| ಮಲ್ಲಿ |
ಕೊನೆಗೂ ಬಿಜೆಪಿ ಜಗ್ಗಾಡಿ, ಅಲುಗಾಡಿ, ಒಂದಿಷ್ಟು ಡ್ರಾಮಾ ಮಾಡಿ ಟಿಕೆಟನ್ನು ನೀಡಿದೆ. ಹಾಲಿ ಸಂಸದ ಕರಡಿ ಸಂಗಣ್ಣ ಪ್ರಯಾಸಪಟ್ಟು ಅಂತಿಮ ಹಂತದಲ್ಲಿ ಬಿ ಫಾರಂ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಲ ಕರಡಿ ಸೋಲುತ್ತಾರೆ ಎಂದೇ ಬಿಜೆಪಿಯ ಆಂತರಿಕ ಸಮೀಕ್ಷೆ ಹೇಳಿತ್ತಂತೆ. ಅದಕ್ಕೇ ಇಲ್ಲಿಗೆ ರಾಮುಲುರನ್ನು ತರಲು ಅದು ಯೋಚಿಸಿತು. ರಾಮುಲು ನೋ ಎಂದ ಮೇಲೆ ಸ್ಥಳೀಯ ಅಭ್ಯರ್ಥಿಗಳ ಹುಡುಕಾಟ ನಡೆಸಿತು. ಆದರೆ ಅಂತಹ ಸಮರ್ಥರು ಸಿಗದೇ ಇದ್ದಾಗ ಮತ್ತೆ ಅನಿವಾರ್ಯವಾಗಿ ಕರಡಿ ಸಂಗಣ್ಣರಿಗೇ ಟಿಕೆಟ್ ನೀಡಿದೆ. ಇತ್ತ ಕಾಂಗ್ರೆಸ್ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‍ರ ಸಹೋದರ ಜಿಪಂ ಸದಸ್ಯ ರಾಜಶೇಖರ ಹಿಟ್ನಾಳರಿಗೆ ವಾರದ ಹಿಂದೆನೇ ಟಿಕೆಟ್ ಘೋಷಿಸಿರುವುದರಿಂದ ಅವರಾಗಲೇ ಪ್ರಚಾರದಲ್ಲಿ ಕರಡಿಗಿಂತ ತುಂಬ ಮುಂದೆ ಇದ್ದಾರೆ.
ಕಾಂಗ್ರೆಸ್ ಬುಟ್ಟಿಗೆ ಈ ಸಲ ಹೊಸದಾಗಿ ಬೀಳಬಹುದಾದ ಎಂಪಿ ಕ್ಷೇತ್ರಗಳಲ್ಲಿ ಕೊಪ್ಪಳವೂ ಒಂದು ಎನ್ನಲಾಗುತ್ತಿದೆ. ಇದು ಬಿಜೆಪಿಯನ್ನೂ ಕಾಡುತ್ತಿದ್ದರ ಪರಿಣಾಮವಾಗಿ, ಅದು ಅಭ್ಯರ್ಥಿ ಬದಲಾವಣೆಗೆ ಚಿಂತಿಸಿತ್ತು. ಆದರೆ ಅಂತಿಮವಾಗಿ ಅದು ಮತ್ತೆ ಹಾಲಿ ಸಂಸದ ಕರಡಿ ಸಂಗಣ್ಣರನ್ನೇ ಕಣಕ್ಕೆ ಇಳಿಸುವ ನಿರ್ಧಾರಕ್ಕೆ ಬಂದಿದೆ.
ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳಾಗಲು ಮೂರ್ನಾಲ್ಕು ಜನ ಪೈಪೋಟಿ ನಡೆಸುತ್ತಿದ್ದರೂ, ಅಂತಿಮವಾಗಿ ರಾಜಶೇಖರ ಹಿಟ್ನಾಳ್‍ಗೆ ಟಿಕೆಟ್ ಸಿಕ್ಕಿದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರರ ಅಣ್ಣನ ಮಗ ಶರಣೇಗೌಡ, ವಿರೂಪಾಕ್ಷಪ್ಪ ಸಿಂಗನಾಳ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೆಸರುಗಳು ಚಾಲ್ತಿಗೆ ಬಂದಿದ್ದವು. ಆದರೆ ಅಂತಿಮವಾಗಿ ಹಿಟ್ನಾಳ್‍ಗೆ ಟಿಕೆಟ್ ಸಿಕ್ಕಿದೆ.
ಹಾಲಿ ಸಂಸದ ಕರಡಿ ಸಂಗಣ್ಣ ಹಿಂದೆ 4 ಬಾರಿ ಕೊಪ್ಪಳದ ಶಾಸಕರಾಗಿದ್ದವರು. ಅವರು ಪಂಚಮಸಾಲಿ ರಾಜಕೀಯ ಮಾಡುತ್ತ ಬಂದಿರುವುದು ಕ್ಷೇತ್ರದಲ್ಲಿ ಅಸಮಾಧಾನ ಹುಟ್ಟಿಸಿದೆ. ಪಂಚಮಸಾಲಿಗಳ ಸಮಸ್ಯೆಗೂ ಅವರು ಸ್ಪಂದಿಸಿಲ್ಲ, ಮಣ್ಣಿಗೆ ಹೋಗುವ, ಮದುವೆಗಳಿಗೆ ಹಾಜರಾಗುವುದನ್ನೇ ಜನಸೇವೆ ಎಂದು ಭ್ರಮಿಸಿರುವ ಕರಡಿ ಸಂಗಣ್ಣ 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೂ ಮುಜುಗರವಾಗುವಂತೆ ನಡೆದುಕೊಂಡರು.
ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಮಗನಿಗೇ ಟಿಕೆಟ್ ಕೊಡಬೇಕೆಂದು ಕರಡಿ ಸಂಗಣ್ಣ ಮಾಡಿದ ರಂಪಕ್ಕೆ ಬಿಜೆಪಿ ಹೈಕಮಾಂಡೇ ಬೆಚ್ಚಿಬಿದ್ದಿತ್ತು. ತನ್ನ ಮಗನಿಗೆ ಟಿಕೆಟ್ ಕೊಡದಿದ್ದರೆ ಬಿಜೆಪಿ ತೊರೆಯುವುದಾಗಿ ಬೆದರಿಸಿದ ಸಂಗಣ್ಣ, ಪಂಚಮಸಾಲಿ ವೇದಿಕೆಯೊಂದನ್ನು ಮಾಡಿ, ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಪಂಚಮಸಾಲಿ ಅಭ್ಯರ್ಥಿಗಳನ್ನು ಹಾಕುವುದಾಗಿ ಬಿಜೆಪಿಯನ್ನೇ ಬ್ಲ್ಯಾಕ್‍ಮೇಲ್ ಮಾಡಿದ್ದರು. ಆಗಲೇ ಜನ ಸಂಗಣ್ಣರ ಈ ಪುತ್ರವ್ಯಾಮೋಹವನ್ನು ಕಂಡು ರೋಸಿದ್ದರೂ, ಬಿಜೆಪಿ ಸಂಗಣ್ಣರ ಒತ್ತಡಕ್ಕೆ ಮಣಿದು ಅವರ ಮಗನಿಗೇ ಕೊಪ್ಪಳ ವಿಧಾನಸಭಾದÀ ಟಿಕೆಟ್ ನೀಡಿತ್ತು. ಅಷ್ಟರಲ್ಲಾಗಲೇ ಬಿಜೆಪಿಯಿಂದ ಬಿ ಫಾರಂ ಪಡೆದು ಪ್ರಚಾರ ಆರಂಭಿಸಿದ್ದ ಚಂದ್ರಶೇಖರ್‍ಗೆ ಕೈಕೊಟ್ಟ ಬಿಜೆಪಿ ನಾಯಕರು ಕೊನೆ ಕ್ಷಣದಲ್ಲಿ ಬಿ ಫಾರಂ ಅನ್ನು ಕರಡಿ ಮಗನಿಗೆ ನೀಡಿದರು. ಚಂದ್ರಶೇಖರ್‍ಗೆ ಟಿಕೆಟ್ ತಪ್ಪಿಸಿದ್ದಕ್ಕೆ ಗಮನಾರ್ಹ ಸಂಖ್ಯೆಯಲ್ಲಿ ಇರುವ ರೆಡ್ಡಿ ಲಿಂಗಾಯತರು ಕಾಂಗ್ರೆಸ್ ಪರ ನಿಂತರು. ಕಾಂಗ್ರೆಸ್‍ನ ರಾಘವೇಂದ್ರ ಹಿಟ್ನಾಳ್ ಎರಡನೇ ಬಾರಿಗೆ ನಿರಾಯಾಸವಾಗಿ ಗೆದ್ದರು.
ಆಗಿಂದಲೂ ಕರಡಿ ಸಂಗಣ್ಣರಿಗೆ ಪಾಠ ಕಲಿಸಲು ರೆಡ್ಡಿ ಮತ್ತು ಇತರ ಲಿಂಗಾಯತ ಸಮುದಾಯಗಳು ಕಾಯುತ್ತಿವೆ. ರೈಲ್ವೇ ಬ್ರಿಡ್ಜ್ ಮಾಡಿಸಿದ್ದೇ ಸಾಧನೆ ಎನ್ನುತ್ತಿರುವ ಕರಡಿಯವರಿಗೆ ಈ ಸಲ ಗೆಲುವು ಮರೀಚಿಕೆ ಆಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಜನರ ಒಲವು ಗಳಿಸಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿರುವ ರಾಜಶೇಖರ್ ಈಗಾಗಲೇ ಪ್ರಚಾರ ಶುರು ಮಾಡಿಯಾಗಿದೆ.
ಇಲ್ಲಿ ಕುರುಬರು, ಮುಸ್ಲಿಮರು ಮತ್ತು ಲಿಂಗಾಯತರ ಮತಗಳು ನಿರ್ಣಾಯಕವಾಗಿದ್ದು, ಈ ಮೂರೂ ಸಮುದಾಯಗಳು ಕರಡಿ ವಿರುದ್ಧ ನಿಲ್ಲುವ ಸೂಚನೆಗಳು ಕಾಣಿಸುತ್ತಿವೆ. ಹೀಗಾಗಿ ಈ ಸಲ ಕತ್ತಲಲ್ಲಿ ಅಲ್ಲ, ಹಾಡಹಗಲೇ ಕರಡಿಗೆ ಸೋಲಿನ ಜಾಮೂನು ತಿನ್ನಿಸುವುದು ಬಹುತೇಕ ಖಚಿತವಾಗಿದೆ.


