಿಸುತ್ತಿದ್ದಾರೆ. ಈ ಕಾಯ್ದೆಗಳನ್ನು ತಡೆದರೆ, ಮುಂದೆ ಬರಲಿರುವ ಕಾರ್ಪೊರೆಟ್ ಸ್ನೇಹಿ ನೀತಿಗಳಿಗೆ ಅಡ್ಡಿಯಾಗಬಹುದೆಂಬ ಆತಂಕ ಅವರಿಗೆ! ಆಹಾರ ಧಾನ್ಯ ಖರೀದಿಯಲ್ಲಿ ಸರ್ಕಾರದ ಪಾತ್ರ ಕಡಿಮೆಯಾಗಲಿದ್ದು, ಕಾರ್ಪೊರೆಟ್ ಕಂಪನಿಗಳ ಖರೀದಿ ತಾರಕಕ್ಕೆ ಏರಲಿದ್ದು, (ಎಪಿಎಂಸಿಗಳನ್ನು ನಿತ್ರಾಣಗೊಳಿಸಿದ ಕಾಯ್ದೆಯೂ ಜಾರಿಯಲ್ಲಿ ಇರುವುದರಿಂದ) ಇದು ನೇರವಾಗಿ ಪಿಡಿಎಸ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಎಲ್ಲರಿಗೂ ಆಹಾರ ಎಂಬ ಉದ್ದೇಶದ ಆಹಾರ ಭದ್ರತೆ ಕಾಯ್ದೆಯ ಆಶಯವೇ ಮಣ್ಣು ಪಾಲಾಗಲಿದೆ.

ಸರ್ಕಾರದಿಂದ ಆಹಾರಧಾನ್ಯಗಳ ಖರೀದಿಯಲ್ಲಿ ಕಡಿತವಾಗುವುದರಿಂದ ಸರ್ಕಾರದ ಬಳಿ ಆಹಾರಧಾನ್ಯಗಳ ಕೊರತೆಯಾಗಲಿದೆ. ಇಂತಹ ಪ್ರತಿಕೂಲ ಸಂದರ್ಭಗಳಲ್ಲಿ ಪಿಡಿಎಸ್ ವ್ಯವಸ್ಥೆಯಲ್ಲಿ ಆಹಾರಕ್ಕಾಗಿ ಹಣ (ನೇರ ನಗದು ವರ್ಗಾವಣೆ ಎಂದುಕೊಳ್ಳಿ) ಬೇಡಿಕೆ ಹೆಚ್ಚಲಿದೆ. ಈಗಾಗಲೇ ಡಬ್ಲೂಟಿಒ ಮತ್ತು ಐಎಂಎಫ್ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಸಂಸ್ಥೆಗಳು ಪಿಡಿಎಸ್ ವ್ಯವಸ್ಥೆ ಬದಲಿಸಬೇಕು ಮತ್ತು ಅದರಲ್ಲಿನ ಸಬ್ಸಿಡಿ ಅಂದರೆ ರಿಯಾಯಿತಿಗಳನ್ನು ಗಣನೀಯವಾಗಿ ಕಡಿತಗೊಳಿಸುವಂತೆ ಭಾರತದ ಮೇಲೆ ಒತ್ತಡ ಹಾಕುತ್ತಿವೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಜಾರಿಗೊಂಡ ‘ಆಹಾರದ ಬದಲಿಗೆ ಹಣ’ ಕಾರ್ಯಕ್ರಮಗಳು ಪುಟ್ಟಾಪೂರಾ ವಿಫಲವಾಗಿವೆ. ಒಂದು ಸಾಮಾನ್ಯ ದರದಲ್ಲಿ ಆಹಾರ ಧಾನ್ಯ ಒದಗಿಸುವ ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯಕವಾಗಿರುವ ಪಿಡಿಎಸ್ ವ್ಯವಸ್ಥೆಯು ಭಾರತದ ಗ್ರಾಮೀಣ ಭಾಗಕ್ಕೆ ಅತ್ಯವಶ್ಯವಾಗಿದೆ.

