PM-CARES
PC: The Logical Indian

ಕೊರೊನಾ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ್ದ “PM-CARES”‌(ಪಿಎಂ-ಕೇರ್ಸ್) ನಿಧಿ ಖಾಸಗಿಯೆ ಅಥವಾ ಸರ್ಕಾರಿ ಟ್ರಸ್ಟ್‌‌ ಆಗಿದೆಯೆ ಎಂಬ ಬಗ್ಗೆ ಇದೀಗ ವಿರೋಧಾಭಾಸಗಳು ಎದ್ದಿದೆ. ನಿಧಿಗೆ ಕಾರ್ಪೊರೇಟ್‌ ಸಂಸ್ಥೆಗಳು ದೇಣಿಗೆ ನೀಡಿರುವುದಕ್ಕಾಗಿ ಇದನ್ನು ಸರ್ಕಾರಿ ಟ್ರಸ್ಟ್ ಎಂದು ವ್ಯಾಖ್ಯಾನಿಸಲಾಗಿದ್ದರೂ, ಟ್ರಸ್ಟ್ ದಾಖಲೆಗಳಲ್ಲಿನ ಒಂದು ಷರತ್ತು ಇದನ್ನು ”ಖಾಸಗಿ” ಎಂದು ಕರೆಯುತ್ತದೆ ಹಾಗೂ ಇದಕ್ಕೆ ಆರ್‌ಟಿಐ ಪರಿಶೀಲನೆಯಿಂದ ವಿನಾಯಿತಿ ನೀಡುತ್ತದೆ.

ಪ್ರಧಾನಮಂತ್ರಿ ಅಧ್ಯಕ್ಷರಾಗಿರುವ PM-CARES ಟ್ರಸ್ಟ್‌ನ ನಿಧಿಯನ್ನು ದೆಹಲಿಯ ಕಂದಾಯ ಇಲಾಖೆಯಲ್ಲಿ ನೋಂದಾಯಿಸಲಾಗಿದೆ. ಆದರೆ ಇದೀಗ ಸಾರ್ವಜನಿಕಗೊಂಡಿರುವ ಟ್ರಸ್ಟ್‌ನ ದಾಖಲೆ ಪತ್ರವು ಇದನ್ನು ಸರ್ಕಾರಿ ಟ್ರಸ್ಟ್ ಎಂದು ವ್ಯಾಖ್ಯಾನಿಸುವುದಿಲ್ಲ.

ಟ್ರಸ್ಟ್‌ನ ದಾಖಲೆ ಪತ್ರದ ಅಂಶವಾದ 5.3 ರಲ್ಲಿ ಹೀಗೆ ಹೇಳುತ್ತದೆ:

“ಈ ಟ್ರಸ್ಟ್‌ ಸರ್ಕಾರದ ಮಾಲೀಕತ್ವಕ್ಕೆ ಒಳಪಟ್ಟಿಲ್ಲ ಅಥವಾ ಸರ್ಕಾರದಿಂದ ಆರ್ಥಿಕ ನೆರವನ್ನು ಪಡೆದಿಲ್ಲ ಅಥವಾ ಸರ್ಕಾರದ ಯಾವುದೇ ಸಂಸ್ಥೆಯ ವ್ಯಾಪ್ತಿಗೆ ಒಳಪಟ್ಟಿಲ್ಲ ಅಥವಾ ಒಳಪಡುವ ಉದ್ದೇಶವಿಲ್ಲ. ಟ್ರಸ್ಟ್‌ನ ಯಾವುದೆ ರೀತಿಯ ಕಾರ್ಯದಲ್ಲಿ, ನೇರವಾಗಿ ಅಥವಾ ಪರೋಕ್ಷವಾಗಿ ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರಗಳ ನಿಯಂತ್ರಣವಿರುವುದಿಲ್ಲ.”

