ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ-ಪಂಜಾಬ್‌ನ ಸಿಂಘು ಗಡಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದು, ಇಲ್ಲಿಗೆ ಇಂದು ಸಂಜೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಲಿದ್ದಾರೆ. ಈ ತಿಂಗಳಲ್ಲಿ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ.
ತಮ್ಮ ಭೇಟಿಯ ಸಂದರ್ಭದಲ್ಲಿ, ದೆಹಲಿ ಸರ್ಕಾರದ ಪಂಜಾಬಿ ಅಕಾಡೆಮಿ ವತಿಯಿಂದ ಸಿಂಘುನಲ್ಲಿ ನಿರ್ಮಿಸಲಾಗಿರುವ ತೇಜ್ ಬಹದ್ದೂರ್ ಸ್ಮಾರಕದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಶಹೀದಿ ದಿವಸ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂಬತ್ತನೇ ಸಿಖ್ ಗುರುಗಳ ಹುತಾತ್ಮತೆ ಮತ್ತು ತ್ಯಾಗದ ಸಂಕೇತವಾಗಿ ಈ ಶಹೀದ್ ದಿವಸ್ ಅನ್ನು ಆಚರಿಸಲಾಗುತ್ತದೆ.
ಕೇಜ್ರಿವಾಲ್ ಈ ಹಿಂದೆಯೂ ಸ್ಮಾರಕಕ್ಕೆ ಭೇಟಿ ನೀಡಿದ್ದರು. ಅಲ್ಲಿ ತಮ್ಮ ಸರ್ಕಾರವು ಪ್ರತಿಭಟನಾ ನಿರತ ರೈತರಿಗೆ ಆಹಾರ ಮತ್ತು ನೈರ್ಮಲ್ಯದ ವ್ಯವಸ್ಥೆಗಳನ್ನು ಮಾಡಿತ್ತು.
ಇದನ್ನೂ ಓದಿ: ಮಾಧ್ಯಮಗಳ ಪ್ರಕಾರ ಹೇಳುವುದಾದರೆ ಅಲ್ಲಿ ಹೋರಾಡುತ್ತಿರುವವರು ರೈತರೇ ಅಲ್ಲ: ಪೇಜಾವರ ಮಠದ ಸ್ವಾಮೀಜಿ
ಕೇಜ್ರಿವಾಲ್ ಇಲ್ಲಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾಗ, “ನಾನು ಇಲ್ಲಿಗೆ ಮುಖ್ಯಮಂತ್ರಿಯಾಗಿ ಬಂದಿಲ್ಲ. ಬದಲಿಗೆ ಸೇವಕನಾಗಿ ಬಂದಿದ್ದೇನೆ. ರೈತರು ಇಂದು ತೊಂದರೆಯಲ್ಲಿದ್ದಾರೆ, ನಾವು ಅವರೊಂದಿಗೆ ನಿಲ್ಲಬೇಕು” ಎಂದು ಹೇಳಿದ್ದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕರಾಳ ಕೃಷಿ ಕಾನೂನಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ವಿರೋಧ ಪಕ್ಷಗಳ ನಾಯಕರ ಪೈಕಿ ಅರವಿಂದ್ ಕೇಜ್ರಿವಾಲ್ ಕೂಡ ಒಬ್ಬರು.
ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪಂಜಾಬ್, ಹರಿಯಾಣ ಮತ್ತು ಇತರೆ ಹಲವು ರಾಜ್ಯಗಳ ಲಕ್ಷಾಂತರ ರೈತರು ನವೆಂಬರ್ 26 ರಿಂದ ದೆಹಲಿಯ ವಿವಿಧ ಭಾಗಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಇಂದಿಗೆ ಒಂದು ತಿಂಗಳು ಕಳೆದಿದೆ.
ಇದನ್ನೂ ಓದಿ: ಪ್ರತಿಭಟನಾ ಸ್ಥಳದಲ್ಲಿಯೇ ಈರುಳ್ಳಿ ಬಿತ್ತನೆ: ಹೋರಾಟದಲ್ಲಿಯೂ ಕೃಷಿ ಬಿಡಲೊಪ್ಪದ ರೈತರು!
ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಅವುಗಳೆಲ್ಲಾ ವಿಫಲವಾಗಿವೆ. ಇತ್ತೀಚೆಗೆ ಈ ವಿಷಯವನ್ನು ಕೈಗೆತ್ತಿಕೊಂಡು ಸುಪ್ರೀಂಕೋರ್ಟ್, ಈ ಕುರಿತು ಶೋಧನೆ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿತ್ತು.
ಜೊತೆಗೆ ರೈತರು ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳಬೇಕಾಗಿಲ್ಲ. ಹೋರಾಟ ಮಾಡುವುದು ಅವರ ಹಕ್ಕು ಎಂದು ಸುಪ್ರೀಂ ಹೇಳಿತ್ತು. ಆದರೆ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ, ಶಾಂತಿಯುತವಾಗಿ ಪ್ರತಿಭಟಿಸುವಂತೆ ಹೇಳಿತ್ತು.
ಇದನ್ನೂ ಓದಿ: ರೈತಸಂಘದ ನೂರಾರು ಕಾರ್ಯಕರ್ತರೊಂದಿಗೆ ಸಾಮೂಹಿಕವಾಗಿ Jio ಸಿಮ್‌ನಿಂದ ಪೋರ್ಟ್ ಆಗಲು ಮುಂದಾದ ಎಚ್.ಆರ್ ಬಸವರಾಜಪ್ಪ
ಪ್ರತಿಭಟನಾ ನಿರತ ರೈತರು ಈಗ ಕೇಂದ್ರದೊಟ್ಟಿಗೆ ಮಾತುಕತೆಗೆ ಮುಂದಾಗಿದ್ದಾರೆ. ಜೊತೆಗೆ ಈ ಮಾತುಕತೆಯಲ್ಲಿ ರೈತರು ಚರ್ಚಿಸ ಬಯಸುವ ವಿಷಯಗಳನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ವರಾಜ್ ಇಂಡಿಯಾ ಪಕ್ಷದ ಮುಖ್ಯಸ್ಥ ಯೋಗೇಂದ್ರ ಯಾದವ್, “ಡಿಸಂಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರದೊಟ್ಟಿಗೆ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾಗಿದ್ದೇವೆ. ಈ ಮಾತುಕತೆಯಲ್ಲಿ ನಮ್ಮ ಎರಡು ಉದ್ದೇಶಗಳ ಬಗ್ಗೆ ಚರ್ಚಿಸಲಿದ್ದೇವೆ. ಒಂದು, ಈ ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಧಾನಗಳ ಕುರಿತು, ಮತ್ತೊಂದು, ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಜಾರಿಗೊಳಿಸುವ ಪ್ರಕ್ರಿಯೆಗಳ ಕುರಿತು ಚರ್ಚಿಸುತ್ತೇವೆ” ಎಂದು ಹೇಳಿದ್ದಾರೆ.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ 72ನೇ ಹಾಗೂ 2020ನೇ ಸಾಲಿನ ಕೊನೆಯ ಆವೃತ್ತಿಯ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಮಾತನಾಡಿದರು. ಪ್ರಧಾನಿಯ ಮನ್ ಕೀ ಬಾತ್ ಭಾಷಣದ ವೇಳೆ ತಟ್ಟೆಗಳನ್ನು ಬಾರಿಸಬೇಕು ಎಂದು ರೈತ ನಾಯಕರು ಇಡೀ ದೇಶದ ಜನತೆಗೆ ಕರೆ ನೀಡಿದ್ದರು.
ಈ ಕರೆಯ ಮೇರೆಗೆ ದೇಶದಾದ್ಯಂತ ಹಲವು ಕಡೆಗಳಲ್ಲಿ ರೈತರು ತಟ್ಟೆ ಬಡಿದು ತಮ್ಮ ವಿರೋಧ ವ್ಯಕ್ತಪಡಿಸಿದರು. ಜೊತೆಗೆ ದೆಹಲಿಯ ಗಡಿಯಲ್ಲಿಯೂ ಪ್ರತಿಭಟನಾ ನಿರತ ರೈತರು ತಟ್ಟೆ ಬಡಿದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಲು ‘7–8 ಲಕ್ಷ ರೈತರನ್ನು’ ಸೇರಿಸಲಾಗಿದೆ – ಅಣ್ಣಾಮಲೈ