PC : The Irish Times

ಗುತ್ತಿಗೆ ಕೃಷಿಯಲ್ಲಿ ಆಹಾರಧಾನ್ಯಗಳ ಉತ್ಪಾದನೆಗಿಂತ ಬಹುಲಾಭ ತಂದುಕೊಡುವ ವಾಣಿಜ್ಯ ಬೆಳೆಗಳು-ಕ್ಯಾಷ್ ಕ್ರಾಪ್‌ಗಳು ಅಥವಾ ರಫ್ತಿಗೆ ಅನುಕೂಲಕರವಾದ ಬೆಳೆಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಈ ವಿಷಯದಲ್ಲಿ ಭಾರತದ ಮೇಲೆ ಹೆಚ್ಚಿನ ಅಂತರಾಷ್ಟ್ರೀಯ ಒತ್ತಡವೂ ಇದೆ. ಪಾಶ್ಚಿಮಾತ್ಯ ದೇಶಗಳ ಶೀತ ವಾತಾವರಣಕ್ಕೆ ಪ್ರತಿಯಾಗಿ, ಭಾರತದಲ್ಲಿ ಶ್ರೀಮಂತ ಮತ್ತು ವೈವಿಧ್ಯಮಯ ಮಣ್ಣು ಸಂಸ್ಕೃತಿಯಿದ್ದು, ಇಲ್ಲಿ ವಿಭಿನ್ನ ಬಗೆಯ ಬೆಳೆಗಳನ್ನು ಬೆಳೆಯುವ ವಾತಾವರಣ ಲಭ್ಯವಿದೆ. ಈ ಪಾಶ್ಚಿಮಾತ್ಯ ದೇಶಗಳು ನಮ್ಮ ಕೃಷಿ ಪದ್ಧತಿಯನ್ನೇ ಸಂಪೂರ್ಣ ಬದಲಿಸುವಂತೆ, ಆಹಾರ ಧಾನ್ಯಗಳ ಬದಲಿಗೆ ತಮಗೆ ಬೇಕಾದ ಬೆಳೆಗಳನ್ನು ಬೆಳೆಯುವಂತೆ ಭಾರತದ ಮೇಲೆ ಒತ್ತಡ ಹಾಕುತ್ತ ಬಂದಿವೆ. ಇಂತಹ ಬೆಳೆ ಬೆಳೆಯುವುದರ ಮೂಲಕ ಬಂಗಾರದ ಬೆಲೆ ಗಿಟ್ಟಿಸಬಹುದು ಎಂದು ರೈತರನ್ನು ನಂಬಿಸುವ ಪ್ರಯತ್ನಗಳೂ ನಡೆದಿವೆ. ಕೇಳಲಿಕ್ಕೆ ಇದು ಚೆನ್ನ ಅನಿಸಬಹುದು, ಆದರೆ ಜಾಗತೀಕರಣಗೊಂಡ ವಾತಾವರಣದಲ್ಲಿ ಭಾರತವು ಆಹಾರಧಾನ್ಯಗಳ ಆಮದನ್ನು ನೆಚ್ಚಿಕೊಂಡು ಬದುಕುವುದು ಅಸಾಧ್ಯ. ಇದು ನಮ್ಮ ಆಹಾರ ಭದ್ರತೆಯನ್ನು ಅನಿಶ್ಚಿತತೆಗೆ ತಳ್ಳಲಿದೆ. ಹಸಿರು ಕ್ರಾಂತಿಗೂ ಮೊದಲು ನಾವು ಹಸಿವಿನ ಹಾಹಾಕಾರವನ್ನು ನೋಡಿಯಾಗಿದೆ. ಸಮಾಜದ ತುಳಿತಕ್ಕೊಳಗಾದ ಸಮುದಾಯಗಳಿಂದಲೇ ಬಂದಿರುವ ಕೃಷಿ ಕಾರ್ಮಿಕರೇ ಸರ್ಕಾರದ ಈ ಕಾಯ್ದೆಗಳಿಂದ ತಲೆದೋರಲಿರುವ ಅಭದ್ರತೆಯ ಮೊದಲ ಬಲಿಪಶುವಾಗಲಿದ್ದಾರೆ.