ಇದನ್ನೂ ಓದಿ: ಪಿಎಂ ಕೇರ್ಸ್ ಮಾಹಿತಿ ನೀಡುವುದರಿಂದ ಸಂಪನ್ಮೂಲಗಳು ದಿಕ್ಕುತಪ್ಪುತ್ತದೆ: ಪಿಎಂಒ

ಕೊರೊನಾ ವೈರಸ್ ಸಾಂಕ್ರಾಮಿಕದಂತಹ ತುರ್ತು ಅಥವಾ ತೊಂದರೆಯ ಸಂದರ್ಭಗಳನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರು PM-CARES ಅನ್ನು ಮಾರ್ಚ್‌ನಲ್ಲಿ ಸ್ಥಾಪಿಸಲಾಗಿತ್ತು. ಇದಕ್ಕೆ ಪ್ರಧಾನಿ ಮೋದಿ ಅಧ್ಯಕ್ಷರಾಗಿ ಮತ್ತು ಹಿರಿಯ ಕ್ಯಾಬಿನೆಟ್ ಸದಸ್ಯರನ್ನು ಟ್ರಸ್ಟಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ.

ಮಾರ್ಚ್ 27 ರಂದು ಈ ಟ್ರಸ್ಟ್ ನೋಂದಾಯಿಸಲಾಗಿದೆ. ಮಾರ್ಚ್ 28 ರಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಕಾರ್ಪೊರೇಟ್ ದೇಣಿಗೆ ಸ್ವೀಕರಿಸಲು ”ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ” (CSR) ಉಪಕ್ರಮವಾಗಿ PM-CARES ‌ಗೆ ಅರ್ಹತೆ ಇರುವ ಜ್ಞಾಪಕ ಪತ್ರವನ್ನು ನೀಡಿತು.

ಕಾರ್ಪೊರೇಟ್ ದೇಣಿಗೆಗೆ ಅರ್ಹವಾದ ಚಟುವಟಿಕೆಗಳನ್ನು ವ್ಯಾಖ್ಯಾನಿಸುವ, ಕಂಪನಿಗಳ ಕಾಯ್ದೆ ಹೀಗಿದೆ:

“ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಗೆ ಅಥವಾ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಸ್ಥಾಪಿಸಿರುವ ಯಾವುದೇ ನಿಧಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ”

ಇದನ್ನೂ ಓದಿ: ಸಂಸದೀಯ ಸಮಿತಿಯಿಂದ ಪಿಎಂ ಕೇರ್ಸ್‌ ಪರಾಮರ್ಶೆಗೆ ಬಿಜೆಪಿ ವಿರೋಧ! 

ಸಾಮಾಜಿಕ ಕಾರ್ಯಕರ್ತ ಅಂಜಲಿ ಭರದ್ವಾಜ್ ಅವರಿಗೆ ಆರ್‌ಟಿಐ ಮೂಲಕ ಸಿಕ್ಕಿರುವ ಮಾಹಿತಿಯಂತೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಮಾರ್ಚ್ 28 ರ ಕಚೇರಿ ಜ್ಞಾಪಕ ಪತ್ರವನ್ನು ಹೊರಡಿಸುವಾಗ, ಟ್ರಸ್ಟ್‌‌ ಅನ್ನು “ಕೇಂದ್ರ ಸರ್ಕಾರ ಸ್ಥಾಪಿಸಿದ ನಿಧಿ” ಎಂದು ವ್ಯಾಖ್ಯಾನಿಸಿದೆ.

ಆದರೆ ನಿನ್ನೆ ಟ್ರಸ್ಟ್ ದಾಖಲೆ ಪತ್ರಗಳು ಇದು ಸರ್ಕಾರದಿಂದ ನಡೆಸಲ್ಪಡುವುದಿಲ್ಲ ಎಂದು ಹೇಳಿದೆ. ಆದ್ದರಿಂದ “ಕಂಪೆನಿ ಕಾಯ್ದೆ”ಯ ಪ್ರಕಾರ ಪಿಎಂ ಕೇರ್ಸ್ ಕಾರ್ಪೊರೇಟ್ ದೇಣಿಗೆಗೆ ಅರ್ಹರಾಗುವುದಿಲ್ಲ.

