ಇನ್ನೇನು ಹೊಸ ವರ್ಷಕ್ಕೆ ಕಾಲಿಡುವ ಹೊತ್ತಿಗೆ ಭಾರತದಲ್ಲಿ ಐತಿಹಾಸಿಕ ರೈತರ ಹೋರಾಟ ನಡೆಯುತ್ತಿದೆ. ಹೊಸ ಕೃಷಿಕಾನೂನುಗಳು ದೇಶದ ಅತೀ ದೊಡ್ಡ ಕಾರ್ಪೊರೇಟ್ ಧಣಿಗಳಾದ, ಅಂಬಾನಿ ಮತ್ತು ಅದಾನಿಗಳ ಲಾಭಕ್ಕಷ್ಟೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಈಗಾಗಲೇ ಹಲವಾರು ರೈತ ಹೋರಾಟಗಾರರು ಆರೋಪಿಸಿದ್ದಾರೆ. ಇದೀಗ ಖ್ಯಾತ ಪರಿಸರ ಹೋರಾಟಗಾರ್ತಿ ’ನರ್ಮದಾ ಬಚಾವ್’ ಆಂದೋಲನದ ಮುಂದಾಳು ಮೇಧಾ ಪಾಟ್ಕರ್ ಅವರು ಪತ್ರವೊಂದು ಬರೆದಿದ್ದಾರೆ.
ಪತ್ರದಲ್ಲಿ, “2021 ರಲ್ಲಿ ನಿಜವಾದ ಸಮೃದ್ಧ ಜೀವನವನ್ನು ನಡೆಸಲು, ಕಾರ್ಪೊರೇಟ್ ಸರಕುಗಳನ್ನು ತಿರಸ್ಕರಿಸಿ ಮತ್ತು ಹೊರಹಾಕಿ, ಅದನ್ನು ‘A'(ಅದಾನಿ&ಅಂಬಾನಿ)ಯಿಂದಲೇ ಪ್ರಾರಂಭಿಸಿ. ರೈತರೊಂದಿಗೆ ಪ್ರಕೃತಿ ಮತ್ತು ಶ್ರಮಜೀವಿಗಳನ್ನು ಗೌರವಿಸಿ ಮತ್ತು ರಕ್ಷಿಸಿ” ಎಂದು ಮೇಧಾ ಪಾಟ್ಕರ್ ಕರೆ ನೀಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: Jio ಇಂದ Airtel ಗೆ ಸಾಮೂಹಿಕವಾಗಿ ಪೋರ್ಟ್ ಆದ ರೈತ ಹೋರಾಟಗಾರರು!
“ಸಮೃದ್ಧಿಯು ಆಸ್ತಿಯ ಮೂಲಕ ಬರುವುದಿಲ್ಲ. ಇದನ್ನು ಸರಳತೆ ಮತ್ತು ಸ್ವಾವಲಂಬನೆಯ ಮೂಲಕ ಸಾಧಿಸಬಹುದು. ಈ ಎರಡು ಗುಣಗಳೂ ಕಳೆದುಹೋಗಿರುವುದರಿಂದ, ಕೊಳ್ಳುಬಾಕತನವು ನಮ್ಮನ್ನು ಆಕರ್ಷಿಸುವುದಲ್ಲದೆ ನಮ್ಮ ಜೀವನವನ್ನು ಸೆರೆಹಿಡಿದಿದೆ. ಈ ಕಾರ್ಪೊರೇಟ್‌ಗಳಿಂದ ಅಲಕೃತಗೊಂಡಿರುವ ಜೀವನಶೈಲಿಯು, ಒಂದು ಕಡೆ ಸುಂದರವಾಗಿ ಕಂಡರೆ, ಇನ್ನೊಂದು ಕಡೆ ರೈತರು, ಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನರ ಅಸಮಾನತೆ ಮತ್ತು ನಿರ್ಗತಿಕತನಕ್ಕೆ ಕಾರಣವಾಗುತ್ತಿದೆ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
“ನಮಗೆ ಶ್ರಮ ಜೀವಿ ರೈತರು ಮತ್ತು ಕಾರ್ಮಿಕರು ಅನ್ನ ನೀಡುತ್ತಿದ್ದಾರೆ. ಅವರು ಈ ಸೇವೆಯನ್ನು ನಮಗೆ ನೀಡುತ್ತಿರುವಾಗ, ಅವರ ಹಕ್ಕುಗಳಿಗಾಗಿ, ಘನತೆಯ ಬದುಕಿಗಾಗಿ, ಅವರು ಅನೇಕ ಹೋರಾಟವನ್ನು ನಡೆಸುತ್ತಿದ್ದಾರೆ. ಇಂದು ಅವರು ಕೊರೆಯುವ ಚಳಿಯೊಂದಿಗೆ ರಸ್ತೆಯಲ್ಲಿ ಹುತಾತ್ಮರಾಗುತ್ತಿದ್ದಾರೆ” ಎಂದು ಬರೆದಿದ್ದಾರೆ.

