ಕೊರೊನಾ ವ್ಯಾಕ್ಸಿನೇಷನ್ ತಾಲೀಮು (ಡ್ರೈ ರನ್) ನಡೆಸಲು ಆಯ್ಕೆಯಾದ ದೆಹಲಿಯ ಗುರು ತೇಜ್ ಬಹದ್ದೂರ್(GTB) ಸರ್ಕಾರಿ ಆಸ್ಪತ್ರೆಗೆ ಒಕ್ಕೂಟ ಸರ್ಕಾರದ ಆರೋಗ್ಯ ಸಚಿವ ಹರ್ಷ್ ವರ್ಧನ್ ಭೇಟಿ ನೀಡಿದ್ದರು. ಈ ವೇಳೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಭಾರತದಾದ್ಯಂತ ಉಚಿತ ಕೊರೊನಾ ಲಸಿಕೆ ನೀಡಲಾಗುವುದು” ಎಂದು ಹೇಳಿದ್ದಾರೆ.
ಡಿಸೆಂಬರ್ 28 ಮತ್ತು 29 ರಂದು ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್ ಮತ್ತು ಪಂಜಾಬ್ ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ತಾಲೀಮು ನಡೆಸಲಾಗಿತ್ತು. ಇದೀಗ ಶನಿವಾರ ಭಾರತದಾದ್ಯಂತ ಈ ತಾಲೀಮು ನಡೆಸಲಾಗುತ್ತಿದೆ. ಈ ವೇಳೆ ಪ್ರತ್ರಕರ್ತರೊಬ್ಬರು ಆರೋಗ್ಯ ಸಚಿವರಿಗೆ, “ದೆಹಲಿಯಲ್ಲಿ ಕೊರೊನಾ ಲಸಿಕೆ ಉಚಿತ ನೀಡಲಾಗುವುದು, ಭಾರತದಾದ್ಯಂತ ಇದು ಉಚಿತವಾಗಿ ನೀಡುತ್ತೀರ ಅಥವಾ ಹಣ ನೀಡಬೇಕಾಗುತ್ತದೆಯೆ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, “ದೆಹಲಿಯಲ್ಲಿ ಮಾತ್ರವಲ್ಲ,ಇಡೀ ದೇಶದಾದ್ಯಂತ ಉಚಿತ ಲಸಿಕೆ ನೀಡಲಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ಕೃಷಿ ಕಾನೂನು ವಿರುದ್ಧ ವಿಶೇಷ ಅಧಿವೇಶನ ಕರೆಯುವಂತೆ ’ಸ್ಟಾಲಿನ್’ ಪತ್ರ
#WATCH | Not just in Delhi, it will be free across the country: Union Health Minister Dr Harsh Vardhan on being asked if COVID-19 vaccine will be provided free of cost pic.twitter.com/xuN7gmiF8S
— ANI (@ANI) January 2, 2021
ಅಲ್ಲದೆ ಕೊರೊನಾ ವ್ಯಾಕ್ಸಿನೇಷನ್ ತಾಲೀಮು ನಡೆಯುತ್ತಿರುವುದರಿಂದ ಯಾವುದೆ ವದಂತಿಗಳಿಗೆ ಕಿವಿಗೊಡಬೇಡಿ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
“ಪೋಲಿಯೊ ರೋಗನಿರೋಧಕ ಸಮಯದಲ್ಲಿ ಕೂಡಾ ವಿವಿಧ ರೀತಿಯಲ್ಲಿ ವದಂತಿಗಳು ಹರಡಿತ್ತು, ಆದರೆ ಜನರು ಲಸಿಕೆ ತೆಗೆದುಕೊಂಡಿದ್ದರಿಂದ ಭಾರತ ಈಗ ಪೋಲಿಯೊ ಮುಕ್ತವಾಗಿದೆ” ಎಂದು ಅವರು ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.
ಇದನ್ನೂ ಓದಿ: ಡ್ರೈ ರನ್ ಎಂದರೇನು?: ಮೊದಲ ಡ್ರೈ ರನ್‌ನಲ್ಲಿ ಕಂಡು ಬಂದ ಮೂರು ಲೋಪಗಳು


