Homeಅಂಕಣಗಳುಅಂದು ಟ್ಯಾಗೋರ್ ದ್ವೇಷ, ಇಂದು ಅವರನ್ನೇ ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಯತ್ನ

ಅಂದು ಟ್ಯಾಗೋರ್ ದ್ವೇಷ, ಇಂದು ಅವರನ್ನೇ ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಯತ್ನ

ರಾಷ್ಟ್ರಗೀತೆ ’ಜನಗಣಮನ’ವನ್ನು ಬ್ರಿಟಿಷ್ ರಾಜನನ್ನು ಸ್ತುತಿಸಲು ಬರೆದಿದ್ದು ಎಂಬ ಫೇಕ್ ಸಂಗತಿಯನ್ನು ಜನಮಾನಸದಲ್ಲಿ ತುಂಬಲು ದಶಕಗಳಿಂದ ತೀವ್ರ ಪ್ರಪೊಗಾಂಡ ಹೂಡಿದ್ದ ಇವರು ಈಗ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಒಂದೇ ಒಂದು ಕಾರಣಕ್ಕಾಗಿ ಟ್ಯಾಗೋರ್ ಅವರ ಬಗ್ಗೆ ’ಹೊಸ’ ಪ್ರೀತಿಯನ್ನು ಬೆಳೆಸಿಕೊಂಡುಬಿಟ್ಟಿದ್ದಾರೆ.

