ರಿಪಬ್ಲಿಕ್ ಟಿವಿ ಮುಖ್ಯಸ್ಥ ಮತ್ತು ಸಂಪಾದಕ ಅರ್ನಾಬ್ ಗೋಸ್ವಾಮಿ ತಮ್ಮ ಚಾನೆಲ್‌ಗಳನ್ನು ಉತ್ತೇಜಿಸಲು ಲಕ್ಷಾಂತರ ರೂಪಾಯಿ ಮತ್ತು ದುಬಾರಿ ಕೈಗಡಿಯಾರವನ್ನು ಲಂಚವಾಗಿ ನೀಡಿದ್ದಾರೆ ಎಂದು ಬ್ರಾಡ್‌ಕಾಸ್ಟ್ ರಿಸರ್ಚ್ ಆಡಿಯನ್ಸ್ ಕೌನ್ಸಿಲ್ (ಬಾರ್ಕ್) ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾ ಒಪ್ಪಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪಾರ್ಥೊ ದಾಸ್‌ಗುಪ್ತಾ ಮನೆಯಿಂದ ಮುಂಬೈ ಪೊಲೀಸರು ಮೂರು ಕಿಲೋಗ್ರಾಂಗಳಷ್ಟು ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. 2013 ರಿಂದ 2019 ರವರೆಗೆ ಬಾರ್ಕ್ ಸಿಇಒ ಆಗಿದ್ದ ದಾಸ್‌ಗುಪ್ತಾ, “ಈ ಮೂರು ಕೆಜಿ ಬೆಳ್ಳಿಯನ್ನು ಅರ್ನಾಬ್ ಗೋಸ್ವಾಮಿ ಅವರು ತಮ್ಮ ಇಂಗ್ಲಿಷ್ ಟಿವಿ ಚಾನೆಲ್ ರಿಪಬ್ಲಿಕ್ ಟಿವಿ ಮತ್ತು ಹಿಂದಿ ರಿಪಬ್ಲಿಕ್ ಭಾರತ್ ಪ್ರಚಾರಕ್ಕಾಗಿ ನೀಡಿದ ಹಣದಿಂದ ಖರೀದಿಸಲಾಗಿದೆ” ಎಂದು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿ ಹೇಗೆ 1 ನೇ ಸ್ಥಾನಕ್ಕೆ ಬಂತು ಎಂದು ಸ್ಪೋಟಕ ಮಾಹಿತಿ ನೀಡಿದ ಪೊಲೀಸರು!
ಮುಂಬೈ ಪೊಲೀಸರ ಅಪರಾಧ ವಿಭಾಗವು ಡಿಸೆಂಬರ್ 24 ರಂದು ಪುಣೆ ಜಿಲ್ಲೆಯಲ್ಲಿ ದಾಸ್‌ಗುಪ್ತಾ ಅವರನ್ನು ಬಂಧಿಸಿತ್ತು. ಟಿಆರ್‌ಪಿ ರೇಟಿಂಗ್ ಅನ್ನು ತಿರುಚಲು ದಾಸ್‌ಗುಪ್ತಾ ಮತ್ತು ಅರ್ನಾಬ್ ಗೋಸ್ವಾಮಿ ಶಾಮೀಲಾಗಿದ್ದಾರೆ ಎನ್ನುವುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಟಿಆರ್‌ಪಿಯನ್ನು ಅಳೆಯಲು ಬಾರೋಮೀಟರ್ ಅಳವಡಿಸಲಾಗಿರುವ ಮನೆಗಳ ಗೌಪ್ಯ ದತ್ತಾಂಶವನ್ನು ದಾಸ್‌ಗುಪ್ತಾ ಅರ್ನಾಬ್ ಗೋಸ್ವಾಮಿಯೊಂದಿಗೆ ಹಂಚಿಕೊಂಡಿದ್ದರು. ಈ ಡೇಟಾವನ್ನು ಬಳಸಿಕೊಂಡು, ಅರ್ನಾಬ್ ಗೋಸ್ವಾಮಿ ಅ ಮನೆಯವರಿಗೆ ಲಂಚ ನೀಡಿದರು. ಜೊತೆಗೆ ಮನೆಯವರಿಗೆ ಇಂಗ್ಲಿಷ್ ಭಾಷೆ ಅರ್ಥವಾಗದಿದ್ದರೂ ತಮ್ಮ ನಿರ್ದಿಷ್ಟ ಚಾನೆಲ್‌ಗಳನ್ನು ವೀಕ್ಷಿಸಲು ಒತ್ತಾಯಿಸಿದ್ದರು. ಕೆಲವು ಮನೆಗಳು ಮುಚ್ಚಿದ್ದರೂ ಸಹ ಇದೇ ಚಾನೆಲ್‌ಗಳು ಪ್ರಸಾರವಾಗುತ್ತಿದ್ದವು. ಟಿಆರ್‌ಪಿ ಹಗರಣದಲ್ಲಿ ಭಾಗಿಯಾಗಿರುವ ಜನರಿಗೆ ಸೂಚನೆ ನೀಡುವ ಮೂಲಕ ಈ ಕೆಲಸವನ್ನು ಮಾಡಲಾಗಿದೆ” ಎಂದು ಪೊಲೀಸರು ನ್ಯಾಯಾಲಯದಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಟಿಆರ್‌ಪಿ ಹಗರಣದಲ್ಲಿ ದಾಸ್‌ಗುಪ್ತಾ ಸೇರಿದಂತೆ ಇದುವರೆಗೆ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Explainer: ಏನಿದು ಟಿಆರ್‌ಪಿ? ಹೇಗೆ ತಿರುಚಲಾಗುತ್ತದೆ? ರಿಪಬ್ಲಿಕ್ ಟಿವಿ ಸಿಕ್ಕಿಬಿದ್ದಿದ್ದು ಹೇಗೆ?


