ಬಂಡವಾಳಶಾಹಿ ವ್ಯವಸ್ಥೆಯು ಯಾವಾಗಲೂ ಕಾರ್ಮಿಕ ವರ್ಗವನ್ನು ಶೋಷಿಸುತ್ತಲೇ ಇರುತ್ತದೆ. ಎಲ್ಲಾ ಮಾರ್ಗಗಳಿಂದಲೂ ಬಂಡವಾಳಶಾಹಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ಭದ್ರತಾ ಬಲೆಯನ್ನು ಹೆಣೆದುಕೊಳ್ಳುತ್ತಲೇ ಇರುತ್ತಾರೆ. ಇದರ ಭಾಗವಾಗಿಯೇ ಕಾರ್ಮಿಕರನ್ನು ಸಂಘಟನೆಯಾಗುವುದಕ್ಕೂ ಬಿಡುವುದಿಲ್ಲ. ಇದನ್ನೂ ಮೀರಿ ಸಂಘಟಿತರಾದ ಕಾರ್ಮಿಕರ ಮೇಲೆ ಹತ್ತಾರು ಅಸ್ತ್ರಗಳನ್ನು ಪ್ರಯೋಗಿಸಿ ದನಿಯಡಗಿಸಲು ಪ್ರಯತ್ನಿಸುತ್ತಾರೆ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ, ಇಲ್ಲದ ಕಾರಣ ನೀಡಿ ಇತ್ತೀಚೆಗೆ ಶ್ರೀರಂಗಪಟ್ಟಣದ ಗಾರ್ಮೆಂಟ್ಸ್ ಕಾರ್ಖಾನೆಯೊಂದನ್ನು ಮುಚ್ಚಿರುವ ಪ್ರಕರಣ.
ಯೂರೋ ಕ್ಲಾಥಿಂಗ್ ಕಂಪನಿಯು-2 (ಇಸಿಸಿ-2) 2010 ರಿಂದ ಶ್ರೀರಂಗಪಟ್ಟಣದಲ್ಲಿ ಕಾರ್ಯನಿರತವಾಗಿದ್ದು, ಇಲ್ಲಿ ಉತ್ಪಾದಿಸುವ ಉಡುಪುಗಳನ್ನು ಅಂತರರಾಷ್ಟ್ರೀಯ ಬ್ರಾಂಡ್, ಹೆನ್ನೆಸ್ ಅಂಡ್ ಮಾರಿಟ್ಸ್ (H&M) ಗೆ ಸರಬರಾಜು ಮಾಡುತ್ತಿತ್ತು. ಕಂಪನಿಗೆ ಸಾಕಷ್ಟು ಆದಾಯವೂ ಬರುತ್ತಿತ್ತು. ಆದರೂ ದಿಢೀರ್ ಎಂದು ಲೇ-ಆಫ್ ಘೋಷಿಸಿ ಅಲ್ಲಿನ ಸಾವಿರಾರು ಮಹಿಳಾ ಕಾರ್ಮಿಕರನ್ನು ತೊಂದರೆಗೆ ಸಿಲುಕಿಸಿದೆ.
ಈ ಸಮಸ್ಯೆಯ ಕುರಿತು ಪರ್ಯಾಯ ಕಾನೂನು ವೇದಿಕೆಯು (ALF) ಅಧ್ಯಯನ ನಡೆಸಿದ್ದು, ಅಧ್ಯಯನದ ಸಾರ ಇಂತಿದೆ.
ಇದನ್ನೂ ಓದಿ: ಕೃಷಿ ಕಾನೂನು ವಿರೋಧಿಸಿ ರಾಜ ಭವನಕ್ಕೆ ಮುತ್ತಿಗೆ: ಬಿಹಾರದ ರೈತರ ಮೇಲೆ ಲಾಠಿ ಚಾರ್ಜ್!
ಈ ಕಂಪನಿಯು ಜೂನ್ 6 ರಂದು ಕಂಪನಿಗೆ ಇದ್ದಕ್ಕಿದ್ದಂತೆ ಲೇಆಫ್ ಘೋಷಿಸಿ, ಇತ್ತೀಚಿನ ದಿನಗಳಲ್ಲಿ ಗಾರ್ಮೆಂಟ್ಸ್ ಮಹಿಳೆಯರ ಬಹುದೊಡ್ಡ ಪ್ರತಿಭಟನೆಗೆ ದಾರಿಮಾಡಿಕೊಟ್ಟಿತ್ತು. ಆಡಳಿತವರ್ಗದ ಈ ಕ್ರಮವು ಕೈಗಾರಿಕಾ ವ್ಯಾಜ್ಯ ಕಾಯಿದೆಯ ಅನ್ವಯ ಕಾನೂನುಬಾಹಿರವಾಗಿರುತ್ತದೆ.