ಸಗಟು ಹಣದುಬ್ಬರ

ಅಗತ್ಯ ವಸ್ತುಗಳ ಕಾಯ್ದೆಯ ತಿದ್ದುಪಡಿಯು, ಲಾಭದ ಹಪಾಹಪಿಯ ವ್ಯಾಪಾರಿ ವಲಯಕ್ಕೆ ಕ್ರಿಮಿನಲ್ ಶೇಖರಣೆಗೆ ವೇದಿಕೆ ಒದಗಿಸಲಿದೆ. ಯುದ್ಧ, ನೈಸರ್ಗಿಕ ವಿಪತ್ತು, ಬರ-ಕ್ಷಾಮ ಮುಂತಾದ ಸಂದರ್ಭಗಳನ್ನು ಹೊರತುಪಡಿಸಿ, ಉಳಿದೆಲ್ಲ ಸಂದರ್ಭಗಳಲ್ಲಿ ಇದು ಸರ್ಕಾರದ ನಿಯಂತ್ರಣವನ್ನು ಕುಬ್ಜಗೊಳಿಸಲಿದೆ. ಇದರಿಂದಾಗಿ, ಸಹಜ ವಾತಾವರಣದಲ್ಲೂ ಅಗತ್ಯ ವಸ್ತುಗಳ ದರವನ್ನು ಪರಿಶೀಲಿಸಲೂ ಸರ್ಕಾರಕ್ಕೆ ನಿರ್ಬಂಧಗಳು ಅಡ್ಡಿಯಾಗಲಿವೆ. ಅಂದರೆ ಶೇ. 100ರಷ್ಟು ತೋಟಗಾರಿಕಾ ಬೆಳೆ ಮತ್ತು ಶೇ. 50ರಷ್ಟು ಹಾಳಾಗದ ಬೆಳೆಗಳ ಮೇಲೆ ಸಗಟು ಹಣದುಬ್ಬರವನ್ನು ಇದು ಕಾನೂನಾತ್ಮಕಗೊಳಿಸಲಿದೆ. ಈ ರೀತಿಯ ಲಾಭಾಧರಿತ ಹಣದುಬ್ಬರವು ಕೃತಕ ಆಹಾರಧಾನ್ಯ ಅಭಾವಕ್ಕೂ ಕಾರಣವಾಗಲಿದ್ದು, ಇದು ಪಿಡಿಎಸ್ ಮೇಲೆ ಅವಲಂಬಿತರಾದ ಗ್ರಾಮೀಣ ಕೃಷಿ ಕಾರ್ಮಿಕರನ್ನು ಹಸಿವಿನ ದವಡೆಗೆ ನೂಕಲಿದೆ. ಸಾಮಾನ್ಯ ಸಂದರ್ಭಗಳಲ್ಲಿಯೇ, ಅಗತ್ಯ ವಸ್ತುಗಳ ಕಾಯ್ದೆ ಜಾರಿಯಿದ್ದಾಗಲೇ, ವಿಪರೀತ ದರ ಏರಿಕೆ ಕಂಡ ಟೊಮೆಟೊ, ಈರುಳ್ಳಿಗಳನ್ನು ಕೊಳ್ಳಲಾಗದೇ ಕೃಷಿಕಾರ್ಮಿಕರು ತತ್ತರಿಸಿದ್ದನ್ನು ನೋಡಿದ್ದೇವೆ. ಇಡೀ ಆಹಾರ ಮಾರುಕಟ್ಟೆಯೇ ಅನಿಯಂತ್ರಿತವಾದರೆ ಈ ಸ್ಥಿತಿ ದೈನಂದಿನ ಸಹಜ ಸ್ಥಿತಿಯಾಗಲಿದೆ.