“ಹೊಸ ವರ್ಷ ನಮ್ಮ ಮನೆ ಬಾಗಿಲು ತಟ್ಟುತ್ತಿರುವಾಗ, ಇದು ಸ್ವಯಂ ಆಲೋಚನೆಯೊಂದಿಗೆ ಮುಂದುವರೆಯಲು ಸರಿಯಾದ ಸಮಯವಲ್ಲವೇ? ನಮ್ಮ ಕೈಯ್ಯಲ್ಲಿರುವ ಪ್ರತಿ ಒಳ್ಳೆಯದನ್ನು ನೋಡಲು ಹಾಗೂ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲವೆ? ದಿನಕ್ಕೆ 384 ಕೋಟಿಯಿಂದ 1085 ಕೋಟಿಗೆ ಏರುತ್ತಿರುವ ದೊಡ್ಡ ಕಾರ್ಪೊರೇಟ್‌ಗಳ ಉತ್ಪನ್ನಗಳನ್ನು, ಅದರಲ್ಲೂ ಅದಾನಿ, ಅಂಬಾನಿಗಳ ಅಶ್ಲೀಲ ಮತ್ತು ಶೋಷಣೆಯ ಸಂಪತ್ತನ್ನು ಪ್ರಶ್ನಿಸಿ, ಅದನ್ನು ನಮ್ಮ ಜೀವನದಿಂದ ಹೊರಗಿಡಲು ಸಾಧ್ಯವಿಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಜಿಯೋ ಟವರ್‌ಗಳ ಮೇಲಿನ ರೈತರ ದಾಳಿಯನ್ನು ಪರೋಕ್ಷವಾಗಿ ಖಂಡಿಸಿದ ಪ್ರಧಾನಿ
“ಹೊಸ ವರ್ಷದ ದಿನ, ಸತ್ಯ ಮತ್ತು ಪರಿವರ್ತನೆಗಾಗಿ ನಿಮ್ಮ ಸ್ವಂತ ಪ್ರತಿಜ್ಞೆಯೊಂದಿಗೆ ‘ಸತ್ಯಾಗ್ರಹ’ದ ಒಂದು ದಿನವಾಗಬಹುದು. ‘A’ ಗಳೊಂದಿಗೆ ಪ್ರಾರಂಭವಾಗುವ ದೊಡ್ಡ ಕಾರ್ಪೊರೇಟ್‌ಗಳ ಉತ್ಪನ್ನಗಳನ್ನು ಹೊರಹಾಕಲು ಪ್ರಾರಂಭಿಸಿ, ಮುಂದೆ ಸಾಗಬಹುದು. ಅದಕ್ಕಾಗಿ ನಿಮ್ಮ ಜಿಯೋ ಸಿಮ್ ಅನ್ನು ಬಿಎಸ್‌ಎನ್‌ಎಲ್ ಗೆ ಬದಲಾಯಿಸಬಹುದು. ಅಲ್ಲದೆ ತೈಲ ಮತ್ತು ಅನಿಲವನ್ನು ತಮ್ಮಲ್ಲಿಟ್ಟುಕೊಂಡು ಶೋಷಿಸುತ್ತಿರುವ, ಅದಾನಿಯ ಫಾರ್ಚೂನ್ ಅಗ್ರೊಲೊಜಿಸ್ಟಿಕ್ಸ್ ಬಳಸುವುದನ್ನು, ರಿಲಾಯನ್ಸ್ ಅವರ ಮಾಲ್ ಹಾಗೂ ಪೆಟ್ರೋಲ್ ಬಂಕ್‌ಗೆ ಹೋಗುವುದನ್ನು ಬಿಟ್ಟುಬಿಡಬೇಕು. ಕೈಮಗ್ಗ ಮತ್ತು ಸಣ್ಣ ಪವರ್‌ಲೂಮ್‌ಗಳು ತಯಾರಿಸಿದ ಬಟ್ಟೆಗಳನ್ನು ಖರೀದಿಸಲು ನಿರ್ಧರಿಸಿ” ಎಂದು ಅವರು ಕರೆ ನೀಡಿದ್ದಾರೆ.

“ಗಾಂಧಿ, ಟ್ಯಾಗೋರ್ ಮಾರ್ಗದರ್ಶನದ ಹಾದಿಯಲ್ಲಿ ಸಾಗಲು ಇದೊಂದು ಮನವಿ, ಇದು ಮಾರ್ಕ್ಸ್‌ನ ಕನಸನ್ನು, ಅಧಿಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕ್ರಿಯೆಯಾಗಿದೆ. ಇದುವೆ ನಮ್ಮ ಸಂವಿಧಾನವನ್ನು ಅನುಸರಿಸುವ ನಿಜವಾದ ಪ್ರತಿಜ್ಞೆಯಾಗಿದೆ. ಇದುವೆ ಸಮಾನತೆ, ನ್ಯಾಯ ಮತ್ತು ಭ್ರಾತೃತ್ವದ ದೃಷ್ಟಿಯನ್ನು ಹೊಂದಿದ್ದ, ಬಾಬಾಸಾಹೇಬ್ ಮತ್ತು ಭಾರತ ಸಂವಿಧಾನದ ಎಲ್ಲ ಪಿತಾಮಹಾರಿಗೆ ಸಲ್ಲಿಸುವ ಗೌರವ” ಎಂದು ಅವರು ಬರೆದಿದ್ದಾರೆ. ಪತ್ರದ ಪೂರ್ಣಪಾಠಕ್ಕೆ ಇಲ್ಲಿಕ್ಲಿಕ್ ಮಾಡಿ
ಇದನ್ನೂ ಓದಿ: ರೈತರ ಕೈಯಲ್ಲಿರುವ ರೊಟ್ಟಿಯನ್ನು ಕಿತ್ತುಕೊಳ್ಳಬೇಡಿ: ಭಾವನಾತ್ಮಕ ಟ್ವೀಟ್ ಮಾಡಿದ ರೈತ ಒಕ್ಕೂಟ