ಕಾರ್ಮಿಕರು ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವ ಸಂದರ್ಭದಲ್ಲಿ ಕಂಪನಿಯು ಲೇ-ಆಫ್‌ವನ್ನು ಪ್ರಕಟಿಸಿತ್ತು. ಕಂಪನಿಯ ಎಲ್ಲಾ 1200 ಕಾರ್ಮಿಕರು ತಕ್ಷಣವೇ ಪ್ರತಿಭಟನೆ ಆರಂಭಿಸಿದರು. ಆಡಳಿತವರ್ಗವು ಬೇರೆ ಬೇರೆ ತಂತ್ರಗಾರಿಕೆಯ ಮೊರೆಹೋಗಿ ಪ್ರತಿಭಟನೆಯ ನಡುವೆಯೇ ಸುಮಾರು 50% ರಷ್ಟು ಕಾರ್ಮಿಕರಿಂದ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಯಿತು. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಪ್ರತಿಭಟನೆಯ ಕೊನೆಯ ಹಂತದಲ್ಲಿಯೂ (50 ದಿನಗಳ ನಂತರವೂ) ಸುಮಾರು 600 ಕಾರ್ಮಿಕರು ತಮ್ಮ ನಿಲುವನ್ನು ಬದಾಲಾಯಿಸದೆ, ಕಂಪನಿಯು ಪುನಹ ತೆರೆಯಬೇಕೆಂದು ಪಟ್ಟು ಹಿಡಿದಿದ್ದರು. 2014 ರಿಂದಲೂ ಇಸಿಸಿ-2 ಕಂಪನಿಯ ಕಾರ್ಮಿಕರನ್ನು ಸಂಘಟಿಸುತ್ತಿದ್ದ ಗಾರ್ಮೆಂಟ್ಸ್ ಅಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್ (GATWU) ಈ ಪ್ರತಿಭಟನೆಯ ಮುಂದಾಳತ್ವವನ್ನು ವಹಿಸಿತ್ತು.
ಸಿದ್ಧ ಉಡುಪು ತಯಾರಿಸಿ ರಫ್ತು ಮಾಡುವ ಸಂಸ್ಥೆಯಾದ ಗೋಕಲ್‌ದಾಸ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಕಂಪನಿಯ 2006 ರ ವಾರ್ಷಿಕ ವರದಿಯ ಪ್ರಕಾರ ಕಂಪನಿಯನ್ನು ಸ್ಥಳಾಂತರ ಮಾಡುವುದಾಗಿ ಹೇಳಿತ್ತು. ಹೆಚ್ಚುತ್ತಿರುವ ವೇತನ, ಬಾಡಿಗೆ ಹಾಗೂ ನಿರ್ವಹಣಾ ವೆಚ್ಚಗಳು ಕಂಪನಿಗೆ ಮುಳುವಾಗುತ್ತಿರುವುದರಿಂದ ಅದು ಮೈಸೂರು, ತುಮಕೂರು, ಇನ್ನಿತರೆ ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸ್ಥಳಾಂತರವಾಗಬಯಸುವ ಮುನ್ಸೂಚನೆ ನೀಡಿತ್ತು. ನಂತರ ಸುಮಾರು ಒಂದು ದಶಕದ ಒಳಗಾಗಿ ಗೋಕಲ್‌ದಾಸ್ ಲಿ., ಕಂಪನಿಯು ಬೆಂಗಳೂರಿನಿಂದ ಹೊರಗೆ 9 ಯೂನಿಟ್‌ಗಳನ್ನು ಪ್ರಾರಂಭಿಸಿತು. 