ಭೂಮಿಯ ಪ್ರಶ್ನೆ

ಭೂಮಿಯ ಕಾರ್ಪೊರೇಟಿಕರಣದಿಂದ ಭೂಮಿಯ ಪ್ರಶ್ನೆಯ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ. ದೊಡ್ಡ ಕಾರ್ಪೊರೆಟ್ ಕಂಪನಿಗಳು ತಮ್ಮ ಭೂಮಿ ನುಂಗಲಿವೆ ಎಂಬ ಆತಂಕ ಈಗಾಗಲೇ ರೈತರಲ್ಲಿ ಮನೆ ಮಾಡಿದೆ. ಈ ಆತಂಕ-ಸಂದೇಹವನ್ನು ನಾವು ನಿರ್ಲಕ್ಷಿಸಿದರೆ, ಕಾರ್ಪೊರೆಟ್ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಭೂಮಿ ಖರೀದಿಸಲಿದ್ದು, ಇದು ಭೂಮಿ ಪ್ರಶ್ನೆಗೆ ಹೊಸ ಆಯಾಮ ನೀಡಲಿದೆ ಮತ್ತು ಈಗಾಗಲೇ ತಮ್ಮ ಪಾಲಿನ ಭೂಮಿ ಹಂಚಿಕೆಗಾಗಿ ಕಾಯುತ್ತಿರುವ ಭೂರಹಿತ ಕೃಷಿ ಕಾರ್ಮಿಕರಿಗೆ ಈ ನೀತಿಗಳು ಹಾನಿಕಾರಕವಾಗಿ ಪರಿಣಮಿಸಲಿವೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಭೂರಹಿತರಿಗೆ ಅವರ ಭೂಮಿ ಹಕ್ಕನ್ನು ನೀಡದೇ ವಂಚಿಸಲಾಗಿದೆ. ಇದಕ್ಕಿಂತ ದುರಂತವೆಂದರೆ, ಈ 20 ವರ್ಷಗಳಲ್ಲಿ ಹಳ್ಳಿ ಕಡೆ ಭೂ ಸುಧಾರಣೆ ವಿರುದ್ಧ ದಿಕ್ಕಿನಲ್ಲಿ ಸಾಗಿರುವುದು, ಭೂರಹಿತ ಕುಟುಂಬಗಳ (0.01 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿದ ಕುಟುಂಬಗಳು) ಸಂಖ್ಯೆ ಈ 20 ವರ್ಷಗಳಲ್ಲಿ ಶೇ. 35ರಿಂದ ಶೇ 49ಕ್ಕೆ ಏರಿರುವುದು! ಇನ್ನೂ ಕಳವಳದ ವಿಷಯವೆಂದರೆ, ಸುಮಾರು ಶೇ. 58ರಷ್ಟು ದಲಿತರು ಭೂರಹಿತರಾಗಿರೋದು!

ಸರ್ಕಾರದ ಸಂಸ್ಥೆಗಳು, ಅರಣ್ಯ ಇಲಾಖೆ, ಭೂ ಒಡೆಯರು ಮತ್ತು ಫಾರೆಸ್ಟ್ ಮಾಫಿಯಾದಿಂದ ಕಿರುಕುಳ ನಡೆಯುತ್ತಿರುವ ಎಷ್ಟೋ ಪ್ರದೇಶಗಳಲ್ಲಿ ತಮ್ಮ ಪಾಲಿನ ಭೂಮಿ ಪಡೆಯಲು ನ್ಯಾಯಯುತ ಹೋರಾಟಗಳನ್ನು ಜನ ನಡೆಸುತ್ತಿದ್ದಾರೆ. ಈಗ ಕೃಷಿಯಲ್ಲಿ ಕಾರ್ಪೊರೆಟ್‌ಗಳ ಯುಗ ಆರಂಭವಾದರೆ, ಈ ಹೋರಾಟ-ಸಂಘರ್ಷವು ಅವರ ವಿರುದ್ಧ ನಡೆಯಲಿದೆ. ಇಂತಹ ಹೋರಾಟಗಳನ್ನು ಇನ್ನಷ್ಟು ನಿರ್ದಯವಾಗಿ, ಭೀಕರವಾಗಿ ಹತ್ತಿಕ್ಕಲಾಗುತ್ತದೆ. ಪಂಜಾಬ್‌ನಂತಹ ಹಲವು ರಾಜ್ಯಗಳಲ್ಲಿ, ಭೂರಹಿತರಿಗೆ ನೀಡಬೇಕಾಗಿದ್ದ ಸಾರ್ವಜನಿಕ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಲಾಗಿದೆ.