- Advertisement -
- Advertisement -

ಇಂಗ್ಲಿಷ್ ಪದ ಪೇಟ್ರಿಯಾಟಿಸಂಅನ್ನು ತನ್ನ ದೇಶದ ಬಗೆಗೆ ತೀವ್ರ ಅಭಿಮಾನ ಮತ್ತು ಭಕ್ತಿ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಕನ್ನಡದಲ್ಲಿ ರಾಷ್ಟ್ರ/ದೇಶಪ್ರೇಮ, ರಾಷ್ಟ್ರಾಭಿಮಾನ ಅಥವಾ ರಾಷ್ಟ್ರಭಕ್ತಿ ಪದಗಳು ಸಂವಾದಿಯಾಗಿ ಬಳಕೆಯಲ್ಲಿವೆ. ಯಾರು ತನ್ನ ದೇಶವನ್ನು ಎಷ್ಟು ಪ್ರಮಾಣದಲ್ಲಿ ಪ್ರೀತಿಸುತ್ತಾನೆ ಅಥವಾ ತನ್ನ ದೇಶದ ಎಷ್ಟು ಭಕ್ತಿ ಹೊಂದಿದ್ದಾನೆ ಎಂಬುದು ಕಳೆದ ಎಂಟತ್ತು ವರ್ಷಗಳಿಂದ ತೀವ್ರ ಜಟಾಪಟಿಯ ವಿಷಯ ಆಗಿರುವುದಷ್ಟೇ ಅಲ್ಲ, ಅದೇ ವಿಷಯದ ಆಧಾರದ ಮೇಲೆ ಚುನಾವಣೆಗಳನ್ನು ಸೆಣಸಲಾಗುತ್ತಿದೆ-ಗೆಲ್ಲಲಾಗುತ್ತಿದೆ. ರಾಷ್ಟ್ರದ ಬಗ್ಗೆ ಒಬ್ಬ ವ್ಯಕ್ತಿಯ ಸಂಬಂಧ ಏನು – ನಾಗರಿಕನ ಮತ್ತು ದೇಶದ ನಡುವೆ ಯಾವ ಒಪ್ಪಂದ ಇರಬೇಕು – ಈ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ಆಗುವುದಕ್ಕೆ ಮುಂಚೆಯೇ ಭಾರತದಲ್ಲಿ ರಾಷ್ಟ್ರವಾದವನ್ನು ತನ್ನೆಲ್ಲ ನಾಗರಿಕರ ಮೇಲೆ ಹೇರಲಾಗಿತ್ತು. ವಸಾಹತುಶಾಹಿ ಬ್ರಿಟಿಷರಿಂದ ಮುಕ್ತಿಗಾಗಿ ಈ ಭಾವನೆಯನ್ನು ಜನರಲ್ಲಿ ಮೂಡಿಸುವುದು ಅಗತ್ಯವಾಗಿತ್ತು ಎಂಬ ಸಮರ್ಥನೆಯಿಂದ ಹಿಡಿದು ಹಲವು ಜಾತಿ, ಧರ್ಮ, ಪ್ರಾಂತ್ಯ, ಭಾಷೆಗಳ ಐಡೆಂಟಿಟಿಗೆ ಹೆಚ್ಚು ನಿಷ್ಠೆ ತೋರಿಸುತ್ತಿದ್ದ ವ್ಯಕ್ತಿ -ನಾಗರಿಕರನ್ನು, ಸಮುದಾಯಗಳನ್ನು ಒಗ್ಗೂಡಿಸಲು ಈ ಕಲ್ಪಿತ ರಾಷ್ಟ್ರಭಕ್ತಿಯನ್ನು, ಒಂದು ಹೆಜ್ಜೆ ಮುಂದೆ ಹೋಗಿ, ನ್ಯಾಶನಲಿಸಂಅನ್ನು ಅಥವಾ ರಾಷ್ಟ್ರವಾದವನ್ನು ಯಾವುದೇ ಚರ್ಚೆಯಿಲ್ಲದೆ, ಅರ್ಥಮಾಡಿಸಲು ಪ್ರಯತ್ನಿಸದೆ ಸಮಸ್ತ ನಾಗರಿಕರ ಮೇಲೆ ಹೇರುವ ಪ್ರಯತ್ನ ದಶಕಗಳಿಂದಲೂ ನಡೆದಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗಳು ಈ ಚರ್ಚೆಯನ್ನು ಭಯ ಉತ್ಪಾದಿಸುವ ರೀತಿಯಲ್ಲಿ ತಿರುಗಿಸಿ, ತಮ್ಮ ರಾಜಕೀಯ ವಿರೋಧಿಗಳಿಗೆ ದೇಶದ್ರೋಹಿಗಳ ಪಟ್ಟಕಟ್ಟುವ ಮತ್ತು ಅದೇ ನಿಜ ಎಂಬಂತೆ ಜನರಿಗೆ ನಂಬಿಸುವ ಹಂತಕ್ಕೆ ಇದು ಬಂದು ನಿಂತಿದೆ.

ಇಂತಹವೆ ವಿವಾದಾಸ್ಪದ ಸಂಗತಿಗಳು 2020ನ್ನು ಕಾಡಿದವು. ಇದೇ ರಾಷ್ಟ್ರವಾದದ ತೀವ್ರ ಸ್ವರೂಪದ ಹಲವು ಅವತಾರಗಳನ್ನು ನಾವು ಕಂಡೆವು. ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ಮತ್ತು ಹಲವು ರಾಜ್ಯ ಸರ್ಕಾರಗಳು ರಾಷ್ಟ್ರವಾದಕ್ಕೆ ನೇರ ಸಂಬಂಧಿಸಿದ ಕಾಯಿದೆ ಕಾನೂನುಗಳನ್ನು (ಸಿಎಎ-ಎನ್‌ಆರ್‌ಸಿ) ತರುವ, ಪರೋಕ್ಷ ಸಂಬಂಧ ಇರುವ ಲವ್ ಜಿಹಾದ್ ಎಂಬ ಕಪೋಲಕಲ್ಪಿತ ನೆಪ ಒಡ್ಡಿ ಮತಾಂತರ ವಿರೋಧಿ ಕಾನೂನುಗಳನ್ನು ಕಠಿಣಗೊಳಿಸುವ, ಗೋಹತ್ಯೆ ಸಂಬಂಧಿ ಅವೈಜ್ಞಾನಿಕವಾದ ತಿದ್ದುಪಡಿಗಳನ್ನು ತರುವ ಕೆಲಸವನ್ನು ಮುಂದುವರೆಸಿವೆ. ಇವುಗಳ ವಿಚಾರದಲ್ಲಿ ಇದೇ ದೇಶದ ದೇಶವಾಸಿಗಳಿಗೆ ಆಗುವ ತೊಂದರೆಗಳ ವಿಷಯ ಎತ್ತಿದರೆ ಸಿದ್ಧ ಉತ್ತರ ಅವರ ಬಳಿ ಇದೆ: ದೇಶದ್ರೋಹಿಗಳು ನೀವು ದೇಶ ತೊರೆಯಿರಿ.