54 ಯೂನಿಟ್‌ಗಳಿದ್ದ ಗೋಕಾಲ್‌ದಾಸ್ ಎಕ್ಸ್‌ಪೋರ್ಟ್ 2018-19ರ ವಾರ್ಷಿಕ ವರದಿಯ ಅವಧಿಯಲ್ಲಿ 21 ಯೂನಿಟ್‌ಗಳಿಗೆ ಇಳಿಕೆಯಾಗಿತ್ತು. ಈ ಮೊದಲು ಬೆಂಗಳೂರು ಮತ್ತು ತಾಲ್ಲೂಕು ಮಟ್ಟದ ಊರುಗಳಿಗೆ ಸ್ಥಳಾಂತರವಾಗಲು ಬಯಸಿದ ಕಂಪನಿಯು, ಶ್ರೀರಂಗಪಟ್ಟಣದಂತಹ ತಾಲ್ಲೂಕು ಮಟ್ಟದ ಘಟಕವನ್ನು ಏಕೆ ಮುಚ್ಚಿತು? ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಅನಿಕೇತನದ ಕಿಡಿ ಬಿತ್ತಿದ ವಿಶ್ವಮಾನವ ಸಂದೇಶ
ಗೋಕಲ್‌ದಾಸ್ ಆಡಳಿತವರ್ಗದ ಪ್ರಕಾರ, “H&M ಬ್ರಾಂಡ್ ಕೊಡುತ್ತಿದ್ದ ಆರ್ಡರ್‌ಗಳು ಕಡಿಮೆಯಾಯಿತು ಮತ್ತು ಮಾಸಿಕ ಸುಮಾರು 2 ಕೋಟಿ ರೂಪಾಯಿಯಷ್ಟು ಕಾರ್ಮಿಕ ವೆಚ್ಚವನ್ನು ತಾವು ಭರಿಸಲು ಸಾಧ್ಯವಾಗದ್ದರಿಂದ ಈ ಲೇ-ಆಫ್ ಅನಿವಾರ್ಯವಾಗಿತ್ತು” ಎಂದು ಹೇಳಿದೆ.
ಆದರೂ ಸಹ ಗೋಕಲ್‌ದಾಸ್ ಆಡಳಿತವರ್ಗವು ತನ್ನ ಇತರ ಯೂನಿಟ್‌ಗಳನ್ನು ಬಿಟ್ಟು ಕಾರ್ಮಿಕರು ಸಂಘಟಿತರಾಗಿದ್ದ ಇಸಿಸಿ-2 ಯೂನಿಟ್ ಅನ್ನೇ ಮುಚ್ಚಿರುವುದಕ್ಕೆ, ಈ ಮೇಲೆ ಹೇಳಿದ ಹಣಕಾಸು ಸಮಸ್ಯೆಯಲ್ಲದೆ ಬೇರೆಯದೇ ಉದ್ದೇಶವಿರುವುದನ್ನು ತೋರಿಸುತ್ತದೆ. ಗೋಕಲ್‌ದಾಸ್ ಎಕ್ಸ್‌ಪೋರ್ಟ್‌ರವರ ಈ ನಡೆಯು ಸಂಘಟಿತ ಕಾರ್ಮಿಕರನ್ನೇ ಗುರಿಯಾಗಿಸಿ ಕೆಲಸದಿಂದ ತೆಗೆದು ಹಾಕಿದೆ ಎಂಬುದು ಸ್ಪಷ್ಟವಾಗುತ್ತದೆ.
ಕಂಪನಿಯ ಕಾರ್ಮಿಕ ಸಂಘಟನೆಯು ಪ್ರತಿ ಹಂತದಲ್ಲೂ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿತ್ತು. ಜೊತೆಗೆ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ದನಿಯೆತ್ತುತ್ತಿತ್ತು. ಈ ಎಲ್ಲ ಕಾರಣಕ್ಕೆ ಕಂಪನಿಯು ಈ ಬಲಿಷ್ಠ ಸಂಘಟನೆಯನ್ನು ಒಡೆಯುವ ಅಥವಾ ದಮನಿಸುವ ಸಲುವಾಗಿಯೇ ಕಾನೂನುಬಾಹಿರ ಲೇ-ಆಫ್ ಘೋಷಿಸಿ, ಕಾರ್ಖಾನೆ ಮುಚ್ಚುವ ಹುನ್ನಾರ ಮಾಡಿತು ಎಂದು ಈ ಅಧ್ಯಯನವು ವಿವರವಾಗಿ ಹೇಳುತ್ತದೆ.
