ಕುರುಬ ಸಮುದಾಯವನ್ನು ST ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಜ.15 ರಿಂದ ಕಾಗಿನೆಲೆಯಿಂದ ಆರಂಭಗೊಳ್ಳಲಿರುವ ಪಾದಯಾತ್ರೆಗೆ ಸಿದ್ದತೆ ನಡೆದಿರುವಾಗಲೇ ಈ ಹೋರಾಟದ ಹಿಂದೆ ಕುರುಬ ಸಮುದಾಯವನ್ನು ಒಡೆಯುವ ರಾಜಕೀಯ ಪಿತೂರಿ ಇದೆ ಎಂಬ ಅನುಮಾನ ಪ್ರದೇಶ ಕುರುಬರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಸ್ಫೋಟಗೊಂಡಿದೆ.
ಭಾನುವಾರ ತುಮಕೂರಿನಲ್ಲಿ ಕರೆಯಲಾಗಿದ್ದ ಪ್ರದೇಶ ಕುರುಬರ ಸಂಘದ ರಾಜ್ಯಕಾರ‍್ಯಕಾರಿಣಿ ಸಭೆಯಲ್ಲಿ ಎಸ್ಟಿ ಮೀಸಲು ಹೋರಾಟ ವಿದ್ಯಮಾನಗಳು ಮುಖ್ಯವಿಚಾರವಾಗಿ ಚರ್ಚೆಗೆ ಬಂದಿದ್ದು, ಸಚಿವ ಕೆ.ಎಸ್ ಈಶ್ವರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟದ ನೈಜ ಉದ್ದೇಶವೇನು? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ನಡೆಯುತ್ತಿರುವ ಹೋರಾಟ ಕುರುಬ ಸಮುದಾಯದ ಎಲ್ಲಾ ನಾಯಕರನ್ನು ಒಳಗೊಂಡು ಯಾಕೆ ನಡೆಯುತ್ತಿಲ್ಲ ಎಂಬ ಪ್ರಶ್ನೆಗಳಿಗೆ ಕಾರ್ಯಕಾರಿಣಿ ಸಭೆಯಲ್ಲಿ ಸಮರ್ಪಕ ಉತ್ತರ ಸಿಗದೆ ಕೊನೆಗೊಂಡಿದೆ.
ಸಭೆಯಲ್ಲಿ ಸಂಘದ ಶಿವಮೊಗ್ಗ ಜಿಲ್ಲೆಯ ಪ್ರತಿನಿಧಿ ನಿರ್ದೇಶಕ ಕೆ.ರಂಗನಾಥ್ ಸೇರಿದಂತೆ ಉತ್ತರ ಕರ್ನಾಟಕದ ಅದರಲ್ಲೂ ಕುರುಬ ಪ್ರಾಬಲ್ಯ ಜಿಲ್ಲೆಗಳ ನಿರ್ದೇಶಕರುಗಳು ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ಬೇಕೆಂದು ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಬಲವಾದ ಅನುಮಾನಗಳು ಜನರಲ್ಲಿ ವ್ಯಕ್ತವಾಗುತ್ತಿವೆ. ಅಲ್ಲದೆ ಇದರಲ್ಲಿ ಅನೇಕ ಗೊಂದಲಗಳಿವೆ. ಸಮಾಜದ ಅಗ್ರ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರು ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಇದು ಬಹುಮುಖ್ಯವಾಗಿ ಗೊಂದಲಕ್ಕೆ ಕಾರಣವಾಗಿದೆ. ಇದನ್ನು ಮೊದಲು ನಿವಾರಿಸಬೇಕು. ಅಲ್ಲಿಯವರೆಗೂ ಮೀಸಲು ಹೋರಾಟದಲ್ಲಿ ತಾವು ಭಾಗವಹಿಸುವುದಿಲ್ಲ” ಎಂದು ಘೋಷಿಸಿದ್ದಾರೆ.
ಕುರುಬ ಸಮುದಾಯ ಎಸ್ಟಿ ಸೇರ್ಪಡೆ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿಯನ್ನಾಗಿ ನನ್ನನ್ನು ನೇಮಕ ಮಾಡಲಾಗಿದೆ. ಆದರೆ ಹೋರಾಟಕ್ಕೆ ಸಂಬಂಧ ಪಟ್ಟ ಅನೇಕ ವಿಚಾರಗಳು ನನಗೆ ಗೊತ್ತಾಗುತ್ತಿಲ್ಲ. ಈ ಹೋರಾಟದ ಹಿಂದೆ ಆರ್ ಎಸ್ ಎಸ್ ಪ್ರಾಯೋಜಿತ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿವೆ. ಕುರುಬರ ಸಂಘದಲ್ಲಿ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲು ಹಣವಿಲ್ಲ. ಆದರೆ ಮೀಸಲು ಹೋರಾಟದ ಸಮಾವೇಶಗಳಿಗೆ ಲಕ್ಷಾಂತರ ರೂಪಾಯಿಗಳು ಖರ್ಚು ಮಾಡಲಾಗುತ್ತಿದೆ. ಇದಕ್ಕೆಲ್ಲಾ ಎಲ್ಲಿಂದ ಹಣ ಬರುತ್ತಿದೆ ಎಂದು ಕೆ.ರಂಗನಾಥ್ ಪ್ರಶ್ನಿಸಿದ್ದಾರೆ.
