ಒಂದು ಶತಮಾನಕ್ಕೂ ಮುಂಚೆ ಭಾರತಕ್ಕೆ ಬಂದ ದಕ್ಷಿಣ ಅಮೆರಿಕ ಮೂಲದ ಟಬೂಬಿಯಾ ಜಾತಿಯ ಮರಗಳು ಈಗ ಭಾರತದ್ದೇ ಆಗಿಹೋಗಿವೆ. ಸರಣಿ ಹೂ ಬಿಡುವ ಮರಗಳೆಂದೇ ಇವನ್ನು ಬಣ್ಣಿಸಲಾಗಿದೆ. ಬೆಂಗಳೂರಿನ ಬೀದಿಗಳಿಗೆ ಈ ಹೂ ಬಿಡುವ ಮರಗಳು ನೀಡುವ ಮೆರಗು ಆಕರ್ಷಕ. ತಾರಾಡಿಗರ ತನುಮನಗಳನ್ನು ತಣಿಸುವ ಟಬೂಬಿಯಾ ಮರಗಳು ಹಲವು ಬಗೆಗಳಲ್ಲಿದ್ದು, ಆಯಾ ಬಗೆಯವು ನಿರ್ದಿಷ್ಟ ಕೆಲವು ತಿಂಗಳಿನಲ್ಲಿ ಸುಂದರವಾದ ಬಣ್ಣ ಬಣ್ಣದ ಹೂವನ್ನು ಅರಳಿಸಿ ಸುತ್ತಲಿನ ಪ್ರಕೃತಿಯನ್ನು ಹಾಗೂ ನೋಡುಗರ ಮನಸ್ಸನ್ನೂ ಅರಳಿಸುತ್ತವೆ. ಈ ಹೂಗಳು ಮರಗಳ ಕೆಳಗೆ ಉದುರಿದಾಗ ಸುಂದರವಾದ ಕಾರ್ಪೆಟ್ ಹಾಸಿದಂತೆ ಕಾಣುತ್ತವೆ.
ಟಬೂಬಿಯಾ ಅವಲಾನಿಡೇ ಮರಗಳು ನವೆಂಬರ್ ತಿಂಗಳಿನಲ್ಲಿ ಮೊಟ್ಟಮೊದಲು ಗಾಢವಾದ ಗುಲಾಬಿ ಬಣ್ಣದ ಹೂಗಳನ್ನು ಅರಳಿಸಿ ಹೂಗಳ ಋತುವಿನ ಪ್ರಾರಂಭವನ್ನು ಸಾರುತ್ತವೆ. ಬೆಂಗಳೂರಿನ ವಿವಿಧೆಡೆ ಈ ಹೂಗಳ ಮರಗಳಿವೆ. ನವೆಂಬರ್-ಡಿಸೆಂಬರ್ ತಿಂಗಳುಗಳಲ್ಲಿ ಈ ಹೂಗಳ ಮೆರಗನ್ನು ನಾವು ಕಾಣಬಹುದಾಗಿದೆ. ಈ ವರ್ಷ ತೀವ್ರ ಸೈಕ್ಲೋನ್‌ನಿಂದಾಗಿ ಹೂವುಗಳು ಉದುರಿ ನೆಲವನ್ನು ಹೊದ್ದ ದೃಶ್ಯವೂ ಮನಮೋಹಕ.
“1908ರಲ್ಲಿ ಲಾಲ್‌ಬಾಗ್ ಕ್ಯುರೇಟರ್ ಆಗಿ ಬಂದವರು ಕ್ರುಂಬಿಗಲ್. ಅವರು ಲಾಲ್‌ಬಾಗ್‌ಗೆ ಸೀಮಿತವಾಗಿದ್ದ ಉದ್ಯಾನವನ್ನು ನಗರದ ವಿವಿಧ ಬಡಾವಣೆಗಳಿಗೆ, ಮನೆಗಳಿಗೆ ಕೊಂಡೊಯ್ದರು. ಅವರು ಈ ಸರಣಿ ಹೂ ಬಿಡುವ ಮರಗಳನ್ನು ನೆಡುವುದನ್ನು ಪ್ರಾರಂಭಿಸಿದರು. ಅಂದರೆ ಒಂದು ಜಾತಿಯ ಮರಗಳು ಹೂವರಳಿಸಿ ಬಾಡುವಷ್ಟರಲ್ಲಿ ಮತ್ತೊಂದು ಜಾತಿಯ ಮರಗಳು ಹೂವರಳಿಸಿರಬೇಕು. ಅವರು ಈ ಟಬೂಬಿಯಾ ಜಾತಿಯ ಮರಗಳನ್ನು ಸಾಕಷ್ಟು ನೆಡಲು ಪ್ರೋತ್ಸಾಹಿಸಿದರು” ಎನ್ನುತ್ತಾರೆ ತೋಟಗಾರಿಕೆ ಸಮಾಲೋಚಕ ಮತ್ತು ತಜ್ಞ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ.