ಇನ್ನು ಈ ಕಂಪನಿಯು ಮಂಡ್ಯ ಜಿಲ್ಲೆಯ ಹಿಂದುಳಿದ ತಾಲೂಕಾದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವುದರಿಂದ ಈ ಗಾರ್ಮೆಂಟಿನಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು ಗ್ರಾಮೀಣ ಹಿನ್ನೆಲೆಯುಳ್ಳವರೇ ಆಗಿದ್ದಾರೆ. ಇವರಲ್ಲಿ ಬಹುತೇಕರು ಬಡತನ ರೇಖೆಗಿಂತ ಕೆಳಗಿರುವವರೇ ಆಗಿದ್ದಾರೆ. ಈ ಕಂಪನಿ ಆರಂಭವಾಗುವುದಕ್ಕೆ ಮುಂಚೆ ಇವರೆಲ್ಲರೂ ಕೃಷಿ ಕಾರ್ಮಿಕರಾಗಿದ್ದರು. ಆದರೆ ಅಲ್ಲಿನ ಅನಿಶ್ಚಿತತೆಯಿಂದ ಕೆಲವೊಮ್ಮೆ ಕೆಲಸವೂ ಸಿಗದೇ ನಿರ್ದಿಷ್ಟ ಆದಾಯವಿಲ್ಲದೇ ಬಂದಂತೆ ಬದುಕು ಸಾಗಿಸುತ್ತಿದ್ದವರು. ಈ ಕಂಪನಿ ಬಂದ ನಂತರ ಆದಾಯ ಕಡಿಮೆಯಾದರೂ ನಿರ್ದಿಷ್ಟ ಸಂಬಳ ಬರುವ ಉದ್ಯೋಗವಾದ್ದರಿಂದ ಈ ಕೆಲಸವನ್ನೇ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಯಿತು. ಜೊತೆಗೆ ಅಲ್ಪಸ್ವಲ್ಪ ಸಾಲವನ್ನೂ ಮಾಡಿಕೊಂಡಿದ್ದರು.
ಇದನ್ನೂ ಓದಿ: ಜೆಡಿಎಸ್‌ನ ಜಾತ್ಯಾತೀತತೆ ಪರೀಕ್ಷಿಸಿದವರಿಗೆ ಈ ಸಾವು ಉತ್ತರ ನೀಡಿರಬಹುದು: ಕುಮಾರಸ್ವಾಮಿ
“ಇಸಿಸಿ-2 ಕಂಪನಿಯ ಮಹಿಳಾ ಕಾರ್ಮಿಕರ ಜೀವನದ ಪರಿಸ್ಥಿತಿಯನ್ನು ಅವಲೋಕನ ಮಾಡಿದಾಗ, ಈ ಗಾರ್ಮೆಂಟ್ಸ್ ಕೆಲಸವು ಇವರಿಗೆ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ಅರ್ಥಮಾಡಿಸುತ್ತದೆ. ಕಂಪನಿಯಲ್ಲಿ ಶೋಷಣೆಯನ್ನು ಅನುಭವಿಸಿಕೊಂಡು ಕೆಲಸ ಮಾಡುತ್ತಿದ್ದರೂ, ತಿಂಗಳಿಗೆ ಸಿಗುತ್ತಿದ್ದ ವೇತನವು ಕಾರ್ಮಿಕರ ಮಕ್ಕಳನ್ನು ಒಳ್ಳೆಯ ಶಾಲಾ-ಕಾಲೇಜಿನಲ್ಲಿ ಓದಿಸುವುದಕ್ಕೆ, ಸ್ಕೂಟರ್ ಕೊಳ್ಳುವುದಕ್ಕೆ, ಚಿಕ್ಕ ಜಾಗ ಖರೀದಿ ಮಾಡುವುದಕ್ಕೆ ಮತ್ತು ಕಷ್ಟ ಕಾಲಕ್ಕೆ ಕೂಡಿ ಇಡುವುದಕ್ಕೆ ಸಹಕಾರಿಯಾಗಿತ್ತು. ಕಂಪನಿಯ ಅಲ್ಪ ಸ್ವಲ್ಪ ಸಂಬಳವು ಈ ಮಹಿಳೆಯರ ಆಕಾಂಕ್ಷೆಗಳನ್ನು ಭರಿಸಲು ಆಗುತ್ತಿರಲಿಲ್ಲ. ಬದಲಾಗಿ ತಿಂಗಳಿಗೆ ನಿಶ್ಚಿತವಾಗಿ ದೊರಕುತ್ತಿದ್ದ ವೇತನ ಇವರಿಗೆ ತಮ್ಮ ಗ್ರಾಮದಲ್ಲಿದ್ದ ಸಣ್ಣಪುಟ್ಟ ಹಣಕಾಸು ಸಂಸ್ಥೆಯಲ್ಲಿ ಸಾಲ ಮಾಡುವ ಧೈರ್ಯವನ್ನು ತುಂಬುತ್ತಿತ್ತು. ಈಗ ಕಂಪನಿಯು ಇದ್ದಕ್ಕಿದ್ದಂತೆ ಮುಚ್ಚಿದ್ದರಿಂದ ತಮ್ಮ ಈ ದಿನನಿತ್ಯದ ವ್ಯವಹಾರಗಳಿಗೆ ಪೆಟ್ಟು ಬಿತ್ತು ಎಂದು ಅಲ್ಲಿನ ಮಹಿಳಾ ಕಾರ್ಮಿಕರು ವಿವರಿಸುತ್ತಾರೆ. ಪಡೆದ ಸಾಲಕ್ಕೆ ತಿಂಗಳು ತಿಂಗಳು ಬಡ್ಡಿಯನ್ನು ಕಟ್ಟುವುದು ಈ ಕಾರ್ಮಿಕರಿಗೆ ಇದ್ದ ಬಹುದೊಡ್ಡ ಕಮಿಟ್‌ಮೆಂಟ್. ಇದ್ದಕ್ಕಿದ್ದಂತೆ ಕಂಪನಿ ಮುಚ್ಚಿದ ಪ್ರಕ್ರಿಯೆಯು ಅಲ್ಲಿ ದುಡಿಯುತ್ತಿದ್ದ ಈ ಮಹಿಳಾ ಕಾರ್ಮಿಕರ ಆರ್ಥಿಕ ಸ್ವಾವಲಂಬನೆಯನ್ನೇ ಕಿತ್ತುಕೊಂಡು, ತಾವು ಆರ್ಥಿಕವಾಗಿ ಸಬಲರಾಗಬಹುದು ಎಂಬ ಅವರ ಆತ್ಮವಿಶ್ವಾಸವನ್ನು ಬುಡಮೇಲು ಮಾಡಿದೆ” ಎಂದು ಅಧ್ಯಯನ ತಿಳಿಸುತ್ತದೆ.
ಹಾಗಾಗಿಯೇ ಕಾರ್ಮಿಕರು ಅನಿರ್ದಿಷ್ಟಾವಧಿ ಕಾಲ ಪ್ರತಿಭಟನೆ ಮಾಡುವ ತೀರ್ಮಾನಕ್ಕೆ ಬಂದರು. ಆದರೆ ಕಂಪನಿಯ ತಂತ್ರಗಾರಿಕೆಯಿಂದ ಹೋರಾಟವನ್ನು ಹತ್ತಿಕ್ಕಲು ಯಾವ ಪ್ರಯತ್ನಗಳನ್ನು ಮಾಡಲಾಗಿದೆ ಎಂಬುದೂ ಈ ಅಧ್ಯಯನದಲ್ಲಿ ತಿಳಿದುಬಂದಿದೆ. ಈ ಅವಧಿಯಲ್ಲಿ ಗೋಕಲ್‌ದಾಸ್ ಎಕ್ಸ್‌ಪೋರ್ಟ್ ಆಡಳಿತವರ್ಗವು ಕಾರ್ಮಿಕರ ಮೇಲೆ ಹೇಗೆಲ್ಲಾ ಒತ್ತಡ ಹಾಕಿ ಕೆಲವರಿಂದ ಬಲವಂತವಾಗಿ ರಾಜೀನಾಮೆ ಪಡೆಯಿತು ಎನ್ನುವುದನ್ನು ಇದು ವಿವರಣಾತ್ಮಕವಾಗಿ ಹೇಳುತ್ತದೆ.
