ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕೆಂದು ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ ತಿಂಗಳು ಪೂರೈಸಿದೆ. ಸರ್ಕಾರ ರೈತ ಮುಖಂಡರೊಂದಿಗೆ ಆರನೇ ಸುತ್ತಿನ ಚರ್ಚೆ ನಡೆಸಲು ಡಿಸೆಂಬರ್ 29 ರಂದು ಸಭೆ ಕರೆದಿದೆ. ಕಾರ್ಪೊರೇಟ್ ಕಂಪನಿಗಳು ನಮ್ಮಿಂದ ಕೃಷಿ ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಶಪಥಗೈದಿರುವ ರೈತರು ತಾವು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿಯೇ ಈರುಳ್ಳಿ ಬಿತ್ತನೆ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ದೆಹಲಿಯ ಬುರಾರಿ ನಿರಂಕಾರಿ ಸಮಾಗಮ ಮೈದಾನದಲ್ಲಿ ಹೋರಾಟನಿರತ ರೈತರು ಹೋರಾಟದ ಮಧ್ಯೆ ಈರುಳ್ಳಿ ಬಿತ್ತನೆ ಮಾಡಿದ್ದು, ಉತ್ತಮ ಪೈರು ಬಿಟ್ಟಿವೆ. ಈರುಳ್ಳಿ ಪೈರುಗಳಿಗೆ ರೈತರು ನಿರುಣಿಸುತ್ತಿರುವ ಚಿತ್ರಗಳನ್ನು ಎಎನ್‌ಐ ಟ್ವೀಟ್ ಮಾಡಿದೆ.
“ನಾವು ಒಂದು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದೇವೆ. ಪ್ರತಿಭಟನೆಯ ನಡುವೆ ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ಏನಾದರೂ ಮಾಡೋಣ ಎಂದು ಈರುಳ್ಳಿ ಬಿತ್ತಿದ್ದೇವೆ. ಹೇಗಿದ್ದರೂ ನಾವು ಅಡುಗೆಗೆ ತರಕಾರಿಗಳನ್ನು ಬಳಸುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ತರಕಾರಿಗಳನ್ನು ಈ ಮೈದಾನದಲ್ಲಿ ಬೆಳೆಯುತ್ತೇವೆ” ಎಂದು ರೈತರೊಬ್ಬರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
Delhi: Protesting farmers say they're using Nirankari Samagam ground in Burari to grow crops.
"Since we've been sitting idle for a month during protests, we thought of growing onions as we can use it for our daily cooking. We'll grow more crops on Burari ground," says a farmer. pic.twitter.com/hvNOHwVF31
— ANI (@ANI) December 27, 2020
ದೆಹಲಿ ಪ್ರತಿಭಟನೆಗೆ ಆಗಮಿಸುವಾಗಲೇ ರೈತರು 4-5 ತಿಂಗಳಿಗಾಗುವಷ್ಟು ದವಸ ಧಾನ್ಯಗಳನ್ನು ತಮ್ಮೊಡನೆ ತಂದಿದ್ದಾರೆ. ಅಂದರೆ ಅಷ್ಟು ದಿನಗಳಾದರೂ ಸರಿಯೇ ಈ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ನಾವು ವಾಪಸ್ ಹೋಗುವುದಿಲ್ಲ ಎಂದು ದೃಢ ನಿರ್ಧಾರ ಮಾಡಿದ್ದಾರೆ. ಅದರ ಭಾಗವಾಗಿಯೇ ಈಗ ಬುರಾರಿ ಮೈದಾನದಲ್ಲಿ ತರಕಾರಿ ಬೆಳೆಯಲು ಮುಂದಾಗಿದ್ದಾರೆ.
ದೆಹಲಿಯಲ್ಲಿರುವ ಬುರಾರಿ ನಿರಂಕಾರಿ ಮೈದಾನವು ನೂರಾರು ಎಕರೆ ವಿಸ್ತೀರ್ಣವುಳ್ಳದ್ದಾಗಿದೆ. ಎಲ್ಲ ರೈತರು ಇಲ್ಲಿ ಬಂದು ಪ್ರತಿಭಟನೆ ನಡೆಸಬಹುದು ಎಂದು ಕೇಂದ್ರ ಸರ್ಕಾರ ನವೆಂಬರ್ 27 ರಂದು ತಿಳಿಸಿತ್ತು. ಕೆಲ ರೈತರು ಇಲ್ಲಿ ಬಂದು ಧರಣಿ ಆರಂಭಿಸಿದರೆ ಉಳಿದ ಬಹುತೇಕ ರೈತರು ಇಲ್ಲಿಗೆ ಬರಲು ಒಪ್ಪಲಿಲ್ಲ. ಕೇಂದ್ರ ಸರ್ಕಾರ ರೈತರನ್ನು ಬಂಧಿಸಿಡಲು 9 ಕ್ರೀಡಾಂಗಣಗಳನ್ನು ನೀಡುವಂತೆ ದೆಹಲಿ ಆಪ್ ಸರ್ಕಾರಕ್ಕೆ ಕೇಳಿತ್ತು. ಆದರೆ ಆಪ್ ಸರ್ಕಾರ ಅದಕ್ಕೆ ಅವಕಾಶ ನೀಡಿರಲಿಲ್ಲ. ಈಗಾಗಿ ಈ ಮೈದಾನಕ್ಕೆ ಬಂದರೆ ಸರ್ಕಾರ ಅದನ್ನು ಬಂಧೀಖಾನೆಯನ್ನಾಗಿ ಮಾಡುತ್ತದೆ ಎಂದು ತಿಳಿದ ರೈತರು ಇಲ್ಲಿಗೆ ಬರಲು ನಿರಾಕರಿಸಿ ತಾವಿರುವ ದೆಹಲಿಯ ಗಡಿಗಳಲ್ಲಿಯೇ ಪ್ರತಿಭಟನೆ ಮುಂದುವರೆಸಿದ್ದಾರೆ.
ಒಟ್ಟಿನಲ್ಲಿ ರೈತರು ಬುರಾರಿ ಮೈದಾನದಲ್ಲಿ ಬೆಳೆ ಬೆಳೆಯುವ ಮೂಲಕ ತಾವು ಸುಮ್ಮನೆ ಕೂರುವ ಜಾಯಮಾನದವರಲ್ಲಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಎಂತಹ ಕಾಯ್ದೆ ತಂದರೂ ಹೋರಾಡುತ್ತಲೇ ನಮ್ಮ ಕಾಯಕ ಮುಂದುವರೆಸುತ್ತೇವೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ರೈತರ ಈ ಕೃತಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ಇದನ್ನೂ ಓದಿ: ರೈತಸಂಘದ ನೂರಾರು ಕಾರ್ಯಕರ್ತರೊಂದಿಗೆ ಸಾಮೂಹಿಕವಾಗಿ Jio ಸಿಮ್‌ನಿಂದ ಪೋರ್ಟ್ ಆಗಲು ಮುಂದಾದ ಎಚ್.ಆರ್ ಬಸವರಾಜಪ್ಪ