“ಟಬೂಬಿಯಾ ಅವಲಾನಿಡೇ ಜಾತಿಯ ಮರ ನವೆಂಬರ್, ಡಿಸೆಂಬರ್, ಜನವರಿ ತಿಂಗಳಿನಲ್ಲಿ ಗಾಢವಾದ ಗುಲಾಬಿ ಬಣ್ಣದ ಹೂಬಿಡುತ್ತದೆ. ಅದು ಮುಗಿಯುವಷ್ಟರಲ್ಲಿ ಟಬೂಬಿಯಾ ಅರ್ಜೆನ್ಷಿಯಾ ಗಾಢ ಹಳದಿ ಬಣ್ಣದ ಹೂವರಳಿಸಿಕೊಂಡು ಗಮನ ಸೆಳೆದರೆ, ಟಬೂಬಿಯಾ ಸ್ಪೆಕ್ಟಾಬಿಲಿಸ್ ತಿಳಿ ಹಳದಿ ಹೂವರಳಿಸುತ್ತವೆ. ಇವು ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ಇರುತ್ತವೆ. ಹಳದಿ ಹೂಗಳು ಉದುರುವ ಸಮಯಕ್ಕೆ ಸರಿಯಾಗಿ ಅಂದರೆ, ಯುಗಾದಿಗೆ ಸ್ವಾಗತ ಕೋರುವುದೇ ಟಬೂಬಿಯಾ ರೋಸಿಯಾ. ಇದರ ಸೊಬಗು ಮತ್ತು ಬೆಡಗನ್ನು ’ತಿಳಿಗುಲಾಬಿ ಸೀರೆಯನ್ನು ಧರಿಸಿರುವ ಸುಂದರಿ’ ಎಂದು ಕರೆದಿದ್ದೇನೆ. ಸುಮಾರು ಏಪ್ರಿಲ್ ತಿಂಗಳವರೆಗೂ ಇರುವ ಈ ಹೂವಿನ ನಂತರ ಕತ್ತಿಕಾಯಿ ಮರ ಅಂದರೆ ಮೇ ಫ್ಲವರ್ ಹೂ ಬಿಡುತ್ತದೆ. ಹೀಗೇ ಟ್ಯುಲಿಪ್ ಮರ ಅಥವಾ ನೀರುಗಾಯಿಮರ ಚಂದದ ಹೂ ಬಿಡುತ್ತದೆ ಹೀಗೇ ಸಾಗಿ ದಸರಾ ಮರಗಳೆಂದು ಕರೆಯುವ ಕಲ್ವಿಲೇ ರೆಸಿಮೋಸಾ ಕೇಸರಿ ಬಣ್ಣದ ಹೂಬಿಡುವವರೆಗೂ ಸಾಗುತ್ತದೆ. ಈ ದಸರಾ ಮರಗಳನ್ನು ಕ್ರುಂಬಿಗಲ್ ಅವರು ಮೈಸೂರಿನಲ್ಲಿ ನೆಟ್ಟಿದ್ದಾರೆ. ಲಿಲ್ಲಿ ಹೂವರಳಿದಾಗ ಲಂಡನ್ನಿಗೆ ಭೇಟಿ ಕೊಡು; ಟಬೂಬಿಯಾ ಹೂಬಿಟ್ಟಾಗ ಬೆಂಗಳೂರಿಗೆ ಭೇಟಿ ನೀಡು ಎಂಬ ಮಾತು ಚಾಲ್ತಿಯಲ್ಲಿದೆ” ಎಂದು ಅವರು ವಿವರಿಸಿದರು.