ಟ್ಯಾಗೋರ್ ವಿರಚಿತ ರಾಷ್ಟ್ರಗೀತೆಯ ಬಗ್ಗೆ ಅಪಸ್ವರ ಎತ್ತಿದವರು ಇಂದು ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದ್ದಾರೆ

PC : DailyNews24

ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಮತ್ತು ರಾಷ್ಟ್ರವಾದಗಳ ಬಗ್ಗೆ ಹಲವು ಬಾರಿ ಈ ಪತ್ರಿಕೆಯಲ್ಲಿ ಚರ್ಚಿಸಿದ್ದರೂ ಮತ್ತೊಮ್ಮೆ ಮೇಲಿನ ಪೀಠಿಕೆಯಿಂದ ಪ್ರಾರಂಭಿಸಿದ್ದಕ್ಕೆ ಕಾರಣವಿಲ್ಲದ್ದಿಲ್ಲ. ಬೆಂಗಾಳದ ನೆಲದಲ್ಲಿ ಬದುಕಿ ವಿಶ್ವಸಾಹಿತಿಯಾಗಿದ್ದ ರವೀಂದ್ರನಾಥ ಟ್ಯಾಗೋರ್ ಅವರ ಬಗ್ಗೆ ಇಷ್ಟು ದಿನ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದ ಸಂಘಪರಿವಾರ ಈಗ ಅವರನ್ನು ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಇನ್ನಿಲ್ಲದಂತೆ ಶ್ರಮಿಸುತ್ತಿದೆ.

ರಾಷ್ಟ್ರಗೀತೆ ’ಜನಗಣಮನ’ವನ್ನು ಬ್ರಿಟಿಷ್ ರಾಜನನ್ನು ಸ್ತುತಿಸಲು ಬರೆದಿದ್ದು ಎಂಬ ಫೇಕ್ ಸಂಗತಿಯನ್ನು ಜನಮಾನಸದಲ್ಲಿ ತುಂಬಲು ದಶಕಗಳಿಂದ ತೀವ್ರ ಪ್ರಪೊಗಾಂಡ ಹೂಡಿದ್ದ ಇವರು ಈಗ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಒಂದೇ ಒಂದು ಕಾರಣಕ್ಕಾಗಿ ಟ್ಯಾಗೋರ್ ಅವರ ಬಗ್ಗೆ ’ಹೊಸ’ ಪ್ರೀತಿಯನ್ನು ಬೆಳೆಸಿಕೊಂಡುಬಿಟ್ಟಿದ್ದಾರೆ. ಅದರ ಭಾಗವಾಗಿಯೇ, ಪ್ರಧಾನಿ ಮೋದಿಯವರ ಪಟವನ್ನು ಟ್ಯಾಗೋರ್ ಅವರ ಪಟಕ್ಕೆ ಜೋಡಿಸಿ, ಇಬ್ಬರ ನಡುವೆಯೂ ಸಾಮಾನ್ಯ ಸಂಗತಿ: ಪೇಟ್ರಿಯಾಟಿಸಂ ಎಂಬ ಮೀಮ್ ಮಾಡಿ ವ್ಯಾಪಕವಾಗಿ ಹಂಚುತ್ತಿರುವುದು. ಇದಕ್ಕೆ ಇದೇ ಮಟ್ಟದಲ್ಲಿ, ವಿರುದ್ಧವಾದ ಮೀಮ್‌ಗಳು ಸೃಷ್ಟಿಯಾಗುತ್ತಿದ್ದರೂ, ಟ್ಯಾಗೋರ್ ಅವರ ಬದುಕು ಮತ್ತು ಬರಹಗಳೇ ಅವರನ್ನು ಸುಲಭವಾಗಿ ಅಪ್ರಾಪ್ರಿಯೇಟ್ ಮಾಡಿಕೊಳ್ಳುವುದಕ್ಕೆ ಬಿಡಗೊಡುವುದಿಲ್ಲ ಎನ್ನುವುದೂ ನಿಜ.

