ಬೆಂಗಳೂರಿನ ಕುಂಬಳಗೋಡಿನಲ್ಲಿ ಕಾರ್ಯಚರಿಸುತ್ತಿರುವ ಜರ್ಮನ್ ಮೂಲದ ಸೂಜಿ ತಯಾರಿಕ ಕಂಪೆನಿ ”ಸ್ಮಿಟ್ಝ್” ಮಂಗಳವಾರದಿಂದ ಲಾಕ್‌ಔಟ್ ಘೋಷಿಸಿದ್ದು, ನೂರಾರು ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಕಾರ್ಮಿಕರು ಕಂಪೆನಿಯಲ್ಲಿ ಸೋಮವಾರದಂದು ತಮ್ಮ ಕರ್ತವ್ಯ ನಿರ್ವಹಿಸಿದ್ದರು. ಮಂಗಳವಾರದಂದು ನಷ್ಟದಲ್ಲಿದೆ ಎಂದು ಹೇಳಿರುವ ಕಂಪೆನಿಯು, ಕಾರ್ಮಿಕರಿಗೆ ಯಾವುದೆ ನೋಟಿಸ್ ನೀಡದೆ ಲಾಕ್‌ಔಟ್ ಘೋಷಿಸಿದೆ.
ಇದೀಗ ಮಹಿಳೆಯರು ಸೇರಿದಂತೆ ನೂರಾರು ಕಾರ್ಮಿಕರು ಮೂರು ದಿನದಿಂದ ಬೀದಿಯಲ್ಲಿದ್ದು ಪ್ರತಿಭಟನೆ ಮಾಡುತ್ತಿದ್ದಾರೆ. 1851 ರಲ್ಲಿ ಪ್ರಾರಂಭವಾಗಿರುವ ಕಂಪೆನಿಯು ಬೆಂಗಳೂರು ಸೇರಿದಂತೆ, ಭಾರತದ ಇತರ ರಾಜ್ಯಗಳಲ್ಲೂ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಕಾರ್ಮಿಕರ ಹೋರಾಟವನ್ನು ಹತ್ತಿಕ್ಕಿದ ಶ್ರೀರಂಗಪಟ್ಟಣದ ಗಾರ್ಮೆಂಟ್ಸ್: ಅಧ್ಯಯನ ವರದಿ
ಈ ಬಗ್ಗೆ ನಾನುಗೌರಿ.ಕಾಮ್ ಜೊತೆ ಮಾತನಾಡಿದ, ಸ್ಮಿಟ್ಝ್ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ಮಹೇಶ್, “ಕಂಪೆನಿಯು ನಷ್ಟದಲ್ಲಿ ಇದೆ ಎಂಬ ಸುಳ್ಳು ಹೇಳಿ, ಕಾರ್ಮಿಕರಿಗೆ ಯಾವುದೇ ನೋಟಿಸು ನೀಡದೆ ಲಾಕ್‌ಔಟ್ ಘೋಷಿಸಿದೆ. ಆದರೆ ಕಂಪೆನಿ ಲಾಭದಲ್ಲಿ ನಡೆಯುತ್ತಿದೆ ಎಂಬ ದಾಖಲೆಗಳು ನಮ್ಮಲ್ಲಿದೆ. ಅವುಗಳನ್ನು ನಾವು ಆರ್‌ಟಿಐ ಮುಖಾಂತರ ಪಡೆದಿದ್ದೇವೆ. ಅಲ್ಲದೆ ಇದೇ ಕಂಪೆನಿಯ ಇನ್ನೊಂದು ಘಟಕ ಗುರಾತ್‌ನಲ್ಲಿದ್ದು, ಅಲ್ಲಿ 400 ರಷ್ಟು ಕಾರ್ಮಿಕರು ಇನ್ನೂ ಕೆಲಸ ನಿರ್ವಹಿಸುತ್ತಿದ್ದಾರೆ, ಕಂಪೆನಿಯು ಇಲ್ಲಿ ಮಾತ್ರ ನಮಗೆ ಸುಳ್ಳು ಹೇಳಿ ಲಾಕ್‌ಔಟ್ ಘೋಷಿಸಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಪೆನಿಯ ಲಾಕೌಟ್ ವಿರೋಧಿಸಿ ಶುಕ್ರವಾರ ಕಾರ್ಮಿಕ ಇಲಾಖೆಯ ಕಚೇರಿಗೆ ತೆರಳಲಿದ್ದೇವೆ ಎಂದು ಮಹೇಶ್ ಹೇಳಿದ್ದಾರೆ. ನಿರಂತರ ಮೂರು ದಿನದಿಂದ ಕಾರ್ಮಿಕರು ಕಂಪೆನಿಯ ಗೇಟ್ ಮುಂದೆ ಪ್ರತಿಭಟನೆ ನಡೆಸುತಿದ್ದಾರೆ. ಪ್ರತಿಭಟನಾ ಸ್ಥಳದಲ್ಲೇ ತಮ್ಮ ಊಟಗಳನ್ನೂ ತಯಾರಿಸಿ ಯಾವುದೇ ಕಾರಣಕ್ಕೂ ಅನ್ಯಾಯಕ್ಕೆ ತಲೆಬಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:3 ನೇ ತಿಂಗಳಿಗೆ ಕಾಲಿಟ್ಟ ಟೊಯೊಟಾ ಕಾರ್ಮಿಕರ ಹೋರಾಟ: ದೌರ್ಜನ್ಯಕ್ಕೆ ತಲೆಬಾಗುವುದಿಲ್ಲ ಎಂದ ಕಾರ್ಮಿಕರು


