ಗ್ರೀನ್‌ಕಾರ್ಡ್ ಆಕಾಂಕ್ಷಿಗಳು/ಅರ್ಜಿದಾರರು ಮತ್ತು ತಾತ್ಕಾಲಿಕ ವಿದೇಶಿ ಕೆಲಸಗಾರರು ಅಮೆರಿಕ ಪ್ರವೇಶಿಸುವುದನ್ನು ತಡೆಯುವ ಎರಡು ವಲಸೆ ನಿಷೇಧ ನಿರ್ಬಂಧಗಳನ್ನು ಮಾರ್ಚ್ 31 ರವರೆಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಸ್ತರಿಸಿದ್ದಾರೆ. ಅಮೆರಿಕ ಕೆಲಸಗಾರರು ಮತ್ತು ಸಾಂಕ್ರಾಮಿಕದಿಂದ ಜರ್ಜರಿತವಾಗಿರುವ ಆರ್ಥಿಕತೆ ರಕ್ಷಿಸಲು ಈ ಕ್ರಮಗಳು ಅಗತ್ಯವಾಗಿವೆ ಎಂದು ಅವರು ತಿಳಿಸಿದ್ದಾರೆ.
2020ರ ಏಪ್ರಿಲ್, ಜೂನ್‌ನಲ್ಲಿ ವಿಧಿಸಲಾಗಿದ್ದ ಈ ನಿಷೇಧಗಳು ಡಿಸೆಂಬರ್ 31ಕ್ಕೆ ಅಂತ್ಯಗೊಳ್ಳಬೇಕಿತ್ತು. ಈಗ ಅವನ್ನು 2021ರ ಮಾರ್ಚ್ 31ರವರೆಗೂ ವಿಸ್ತರಿಸಲಾಗಿದೆ. ನಿರ್ಗಮಿಸುತ್ತಿರುವ ಟ್ರಂಪ್ ಆಡಳಿತವು ಕೊನೆ ಹಂತದಲ್ಲಿ ವಲಸೆಗೆ ಸಂಬಂಧಿಸಿದಂತೆ ಇಂತಹ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ನಿರ್ದಿಷ್ಟ ವಿದೇಶಿ ಕೆಲಸಗಾರರ ಮೇಲಿನ ನಿಷೇಧವನ್ನು ಅಧಿಕ ಉದ್ದಿಮೆಗಳು ವಿರೋಧಿಸಿವೆ.
ಜನವರಿ 20 ರಂದು ಅಧಿಕಾರಕ್ಕೆ ಏರಲಿರುವ ಚುನಾಯಿತ-ಅಧ್ಯಕ್ಷ ಜೋ ಬೈಡನ್ ಈ ನಿರ್ಬಂಧಗಳನ್ನು ಟೀಕಿಸಿದ್ದಾರೆ. ಆದರೆ ತಾವು ಈ ನಿರ್ಬಂಧಗಳನ್ನು ತೆಗೆದು ಹಾಕುವುದರ ಬಗ್ಗೆ ಏನನ್ನೂ ಹೇಳಿಲ್ಲ.
ಅಧ್ಯಕೀಯ ಘೋಷಣೆಗಳ ರೂಪದಲ್ಲಿ ಟ್ರಂಪ್ ಇವುಗಳನ್ನು ವಿಧಿಸಿದ್ದು, ಇವನ್ನು ಯಾವುದೇ ಕ್ಷಣದಲ್ಲಾದರೂ ರದ್ದುಗೊಳಿಸಬಹುದಾಗಿದೆ.
ದೇಶಾದ್ಯಂತ ಕೊರೊನಾ ಸೋಂಕು ಹರಡುವಿಕೆ ಮುಂದುವರೆದಿದ್ದು, 20 ಮಿಲಿಯನ್ ಜನರು ನಿರುದ್ಯೋಗ ಸವಲತ್ತುಗಳನ್ನು ಆಶ್ರಯಿಸಿ ಬದುಕುತ್ತಿದ್ದಾರೆ.
ಅಕ್ಟೋಬರ್‌ನಲ್ಲಿ ಕ್ಯಾಲಿಫೋರ್ನಿಯಾದ ಫೆಡೆರಲ್ ನ್ಯಾಯಾಧೀಶರು ವಿದೇಶಿ ಅತಿಥಿ ಕೆಲಸಗಾರರ ಮೇಲಿನ ನಿಷೇಧಕ್ಕೆ ತಡೆ ನೀಡಿ, ಇಂತಹ ನಿಷೇಧವು ಸಾವಿರಾರು ವಾಣಿಜ್ಯ ಘಟಕಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗೆ ವಾಣಿಜ್ಯ-ವ್ಯಾಪಾರಗಳ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುವುದರಿಂದ ವ್ಯಾಪಾರ-ವಾಣಿಜ್ಯಕ್ಕೆ ‘ರಿಪೇರಿ ಮಾಡಲಾಗದಷ್ಟು’ ಹಾನಿಯಾಗಲಿದ್ದು, ಇದರಿಂದ ಅವು ತಮ್ಮ ಕೆಲಸಗಾರರನ್ನು ತೆಗೆದು ಹಾಕುವ ಪರಿಸ್ಥಿತಿ ಬರಬಹುದು ಎಂದು ಅಭಿಪ್ರಾಯ ಪಟ್ಟಿದ್ದರು.
ಅಮೆರಿಕದ ಜಸ್ಟೀಸ್ ಡಿಪಾರ್ಟಮೆಂಟ್ ಟ್ರಂಪ್ ನಿರ್ಧಾರದ ವಿರುದ್ಧ ಸರ್ಕ್ಯೂಟ್ ಕೋರ್ಟ್ ಮೊರೆ ಹೋಗಿದ್ದು, ಜನವರಿ 20ಕ್ಕೆ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಪಂಜಾಬ್: ಬಿಜೆಪಿ ಮುಖಂಡನ ಮನೆಮುಂದೆ ಸಗಣಿ ಸುರಿದ ರೈತ ಹೋರಾಟಗಾರರು!