ಈ ಹೋರಾಟ ಶಿವಮೊಗ್ಗ ಕೇಂದ್ರಿತವಾಗಿ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರು ಹೋರಾಟದಿಂದ ದೂರ ಉಳಿದಿದ್ದಾರೆ. ಇದೂ ಕೂಡ ಸಾರ್ವಜನಿಕ ಚರ್ಚೆಗೆ ಅವಕಾಶವಾಗಿದೆ. ಈ ಹೋರಾಟ ಕುರಿತು ಸಿದ್ದರಾಮಯ್ಯ ಅವರು ಎತ್ತಿರುವ ಮತ್ತು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಪ್ರಶ್ನೆಗಳಿಂದ ಸಮುದಾಯವೂ ಗೊಂದಲದಲ್ಲಿದೆ. ಸಂಘವು ಮೊದಲು ಇದನ್ನು ಪರಿಹರಿಸಬೇಕು. ಎಲ್ಲಿಯವರೆಗೂ ಸಿದ್ದರಾಮಯ್ಯ ಅವರು ಈ ಹೋರಾಟದಲ್ಲಿ ಪಾಲ್ಗೊಳ್ಳುವುದಿಲ್ಲವೋ ಅಲ್ಲಿಯವರೆಗೂ ತಾವು ಭಾಗವಹಿಸದೆ ತಟಸ್ಥರಾಗಿರುತ್ತೇವೆ ಎಂದು ರಂಗನಾಥ್ ಸೇರಿದಂತೆ ಅನೇಕ ನಿರ್ದೇಶಕರುಗಳು ಘೋಷಿಸಿದ್ದು, ಇದು ಸಂಘದ ಅಧ್ಯಕ್ಷರಿಗೆ ಮತ್ತು ಹೋರಾಟ ಪರವಹಿಸಿದ್ದ ಹಲವು ನಿರ್ದೇಶಕರಿಗೆ ನುಂಗಲಾರದ ತುತ್ತಾಗಿದೆ. ಒಂದು ಹಂತದಲ್ಲಿ ರಂಗನಾಥ್ ಈ ಗೊಂದಲ ಬಗೆಹರಿಸದಿದ್ದರೆ ನಿರ್ದೇಶಕ ಸ್ಥಾನಕ್ಕೆ ತಾವು ರಾಜೀನಾಮೆ ನೀಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಇದಕ್ಕೆ ಮಣಿದ ರಾಜ್ಯ ಕಾರ‍್ಯಕಾರಿಣಿಯು ಜ.5 ರಂದು ಸಚಿವ ಕೆ.ಎಸ್ ಈಶ್ವರಪ್ಪ ಅವರನ್ನೊಳಗೊಂಡಂತೆ ನಿಯೋಗವೊಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರಿಗಿರಬಹುದಾದ ಅನುಮಾನಗಳನ್ನು ಬಗೆಹರಿಸಿ ಹೋರಾಟಕ್ಕೆ ಕರೆತರುವ ಭರವಸೆಯನ್ನು ನೀಡಿದೆ. ಆದರೆ ಈ ಹೋರಾಟ ಹಿಂದೆ ಆರ್ ಎಸ್ ಎಸ್ ಇದೆ ಎಂದು ಸಿದ್ದರಾಮಯ್ಯ ಅವರೇ ಬಹಿರಂಗವಾಗಿ ಆರೋಪಿಸಿರುವುದರಿಂದ ಅವರನ್ನು ಮನವೊಲಿಸುವಲ್ಲಿ ರಾಜ್ಯ ಕುರುಬ ಸಂಘದ ಪದಾಧಿಕಾರಿಗಳು ಯಶಸ್ವಿಯಾಗುವರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂಬ ಹೋರಾಟ ಸಮಿತಿಗೆ ಸಚಿವ ಕೆ.