ಇದನ್ನೂ ಓದಿ: ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ: ಉಲ್ಟಾ ಹೊಡೆದ ರಜನಿಕಾಂತ್
ಗಾರ್ಮೆಂಟ್‌ನ ಕೆಲವು ಸೂಪರ್‌ವೈಸರ್‌ಗಳು ಮತ್ತು ಇತರೆ ಸಿಬ್ಬಂದಿಗಳು ಕಾರ್ಮಿಕರ ಹಳ್ಳಿಗಳಿಗೆ ತೆರಳಿ, ಕಾರ್ಮಿಕರು ರಾಜೀನಾಮೆಯನ್ನು ನೀಡುವಂತೆ ಒತ್ತಡ ಹೇರಿದ್ದರು. ಕೆಲವೊಮ್ಮೆ ರಾತ್ರಿಯ ಸಮಯದಲ್ಲೂ ಕಾರ್ಮಿಕರ ಮನೆಗಳಿಗೆ ತೆರಳಿ ಕಾರ್ಮಿಕರು ಮತ್ತು ಅವರ ಕುಟುಂಬವರ್ಗದವರಿಗೆ ರಾಜೀನಾಮೆ ನೀಡುವಂತೆ ಒತ್ತಡ ಹಾಕಿ, ತಕ್ಷಣವೇ ರಾಜೀನಾಮೆಯನ್ನು ನೀಡದಿದ್ದರೆ ಬಾಕಿ ವೇತನ, ಸೆಟಲ್‌ಮೆಂಟ್ ಸಿಗುವುದಿಲ್ಲ ಎಂದು ಹೆದರಿಸಿದ್ದರು. ಪುನಹ ಲಾಕ್‌ಡೌನ್ ಆಗುತ್ತದೆ ಎಂತಲೂ, ಕಾರ್ಮಿಕರು ತಡವಾಗಿ ರಾಜೀನಾಮೆ ನೀಡಿದರೆ ಅವರ ಬಾಕಿ ಮೊತ್ತವನ್ನು ಪಡೆದುಕೊಳ್ಳಲು ಎಚ್.ಆರ್ ಡಿಪಾರ್ಟ್‌ಮೆಂಟ್ ಇರುವುದಿಲ್ಲ ಎಂತಲೂ, ಕೋರ್ಟು ಕಛೇರಿ ಎಂದು ಹೋದರೆ ವರ್ಷಗಟ್ಟಲೆ ಹಿಡಿಯುತ್ತದೆ ಎಂತಲೂ ಕಾರ್ಮಿಕರನ್ನು ಹೆದರಿಸಲು ಪ್ರಯತ್ನಿಸಿದ್ದರು.
ಆದರೆ ಗಾರ್ಮೆಂಟ್ಸ್ ಕಂಪನಿಯ ಈ ಎಲ್ಲಾ ಹುನ್ನಾರಗಳನ್ನೂ ಕಾರ್ಮಿಕ ಸಂಘಟನೆಯ ನಾಯಕರು ಸಮರ್ಥವಾಗಿ ಎದುರಿಸಿದ್ದರು. ಹಳ್ಳಿಗಳಿಗೆ ತೆರಳಿ ಕಾನೂನು ಬಾಹಿರವಾಗಿ ಬಲವಂತದಿಂದ ರಾಜೀನಾಮೆ ಪಡೆದುಕೊಳ್ಳುತ್ತಿದ್ದ ಆಡಳಿತವರ್ಗದವರ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಮಂಡ್ಯ ಜಿಲ್ಲಾಡಳಿತ ಮತ್ತು ಆ ಭಾಗದ ಜನ ಪ್ರತಿನಿಧಿಗಳು ಕಾರ್ಮಿಕರ ಪರವಾಗಿ ಇದ್ದುದ್ದರಿಂದ ಆಡಳಿತವರ್ಗಕ್ಕೆ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ.
ಆದರೆ ಕೊನೆಗೂ ಹಂತಹಂತವಾಗಿ 1000 ಕ್ಕೂ ಹೆಚ್ಚು ಕಾರ್ಮಿಕರು ರಾಜೀನಾಮೆ ಕೊಟ್ಟು ತಮ್ಮ ಪಾಲಿನ ಹಣ ತೆಗೆದುಕೊಂಡು ಹಿಂದಿರುಗಬೇಕಾಯಿತು. 23 ಜನ ಕಾರ್ಮಿಕರು ಮಾತ್ರ ಇದೆ ಗಾರ್ಮೆಂಟ್‌ನ ಮೈಸೂರು ಶಾಖೆಗೆ ವರ್ಗಾಯಿಸಲ್ಪಟ್ಟಿದ್ದಾರೆ. ಇವರೆಲ್ಲರೂ ಕಾರ್ಮಿಕ ಸಂಘಟನೆಯವರೇ ಆಗಿರುವುದರಿಂದ ಅಲ್ಲಿ ಅವರಿಗೆ ಯಾವುದೇ ತೊಂದರೆಯಾಗಲಿಲ್ಲ. ಆದರೆ ಉಳಿದ ಸಾವಿರಾರು ಕಾರ್ಮಿಕರಲ್ಲಿ ಕೆಲವರು ಬೇರೆ ಕಂಪನಿಗಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರ ಬದುಕು ಅತಂತ್ರವಾಗಿದೆ.
