ಉತ್ತರ ಪ್ರದೇಶದ ಕಾನ್ಪುರ ಅಂಚೆ ಇಲಾಖೆಯು ಭೂಗತ ಪಾತಕಿಗಳಾದ ಚೋಟಾ ರಾಜನ್ ಮತ್ತು ಮುನ್ನಾ ಭಜರಂಗಿಯ ಚಿತ್ರಗಳಿರುವ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿ ವಿವಾದವೆಬ್ಬಿಸಿದೆ. ಅಂಚೆ ಚೀಟಿಗಳನ್ನು ‘ಮೈ ಸ್ಟಾಂಪ್’ ಯೋಜನೆಯಡಿ ಮುದ್ರಿಸಲಾಗಿದೆ.
ನಡೆದ ತಪ್ಪುಗಳ ಬಗ್ಗೆ ಪೋಸ್ಟ್ ಮಾಸ್ಟರ್ ಜನರಲ್ ವಿ.ಕೆ.ವರ್ಮಾ ಒಪ್ಪಿಕೊಂಡಿದ್ದು, ಅದು ಗುಮಾಸ್ತರ ಕಡೆಯಿಂದ ಆದ ತಪ್ಪು ಎಂದು ಹೇಳಿದ್ದಾರೆ. “ಇದು ಹೇಗೆ ಸಂಭವಿಸಿತು ಮತ್ತು ಗುಮಾಸ್ತರಿಗೆ ಪಾತಕಿಗಳನ್ನು ಗುರುತಿಸಲು ಯಾಕೆ ಸಾಧ್ಯವಾಗಲಿಲ್ಲ ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುತ್ತೇವೆ” ಎಂದು ಅವರು ಹೇಳಿದ್ದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ:ಉತ್ತರ ಪ್ರದೇಶ: ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿದ್ದ ಯುವಕ ಮತಾಂತರ ನಿಷೇಧ ಕಾಯ್ದೆಯಡಿ ಜೈಲಿಗೆ!

‘ಮೈ ಸ್ಟಾಂಪ್’ ಯೋಜನೆಯಡಿ ಆಸಕ್ತರು ನಿಗದಿತ ಶುಲ್ಕ ಪಾವತಿಸಿ ತಮ್ಮ ವ್ಯಕ್ತಿ ಚಿತ್ರವುಳ್ಳ ಅಂಚೆ ಚೀಟಿಯ ಹಾಳೆಗಳನ್ನು ಪಡೆಯಬಹುದು. ಈ ಸ್ಟಾಂಪ್‌ಗಳನ್ನು ಪತ್ರ, ಲಕೋಟೆ ಕಳುಹಿಸಲು ಬಳಸಬಹುದು. ಇದಕ್ಕಾಗಿ ಅರ್ಜಿದಾರರರು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಗುರುತು ಖಾತರಿಪಡಿಸುವ ದಾಖಲೆಯನ್ನು ಅಂಚೆ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ.
ಪ್ರಕರಣದಲ್ಲಿ, ಚೋಟಾ ರಾಜನ್ ಮತ್ತು ಮುನ್ನಾ ಭಜರಂಗಿಯ ಚಿತ್ರಗಳನ್ನು ತಮ್ಮ ಸಂಬಂಧಿಕರು ಎಂದು ನೀಡಲಾಗಿತ್ತು. ಆದರೆ ಅಂಚೆ ಗುಮಾಸ್ತರು ಅದಕ್ಕೆ ಅತ್ಯಗತ್ಯವಾಗಿರುವ ಅವರ ಗುರುತಿನ ಪತ್ರಗಳನ್ನು ಕೇಳದೆ ತಲಾ 12 ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ್ದರು ಎನ್ನಲಾಗಿದೆ. ಚೋಟಾ ರಾಜನ್ ಪ್ರಸ್ತುತ ಮುಂಬೈ ಜೈಲಿನಲ್ಲಿದ್ದು, ಮುನ್ನಾ ಭಜರಂಗಿಯನ್ನು ಜುಲೈ 9, 2018 ರಂದು ಪಶ್ಚಿಮ ಉತ್ತರಪ್ರದೇಶದ ಬಾಗ್ಪತ್ ಜೈಲಿನಲ್ಲಿ ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ: ದೆಹಲಿ V/s ಉತ್ತರ ಪ್ರದೇಶ: ಸರ್ಕಾರಿ ಶಾಲೆಗಳ ವಾಸ್ತವತೆ ಬಿಚ್ಚಿಡಲು ಆಪ್ ಅಭಿಯಾನ


