ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಪಂಜಾಬ್‌ನಲ್ಲಿ 1,500ಕ್ಕೂ ಅಧಿಕ ಜಿಯೋ ಟೆಲಿಕಾಂ ಟವರ್‌ಗಳಿಗೆ ಹಾನಿ ಮಾಡಿದ್ದು, ಇದರಿಂದ ಕೆಲವು ಪ್ರದೇಶಗಳಲ್ಲಿ ಸಂಪರ್ಕ ಸೇವೆಗೆ ತೊಡಕಾಗಿದೆ. ಈ ಮೂಲಕ ರೈತರು ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತಿದ್ದಾರೆ.
ಟೆಲಿಕಾಂ ಸೇವೆಯ ಟವರ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡುವುದರ ಮೂಲಕ ಮುಖೇಶ್ ಅಂಬಾನಿಯವರ ಜಿಯೋ ಸಂಸ್ಥೆ ಹಾಗೂ ಉದ್ಯಮಿ ಗೌತಮ್ ಅದಾನಿಗೆ ಸೇರಿದ ಸಂಸ್ಥೆಗಳ ಮೂಲಸೌಕರ್ಯಕ್ಕೆ ತೊಂದರೆಯುಂಟುಮಾಡಲಾಗಿದೆ.
ಭಾನುವಾರದವರೆಗೆ 1,411 ಟೆಲಿಕಾಂ ಟವರ್‌ಗಳಿಗೆ ಹಾನಿಯಾಗಿದೆ. ಸೋಮವಾರ ಈ ಸಂಖ್ಯೆ 1,500ನ್ನು ದಾಟಿದೆ. ಜಲಂಧರ್‌ನಲ್ಲಿ ಜಿಯೊ ಸಂಸ್ಥೆಗೆ ಸೇರಿದ ಕೇಬಲ್‌ಗಳ ಮೂಟೆಗೆ ಬೆಂಕಿ ಹಚ್ಚಲಾಗಿದೆ. ಪಂಜಾಬ್‌ನಲ್ಲಿ ಜಿಯೋ ಮೊಬೈಲ್ ಸಂಸ್ಥೆಯ 9,000ಕ್ಕೂ ಅಧಿಕ ಟವರ್‌ಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: TRP ಹಗರಣ: ಅರ್ನಾಬ್ ಲಕ್ಷಗಟ್ಟಲೆ ಲಂಚ ನೀಡಿದ್ದರು ಎಂದು ಒಪ್ಪಿಕೊಂಡ ಬಾರ್ಕ್ ಮಾಜಿ ಮುಖ್ಯಸ್ಥ
ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ಆರೋಪಿಸಿರುವ ರೈತರು, ಅವರ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡಿದ್ದಾರೆ. ಇದು ದೇಶಾದ್ಯಂತ ವ್ಯಾಪಕ ಮೆಚ್ಚುಗೆ ಗಳಿಸಿ ಜಿಯೋ ಕಂಪನಿಗೆ ಹೊಡೆತ ಕೊಟ್ಟಿತ್ತು.
ಸೋಮವಾರ (ಡಿ.28) ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಆಂದೋಲನ ಆರಂಭವಾಗಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಎಚ್.ಆರ್ ಬಸವರಾಜಪ್ಪನವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸಾಮೂಹಿಕವಾಗಿ ಜಿಯೋ ಸಿಮ್‌ನಿಂದ ಏರ್‌ಟೆಲ್ ಸಿಮ್‌ಗೆ ಪೋರ್ಟ್ ಆಗಿದ್ದಾರೆ.
ಇದನ್ನೂ ಓದಿ: ನಾನು ದನದ ಮಾಂಸ ತಿನ್ನುತ್ತೇನೆ, ನೀನು ಯಾವನಯ್ಯ ನನ್ನನ್ನು ಕೇಳೋಕೆ: ಸಿದ್ದರಾಮಯ್ಯ
ಈಗಾಗಲೇ ಕಳೆದೊಂದು ತಿಂಗಳಿನಿಂದ #BoycottJio ಅಭಿಯಾನ ನಡೆಯುತ್ತಿದ್ದು ಲಕ್ಷಾಂತರ ರೈತರು-ಯುವಜನರು ಜಿಯೋದಿಂದ ಹೊರಬಂದಿದ್ದಾರೆ. ಡಿಸೆಂಬರ್ ಎರಡನೇ ವಾರದಲ್ಲಿ ಬರೋಬ್ಬರಿ 26 ಲಕ್ಷ ಜನ ಜಿಯೋ ಸಿಮ್‌ನಿಂದ ಪೋರ್ಟ್ ಆಗಿದ್ದರು. ಹಾಗಾಗಿ ಜಿಯೋ ಕಂಪನಿ ಏರ್‌ಟೆಲ್ ಮತ್ತು ವೋಡೋಪೋನ್ ಐಡಿಯಾ ವಿರುದ್ಧ ಟ್ರಾಯ್ (Telecom Regulator Authority of India) ಬಳಿ ದೂರು ನೀಡಿ, ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಕರೆ ನೀಡಿರುವ ‘ಬಾಯ್ಕಾಟ್ ಜಿಯೋ’ ಹಿಂದೆ ಈ ಕಂಪನಿಗಳ ಪಿತೂರಿಯಿದೆ ಎಂದು ಆರೋಪಿಸಿತ್ತು.
ಈಗ ಹೊರಬಿದ್ದಿರುವ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿನ ಸಕ್ರಿಯ ಬಳಕೆದಾರರ ವಿಭಾಗದಲ್ಲಿ ಏರ್‌ಟೆಲ್ ಜಿಯೋವನ್ನು ಹಿಂದಿಕ್ಕಿದೆ. ಏರ್‌ಟೆಲ್‌ಗೆ ಒಟ್ಟು 33.3% ಸಕ್ರಿಯ ಬಳಕೆದಾರರಿದ್ದರೆ ಜಿಯೋಗೆ 33.2% ಸಕ್ರಿಯ ಬಳಕೆದಾರರಿದ್ದಾರೆ. ಅಲ್ಲದೇ ನಿರಂತರವಾಗಿ ಜಿಯೋದಿಂದ ಏರ್‌ಟೆಲ್‌ಗೆ ಪೋರ್ಟ್ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಜಿಯೋವನ್ನು ಆತಂಕಕ್ಕೆ ದೂಡಿದೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಜನರು ಜಿಯೋದಿಂದ ಪೋರ್ಟ್ ಆಗಲು ಸಿದ್ದರಾಗಿದ್ದಾರೆ.
ಇದನ್ನೂ ಓದಿ: ಕಳಚಿಕೊಳ್ಳುತ್ತಿದೆ NDA ನ ಒಂದೊಂದೇ ಕೊಂಡಿ – BJP ಗೆ ಆಘಾತ ನೀಡಿದ ತಮಿಳುನಾಡು!