ಎಸ್ ಈಶ್ವರಪ್ಪ ಅವರೇ ಗೌರವಾಧ್ಯಕ್ಷರಾಗಿದ್ದಾರೆ. ಅವರ ಹಿಂಬಾಲಕರೆ ಆಗಿರುವ ವಿರೂಪಾಕ್ಷಪ್ಪ ಅಧ್ಯಕ್ಷರಾಗಿದ್ದಾರೆ. ಅಹಿಂದ ಪರ ಹೋರಾಟದ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದು ಈಗಾಗಲೆ ಬರಖಾಸ್ತು ಗೊಂಡಿರುವ ಸಂಗೊಳ್ಳಿರಾಯಣ್ಣ ಬ್ರಿಗೇಡ್ ನಲ್ಲಿದ್ದ ಬಹುತೇಕರು ಈ ಹೋರಾಟ ಮುಂಚೂಣಿ ನಾಯಕರಾಗಿದ್ದಾರೆ. ಈ ವಿಷಯದಲ್ಲಿ ಕಾಗಿನಲೆ ಶ್ರೀಗಳ ನಡೆ ಕೂಡ ಕುರುಬ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಅದಕ್ಕೂ ಮುಖ್ಯವಾಗಿ ರಾಜ್ಯದಲ್ಲಿ ಬಿಜೆಪಿ ಯೇ ಅಧಿಕಾರದಲ್ಲಿದ್ದು, ಈಶ್ವರಪ್ಪ ಅವರು ಹಿರಿಯ ಪ್ರಭಾವಿ ಸಚಿವರೂ ಆಗಿರುವಾಗ ಬೀದಿ ಹೋರಾಟ ಮಾಡುವ ಔಚಿತ್ಯವಾದರೂ ಏನು? ಸರ್ಕಾರವೇ ಕುರುಬ ಸಮುದಾಯದ ಬೇಡಿಕೆಯನ್ನು ಏಕೆ ಅನುಮೋದಿಸಬಾರದು? ಎಂಬ ಪ್ರಶ್ನೆಗಳು ಎದ್ದಿವೆ.
ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸಮಸ್ತ ಹಿಂದುಳಿದ ವರ್ಗಗಳು ಪ್ರಬಲನಾಯಕರಾಗಿ ಬೆಳೆದಿದ್ದಾರೆ. ಆಡಳಿತ ರೂಢ ಬಿಜೆಪಿಗೆ ರಾಜಕೀಯ ಸಿಂಹಸ್ವಪ್ನವಾಗಿದ್ದಾರೆ. ಇದು ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ರಾಜ್ಯದಲ್ಲಿ ಬಲಿಷ್ಠ ಹಿಂದುಳಿದ ವರ್ಗವಾಗಿರುವ ಕುರುಬ ಸಮುದಾಯದ ಒಗ್ಗಟ್ಟನ್ನು ಒಡೆದು ಹೋಳು ಮಾಡುವುದು ಮತ್ತು ಆ ಮೂಲಕ ಸಿದ್ದರಾಮಯ್ಯ ಅವರ ಪ್ರಾಬಲ್ಯವನ್ನು ನೆಲಕಚ್ಚಿಸುವ ರಾಜಕೀಯ ಸಂಚಿಗೆ ಸಮುದಾಯವನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂಬ ಮಾತುಗಳು ಕುರುಬ ಸಮುದಾಯದ್ದಷ್ಟೆ ಅಲ್ಲ, ರಾಜಕೀಯ ವಿಶ್ಲೇಷಕರದ್ದೂ ಆಗಿದೆ.
– ಎನ್.ರವಿಕುಮಾರ್ ಟೆಲೆಕ್ಸ್
(ಪತ್ರಕರ್ತರು ಮತ್ತು ಯುವ ಬರಹಗಾರರು)
ಇದನ್ನೂ ಓದಿ: ಕುರುಬರ ST ಹೋರಾಟದ ಹಿಂದೆ ಆರ್‌ಎಸ್ಎಸ್‌ನ ಕೈವಾಡವಿದೆ: ಸಿದ್ದರಾಮಯ್ಯ



ಎಸ್.ಟಿ. ಸೇರ್ಪಡೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ರವರಿಗೆ ಖಚಿತವಾದ ಚಿತ್ರಣ ಇದೆ…
ಆದರೆ ಉಳಿದ ಹೋರಾಟಗಾರಿಗೆ ಇದರ ಬಗ್ಗೆ ಮನವರಿಕೆ ಇಲ್ಲ…. ಪ.ಪಂಗಡ ಕ್ಕೆ ಸೇರಲು ಬುಡಕಟ್ಟು ಲಕ್ಷಣಗಳಾದ ಭಾಷೆ, ಉಡುಪು, ಊಟೋಪಚಾರ,ದೈವಿಕ ಪರಿಕಲ್ಪನೆ ಆಚಾರ ವಿಚಾರ… ಮತ್ತು ಮುಂತಾದ ವಿಚಾರಗಳನ್ನು ಸಿದ್ದರಾಮಯ್ಯರವರಿಗೆ ಕಲ್ಪನೆ ಇದ್ದು ಇದರಿಂದ ದೂರ ಉಳಿದಿದ್ದಾರೆ…