ಹಾಗಾಗಿ ಈ ಅಧ್ಯಯನ ಸಮಿತಿಯು, ಈ ಪ್ರಕ್ರಿಯೆಯಲ್ಲಿ ಭಾಗಿದಾರರಾಗಿರುವ ಸರ್ಕಾರ ಮತ್ತು ಕಾನೂನು ರಚಿಸುವವರಿಗೆ, ಸ್ಥಳೀಯ ಕಂಪನಿಗಳಿಗೆ ಮತ್ತು ಅಂತರಾಷ್ಟ್ರೀಯ ವ್ಯಾಪಾರಿ ಸಂಸ್ಥೆಗಳಿಗೆ ಕೆಲವು ಶಿಫಾರಸ್ಸುಗಳನ್ನು ಮಾಡಿದೆ.
ಇದನ್ನೂ ಓದಿ: ಕಳಚಿಕೊಳ್ಳುತ್ತಿದೆ NDA ನ ಒಂದೊಂದೇ ಕೊಂಡಿ – BJP ಗೆ ಆಘಾತ ನೀಡಿದ ತಮಿಳುನಾಡು!
ಶಿಫಾರಸ್ಸುಗಳು:
- ಮಾನಸಿಕ ಆರೋಗ್ಯವನ್ನು ಸಾರ್ವಜನಿಕ ಆರೋಗ್ಯದ ಆದ್ಯತೆಯನ್ನಾಗಿ ಮಾಡುವುದು.
- ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ ಸಬಲೀಕರಿಸುವುದು.
- ಕಾರ್ಮಿಕ ಇಲಾಖೆಯನ್ನು ಇನ್ನಷ್ಟು ಬಲಪಡಿಸಬೇಕು.
- ಕಾರ್ಮಿಕರಿಗೆ ವೇತನ ಮತ್ತು ರೇಷನ್ ಕಿಟ್ ಸಹಾಯ ನೀಡುವುದು.
- ಕನಿಷ್ಠ ವೇತನವನ್ನು ಹೆಚ್ಚಿಸುವುದು.
- ಟ್ರೇಡ್ ಯೂನಿಯನ್ ಅನ್ನು ಬಲಪಪಡಿಸುವುದು
- ಕೃಷಿಯನ್ನು ಸುಧಾರಿಸಲು ರಚನಾತ್ಮಕ ತಿದ್ದುಪಡಿಯನ್ನು ಪರಿಚಯಿಸುವುದು.
- ಕಂಪನಿ ಮತ್ತು ಕಾರ್ಮಿಕರ ನಡುವಿನ ಸಂಬಂಧಕ್ಕೆ ಹೊಸ ರೂಪವನ್ನು ನೀಡಬೇಕು.
- ಟ್ರೇಡ್ ಯೂನಿಯನ್ ಪರವಾಗಿ ನಿಂತು ತಮ್ಮ ತಟಸ್ಥ ನಿಲುವನ್ನು ಕೈಬಿಡಬೇಕು.
- ಕಾರ್ಮಿಕ ಕಾನೂನು ಉಲ್ಲಂಘನೆ ಆಗುತ್ತಿರುವ ಬಗ್ಗೆ ಹೆಚ್ಚಿನ ಪರಿಶೀಲನೆಯನ್ನು ಮಾಡಬೇಕು.
- ಎಲ್ಲಾ ಕೈಗಾರಿಕೆಗಳಲ್ಲೂ ವೇತನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.
- ಕಾರ್ಮಿಕ ಸಂಘಟನೆಗಳಿಗೆ ಬೆಂಬಲ ನೀಡುವುದು ಮತ್ತು ಅವರೊಂದಿಗೆ ಕೆಲಸ ಮಾಡುವುದು.
ಇದನ್ನೂ ಓದಿ: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅಸಹಜ ಸಾವು: ಡೆತ್‌ನೋಟ್ ಪತ್ತೆ


