ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳ ವಿರುದ್ಧ ಕಳೆದ 29 ದಿನಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ವಿವಿಧ ಸ್ವರೂಪದಲ್ಲಿ ಮೊದಲಿನಿಂದಲೂ ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈಗ ಕರ್ನಾಟಕದಲ್ಲಿ ‘ನಾವು ಭಾರತೀಯರು’ ಸಂಘಟನೆಯ ವತಿಯಿಂದ “ರೈತರೊಂದಿಗೆ ಬೆಂಗಳೂರು” ಎಂಬ ವಿಶಿಷ್ಟ ಪ್ರತಿಭಟನಾ ಅಭಿಯಾನವನ್ನು ಆಯೋಜಿಸಲಾಗಿದೆ.
ಡಿಸೆಂಬರ್ 26ರ ಶನಿವಾರ, ಬೆಂಗಳೂರಿನ ಮೌರ್ಯ ಹೋಟೆಲ್ ವೃತ್ತ, ಆನಂದರಾವ್ ಸರ್ಕಲ್ ಬಳಿ, ಬೆಳಿಗ್ಗೆ 11ರಿಂದ 3ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸಂವಾದ-ಸಹಿ ಸಂಗ್ರಹ-ಪ್ಯಾನೆಲ್ ಚರ್ಚೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿವೆ.

“ಬನ್ನಿ, ಜೊತೆಯಾಗಿ… ತೀವ್ರ ಚಳಿಯಲ್ಲಿ, ಬದುಕುವ ಹಕ್ಕಿಗಾಗಿ ಸಂಘರ್ಷ ನಡೆಸುತ್ತಿರುವ ಲಕ್ಷಾಂತರ ರೈತರಿಗೆ ನಮ್ಮ ಬೆಂಬಲ ಘೋಷಿಸೋಣ…” ಎಂಬುದು ಈ ಪ್ರತಿಭಟನಾ ಕಾರ್ಯಕ್ರಮದ ಧ್ಯೇಯವಾಗಿದೆ. ಈ ಅಭಿಯಾನದ ಮೂಲಕ ರೈತರನ್ನು ಬೆಂಬಲಿಸುವಂತೆ ಬೆಂಗಳೂರಿನ ಜನತೆಗೆ ‘ನಾವು ಭಾರತೀಯರು’ ತಂಡ ಕರೆ ನೀಡಿದೆ.
ಇದನ್ನೂ ಓದಿ: ‘IPL T20’ ಟೂರ್ನಿಗೆ 2 ಹೊಸ ತಂಡ ಸೇರ್ಪಡೆ: ಬಿಸಿಸಿಐ ಒಪ್ಪಿಗೆ
ದೆಹಲಿ ಮತ್ತು ಹರಿಯಾಣ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 29 ನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ತಮ್ಮ ವಿರೋಧವನ್ನು ಇನ್ನಷ್ಟು ತೀವ್ರಗೊಳಿಸುವ ಉದ್ದೇಶದಿಂದ ಇತ್ತೀಚೆಗೆ ದೇಶದಾದ್ಯಂತ ಉಪವಾಸಕ್ಕೆ ಕರೆ ನೀಡಿದ್ದರು.
ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಅವುಗಳೆಲ್ಲಾ ವಿಫಲವಾಗಿವೆ. ಇತ್ತೀಚೆಗೆ ಈ ವಿಷಯವನ್ನು ಕೈಗೆತ್ತಿಕೊಂಡು ಸುಪ್ರೀಂಕೋರ್ಟ್, ಈ ಕುರಿತು ಶೋಧನೆ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿತ್ತು.
ಜೊತೆಗೆ ರೈತರು ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳಬೇಕಾಗಿಲ್ಲ. ಹೋರಾಟ ಮಾಡುವುದು ಅವರ ಹಕ್ಕು ಎಂದು ಸುಪ್ರೀಂ ಹೇಳಿತ್ತು. ಆದರೆ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ, ಶಾಂತಿಯುತವಾಗಿ ಪ್ರತಿಭಟಿಸುವಂತೆ ಹೇಳಿತ್ತು.
ಇದನ್ನೂ ಓದಿ: ಮುತ್ತು ಸುತ್ತು: ಟಿಪ್ಪುವಿನ ಪ್ರಸ್ತುತ ಸ್ಥಿತಿ ಸಾರುವ ನಂದಿಬೆಟ್ಟಕ್ಕೊಮ್ಮೆ ಹೋಗಿಬನ್ನಿ