ಪೇಟ್ರಿಯಾಟಿಸಂ ಬಗ್ಗೆ ಟ್ಯಾಗೋರ್ ಅವರ ಅಭಿಪ್ರಾಯಗಳನ್ನು, ಸಂಘ ಪರಿವಾರ ಮತ್ತು ಪ್ರಧಾನಿ ಮೋದಿಯವರನ್ನು ಕುರುಡಾಗಿ ಬೆಂಬಲಿಸುವ ಅಭಿಮಾನಿಗಳು ಓದಿ ತಿಳಿದರೆ ಅಥವಾ ಕೇಳಿಸಿಕೊಂಡರೆ ಬೆಚ್ಚಿಬೀಳಬಹುದು. ಆ ಅಘಾತ ಇಂದಿಗೆ ಅತ್ಯವಶ್ಯಕವಾಗಿದೆ ಕೂಡ. ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರ ಪತ್ನಿ ಅಬಲ ಬೋಸ್ ಅವರಿಗೆ ಟ್ಯಾಗೋರ್ ಅವರು 1908ರಲ್ಲಿ ಬರೆಯುವ ಒಂದು ಪತ್ರದಲ್ಲಿ “ಪೇಟ್ರಿಯಾಟಿಸಂ ನಮ್ಮ ಅಂತಿಮ ಆಧ್ಯಾತ್ಮಿಕ ಆಶ್ರಯವಾಗಲು ಸಾಧ್ಯವಿಲ್ಲ; ನನ್ನ ಆಶ್ರಯ ಮಾನವೀಯತೆ. ನಾನು ವಜ್ರಗಳ ಬೆಲೆಗೆ ಗಾಜನ್ನು ಕೊಳ್ಳುವುದಿಲ್ಲ, ಮತ್ತು ಮಾನವೀಯತೆ ಮೇಲೆ ಪೇಟ್ರಿಯಾಟಿಸಂ ಜಯ ಸಾಧಿಸಲು ನಾನು ಬದುಕಿರುವವರೆಗೂ ಬಿಡುವುದಿಲ್ಲ ಎನ್ನುತ್ತಾರೆ. ಹೀಗೆ ರಾಷ್ಟ್ರಪ್ರೇಮಕ್ಕಿಂತಲೂ ಮಾನವೀಯತೆಯೇ ಮುಖ್ಯ ಎಂದು ತಮ್ಮ ಜೀವನದುದ್ದಕ್ಕೂ ಸಾರಿಕೊಂಡು ಬಂದ ಟ್ಯಾಗೋರ್ ಅವರ ನಿಜ ಮುಖವನ್ನು ಸಾಮಾನ್ಯ ಜನಕ್ಕೆ ತಿಳಿಗೊಡಿಸಿದರೆ, ಸಂಘ ಪರಿವಾರ ಮತ್ತು ಬಿಜೆಪಿ ಈಗಿನ ತಮ್ಮ ಆಟವನ್ನು ಮುಂದುವರೆಸುವುದು ಸಂದೇಹವೇ!

