ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ದೆಹಲಿಯ ಗಡಿಗಳಲ್ಲೊಂದಾದ ದೆಹಲಿ- ಗಾಜಿಪುರ್ ಗಡಿಯಲ್ಲಿ ಉತ್ತರ ಪ್ರದೇಶದ 75 ವರ್ಷದ ರೈತನ ಮೃತ ದೇಹವೊಂದು ಡೆತ್‌ನೋಟ್‌ನೊಂದಿಗೆ ಪತ್ತೆಯಾಗಿದೆ.
ಉತ್ತರ ಪ್ರದೇಶದ ಕಾಶ್ಮೀರ್ ಸಿಂಗ್ ಲಧಿ ಎಂಬುವವರು ಗಡಿಯಲ್ಲಿನ ಶೌಚಾಲಯವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹದ ಜೊತೆಗೆ ಆತ್ಮಹತ್ಯಾ ಪತ್ರ ಸಹ ದೊರಕಿದೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂತೆಗದುಕೊಳ್ಳದೆ ರೈತರೊಂದಿಗೆ ಕೇವಲ ಮಾತುಕತೆ ನಡೆಸುತ್ತಿದೆ ಎಂದು ಅವರು ಹತಾಶೆಗೊಂಡಿದ್ದರು. ಹಾಗಾಗಿ ಅವರ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಭಾರತೀಯ ಕಿಸಾನ್ ಯೂನಿಯನ್ ಆರೋಪಿಸಿದೆ.
“ನಾವು ಎಷ್ಟು ದಿನ ಎಂದು ಈ ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸಬೇಕು? ಕೇಂದ್ರ ಸರ್ಕಾರವಂತೂ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ. ಹಾಗಾಗಿ ನಾನು ಪ್ರಾಣ ಬಿಡಲು ನಿರ್ಧರಿಸುತ್ತಿದ್ದೇನೆ. ಇದರಿಂದಾದರೂ ಕೆಲ ಪರಿಹಾರ ಸಿಗಲಿ. ನನ್ನ ಮೊಮ್ಮಕ್ಕಳು ಇದೇ ಪ್ರತಿಭಟನಾ ಸ್ಥಳದಲ್ಲಿ ನನ್ನ ಅಂತ್ಯಕ್ರಿಯೆ ಮಾಡಲಿ” ಎಂದು ಆತ್ಮಹತ್ಯಾ ಪತ್ರದಲ್ಲಿ ಬರೆಯಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯ ಬಿಲಾಸ್ಪುರ್ ಪ್ರದೇಶದವರಾದ ಕಾಶ್ಮೀರ್ ಸಿಂಗ್ ಲಧಿಯವರು ಮಕ್ಕಳು ಮತ್ತು ಮೊಮ್ಮಕ್ಕಳು ಸಹ ಗಾಜಿಪುರ್ ಗಡಿಯಲ್ಲಿ ರೈತ ಹೋರಾಟದಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ 38ನೇ ದಿನ ಪ್ರವೇಶಿಸಿದೆ. ಕೇಂದ್ರದ ಕಾಯ್ದೆಗಳು ರೈತರನ್ನು ಬೀದಿಗೆ ತಳ್ಳಿ ಕಾರ್ಪೊರೇಟ್ ಲೂಟಿಗೆ ಅನುಕೂಲ ಮಾಡಿಕೊಡಲಿದೆ ಎಂದು ರೈತರು ದೂರಿದ್ದಾರೆ. ಇದುವರೆಗೂ ಪ್ರತಿಭಟನಾ ಸ್ಥಳದಲ್ಲಿ 30ಕ್ಕೂ ಹೆಚ್ಚು ರೈತರು ಪ್ರಾಣ ಬಿಟ್ಟಿದ್ದಾರೆ. ಕೆಲವರು ತೀವ್ರ ಚಳಿಗೆ ಮೃತಪಟ್ಟರೆ ಮತ್ತೆ ಕೆಲವರು ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ಇರುವುದರಿಂದ ಹತಾಶೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಷ್ಟೆಲ್ಲ ರೈತರು ಸಾಯುತ್ತಿದ್ದರೂ ಮೋದಿ ಸರ್ಕಾರ ಕಾಯ್ದೆಗಳ ಕುರಿತಾಗಿ ಹಠಮಾರಿ ಧೋರಣೆ ಮುಂದುವರೆಸುತ್ತಿದೆ ಎಂಬ ಟೀಕೆ ವ್ಯಾಪಕವಾಗಿ ಕೇಳಿಬಂದಿದೆ.
ಹೊಸ ವರ್ಷ ಅಂತೆ! ಎಂತ ಹೊಸ ವರ್ಷ?
ಗಾಜಿಪುರಗಡಿಯಲ್ಲಿ ಎರಡು ಗಂಟೆ ಹಿಂದೆಯಷ್ಟೇ ಮತ್ತೊಬ್ಬ ರೈತ ಹೋರಾಟಗಾರ ಆತ್ಮಹತ್ಯೆ ಮಾಡಿಕೊಂಡ.
ಮತ್ತೆ ಕೇಳಬೇಕಾದ ಪ್ರಶ್ನೆ – ಈ ಸರಕಾರದ ಹೃದಯ ಕರಗಲು ಇನ್ನೆಷ್ಟು ರೈತರ ಬಲಿದಾನ ಆಗಬೇಕು? ಎಂದು ಕನ್ನಡದ ಚಿಂತಕರಾದ ಶ್ರೀನಿವಾಸ ಕಾರ್ಕಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಕಂಪನಿಯಿಂದ ಕಿರುಕುಳ: ಪ್ರಧಾನಿಗೆ ಪತ್ರ ಬರೆದು ಪ್ರಾಣತ್ಯಾಗ ಮಾಡಿದ ರೈತ