ಇಂದು ದೇಶವು ನಿರುದ್ಯೋಗ ಮತ್ತು ಹಸಿವಿನಲ್ಲಿ ಸಾರ್ವಕಾಲಿಕ ಉತ್ತುಂಗ ತಲುಪಿದೆ ಮತ್ತು ಮುಂದೆ ಹಸಿವಿನಿಂದ ಸಂಭವಿಸಬುದಾದ ಅಸಂಖ್ಯ ಸಾವುಗಳ ಬಗ್ಗೆ ಅಂತರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಸುತ್ತಿವೆ. ಹೀಗಾಗಿ, ಈಗ ನಮ್ಮ ಕೃಷಿ ಕ್ಷೇತ್ರವನ್ನು ಮತ್ತಷ್ಟು ಸಶಕ್ತಗೊಳಿಸುವ ಕೆಲಸವಾಗಬೇಕು. ಸರ್ಕಾರ ಕೃಷಿ ಮೇಲೆ ಹೆಚ್ಚು ಸಂಪನ್ಮೂಲಗಳನ್ನು ಬಳಕೆ ಮಾಡಬೇಕು ಮತ್ತು ಕೃಷಿಗೆ ಪೂರಕವಾದ ಒಂದು ವಿಶಾಲ ವ್ಯಾಪ್ತಿಯ ಆಡಳಿತವನ್ನು ಜಾರಿಗೆ ತರಬೇಕು, ಒಂದು ಸಮರ್ಪಕ ಕನಿಷ್ಠ ಬೆಂಬಲ ದರ ನೀತಿಯನ್ನು ಜಾರಿಗೆ ತರಬೇಕು. ಸುಗ್ಗಿ ನಂತರದ ನಷ್ಟಗಳನ್ನು ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಇದು ನಮ್ಮ ರೈತಾಪಿ ಸಮೂಹದ ಆದಾಯವನ್ನು ಹೆಚ್ಚಿಸುವುದಲ್ಲದೇ, ದೇಶದ ಆಹಾರ ಭದ್ರತೆಗೂ ಕಾರಣವಾಗಲಿದೆ. ಆದರೆ ನಮ್ಮ ಕೇಂದ್ರ ಸರ್ಕಾರ ಈ ಸಂಕಷ್ಟ ಸಮಯದಲ್ಲಿ ಕಾರ್ಪೊರೆಟ್ ಕಂಪನಿಗಳನ್ನು ಮತ್ತು ವಿದೇಶಿ ಹೂಡಿಕೆಯನ್ನು ಕೃಷಿ ಕ್ಷೇತ್ರಕ್ಕೆ ತರಲು ಉತ್ಸುಕವಾಗಿದೆ. ಸಂಕಷ್ಟದಲ್ಲೂ ಹೆಚ್ಚಿನ ದಂಡ-ತೆರಿಗೆ ವಿಧಿಸುವ ವಸಾಹತುಶಾಹಿ ಮನೋಭಾವನೆಯಿಂದ ಹೊರಬರಬೇಕಾಗಿದೆ.

ರೈತರಿಗೆ ಭುಜಕ್ಕೆ ಭುಜ ಕೊಟ್ಟು ಭಾಗಿಯಾಗಿರುವ ಕೃಷಿ ಕಾರ್ಮಿಕರು ಈ ಐತಿಹಾಸಿಕ ಕೃಷಿ ಹೋರಾಟದ ಅಂತರ್ಗತ ಭಾಗವಾಗಿದ್ದಾರೆ. ದೆಹಲಿಯ ಗಡಿಗಳಲ್ಲಿ ಜಮಾವಣೆಗೊಂಡ ಹೋರಾಟಗಾರರಲ್ಲಿ ಕೃಷಿ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇದೊಂದು ಐತಿಹಾಸಿಕ ಹೋರಾಟವಾಗಿದ್ದು, ಎಲ್ಲ ಬಗೆಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಗಳ ಜನರನ್ನು ಒಗ್ಗೂಡಿಸುವಲ್ಲಿ ಸಫಲವಾಗುತ್ತಿದೆ. ಜನರನ್ನು ವಿಭಜಿಸುವ ಆರ್‌ಎಸ್‌ಎಸ್ ಮತ್ತು ಬಿಜೆಪಿಗಳ ನೀತಿ-ಸಿದ್ದಾಂತಗಳ ವಿರುದ್ಧದ ಹೋರಾಟವೂ ಇದಾಗಿದೆ. ಜಯ ಸಿಗುವವರೆಗೂ ಪ್ರತಿರೋಧ ಒಡ್ಡುವುದು ಈ ಹೋರಾಟದ ಅಗತ್ಯವಾಗಿದೆ.

ವಿಕ್ರಂ ಸಿಂಗ್, ಜಂಟಿ ಕಾರ್ಯದರ್ಶಿ, ಆಲ್ ಇಂಡಿಯಾ ಅಗ್ರಿಕಲ್ಚರಲ್ ವಕರ್ಸ್ ಯುನಿಯನ್

(ಕೃಪೆ: ನ್ಯೂಸ್‌ಕ್ಲಿಕ್)

ಕನ್ನಡಕ್ಕೆ: ಮಲ್ಲನಗೌಡರ್


ಇದನ್ನೂ ಓದಿ: ಜಗತ್‌ ಪ್ರಸಿದ್ಧ ಪ್ರತಿರೋಧದ ಹಾಡು! – ರೈತರ ಹೋರಾಟದಲ್ಲೂ ಪ್ರತಿಧ್ವನಿಸಿದ ‘ಬೆಲ್ಲಾ ಚಾವ್’

LEAVE A REPLY

Please enter your comment!
Please enter your name here