ಟ್ಯಾಗೋರ್ ಅವರು ರಾಷ್ಟ್ರವಾದದ ಬಗ್ಗೆಯೂ ಇಂತಹದ್ದೇ ಸಂದೇಹವನ್ನು ವ್ಯಕ್ತಪಡಿಸಿದ್ದರಲ್ಲದೆ, ಜಪಾನ್, ಅಮೆರಿಕ ಮತ್ತು ಭಾರತದ ನ್ಯಾಶನಲಿಸಂ ಬಗ್ಗೆ ಕೊಟ್ಟ ಸರಣಿ ಉಪನ್ಯಾಸಗಳನ್ನು ಇಂದಿಗೂ ಜಗತ್ತಿನಾದ್ಯಂತ ರೆಫರ್ ಮಾಡಲಾಗುತ್ತದೆ. ತೀವ್ರ ರಾಷ್ಟ್ರವಾದವನ್ನು ತಿರಸ್ಕರಿಸಿದ್ದ ಅವರು ’ಭಾರತದಲ್ಲಿ ರಾಷ್ಟ್ರೀಯತೆ’ ಎಂಬ ಪ್ರಬಂಧದಲ್ಲಿ ದೇವರಿಗಿಂತ ರಾಷ್ಟ್ರಾಭಿಮಾನ ದೊಡ್ಡದು ಎಂದು ತಿಳಿಯುವ ಸ್ಥಿತಿ ಯಾವ ದೇಶಕ್ಕೂ ಬರಬಾರದು ಎನ್ನುತ್ತಾರೆ. ಇದೇ ವಿಷಯದ ಬಗ್ಗೆ ಕಥೆ- ಕಾದಂಬರಿಗಳನ್ನು ಬರೆದಿದ್ದ ಟ್ಯಾಗೋರ್ ಅವರು ’ಮನೆ-ಜಗತ್ತು’ (ಘರೆ ಬಾಯ್ರೆ) ಕಾದಂಬರಿಯಲ್ಲಿ ’ದೇಶವೆಂದರೆ ಅದೊಂದು ನಕಾಶೆಯೇ? ಅಥವಾ ಮಣ್ಣು, ನೀರಿನಿಂದ ಕೂಡಿದ ಭೌಗೋಳಿಕ ವಸ್ತುವೇ? ದೇಶವೆಂದರೆ ಇವುಗಳಲ್ಲ, ಆದರೆ ಅದನ್ನು ಸಂಘಟಿಸುವ ಜನತೆ’ ಎನ್ನುತ್ತಾರೆ.

ದೇಶದ ಸಮಸ್ತ ಜನತೆಯ ಒಳಿತಿಗಾಗಿ ಯೋಚಿಸುತ್ತದ್ದ ಟ್ಯಾಗೋರ್ ಅವರು ಅಂದು ಜಲಿಯನ್ ವಾಲಾಭಾಗ್‌ನಲ್ಲಿ ಸಾಮಾನ್ಯ ಜನರ ಮೇಲೆ ಬ್ರಿಟಿಷ್ ಸರ್ಕಾರ ಗುಂಡು ಹಾರಿಸಿ ಮಾರಣಹೋಮ ಮಾಡಿದ್ದನ್ನು ವಿರೋಧಿಸಿ ತಮಗೆ ಆ ಸರ್ಕಾರ ಕೊಟ್ಟಿದ್ದ ’ನೈಟ್‌ಹುಡ್ ಪದವಿಯನ್ನು ಹಿಂದಿರುಗಿಸಿದ್ದರು. ಪೂಣಾ ಒಪ್ಪಂದದ ಸಮಯದಲ್ಲಿ ಮಹಾತ್ಮ ಗಾಂಧಿಯವರು ಉಪವಾಸ ನಿಲ್ಲಿಸಿದ ಮೇಲೆ, ಹಿಂದೂ ಮಹಾಸಭಾದ ಮುಸ್ಲಿಂ ದ್ವೇಶವನ್ನು ಸರಿದಾರಿಗೆ ತರಲು ಶ್ರಮಿಸುವಂತೆ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಹಿಂದುತ್ವದ ಶಕ್ತಿಗಳಿಗೆ ಕೆಂಡದಂತಿದ್ದ ಇಂತಹ ಮಾನವತಾವಾದಿಯನ್ನು ಒಂದು ಕಡೆ ಒಲಿಸಿಕೊಳ್ಳಲು ಹೆಣಗುತ್ತಿರುವ ಸಂಘಪರಿವಾರದವರು, ಟ್ಯಾಗೋರ್ ಅವರ ಗರಡಿಯಲ್ಲಿ – ಅವರು ಹುಟ್ಟು ಹಾಕಿದ್ದ ಶಿಕ್ಷಣ ಸಂಸ್ಥೆ ಶಾಂತಿನಿಕೇತನದಲ್ಲಿ ಕಲಿತು ಪಳಗಿ ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞರಾಗಿರುವ ಅಮರ್ತ್ಯ ಸೇನ್ ಅವರನ್ನು ಈಗ ಗುರಿಯಾಗಿಸಿಕೊಂಡಿದೆ.

