Homeಚಳವಳಿರೈತ ಹೋರಾಟಕ್ಕೆ ಬೆಂಬಲ: ದೇಶಪ್ರೇಮಿ ಯುವಾಂದೋಲನ ಹೆಸರಿನಲ್ಲಿ ಹಳ್ಳಿಗಳಿಗೆ ಹೊರಟ ಯುವಜನತೆ

ರೈತ ಹೋರಾಟಕ್ಕೆ ಬೆಂಬಲ: ದೇಶಪ್ರೇಮಿ ಯುವಾಂದೋಲನ ಹೆಸರಿನಲ್ಲಿ ಹಳ್ಳಿಗಳಿಗೆ ಹೊರಟ ಯುವಜನತೆ

2021ರ ಹೊಸವರ್ಷಕ್ಕೆ ರೈತಪರವಾದ ಹೊಸ ವರ್ಷದ ನಿರ್ಣಯಗಳನ್ನು ಕೈಗೊಂಡಿರುವ ಯುವಜನರು ಸೈಕಲ್ ಜಾಥ ಮೂಲಕ ಹಳ್ಳಿ ಹಳ್ಳಿಗಳಿಗೆ ಹೊರಟಿದ್ದಾರೆ.

- Advertisement -
- Advertisement -

ದೇಶಕ್ಕೆ ಅನ್ನ ಕೊಡುವ ರೈತರು ಇಂದು ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದಾರೆ. ದೆಹಲಿಯ ಕೊರೆಯುವ ಚಳಿಯಲ್ಲಿ ಸತತ 37 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅನ್ನದಾತರು ಸಂಕಷ್ಟದಲ್ಲಿರುವಾಗ ಅವರ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ಘೋಷಿಸಿರುವ ಯುವಜನರು ರೈತರ ಸಂಕಷ್ಟಗಳು ಅರಿತು ರೈತರಿಂದ ಕಲಿಯಲು ಮತ್ತು ಕೃಷಿ ಕಾಯ್ದೆಗಳ ಅಪಾಯಗಳ ಬಗ್ಗೆ ಜನರಿಗೆ ತಿಳಿಸಲು ಹಳ್ಳಿಗಳಿಗೆ ಹೊರಟಿದ್ದಾರೆ.

ರಾಜ್ಯದಲ್ಲಿ ದೇಶಪ್ರೇಮಿ ಯುವಾಂದೋಲನ ಹೆಸರಿನಲ್ಲಿ ಸೈಕಲ್ ಜಾಥದ ಮೂಲಕ ಒಂದು ವಾರಗಳ ಕಾಲ ಹಲವು ಹಳ್ಳಿಗಳನ್ನು ತಲುಪಲು ವಿದ್ಯಾರ್ಥಿ – ಯುವಜನರು ನಿರ್ಧರಿಸದ್ದಾರೆ. ರಾಮನಗರ ಮತ್ತು ಗಂಗಾವತಿಯಲ್ಲಿ ಇಂದು ಸೈಕಲ್ ಜಾಥ ಉದ್ಘಾಟನೆಯಾಗಿದ್ದು ಹತ್ತಾರು ಯುವಕರು ಎರಡು ತಂಡಗಳಲ್ಲಿ ಪ್ರಚಾರಾಂದೋಲನ ಆರಂಭಿಸಿದ್ದಾರೆ.

ದೇಶಕ್ಕೆ ಈತನಕ ಅನ್ನ ಕೊಟ್ಟ ಅನ್ನದಾತರಿಂದ ಪ್ರತಿಭಟನೆಗೆ ಇಳಿದು, ದೆಹಲಿಯ ಬೀದಿಗಳಲ್ಲಿ ಪ್ರಾಣ ಕೊಡುತ್ತಿದ್ದಾರೆ. ಅವರು ಬೆವರು ರಕ್ತ ಬಸಿದು ಕೊಟ್ಟ ಅನ್ನ ತಿಂದು ಬೆಳೆದ ನಮ್ಮೆಲ್ಲರ ಮೇಲೂ ಅನ್ನದ ಋಣ ಇದೆ. ಇದರ ನಡುವೆಯೂ ಹೊಸ ವರ್ಷ ಬರುತ್ತಿದೆ. ಪ್ರತಿ ಹೊಸವರ್ಷಕ್ಕೆ ನಾವು ಸಾಧಿಸಬೇಕಾದ ನಿರ್ಣಯಗಳನ್ನು ತೆಗೆದುಕೊಳ್ಳುವುದು ರೂಢಿ. ರೈತರ ಹೋರಾಟದ ನಡುವೆ ಬರುತ್ತಿರುವ 2021ರ ಹೊಸವರ್ಷಕ್ಕೆ ರೈತಪರವಾದ ಹೊಸ ವರ್ಷದ ನಿರ್ಣಯಗಳನ್ನು ಕೈಗೊಳ್ಳೋಣ ಬನ್ನಿ ಎಂದು ಯುವಜನರು ಕರೆ ನೀಡಿದ್ದಾರೆ.