PM-CARES‌ ಟ್ರಸ್ಟ್‌ ಪ್ರಾರಂಭವಾಗಿ ಸುಮಾರು ಎರಡು ತಿಂಗಳ ನಂತರ (ಮೇ 26), ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ”ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ”ಗೆ ಹೆಚ್ಚುವರಿಯಾಗಿ ”PM-CARES” ನಿಧಿಯನ್ನು ಮಾರ್ಚ್ 28 ರಿಂದ ಅನ್ವಯವಾಗುವಂತೆ ಕಂಪೆನಿ ಕಾಯ್ದೆಗೆ ಸೇರಿಸಿತು. ಇದರರ್ಥ ಟ್ರಸ್ಟ್‌‌ ಪ್ರಾರಂಭದಿಂದಲೇ ಕಾರ್ಪೊರೇಟ್ ದೇಣಿಗೆ ಪಡೆಯುವ ಖಾಸಗಿ ಘಟಕವಾಗಿತ್ತು.

ಟ್ರಸ್ಟ್ ದಾಖಲೆ ಕೋರಿ ಎನ್‌ಡಿಟಿವಿ ಈ ಹಿಂದೆ ಪ್ರಧಾನ ಮಂತ್ರಿ ಕಚೇರಿಗೆ ಆರ್‌ಟಿಐ ಅರ್ಜಿಯನ್ನು ಸಲ್ಲಿಸಿತ್ತು, ಆದರೆ ಈ ನಿಧಿ ಸರ್ಕಾರಿ ಟ್ರಸ್ಟ್‌ ಅಲ್ಲ ಎಂಬ ಕಾರಣಕ್ಕೆ ಮನವಿಯನ್ನು ತಿರಸ್ಕರಿಸಲಾಗಿತ್ತು.

ಇದನ್ನೂ ಓದಿ: ಪಿಎಂ ಕೇರ್ಸ್‌ಗೆ 60,000 ಕೋಟಿ ಹರಿದುಬಂದಿದೆ, ಆದರೂ ಮೋದಿ ಲೆಕ್ಕ ಕೊಡುತ್ತಿಲ್ಲ: ಸಿದ್ದರಾಮಯ್ಯ

ಈ ಬಗ್ಗೆ ನಾನುಗೌರಿ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ವಿದ್ಯಾರ್ಥಿ ಸಂಘದ ರಾಜ್ಯ ಸಂಚಾಲಕ ಸರೋವರ್‌ ಬೆಂಕಿಕೆರೆ, “ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ನಾಶ ಪಡಿಸಿ ಖಾಸಗಿ ಸಂಸ್ಥೆಗಳಿಗೆ ನೀಡುತ್ತಾ ಬಂದಿರುವ ಕೇಂದ್ರ ಸರ್ಕಾರ, ತನಗೆ ಶಕ್ತಿಯಿಲ್ಲ, ತಾನೊಂದು ಕೈಲಾಗದ ಸರ್ಕಾರ ಎಂದು ದಿನೇ ದಿನೇ ನಿರೂಪಿಸುತ್ತಾ ಇದೆ. PM-CARES ಸಾರ್ವಜನಿಕ ಸಂಸ್ಥೆಯಲ್ಲ ಎಂದು ಈ ಹಿಂದೆಯೆ ಹೇಳಿತ್ತು. ಕೊರೊನಾ ಸಂಕಷ್ಟದ ಕಾಲದಲ್ಲಿ ಪ್ರತಿಯೊಬ್ಬ ಭಾರತೀಯನೂ ಪಕ್ಷ ಬೇದವನ್ನು ಮರೆತು, ಸಂವಿಧಾನದ ಪೀಠಿಕೆಯಾದ ದೇಶದ ಐಕ್ಯತೆ ಮತ್ತು ಒಗ್ಗಟ್ಟನ್ನು ಎತ್ತಿ ಹಿಡಿದು ಅಲ್ಲಿ ಹಣವನ್ನು ಜಮೆ ಮಾಡಿದರು. ಆದರೆ ಜನರ ಇಂತಹ ನಂಬಿಕೆಗೆ ಪ್ರಧಾನ ಮಂತ್ರಿ ಮೋಸ ಮಾಡಿದ್ದಾರೆ” ಎಂದು ಹೇಳಿದರು.