ಬೆಂಗಳೂರಿನಲ್ಲಿ ಬಲು ಅಪರೂಪದ ಟಬೂಬಿಯಾ ಸ್ಪೆಕ್ಟಾಬಿಲಿಸ್ ಜಾತಿಯ ಮರಗಳಿವೆ. ತಿಳಿ ಹಳದಿ ಹೂವರಳಿಸುವ ಈ ಮರಗಳು ಬೆಂಗಳೂರಿನಲ್ಲಿ ಹೆಚ್ಚೆಂದರೆ ೫೦ ಇರಬಹುದು. ನಮ್ಮ ರಾಜಭವನದಲ್ಲಿ ಟಬೂಬಿಯಾ ದೊನ್ನೆಲ್ ಸ್ಮಿತಿ ಎಂಬ ಜಾತಿಯ ಮರವಿದೆ. ಗಾಢ ಹಳದಿ ಬಣ್ಣದ ಹೂಗಳನ್ನು ಬಿಡುವ ಈ ಮರದ ಕಾಂಡ ಮೃದು. ಬೆಂಗಳೂರಿನಲ್ಲಿ ಈ ಜಾತಿಯವು ಸುಮಾರು ಹತ್ತು ಮರಗಳಿರಬೇಕಷ್ಟೇ.

“ಎಂಬತ್ತರ ದಶಕದವರೆಗೂ ಬೆಂಗಳೂರಿನ ವಿವಿಧ ವೃತ್ತಗಳು, ಉದ್ಯಾನವನ, ಸಾರ್ವಜನಿಕ ಕಟ್ಟಡಗಳ ಬಳಿ ಮಾತ್ರ ಈ ರೀತಿಯ ಮರಗಳನ್ನು ಕಾಣಬಹುದಾಗಿತ್ತು. ೭೦ರ ದಶಕದಲ್ಲಿ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ತೋಟಗಾರಿಕೆ ಸಲಹೆಗಾರರಾದ ಡಾ.ಮರಿಗೌಡ ಅವರು ಅಲ್ಲಿ ಅಶೋಕ, ಮಂದಾರ, ಟಬೂಬಿಯಾ, ಜಕರಂಡಾ ಮೊದಲಾದ ಅಸಂಖ್ಯ ಹೂಬಿಡುವ ಮರಗಳನ್ನು ನೆಡಿಸಿದರು. ಕನಿಷ್ಠ ಒಂದು ಸಾವಿರವಾದರೂ ಅಲ್ಲಿ ಟಬೂಬಿಯಾ ಮರಗಳಿವೆ. ಪ್ರತಿ ವರ್ಷ ನವೆಂಬರ್‌ನಿಂದ ಮೇ ವರೆಗೆ ಅಲ್ಲಿ ಬಣ್ಣಬಣ್ಣದ ಹೂಗಳನ್ನು ನೋಡಲು ಎರಡು ಕಣ್ಣುಗಳು ಸಾಲವು. ಅಲ್ಲಿ ಒಂದು ದಶಕ ಗಾರ್ಡನ್ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಿದ ಅದೃಷ್ಟ ನನ್ನದು” ಎನ್ನುತ್ತಾರೆ ಸಂತೆ ನಾರಾಯಣಸ್ವಾಮಿ.

ಹೊರಗೆ ತಾರಾಡುವಾಗ ಈ ಸಂತಸ ಅರಳುವ ಸಮಯವನ್ನು ಕಣ್ಣುತುಂಬಿಸಿಕೊಳ್ಳುವುದನ್ನು ಮರೆಯದಿರಿ.
(ವಿ. ಸೂ: ಟಿ.ಪಿ.ಇಸ್ಸಾರ್ ಅವರು ಬೆಂಗಳೂರಿನ ಎಲ್ಲಾ ಹೂ ಬಿಡುವ ಮರಗಳ ಕುರಿತಾದ ಕಾಫಿ ಟೇಬಲ್ ಪುಸ್ತಕ ’ಬ್ಲಾಸಮ್ಸ್ ಆಫ್ ಬೆಂಗಳೂರು’ ಹೊರತಂದಿದ್ದಾರೆ.)

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದವರಾದ ಡಿ.ಜಿ. ಮಲ್ಲಿಕಾರ್ಜುನ ಅವರ ನೆಚ್ಚಿನ ಹವ್ಯಾಸ ಫೋಟೋಗ್ರಫಿ. ರಸ್ಕಿನ್ ಬಾಂಡ್ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರಲ್ಲದೆ, ಫೋಟೋಗ್ರಪಿ ವಿಷಯವಾಗಿ ’ಕ್ಲಿಕ್, ’ಅರೆಕ್ಷಣದ ಅದೃಷ್ಟ’ ಪುಸ್ತಕಗಳನ್ನು ರಚಿಸಿದ್ದಾರೆ.
ಫೋಟೋಗಳು: ಸಂತೆ ನಾರಾಯಣಸ್ವಾಮಿ ಮತ್ತು ಮಂಜುನಾಥ ಚಾರ್ವಾಕ