1. ಅನ್ನದಾತರು ಬೀದಿಗಿಳಿಯಲು ಕಾರಣವೇನೆಂದು ಸಮಗ್ರವಾಗಿ ಎಲ್ಲ ಆಯಾಮಗಳಿಂದ ಅಧ್ಯಯನ ಮಾಡುತ್ತೇನೆ. ಸಂಪೂರ್ಣ ವಿಚಾರ ತಿಳಿದುಕೊಳ್ಳುತ್ತೇನೆ.
2. ರೈತರ ಹಿತಾಸಕ್ತಿಯನ್ನು ಮಣ್ಣುಪಾಲು ಮಾಡಿ, ಚಿನ್ನದ ಅರಮನೆಗಳಲ್ಲಿ ಮೆರೆಯುತ್ತಿರುವ ರಿಲಾಯನ್ಸ್ ಅಂಬಾನಿಗಳಂತಹ ಕಾರ್ಪೊರೇಟ್ ಕಂಪೆನಿಗಳ ಕುರಿತ ಸತ್ಯಾಂಶಗಳನ್ನು ತಿಳಿದುಕೊಳ್ಳುತ್ತೇನೆ.
3. ನನಗೆ ಪರಿಚಿತರಾಗಿರುವ 10 ಜನರಿಗೆ ಈ ಎಲ್ಲ ವಿಚಾರದ ಕುರಿತಾಗಿ ಮಾಹಿತಿ ನೀಡುತ್ತೇನೆ.
4. ಹೊಸ ವರ್ಷದಲ್ಲಾದರೂ ಹೋರಾಡುತ್ತಿರುವ ರೈತರು ಹಿಂತಿರುಗಿ ಹೋಗಿ ತಮ್ಮ ಕುಟುಂಬಗಳನ್ನು ಸುರಕ್ಷಿತವಾಗಿ ಸೇರುವಂತೆ ರೈತರ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂಬ ಆಗ್ರಹವನ್ನು ಯಾವ ರೀತಿಯಲ್ಲಿ ಸಾಧ್ಯವೋ ಹಾಗೆ ಸರ್ಕಾರಕ್ಕೆ ಮುಟ್ಟಿಸುತ್ತೇನೆ.
5. ದೆಹಲಿಯ ಹೋರಾಟನಿರತ ರೈತರು ನೀಡಿರುವ ಕರೆಗೆ ಓಗೊಡುತ್ತಾ ಜಿಯೋ ಸಿಮ್ ಗಳನ್ನೂ, ರಿಲಾಯನ್ಸ್ ಉತ್ಪನ್ನಗಳನ್ನೂ ತಿರಸ್ಕರಿಸುತ್ತೇನೆ ಎಂಬ 5 ನಿರ್ಣಯಗಳನ್ನು ಈ ಯುವಜನರು ಕೈಗೊಂಡಿದ್ದಾರೆ.

ದೇಶಪ್ರೇಮಿ ಯುವಾಂದೋಲನದ “ಹಳ್ಳಿಗಳಿಗೆ ವಿದ್ಯಾರ್ಥಿ-ಯುವಜನರ ಸೈಕಲ್ ಜಾಥಾ” ಗೆ ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಲ್ಲಯ್ಯನವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಲವಾರು ರೈತ ಮುಖಂಡರು, ದೇಶಪ್ರೇಮಿ ಯುವಾಂದೋಲನದ ಸರೋವರ್ ಬೆಂಕಿಕೆರೆ, ಮನೋಜ್, ಪುಷ್ಪಲತಾ, ರವಿ, ರಾಜಶೇಖರ್ ಅಂಗಡಿ, ಬಸವರಾಜ್, ಮಮತ ಇದ್ದರು.

ಜಾಥಾ ಚಾಲನೆ ಹಾಗೂ ಸಭೆಯ ನಂತರ ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ದೇಶಪ್ರೇಮಿ ಯುವಾಂದೋಲನ ತಂಡ ಕರಪತ್ರಗಳನ್ನು ಹಂಚಿ ಪ್ರಚಾರ ನಡೆಸಿತು. ನಂತರ ಚನ್ನಮಾನಹಳ್ಳಿ ಮತ್ತು ಚಿಕ್ಕೇನಹಳ್ಳಿಯಲ್ಲಿ ಮನೆ ಮನೆಗೂ ತೆರಳಿದ ಯುವಜನರು ಜನರಿಗೆ ರೈತ ಹೋರಾಟ ಮಾಹಿತಿ ನೀಡುತ್ತಿದ್ದಾರೆ.

ಇನ್ನೊಂದೆಡೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸೈಕಲ್ ಜಾಥ ಉದ್ಘಾಟನೆಗೊಂಡು ಕಂಪ್ಲಿ ಕಡೆ ಹೊರಟಿದೆ. ಜಾಥಾಗೆ ಚಿಂತಕರಾದ ಬಿ.ಪೀರ್‌ಭಾಷಾ, ಹೋರಾಟಗಾರರಾದ ಡಿ.ಎಚ್ ಪೂಜಾರ್ ಚಾಲನೆ ನೀಡಿದರು. ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂತೋಷ್ ಎಚ್. ಎಂ, ರಾಜೇಂದ್ರ, ಗುರುಬಸವ, ಮರಿಸ್ವಾಮಿ, ದುರ್ಗೇಶ್, ಶರಣಬಸವ ಮತ್ತಿತರರು ಜಾಥದಲ್ಲಿದ್ದಾರೆ.


ಇದನ್ನೂ ಓದಿ: ರಿಲಾಯನ್ಸ್ ಬಹಿಷ್ಕರಿಸಲು ಕರೆ: ರೈತ ಹೋರಾಟ ಬೆಂಬಲಿಸಿ ಸಿಂಧನೂರಿನಲ್ಲಿ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...