ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ಘೋಷಿಸಿದ್ದ ರೈತ ಹೋರಾಟಗಾರರು, ಇದಕ್ಕೆ ಪೂರ್ವಭಾವಿಯಾಗಿ ತಾಲೀಮಿನ ರೂಪದಲ್ಲಿ ಜ. 7 ರ ಬೆಳಗ್ಗೆ ದೆಹಲಿಯ ಗಡಿಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದರು. ಕಳೆದ 43 ದಿನಗಳಿಂದ ದೆಹಲಿ ನಗರವನ್ನು ಬೆಸೆಯುವ ಎಲ್ಲ ಮುಖ್ಯ ರಸ್ತೆಗಳ ಗಡಿಗಳಲ್ಲಿ ರೈತ ಹೋರಾಟ ನಡೆಸುತ್ತಿದ್ದು, ಸರ್ಕಾರದೊಂದಿಗಿನ ಇದುವರೆಗೆ ಏಳು ಸುತ್ತಿನ ಮಾತುಕತೆ ನಡೆಸದರೂ ಫಲ ನೀಡಿಲ್ಲ.
ಮಸೂದೆಯನ್ನು ಹಿಂತೆಗೆದುಕೊಳ್ಳದೆ, ರೈತರ ಮನವೊಲಿಸುವ ಯತ್ನದಲ್ಲೇ ಇರುವ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಈ ವಿನೂತನ ಪ್ರತಿಭಟನೆ ನಡೆಸುತ್ತಿರುವುದಾಗಿ ಇತ್ತೀಚೆಗೆ ರೈತ ಸಂಘಟನೆಗಳು ಪ್ರಕಟಿಸಿದ್ದವು. ತಾಲೀಮಿನ ರೂಪದಲ್ಲಿ ಸುಮಾರು ನೂರಾರು ಟ್ರ್ಯಾಕ್ಟರ್‌ಗಳು ಮೆರವಣಿಗೆಯಲ್ಲಿ ಸಾಗಿದವು. ಹರೆಯದ ಉತ್ಸಾಹಿಗಳಿಂದ ಹಿಡಿದು 70 ರ ವಯೋಮಾನ ಹಿರಿಯರು ಈ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ:ರೈತ ಹೋರಾಟಕ್ಕೆ ಬೆಂಬಲ: ದೇಶಪ್ರೇಮಿ ಯುವಾಂದೋಲನ ಹೆಸರಿನಲ್ಲಿ ಹಳ್ಳಿಗಳಿಗೆ ಹೊರಟ ಯುವಜನತೆ
“ಜನವರಿ 26 ರಂದು ನಾವು ಟ್ರ್ಯಾಕ್ಟರ್ ಮೆರವಣಿಗೆ ನಡೆಸುವುದು ನಿಶ್ಚಿತ. ಹರ್ಯಾಣ, ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶದ ಸುಮಾರು 3000 ಟ್ರ್ಯಾಕ್ಟರ್‌ಗಳು ಪಾಲ್ಗೊಳ್ಳಲಿವೆ” ಎಂದು ಪ್ರತಿಭಟನಾ ನಿರತ ರೈತರು ತಿಳಿಸಿದ್ದಾರೆಂದು ಮಾಸ್ ಮೀಡಿಯಾ ಫೌಂಡೇಶನ್ ವರದಿ ಹೇಳಿದೆ.
ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಮಹಿಳೆಯರೂ ವಾಹನಗಳನ್ನು ಚಾಲನೆ ಮಾಡಿದ್ದು ಕಂಡು. ಜನವರಿ 26ರ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದು ರೈತ ಮುಖಂಡರು ತಿಳಿಸಿದರು. ಮೋದಿ ಸರ್ಕಾರ, ರೈತ ವಿರೋಧಿ ಮೂರು ಮಸೂದೆಗಳ ವಿರುದ್ಧ ಘೋಷಣೆ ಕೂಗಿದ ರೈತರು, ಮಸೂದೆ ಹಿಂಪಡೆಯದೆ ಹೋರಾಟ ನಿಲ್ಲುವುದೇ ಇಲ್ಲ ಎಂದು ಹೇಳಿದರು.
ರೈತ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜ. 11 ರಂದು ಏಳನೆಯ ಬಾರಿಗೆ ರೈತರೊಂದಿಗೆ ಸಭೆ ನಡೆಸಲು ಮುಂದಾಗಿದ್ದು, ಎರಡು ಮುಖ್ಯ ಬೇಡಿಕೆಗಳು ಚರ್ಚೆಯಾಗಲಿವೆ. ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯುವುದು ಮತ್ತು ಕನಿಷ್ಟ ಬೆಂಬಲ ಬೆಲೆ ಕುರಿತು ಚರ್ಚೆ ನಡೆಯಲಿದೆ.
ಇದನ್ನೂ ಓದಿ: ರೈತ ಹೋರಾಟ: 70,000 ಕೋಟಿ ನಷ್ಟವಾಗಿದೆ ಎಂದ ವಾಣಿಜ್ಯ-ಕೈಗಾರಿಕಾ ಮಂಡಳಿ



ಭಾರತೀಯ ಅನ್ನದಾತರ ಹೋರಾಟ ಚಿರಾಯವಾಗಲಿ….ಜೈ ಕಿಸಾನ್….