ಬೆಂಗಳೂರು ಬುಧವಾರ ಮಳೆಯಿಂದ ತೋಯ್ದುಕೊಳ್ಳುತ್ತಿರುವಾಗ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಾರ್ಮಿಕರು ನಡೆಸುತ್ತಿರುವ ಹೋರಾಟ ಎರಡನೇ ತಿಂಗಳು ಪೂರೈಸಿತು. ಮಳೆಯ ನಡುವೆಯೂ ತಮ್ಮ ಹೋರಾಟವನ್ನು ಮುಂದುವರಿಸಿರುವ ಕಾರ್ಮಿಕರು ಟೊಯೋಟಾ ಕಿರ್ಲೋಸ್ಕರ್ ಆಡಳಿತ ಮಂಡಳಿಯ ದೌರ್ಜನ್ಯಕ್ಕೆ ತಲೆ ಬಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರಿದರು.
ನಿರಂತರ 60 ದಿನಗಳಿಂದ ಹೋರಾಟ ನಡೆಸುತ್ತಿರುವ ಕಾರ್ಮಿಕರ ಪರವಾಗಿ ಹೆಚ್ಚಿನ ಎಲ್ಲಾ ರಾಜಕೀಯ, ಕಾರ್ಮಿಕರ ಸಂಘಟನೆಗಳು ಬೆಂಬಲಿಸಿದೆ. ಆದರೆ ಸರ್ಕಾರ ಮತ್ತು ಟೊಯೊಟಾ ಕಿರ್ಲೋಸ್ಕರ್ ಆಡಳಿತ ಮಂಡಳಿ ಮಾತ್ರ ತಮ್ಮ ಕಾರ್ಮಿಕ ವಿರೋಧಿ ಧೋರಣೆಯನ್ನು ಮುಂದುವರೆಸಿದೆ.

ಇದನ್ನೂ ಓದಿ: ರಕ್ತ ಕೊಟ್ಟೇವು-ಸ್ವಾಭಿಮಾನ ಬಿಡೆವು: 50 ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಾರ್ಮಿಕರ ಹೋರಾಟ!
ಟೊಯೋಟಾ ಇದುವರೆಗೂ ವಿಧಾನ ಸೌಧ ಚಲೋ, ರಾಜಭವನ ಚಲೋ, ಜಿಲ್ಲಾಧಿಕಾರಿ ಮುತ್ತಿಗೆ, ಛತ್ರಿ ಚಳುವಳಿ, ರಕ್ತದಾನ ಚಳುವಳಿ ಸೇರಿದಂತೆ ಹಲವಾರು ನವೀನ ಹೋರಾಟವನ್ನು ಮಾಡುತ್ತಾ ಸರ್ಕಾರದ ಗಮನ ಸೆಳೆಯುತ್ತಿದೆ. ಬುಧವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಂಚಾಲಕರಾದ ರವಿಕೃಷ್ಣ ರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ತೆರಳಿ ತಮ್ಮ ಪಕ್ಷದ ಬೆಂಬಲವನ್ನು ಘೋಷಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, “ಕನಾರ್ಟಕ ಸರ್ಕಾರ ಕಾರ್ಮಿಕರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಮಧ್ಯಸ್ಥಿಕೆವಹಿಸಿ ಶೀಘ್ರವಾಗಿ ಸಮಸ್ಯೆ ಬಗೆಹರಿಸಬೇಕಿದೆ. ಇದು ಕೇವಲ ಟೊಯೋಟಾ ಕಾರ್ಮಿಕರ ಸಮಸ್ಯೆ ಅಲ್ಲ. ಇದು ಇಡೀ ದೇಶದ ಕಾರ್ಮಿಕರ ಸಮಸ್ಯೆ. ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳ ಈ ಧೋರಣೆಯನ್ನು ತಡೆಯಲು ಸೂಕ್ತ ಕಾನೂನನ್ನು ಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.

ಟೊಯೊಟಾ ಕಿರ್ಲೋಸ್ಕರ್ ಕಾರ್ಮಿಕರ ಹೋರಾಟಕ್ಕೆ ದೇಶದ ಇತರ ಭಾಗದಲ್ಲೂ ಬೆಂಬಲ ವ್ಯಕ್ತವಾಗಿದೆ. ಜನವರಿ 5 ರಂದು ತಮಿಳುನಾಡಿನ ಪೆರಂಬದೂರ್ ಕೈಗಾರಿಕಾ ಪ್ರದೇಶದಲ್ಲಿ ಟೊಯೊಟಾ ಕಾರ್ಮಿಕರ ಪರವಾಗಿ ಪ್ರತಿಭಟನೆ ನಡೆದಿದೆ. ಹ್ಯುಂಡಾಯಿ, ಫೋರ್ಡ್, ನಿಸ್ಸಾನ್, ಬಿಎಂಡಬ್ಲೂ, ಅಪೋಲೋ ಟೈರ್‍ಸ್, ಜೆ.ಕೆ. ಟೈರ್ಸ್, ವಲಿಯೋ, ಯಮಹಾ, ಬ್ರೇ ಕಂಟೋಲ್, ಅಸಹಿ ಇಂಡಿಯಾ ಗ್ಲಾಸ್ ವರ್ಕಸ್ ಯುನಿಯನ್ ಸೇರಿದಂತೆ ಹಲವು ಕಂಪೆನಿಗಳ ಕಾರ್ಮಿಕ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ದಕ್ಷಿಣ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಒಕ್ಕೂಟ ರಚಿಸಿ ಮುಂದಿನ ದಿನದಲ್ಲಿ ಟೊಯೊಟಾ ಕಾರ್ಮಿಕರ ಪರವಾಗಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಕಾರ್ಮಿಕ ಸಂಘಟನೆಗಳು ತೀರ್ಮಾನಿಸಿವೆ.
ಇದನ್ನೂ ಓದಿ: ಟೊಯೊಟಾ ಕಿರ್ಲೋಸ್ಕರ್ ದರ್ಪ ಮುಂದುವರಿಕೆ: ’ಛತ್ರಿ ಚಳುವಳಿ’ ಆರಂಭಿಸಿದ ಕಾರ್ಮಿಕರು!