ಇದನ್ನೂ ಓದಿ: ಬ್ಲೂಮ್ಸ್‌ಬರಿ, ಬುಕ್‌ಬ್ರಹ್ಮ, ರದ್ದು ಸಂಸ್ಕೃತಿ ಮತ್ತು ರವೀಂದ್ರನಾಥ ಟ್ಯಾಗೋರ್

ಇಂದು ಸೇನ್ ಬೌದ್ಧಿಕತೆಗೆ ಭಯಬಿದ್ದು ವಿರೋಧಿಸುತ್ತಿದ್ದರೂ, ಮುಂದೊಂದು ದಿನ ಅವರನ್ನು ತೆಕ್ಕೆಗೆ ತೆಗೆದುಕೊಳ್ಳಲು ಹಿಂಜರಿಯದವರು!

PC : Scroll.in

ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ ಅಮರ್ತ್ಯ ಸೇನ್ ಅವರು ಹಲವು ವರ್ಷಗಳಿಂದ ತಮ್ಮ ಅಧ್ಯಯನ ಮತ್ತು ಸಲಹೆಗಳಿಂದ ಭಾರತದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿಗೆ ಸಹಕರಿಸುತ್ತಿರುವವರು. ಟ್ಯಾಗೋರ್ ಅವರ ಬಗ್ಗೆ ಪ್ರಬಂಧಗಳನ್ನು ಬರೆದು, ನ್ಯಾಶನಲಿಸಂನ ಅಪಾಯಗಳನ್ನು ಮನಗಾಣಿಸಲು, ಜಾತ್ಯಾತೀತತೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಶ್ರಮಿಸುತ್ತಿರುವವರು. ಭಾರತದ ಬಹುತ್ವದ ಬಗ್ಗೆ, ಇಲ್ಲಿನ ಸಂವಾದದ ಪರಂಪರೆಯ ಬಗ್ಗೆ ಹೆಚ್ಚೆಚ್ಚು ಮಾತನಾಡಿ ಅದರ ಬಗ್ಗೆ ತಿಳಿವು ಮೂಡಿಸಲು ಪ್ರಯತ್ನಿಸಿದ ನಿಜವಾದ ಇಂಟಲೆಕ್ಚುಯಲ್ ಸೇನ್. ಶಾಂತಿನಿಕೇತನದಲ್ಲಿಯೇ ಕಲಿತಿದ್ದ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರಂತೆಯೇ ಸೇನ್ ಕೂಡ ಟ್ಯಾಗೋರ್ ಅವರ ಮಾನವತಾವಾದದ, ವಿಶ್ವಪ್ರಜ್ಞೆಯ ಪ್ರವರ್ತಕರೂ ಕೂಡ.

