ತಮಿಳುನಾಡು ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪ್ರಕ್ರಿಯೆಗಳು ಗರಿಗೆದರುತ್ತಿದೆ. ಈ ಹಿಂದೆ ನಟ ರಜನಿಕಾಂತ್ ತಾವು ಹೊಸ ಪಕ್ಷ ಸ್ಥಾಪಿಸುವುದಾಗಿ ಮಾಹಿತಿ ನೀಡಿದ್ದರು. ಇದರ ಬೆನ್ನಿಗೆ ಡಿಎಂಕೆ ಪಕ್ಷದ ಹಿರಿಯ ಮಾಜಿ ಮುಖಂಡ ಮತ್ತು ಮಾಜಿ ಸಿಎಂ ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ. ಅಳಗಿರಿ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಇಂದು ಅಧಿಕೃತ ಹೇಳಿಕೆ ನೀಡಿರುವ ಅಳಗಿರಿ, “ಜನತೆ, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬಯಸಿದರೆ ನಾನು ಖಂಡಿತವಾಗಿ ಹೊಸ ಪಕ್ಷ ಸ್ಥಾಪಿಸಿ ಮತ್ತೆ ರಾಜ್ಯ ರಾಜಕಾರಣಕ್ಕೆ ಇಳಿಯುತ್ತೇನೆ” ಎಂದು ತಿಳಿಸಿದ್ದಾರೆ.
ಎರಡನೇ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಅಳಗಿರಿ ಸುದ್ದಿಗಾರರೊಂದಿಗೆ ಮಾತನಾಡಿ, “ಜನವರಿ 3 ರಂದು ತಮ್ಮ ಬೆಂಬಲಿಗರನ್ನು ಸಂಪರ್ಕಿಸಿ ಹೊಸ ಪಕ್ಷವನ್ನು ಪ್ರಾರಂಭಿಸುವ ಬಗ್ಗೆ ನಿರ್ಧರಿಸುತ್ತೇನೆ. ನನ್ನ ಬೆಂಬಲಿಗರು ಹೊಸ ಪಕ್ಷವನ್ನು ಬಯಸಿದರೆ, ನಾನು ಖಚಿತವಾಗಿ ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಡಿಎಂಕೆ ಪಕ್ಷವನ್ನು ಬೆಂಬಲಿಸುವುದಿಲ್ಲ. ಅಲ್ಲದೆ, ಪಕ್ಷಕ್ಕೆ ಮತ್ತೆ ಸೇರಲು ನನ್ನನ್ನು ಡಿಎಂಕೆ ಈವರೆಗೆ ಆಹ್ವಾನಿಸಿಯೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ವಿರುದ್ಧ ದನಿಯೆತ್ತಿದರೆ ಮೋಹನ್ ಭಾಗವತ್ ಕೂಡಾ ಭಯೋತ್ಪಾದಕರೇ! – ರಾಹುಲ್ ಗಾಂಧಿ
ಇದೇ ಸಂದರ್ಭದಲ್ಲಿ ನಟ ರಜನಿಕಾಂತ್ ಅವರನ್ನು ಭೇಟಿ ಮಾಡುವ ಕುರಿತು ಮಾತನಾಡಿದ ಅವರು, “ಪ್ರಸ್ತುತ ನಟ ರಜನಿಕಾಂತ್ ತಮ್ಮ ‘ಅಣ್ಣಾತೆ’ ಚಿತ್ರದ ಚಿತ್ರೀಕರಣದಲಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಅವರು ಹೈದ್ರಾಬಾದ್ನಿಂದ ಹಿಂದಿರುಗಿದ ನಂತರ ನಾನು ಅವರನ್ನು ಭೇಟಿ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ದಿವಂಗತ ಮಾಜಿ ಸಿಎಂ ಕರುಣಾನಿಧಿ ಬದುಕಿದ್ದವರೆಗೆ ಅವರ ಇಬ್ಬರು ಮಕ್ಕಳಾದ ಎಂ.ಕೆ. ಅಳಗಿರಿ ಮತ್ತು ಎಂ.ಕೆ. ಸ್ಟಾಲಿನ್ ಅವರಿಗೆ ಪಕ್ಷದಲ್ಲಿ ಸಮಾನ ಸ್ಥಾನಮಾನ ನೀಡಲಾಗಿತ್ತು. ಅಳಗಿರಿ ಯುಪಿಎ ಎರಡನೇ ಅವಧಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ನೇಮಕವಾಗಿದ್ದರೆ, ರಾಜ್ಯ ರಾಜಕಾರಣದಲ್ಲಿ ಸ್ಟಾಲಿನ್ ಪ್ರಬಲರಾಗಿದ್ದರು.
ಇದನ್ನೂ ಓದಿ: ಕಾಶ್ಮೀರ:10 ಜಿಲ್ಲೆಗಳಲ್ಲಿ 9 ಜಿಲ್ಲೆಗಳು ’ಗುಪ್ಕರ್’ ಪಾಲಿಗೆ-ಬಿಜೆಪಿಗೆ ಮುಖಭಂಗ
ಆದರೆ, ಕರುಣಾನಿಧಿ ಸಾವಿನ ನಂತರ ಪಕ್ಷದ ಚುಕ್ಕಾಣಿ ಯಾರಿಗೆ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಈ ವೇಳೆ ಎಂ.ಕೆ. ಸ್ಟಾಲಿನ್ ಇಡೀ ಪಕ್ಷವನ್ನು ತನ್ನ ಹತೋಟಿಗೆ ತೆಗೆದುಕೊಂಡರು. ಅಲ್ಲದೆ, ಅಳಗಿರಿ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಿದ್ದರು. ಆ ನಂತರ ಅಳಗಿರಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು.
ಹೀಗಿರುವಾಗ ಅಳಗಿರಿಯವರ ಈ ಹೇಳಿಕೆ ಇಡೀ ತಮಿಳುನಾಡು ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಏಕೆಂದರೆ ಮಧುರೈ ಸೇರಿದಂತೆ ಇಡೀ ದಕ್ಷಿಣ ತಮಿಳುನಾಡಿನಲ್ಲಿ ಇವರಿಗೆ ಸಾಕಷ್ಟು ಹಿಡಿತವಿದೆ. ಹಾಗಾಗಿ ಇವರು ಹೊಸ ಪಕ್ಷ ಸ್ಥಾಪಿಸಿದರೆ ಡಿಎಂಕೆ ಮತಗಳು ಚದುರಿಹೋಗುವ ಸಾಧ್ಯತೆ ಇದೆ ಎಂಬುದು ಡಿಎಂಕೆ ಪಕ್ಷದ ಆತಂಕಕ್ಕೂ ಕಾರಣವಾಗಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಇದನ್ನೂ ಓದಿ: ಡಿಸೆಂಬರ್ 25 ವಾಜಪೇಯಿ ಜನ್ಮದಿನ: ‘ಆಯ್ದ’ ರೈತರೊಂದಿಗೆ ಪ್ರಧಾನಿ ಮೋದಿ ಸಂವಹನ!