ಸರೋವರ್‌ ಬೆಂಕಿಕೆರೆ

“ಪ್ರಧಾನ ಮಂತ್ರಿ ಭಾರತೀಯ ಜನರಿಗೆ ಉತ್ತರದಾಯಿಯಾಗಿರಬೇಕು, ಪ್ರಸ್ತುತ ಪಾದರ್ಶಕತೆಯಿಲ್ಲದ ಈ ಪ್ರಧಾನಿ ಜನರ ಹಣವನ್ನು ದುರ್ಬಳಕೆ ಮಾಡಿರುವುದು ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ಕೇವಲ PM-CARES ಮಾತ್ರ ದುರ್ಬಳಕೆ ಆಗಿರುವುದಲ್ಲ, ದೇಶದ ಘನತೆ ಮತ್ತು ಪ್ರಧಾನ ಮಂತ್ರಿ ಹುದ್ದೆ ಕೂಡಾ ದುರ್ಬಳಕೆ ಆಗಿದೆ. ಒಟ್ಟಿನಲ್ಲಿ ದೇಶದವನ್ನೇ ದುರ್ಬಳಕೆ ಮಾಡಿಕೊಂಡರು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, “ಚೀನಾ, ಪಾಕಿಸ್ತಾನ ಮತ್ತು ಕತಾರ್‌ನಿಂದ PM Cares ನಿಧಿವರೆಗೆ “ವಿದೇಶಿ ದೇಣಿಗೆ” ಗಳ ಕುತೂಹಲಕಾರಿ ಪ್ರಕರಣ” ಎಂಬ ಸರಣಿ ಟ್ವೀಟ್ ಮಾಡುವ ಮೂಲಕ ಪ್ರಧಾನ ಮಂತ್ರಿಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಲ್ಲಿ “ಭಾರತೀಯ ರಾಯಭಾರ ಕಚೇರಿಗಳು ಪಿಎಂ ಕೇರ್ಸ್ ಫಂಡ್‌ಗೆ ಪ್ರಚಾರವನ್ನು ಏಕೆ ನೀಡಿವೆ?, ನಿಷೇಧಿತ ಚೀನೀ ಅಪ್ಲಿಕೇಶನ್‌ಗಳಲ್ಲಿ ನಿಧಿಯನ್ನು ಏಕೆ ಪ್ರಚಾರ ಮಾಡಲಾಯಿತು? ಪಾಕಿಸ್ತಾನದಿಂದ ಎಷ್ಟು ಹಣವನ್ನು ಸ್ವೀಕರಿಸಲಾಗಿದೆ ಮತ್ತು ಯಾರು ದೇಣಿಗೆ ನೀಡಿದರು? ಕತಾರ್‌ನ ಎರಡು ಕಂಪನಿಗಳು ಯಾವುವು ನಿಧಿಗೆ ದೇಣಿಗೆ ನೀಡುತ್ತವೆ ಮತ್ತು ಎಷ್ಟು ಕೋಟಿಗಳನ್ನು ಸ್ವೀಕರಿಸಲಾಗಿದೆ? ನಿಧಿಯು ಯಾಕೆ ‘ಸಾರ್ವಜನಿಕ ಪ್ರಾಧಿಕಾರ’ ಅಲ್ಲ?” ಎಂಬ ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ.

ಇದನ್ನೂ ಓದಿ: ಪಿಎಂ ಕೇರ್ಸ್‌, ಕಾರ್ಪೋರೇಟ್‌ ಜವಾಬ್ದಾರಿಯ CSR ಮತ್ತು ಖಾಸಗಿ ಲಾಬಿ: ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here