ಈಗ ಈ ಚುನಾವಣಾ ಕಾವಿನಲ್ಲಿ ಮೇಲುಗೈ ಪಡೆಯಲು ಹವಣಿಸುತ್ತಿರುವ ಬಿಜೆಪಿ ಪಕ್ಷ ಅಮರ್ತ್ಯ ಸೇನ್ ಅವರ ಬೌದ್ಧಿಕತೆಯ ಬಗ್ಗೆ ಅಪಪ್ರಚಾರ ನಡೆಸಲು ತನ್ನ ಎಂದಿನ ಆಟ ಹೂಡಿದೆ. ವಿಶ್ವಭಾರತಿ ವಿಶ್ವವಿದ್ಯಾಯದ ಕುಲಪತಿಗಳನ್ನು ಮುಂದಿಟ್ಟುಕೊಂಡು ಸೇನ್ ಅವರ ವಿರುದ್ಧ ಆರೋಪಗಳನ್ನು ಮಾಡಿ ಪಿತೂರಿ ನಡೆಸಲಾಗುತ್ತದೆ. ಈ ಆರೋಪಗಳನ್ನು ರಾಜ್ಯದ ಮುಖ್ಯಮಂತ್ರಿ ಅಲ್ಲಗಳೆದಿದ್ದಾರೆ. ಆದರೂ ಪ್ರಚಾರದ ಅಬ್ಬರದಲ್ಲಿ, ಮಾಧ್ಯಮಗಳು ಜೀತಕ್ಕಿರುವ ಸಮಯದಲ್ಲಿ ಗಾಂಧಿ, ನೆಹರು ಮುಂತಾದವರೆಲ್ಲರನ್ನು ಖಳನಾಯಕರಾಗಿಸಿ ತಮ್ಮ ಪಿತೂರಿಯಲ್ಲಿ ಸಂಘ ಪರಿವಾರ ಗೆದ್ದಿರುವುದನ್ನು ನಾವು ನೋಡಿದ್ದೇವೆ. ಆದರೆ ಈ ದಿನಗಳಲ್ಲಿ ಎಚ್ಚರಿಕೆ ಮಹತ್ವದ ಪಾತ್ರ ವಹಿಸುವುದೇ? ಹಿಂದುತ್ವದ ಈ ಪಿತೂರಿ ಅಜೆಂಡಾಗಳಿಗೆ ಸೋಲಾಗಬಹುದೇ?

ಈ ಹಿರಿಯರು ಕಟ್ಟಿಕೊಟ್ಟ ಬಹುತ್ವದ, ಮಾನವೀಯತೆಯ, ಜಾತ್ಯತೀತ ಪರಂಪರೆಯನ್ನು ಉಳಿಸಿಕೊಳ್ಳಲು ಇಂದು ನಾವೆಲ್ಲರೂ ಇನ್ನು ಹೆಚ್ಚಿನ ಶ್ರಮವಹಿಸಬೇಕಾಗಿದೆ.


ಇದನ್ನೂ ಓದಿ: ‘PM-CARES’ ಖಾಸಗಿ ನಿಧಿ- ದಾಖಲೆಗಳು ಬಿಚ್ಚಿಟ್ಟ ವೈರುಧ್ಯ!, ದೇಶಕ್ಕೆ ಇಷ್ಟು ದೊಡ್ಡ ಸುಳ್ಳು ಹೇಳಿದರೇ ಮೋದಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪುಲ್ವಾಮದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು? : ಡಿಂಪಲ್ ಯಾದವ್

0
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರು, ಸಹೋದರಿಯರ 'ಮಂಗಳಸೂತ್ರ' ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ತಿರುಗೇಟು ನೀಡಿದ್ದು, "ಪುಲ್ವಾಮ ದಾಳಿಯಲ್ಲಿ ಹತರಾದ ಸೈನಿಕರ...